ಹೊಗೆಸೊಪ್ಪಿಗೆ ಸೊರಗು ರೋಗ

ಬುಧವಾರ, ಜೂಲೈ 17, 2019
29 °C

ಹೊಗೆಸೊಪ್ಪಿಗೆ ಸೊರಗು ರೋಗ

Published:
Updated:
Prajavani

ಕೊಣನೂರು: ವಾಣಿಜ್ಯ ಬೆಳೆ ತಂಬಾಕಿಗೆ ಸೊರಗು ರೋಗ, ಹೇನುಕರಿ ಬಾಧೆ ತಗುಲಿದ್ದು, ಬೆಳೆಗಾರರನ್ನು ಚಿಂತೆಗೆ ದೂಡಿದೆ.

ರಾಮನಾಥಪುರ ಹೋಬಳಿಯ ಕಾಳೇನಹಳ್ಳಿಯ ಸುತ್ತಮುತ್ತಲಿನ ಭಾಗದ ಹಾನಗಲ್, ಕರ್ಕೆರ ಕೊಪ್ಪಲು ಸೇರಿದಂತೆ, ಕೊಣನೂರು ಹೋಬಳಿಯ ಕೆಲವೆಡೆ ಹೊಲದಲ್ಲಿ ನಾಟಿ ಮಾಡಿ, ಗೊಬ್ಬರ ನೀಡಿದ ನಂತರ ಹೊಗೆಸೊಪ್ಪು ಗಿಡಗಳು ಸೊರಗು ರೋಗಕ್ಕೆ ತುತ್ತಾಗಿ ಸಾಯುತ್ತಿರುವುದು ಬೆಳೆಗಾರರ ನಿದ್ದೆಗೆಡಿಸಿದೆ.

ಮುಂಗಾರು ಪೂರ್ವ ಮಳೆಯು ವಾಡಿಕೆಯಂತೆ ಬೀಳದೆ, ರೈತರನ್ನು ಹೈರಾಣಾಗಿಸಿತ್ತು. ಬಿದ್ದ ಅಲ್ಪ ಸ್ವಲ್ಪ ಮಳೆಗೆ ನಾಟಿ ಮಾಡಿದ ತಂಬಾಕು ಸಹ, ಸೊರಗು ರೋಗಕ್ಕೆ ತುತ್ತಾಗಿದ್ದು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಗಿಡಗಳು ನೆಲ ಬಿಟ್ಟು ಮೇಲೆಳುವುದಕ್ಕಿಂತ ಮುಂಚೆಯೇ ರೋಗಕ್ಕೆ ಬಲಿಯಾಗುತ್ತಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಮೇ ತಿಂಗಳ ಕೊನೆ ವಾರದಲ್ಲಿ ಬಿದ್ದ ಮಳೆ ನಂಬಿ, ನಾಟಿ ಮಾಡಿದ್ದ ಹೊಗೆಸೊಪ್ಪಿನ ಗಿಡಗಳು ಇದೀಗ ಮಳೆ ಕೊರತೆಯಿಂದ ಹೊಲದಲ್ಲಿ ಒಣಗುತ್ತಿದ್ದು, ಬೆಳವಣಿಗೆ ಕುಂಠಿತಗೊಂಡಿವೆ. ಇದರ ಜತೆಗೆ ಬೆಳೆದ ಗಿಡಗಳಿಗೆ ಸೊರಗು ರೋಗ ಕಾಣಿಸಿಕೊಂಡು ಸಾಯಲಾರಂಭಿಸಿವೆ. ಔಷಧಿ ಸಿಂಪಡಿಸಿದರೂ; ರೋಗ ಹತೋಟಿಗೆ ಬರದಿರುವುದು ರೈತರ ಆತಂಕ ಹೆಚ್ಚಿಸಿದೆ.

‘ರಾಮನಾಥಪುರ ಹೋಬಳಿ ಮತ್ತು ಸುತ್ತಮುತ್ತ ಹೊಗೆಸೊಪ್ಪಿನ ಗಿಡಗಳು ಸಾಯುತ್ತಿರುವುದು ಗಮನಕ್ಕೆ ಬಂದಿದೆ. ಸಿಟಿಆರ್‌ಟಿ ವಿಜ್ಞಾನಿಗಳನ್ನು ಕರೆಸಿ, ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರೈತರು ಹೊಗೆಸೊಪ್ಪನ್ನು ಬೆಳೆದು, ನಂತರ ಎರಡನೇ ಬೆಳೆಯನ್ನು ಬೆಳೆಯುವ ಆತುರದಲ್ಲಿ ಮೇ ಎರಡನೇ ವಾರಕ್ಕೆ ಮುಂಚೆ, ಹೊಗೆಸೊಪ್ಪು ಗಿಡಗಳನ್ನು ನಾಟಿ ಮಾಡುವುದರಿಂದ ಅತಿಯಾದ ಉಷ್ಣ ಹವೆಯಿಂದ ಗಿಡಗಳಿಗೆ ಫಂಗಸ್ ಹರಡುತ್ತಿದೆ. 5 ಎಂ.ಎಲ್. ಟಿಲ್ಟ್ ದ್ರಾವಣವನ್ನು 20 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಗಿಡಗಳು ಸಾಯುತ್ತಿರುವುದನ್ನು ತಡೆಯಬಹುದು’ ಎಂದು ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ಅಧೀಕ್ಷಕ ಅಮಲ್ ಡಿ ಸಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !