ಶನಿವಾರ, ಮೇ 8, 2021
26 °C

ಅನಿರೀಕ್ಷಿತ ಭೂಕಂಪನಗಳ ಆಜೂಬಾಜು

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ನಡುಗಿತು ಭೂಮಿಭೂಕಂಪನ ಎಂದಾಕ್ಷಣ ಕೊಯ್ನೊ,  ಲಾತೂರ್, ಭುಜ್ ಎಲ್ಲ ನೆನಪಿಗೆ ಬರುತ್ತವೆ. ನೀರೊಳಗಿನ ಭೂಕಂಪನವೆಂದರೆ ಸುನಾಮಿ ನೆನಪಾಗುತ್ತದೆ. ಫುಕುಶಿಮಾ ನೆನಪಾಗುತ್ತದೆ. ಇಂಡೊನೇಶ್ಯದ ಏಸೇ, ಇದೀಗ ಮತ್ತೊಮ್ಮೆ ಏಸೇ ನೆನಪಾಗುತ್ತಿದೆ.

ಭೂಮಿಗೆ ಏಕೆ ಆಗಾಗ ಅಲ್ಲಲ್ಲಿ ನಡುಕ ಬರುತ್ತದೆ?ನಮಗೆಲ್ಲ ಗೊತ್ತಿರುವಂತೆ ಭೂಮಿಯ ಹೊರಮೈ ಗಟ್ಟಿ ಇದ್ದರೂ ಒಳಗೆ ದ್ರವರೂಪದ ಕಬ್ಬಿಣ ಮತ್ತು ಸಿಲಿಕಾ ಶಿಲಾರಸ ಇದೆ. ಹೊರಗಿನ ಭೂಚಿಪ್ಪು ಏಳು ಹೋಳುಗಳಾಗಿ ಮೆಲ್ಲಗೆ ಪರಸ್ಪರ ತಿಕ್ಕಾಡುತ್ತ ಸರಿದಾಡುತ್ತಿರುತ್ತವೆ. ಅಂಥ ಚಿಪ್ಪುಗಳ ಗಡಿಯಲ್ಲಿ ಪದೇಪದೇ ಭೂಕಂಪನ ಸಂಭವಿಸುತ್ತದೆ.ಕಾರಣ ಏನೆಂದರೆ ಭೂಮಿ ಸೆಕೆಂಡ್‌ಗೆ 900 ಕಿಲೊಮೀಟರ್ ವೇಗದಲ್ಲಿ ತನ್ನ ಸುತ್ತ ತಿರುಗುತ್ತಿರುವಾಗ ಅದರ ಒಳಗಿನ ಬಗ್ಗಡ ಸಹಜವಾಗಿ ಕಲಕುತ್ತಲೇ ಇರುತ್ತದೆ. ಒಳಗಿನ ಕಲಕುವೇಗ ಹಾಗೂ ಹೊರಗಿನ ವಾತಾವರಣದ ಘರ್ಷಣೆ ಎರಡೂ ಸೇರಿ ಭೂಚಿಪ್ಪುಗಳನ್ನು ಅತ್ತ ಇತ್ತ ಸರಿಸುತ್ತಿರುತ್ತವೆ.ಶಿಲಾಹಾಸುಗಳು ಹಾಗೆಲ್ಲ ಸುಲಭಕ್ಕೆ ಸರಿದಾಡುವುದಿಲ್ಲ. ಭಾರೀ ಒತ್ತಡವಿದ್ದರೂ ದಶಕಗಳ ಕಾಲ, ಕೆಲವೊಮ್ಮೆ ಸಾವಿರಾರು ವರ್ಷಗಳ ಕಾಲ ಒತ್ತಡವನ್ನು ಸಹಿಸಿಕೊಂಡಿರುತ್ತವೆ. ಶಿಲೆಗಳು ಬಿಲ್ಲಿನಂತೆ ಬಾಗಿ ಬಾಗಿ ಆಳ ಭೂಗರ್ಭದಲ್ಲೇ ಪರ್ವತಗಳಾಗಿರುತ್ತವೆ. ಕಣಿವೆಗಳಾಗಿರುತ್ತವೆ. ಅಡ್ಡ ಬಾಗಿರುತ್ತವೆ. ಬಾಗಿದಲ್ಲಿ ಭಾಗದಲ್ಲಿ ಅಸಂಖ್ಯ ಬಿರುಕುಗಳಾಗಿರುತ್ತವೆ.ಯಾವಾಗಲೋ ಒಮ್ಮೆ ಒತ್ತಡ ತೀರ ಹೆಚ್ಚಾದಾಗ ಹಠಾತ್ತಾಗಿ ಶಿಲಾಹಾಸು ಮುರಿದು ಬೀಳಬಹುದು. ಒಂದು ಭಾಗ ಒಳಗೆ ಕುಸಿಯಬಹುದು, ಇನ್ನೊಂದು ಭಾಗ ಮೇಲಕ್ಕೆ ನೆಗೆಯಬಹುದು. 1991ರಲ್ಲಿ ಉತ್ತರಖಂಡದ ಚಾಮೋಲಿ ಜಿಲ್ಲೆಯಲ್ಲಿ ಹೀಗೆ ಒಳಕುಸಿತ ಸಂಭವಿಸಿ 18 ಸಾವಿರ ಮನೆಗಳು ನಿರ್ನಾಮವಾದವು.2001ರಲ್ಲಿ ಕಚ್ಛದ ಭುಜ್ ಪಟ್ಟಣದ 20 ಸಾವಿರ ಜನರು ಅಸುನೀಗಿದರು.ಸಮುದ್ರದ ಆಳದ ಶಿಲಾಪದರ ಹೀಗೆ ಹಠಾತ್ ಮೇಲಕ್ಕೆ ಇಲ್ಲವೆ ಕೆಳಕ್ಕೆ ಚಲಿಸಿದರೆ ಸುನಾಮಿ ತೆರೆ ಏಳುತ್ತದೆ. 2004ರಂದು ಇಂಡೊನೇಶ್ಯದ ಏಸೆಯ ಬಳಿ, ಕಳೆದ ವರ್ಷ ಜಪಾನಿನ ಫುಕುಶಿಮಾ ಬಳಿ ಇಂಥ ಸುನಾಮಿ ಎದ್ದಿತ್ತು.ಭೂಮಿಯ ಆಳದಲ್ಲಿ ಬಿಲ್ಲಿನಂತೆ ಬಾಗಿರುವ ಶಿಲಾಸ್ತರಗಳು ಮೇಲಕ್ಕೆ ಅಥವಾ ಕೆಳಕ್ಕೆ ಚಿಮ್ಮುವ ಬದಲು ಅಡ್ಡಡ್ಡ ಸಿಡಿಯಲು ಸಾಧ್ಯವಿದೆ. ಬಿಲ್ಲನ್ನು ಅಡ್ಡ ಮಲಗಿಸಿ ಇಟ್ಟು ಎರಡೂ ತುದಿಯಲ್ಲಿ ಒತ್ತಡ ಹಾಕುತ್ತಿದ್ದರೆ ಅದು ತುಂಡಾಗಿ ಅಡ್ಡಡ್ಡ ಚಲಿಸುತ್ತದೆ ತಾನೆ?

ನಿನ್ನೆ ಇಂಡೊನೇಶ್ಯದ ಏಸೆಯಲ್ಲಿ ಸಮುದ್ರದ ಕೆಳಗಿನ ನೆಲ ಅಡ್ಡಡ್ಡ ಚಲಿಸಿದೆ; ಹಾಗಾಗಿ ಅಷ್ಟೇನೂ ಭೀಕರ ಸುನಾಮಿಯಲ್ಲ.ಆದರೆ ಅಂಥ ಅಡ್ಡ ಚಲನೆಯಿಂದಲೂ ನೆಲದ ಮೇಲೆ ಬಹುದೊಡ್ಡ ದುರಂತ ಸಂಭವಿಸಬಹುದು. ಲಾತೂರಿನಲ್ಲಿ 1993ರಲ್ಲಿ ಹೀಗೆ ನೆಲ ಅಡ್ಡ ಚಲಿಸಿದಾಗ ಅಂದಾಜು 4000 ಮನೆಗಳು ಕುಸಿದವು. ಬಹಳಷ್ಟು ಮನೆಗಳಿಗೆ ಚಪ್ಪಡಿ ಕಲ್ಲಿನ ಮೇಲ್ಛಾವಣಿ ಇದ್ದುದರಿಂದ, ಹಾಗೂ ಭೂಕಂಪನ ನಸುಕಿನಲ್ಲಿ ಸಂಭವಿಸಿದ್ದರಿಂದ ಸುಮಾರು 9740 ಜನ ನಿದ್ರೆಯಲ್ಲೇ ಅಸುನೀಗಿದರು. ಎತ್ತರದ ಕಟ್ಟಡಗಳು ಅಡ್ಡಡ್ಡ ತೊನೆದು ಕುಸಿಯುವ ಸಂಭವ ಜಾಸ್ತಿ ಇರುತ್ತದೆ.ಒತ್ತಡದಲ್ಲಿರುವ ಶಿಲಾಪದರ ಭಗ್ನವಾಗಲು ನಾನಾ ಕಾರಣಗಳಿರುತ್ತವೆ: ಜ್ವಾಲಾಮುಖಿ ಚಿಮ್ಮಲು ಯತ್ನಿಸಬಹುದು. ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರನ ಸೆಳೆತವೂ ಅಪರೂಪಕ್ಕೆ ಶಿಲೆಗಳನ್ನು ಭಗ್ನ ಮಾಡಬಹುದು.ಮನುಷ್ಯರು ನೆಲದೊಳಗೆ ಪರೀಕ್ಷಾರ್ಥ ಪರಮಾಣು ಸ್ಫೋಟ ನಡೆಸಬಹುದು; ದೊಡ್ಡ ಅಣೆಕಟ್ಟುಗಳಲ್ಲಿ ಶೇಖರಿಸಿದ ನೀರು ಒತ್ತಡದಲ್ಲಿ ಶಿಲಾಪದರಗಳ ಆಳಕ್ಕಿಳಿದು ಕೆಣಕಬಹುದು (ಕೊಯ್ನೊ ಮತ್ತು ಇಡುಕ್ಕಿಯಲ್ಲಿ ಹೀಗಾಗಿತ್ತು). ಅಥವಾ ಪೆಟ್ರೋಲು, ಗ್ಯಾಸನ್ನು ಅತಿಯಾಗಿ ಹೊರಕ್ಕೆ ತೆಗೆದಾಗ ಭೂಪದರದಲ್ಲಿ ಅಸಮತೋಲ ಉಂಟಾಗಬಹುದು. ಈಗೀಗ ಭೂಕಂಪನಗಳು ಹೆಚ್ಚಾಗಲು ಮನುಷ್ಯನ ದೈತ್ಯಶಕ್ತಿ ಹೆಚ್ಚುತ್ತಿರುವುದೇ ಕಾರಣವಿದ್ದೀತು, ಹೇಳುವಂತಿಲ್ಲ.ಭೂಕಂಪನದ ಮುನ್ಸೂಚನೆ ನೀಡಲು ಸಾಧ್ಯವಿಲ್ಲವೆ? ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಅಮೆರಿಕ ಮತ್ತು ಜಪಾನ್‌ನ ವಿಜ್ಞಾನಿಗಳು ಭೂಕಂಪನ ಕುರಿತುಸಂಶೋಧನೆ ನಡೆಸುತ್ತಲೇ ಇದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತದ ಬಹುಭಾಗವೆಲ್ಲ ಭಾರೀ ಅಪಾಯದ, ಆಳ ಬಿರುಕಿನ ಮೇಲಿದೆ. ದೊಡ್ಡದೊಂದು ಭೂಕಂಪನ ಸಂಭವಿಸಿದರೆ ಇಡೀ ಸಾನ್ ಫ್ರಾನ್ಸಿಸ್ಕೊ ನಗರವೇ ಶಾಂತ ಸಾಗರದ ತಳ ಸೇರುತ್ತದೆ. ಜಪಾನಿನಲ್ಲೂ ಕೋಬೆ, ಫುಕುಶಿಮಾದಂಥ ಮಹಾಕಂಪನ ಮತ್ತೆ ಎಂದಾದರೂ ಸಂಭವಿಸಬಹುದು.ಮುನ್ಸೂಚನೆಯ ಸೂತ್ರ ಗೊತ್ತಾದರೆ ಅದರಲ್ಲಿ ಶತಕೋಟಿಗಟ್ಟಲೆ ಡಾಲರ್ ಹಣವಿದೆ. ಆದರೆ ಈ ರಹಸ್ಯವನ್ನು ನಿಸರ್ಗ ತನ್ನಲ್ಲೇ ಬಚ್ಚಿಟ್ಟುಕೊಂಡಿದೆ.ಮುನ್ಸೂಚನೆಯ ಸಮಸ್ಯೆ ಏನೆಂದರೆ ಯಾವ ದಿಕ್ಕಿನಲ್ಲಿ, ಎಷ್ಟು ದೂರದಲ್ಲಿ, ಎಷ್ಟು ಆಳದಲ್ಲಿ, ಎಷ್ಟು ತೀವ್ರವಾಗಿ ಎಷ್ಟು ಗಂಟೆಗಳಲ್ಲಿ ಎಂಬುದನ್ನು ನಿಖರವಾಗಿ ಹೇಳಬೇಕಾಗುತ್ತದೆ. ಅದು ಕಷ್ಟ. ಹವಾಮಾನ ಮುನ್ಸೂಚನೆಯ ಹಾಗೇ ತುಸು ಹೆಚ್ಚು ಕಮ್ಮಿ ಏನೋ ಹೇಳಿ ಲಕ್ಷಾಂತರ ಜನರನ್ನು ಗುಳೆ ಎಬ್ಬಿಸುವುದೇ ಮಹಾದುರಂತವಾಗಬಹುದು.ಮುಂಬೈ, ದಿಲ್ಲಿಯಂಥ ನಗರಗಳಲ್ಲಿ  ಇನ್ನು ಎಂಟು ಗಂಟೆಗಳಲ್ಲಿ ಭೂಕಂಪನ ಸಂಭವಿಸಲಿದೆ  ಎಂಬ ಸೂಚನೆ ಬಂದರೆ ಏನಾದೀತೆಂದು ಊಹಿಸಿ. ಇಡೀ ನಾಗರಿಕ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಇಟಲಿಯ ಲಾ ಕಿಲಾ ಎಂಬಲ್ಲಿ ಹೀಗೆ ಮುನ್ಸೂಚನೆ ಕೊಟ್ಟು ದೊಡ್ಡ ಎಡವಟ್ಟಾಗಿತ್ತು.ಪ್ರಾಣಿಗಳಿಗೆ ಮುನ್ಸೂಚನೆ ಸಿಗುತ್ತದೆಂದು ಜಪಾನೀ ವಿಜ್ಞಾನಿಗಳು ಪ್ರಯೋಗಗಳ ಮೂಲಕ ತೋರಿಸಿದ್ದಾರೆ. ಏನಾಗುತ್ತದೆ ಅಂದರೆ, ನೆಲದಾಳದಲ್ಲಿ ಶಿಲಾಸ್ತರದ ಒತ್ತಡ ತೀರಾ ಹೆಚ್ಚಾದಾಗ, ರೇಡಾನ್ ಎಂಬ ಅನಿಲ ಹೊರಸೂಸುತ್ತದೆ. ಅದನ್ನು ಪ್ರಾಣಿಗಳು ಗ್ರಹಿಸುತ್ತವೆ. ಬಂಧನದಲ್ಲಿದ್ದರೆ ಚಡಪಡಿಸುತ್ತವೆ.ಸ್ವಾರಸ್ಯದ ಸಂಗತಿ ಏನು ಗೊತ್ತೆ? ಪ್ರಾಣಿಗಳಿಗಿಂತ ಮಿಗಿಲಾಗಿ, ನಾವು ಆಧುನಿಕ ಮನುಷ್ಯರು ನಾನಾ ಬಂಧನಗಳಲ್ಲಿ ಸಿಲುಕಿದ್ದೇವೆ. ಹಾಗಾಗಿ ಭೂಕಂಪನದ ತೀವ್ರತೆ ನಮಗೆ ಹೆಚ್ಚಾಗಿಯೇ ತಟ್ಟುತ್ತದೆ. ಆದಿಮಾನವರಿಗೆ ಭೂಕಂಪನದ ಯಾವ ಭಯವೂ ಇರಲಿಲ್ಲ. ಏಕೆಂದರೆ ರಿಕ್ಟರ್ ಮಾಪಕದ 9ನೇ ಪರಿಮಾಣದಲ್ಲಿ ನೆಲ ನಡುಗಿದರೂ ಹೆಚ್ಚೆಂದರೆ ಜೋಲಿ ಹೊಡೆಯಬಹುದು ಅಷ್ಟೆ. ತಲೆಯ ಮೇಲೆ ಏನೂ ಬೀಳುತ್ತಿರಲಿಲ್ಲ.ಈಗಲೂ ಗಿರಿಜನರು, ಆದಿವಾಸಿಗಳು, ತೋಡರು, ಗೊಂಡರು, ಭಿಲ್ಲರಿಗೆ ಭೂಕಂಪನದ ಭಯವಿಲ್ಲ. ನಾವು ಎತ್ತರೆತ್ತರ ಗ್ರಾನೈಟ್ ಕಾಂಕ್ರೀಟ್ ಕಟ್ಟಡದಲ್ಲಿ ವಾಸಿಸುವವರು; ಅಣೆಕಟ್ಟು, ಅಣುಸ್ಥಾವರ ಕಟ್ಟಿಕೊಂಡವರು, ಹೈವೇ ರೇಲ್ವೇಗಳನ್ನು ನಿರ್ಮಿಸಿಕೊಂಡವರು, ಸುಲಭಕ್ಕೆ ಬಯಲಿಗೆ ಬರಲಾಗದಂತೆ ದಟ್ಟ ನಗರಗಳನ್ನು ನಿರ್ಮಿಸಿಕೊಂಡವರು ಹೆದರಬೇಕಾಗಿದೆ. ಭೂಕಂಪನಕ್ಕಲ್ಲ, ನಮ್ಮದೇ ಕಟ್ಟೋಣಗಳ ಕಂಪನಕ್ಕೆ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.