ಶನಿವಾರ, ಜನವರಿ 18, 2020
19 °C

ಅಮರತ್ವದ ಮೂಲಸತ್ವ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನನ್ನ ಸ್ನೇಹಿತರಾದ ದೇವ ಪ್ರಸಾದ್‌ ಅವರು ಇತ್ತೀಚಿಗೆ ‘ಪಿಚ್ ಇನ್’ ಎಂಬ ಸೊಗಸಾದ ಪುಸ್ತಕ ಬರೆದಿದ್ದಾರೆ. ಅದರ ಮೊದಲ ಅಧ್ಯಾಯದಲ್ಲೇ ಒಂದು ಬಹುಮೌಲಿಕವಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಜೀವನದ ಪ್ರತಿ­ಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿದವರು ದೊರೆಯುತ್ತಾರೆ. ಅವರು ಕೆಲವೊಂದಿಷ್ಟು ದಿನ ಜನಪ್ರಿ­ಯರೂ ಆಗುತ್ತಾರೆ. ಆದರೆ, ಕೆಲವರು ಮಾತ್ರ ಸಾರ್ವಕಾಲಿಕ ಜನಮನ್ನಣೆ  ಗಳಿಸುತ್ತಾರೆ. ಅವರ ಈ ಯಶಸ್ಸಿನ ಗುಟ್ಟೇನು?  ದೇವಪ್ರಸಾದ್‌ ಅವರು ಎರಡು ವರ್ಷಗಳ ಕೆಳಗೆ ವ್ಯಾಪಾರ  ಸಂಸ್ಥೆಗಳ ನಾಯಕರು­ಗಳಿಗೆ ತರಬೇತಿ ನೀಡುತ್ತಿರುವಾಗ ಅವರಿಗೆ ಹೇಳಿದರಂತೆ, ‘ನಿಮಗೆ ಅತ್ಯಂತ ಮೆಚ್ಚುಗೆಯಾದ ಒಬ್ಬ ಕ್ರಿಕೆಟ್ ಆಟಗಾರ ಹಾಗೂ ನಿಮ್ಮ ಅಭಿಮಾನಕ್ಕೆ ಪಾತ್ರರಾದ ಒಬ್ಬ ಉದ್ಯೋಗಪತಿಯ ಹೆಸರನ್ನು ಬರೆದು ಅವರಲ್ಲಿ ತುಂಬ ಮೆಚ್ಚಿಗೆ­ಯಾದ ಒಂದು ಗುಣವನ್ನು ಬರೆಯಿರಿ’. ಎಲ್ಲರೂ ಬರೆದ ಕಾಗದಗಳನ್ನು ಅವಲೋಕಿಸಿದಾಗ ಪ್ರತಿಶತ ಎಂಬತ್ತಕ್ಕಿಂತ ಹೆಚ್ಚು ಜನರು ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಉದ್ಯೋಗಪತಿಯಾಗಿ ಜೆ.­ಆರ್.­­ಡಿ.­ ಟಾಟಾ ಅವರ ಹೆಸರನ್ನು ಬರೆದಿದ್ದರಂತೆ, ಬಹು ಆಶ್ಚರ್ಯವೆಂದರೆ ಅವರು ದಾಖಲಿಸಿದಂತೆ ಇಬ್ಬರಲ್ಲೂ ಮೆಚ್ಚುವಂತಹ ಅಪರೂಪದ ಗುಣ ವಿನಯಶೀಲತೆ. ಕ್ಷಣಕಾಲದ ಯಶಸ್ಸು ತಲೆ ತಿರುಗಿಸುತ್ತದೆ, ಸ್ವಲ್ಪ ಕಾಲದ ಅಧಿಕಾರ ಮದ ಬರಿಸುತ್ತದೆ. ಆದರೆ, ನಿಜವಾದ ಪರಿಶ್ರಮದ ಆಧಾರದ ಮೇಲೆ ದೊರೆತ ಬಹುಕಾಲದ ಸಾಧನೆ ವಿನಯವನ್ನು ಹುಟ್ಟಿಸುತ್ತದೆ. ಸತತವಾಗಿ ಇಪ್ಪತ್ನಾಲ್ಕು ವರ್ಷಗಳ ಕಾಲ ಸಾಧನೆಯ ಉತ್ತುಂಗದಲ್ಲಿದ್ದು, ಅನೇಕ ರಾಷ್ಟ್ರಗಳ ನಾಯಕರಿಗೂ ದೊರೆಯದ ಜನಪ್ರಿಯತೆಯನ್ನು ಗಳಿಸಿದ್ದೂ, ಕೋಟ್ಯಂತರ ಜನರಿಗೆ ಕ್ರಿಕೆಟ್ ದೇವರೆಂದೇ ಖ್ಯಾತಿ­ಯನ್ನು ಪಡೆದಿದ್ದರೂ ಗರ್ವದಿಂದ, ಅಹಂಕಾರದಿಂದ ಬೀಗದಿ­ದ್ದುದು ಸಚಿನ್‌ರ ಬಹುದೊಡ್ಡ, ಅನುಕರಣೀಯ ಗುಣ, ದೇವಪ್ರಸಾದ್ ಘಟನೆ­ಯೊಂದನ್ನು ಬರೆಯುತ್ತಾರೆ.ಎರಡು ವರ್ಷಗಳ ಕೆಳಗೆ ಸಚಿನ್ ಒಂದು ಅನಾಥಾಶ್ರಮದ ಸಹಾ­ಯಾರ್ಥ ಕಾರ್ಯಕ್ರಮಕ್ಕೆ ಚೆನ್ನೈಗೆ ಹೋಗಿದ್ದರು. ಆ ದೊಡ್ಡ ಸಭೆಯಲ್ಲಿ ಸಾವಿರಾರು ಜನ ಸಚಿನ್‌ರನ್ನು ನೋಡಲು ಬಂದಿದ್ದಾರೆ. ಸಚಿನ್ ಸ್ನೇಹಿತರೊಬ್ಬರು ಸಭೆಯಲ್ಲಿ ಬಹಳ ಹಿಂದೆ ಕುಳಿತಿದ್ದ ಮಹಿಳೆಯೊಬ್ಬರನ್ನು ತೋರಿಸಿ ಹೇಳಿದರು, ಆಕೆಯ ಹೆಸರು ಸರಸ್ಪತಿ ವೈದ್ಯನಾಥನ್. ಆಕೆಗೆ ೮೭ ವರ್ಷ. ಆಕೆ ಸರಿಯಾಗಿ ನಡೆಯ­ಲಾರರು. ಆಕೆ ಸಚಿನ್‌ರ ಅಭಿಮಾನಿ. ಸಚಿನ್‌ರ ಒಂದೂ ಆಟವನ್ನು ನೋಡದೇ ಇಲ್ಲ. ಬೇರೆ ದೇಶದಲ್ಲಿ ಆಡಿದಾಗ ಮಧ್ಯರಾತ್ರಿಯಾಗಲೀ, ಬೆಳಗಿನ ಜಾವವಾಗಲಿ ಎಚ್ಚರವಿದ್ದು ಆಟ ನೋಡಿದ್ದಷ್ಟೇ ಅಲ್ಲ, ಅವರ ಪ್ರತಿಯೊಂದು ಆಟದ ದಾಖಲೆ­ಯನ್ನು ಬರೆದಿಟ್ಟಿದ್ದಾರೆ. ಇದನ್ನು ಕೇಳಿದ ತಕ್ಷಣ ಸಚಿನ್ ವೇದಿಕೆಯಿಂದ ಇಳಿದು, ಸರಸರನೇ ನಡೆದು ಸರಸ್ಪತಿಯವರ ಮುಂದೆ ನಿಂತರು. ಎಲ್ಲರೂ ಆಶ್ಚರ್ಯ­ದಿಂದ ಇವರನ್ನೇ ಗಮನಿಸುತ್ತಿದ್ದಾರೆ. ಆಕೆಯ ಮುಂದೆ ಕೈ ಮುಗಿದು, ತಾವು ಹಿರಿಯರು, ನನ್ನ ಎಲ್ಲ ಆಟಗಳನ್ನು ನೋಡುವುದರೊಂದಿಗೆ ದಾಖಲೆ­ಗಳನ್ನು ಬರೆದಿಟ್ಟಿದ್ದೀ­ರಂತೆ. ತಮ್ಮೆಲ್ಲರ ಹಾರೈಕೆ ನನ್ನನ್ನು ಕಾಪಾಡಿದೆ ಎಂದರು. ಆಕೆಗೆ ತಾನು ಸಚಿನ್‌­ರನ್ನು ಹತ್ತಿರದಿಂದ ನೋಡ­ಬಹುದು, ಅವರನ್ನು ಮಾತ­ನಾಡಿಸ­ಬಹುದು ಎಂಬ ನಂಬಿಕೆಯೇ ಇರಲಿಲ್ಲ.ಶಬರಿಯ ಪ್ರೀತಿ ರಾಮನನ್ನು ಬಿಗಿ­ದೆಳೆದು ತಂದಂತೆ ಸರಸ್ಪತಿಯ ಅಭಿಮಾನ ಸಚಿನ್‌ರನ್ನು ಬಳಿ ಕರೆದು ತಂದಿತ್ತು. ಆಕೆ, ನಿಮ್ಮನ್ನು ಮುಖತಃ  ಕಂಡದ್ದು ನನ್ನ ಭಾಗ್ಯ ಎಂದರು. ಇಲ್ಲ ಅದು ನನ್ನ ಸೌಭಾಗ್ಯ ಎಂದರು ಸಚಿನ್. ಆಗ ಆಕೆ ತನ್ನ ಚೀಲದಲ್ಲಿದ್ದ ಪುಟ್ಟ ಗಣಪತಿ ವಿಗ್ರಹ­ವನ್ನು ತೆಗೆದು, ನೀವು ನನ್ನ ನಾಲ್ಕನೇ ಮೊಮ್ಮಗನಿದ್ದಂತೆ. ನಾನು ಪೂಜಿಸಿದ ಈ ಗಣಪತಿ ನಿಮಗೆ ಶುಭವನ್ನುಂಟು ಮಾಡಲಿ ಎಂದು ಅದನ್ನು ಸಚಿನ್‌ರಿಗೆ ಕೊಟ್ಟರು. ಆಗ ಆತ ತಕ್ಷಣ ಬಗ್ಗಿ ಅವರ ಕಾಲು ಮುಟ್ಟಿ ನಮಸ್ಕರಿಸಿ, ತಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಹೇಳಿದಾಗ ಸರಸ್ಪತಿ ಮಾತ್ರವಲ್ಲ ಅದಕ್ಕೆ ಸಾಕ್ಷಿಯಾಗಿದ್ದ ಪ್ರತಿ­ಯೊಬ್ಬರ ಕಣ್ಣುಗಳಲ್ಲಿ ಒರತೆ ಮೂಡಿತ್ತು. ಇದು ಒಬ್ಬ ಸಾಧಕ ಅಮರನಾಗುವ ಬಗೆ. ಸಾಧನೆ ಅಮಲು ಏರಿಸುವ ಬದಲು ವಿನಯ­ಶೀಲತೆ ತರಬೇಕು.ನಾವು ನಿಸರ್ಗದಿಂದ ಕಲಿಯಬೇಕಲ್ಲವೇ? ಮೊದಲು ಬಿರುಸಾಗಿ, ಒಗರಾಗಿ, ಹುಳಿಯಾ­ಗಿದ್ದ ಕಾಯಿ ಪಕ್ವವಾದಾಗ ಮೃದುವಾಗುತ್ತದೆ. ಹಣ್ಣು ತುಂಬಿದ ಮರದ ಟೊಂಗೆ ಬಾಗುತ್ತದೆ. ಗಿಡ ಎತ್ತರವಾದಷ್ಟೂ ಗೌರವದಿಂದ ತಲೆಕೆಳಗು ಮಾಡುತ್ತದೆ. ಅದಕ್ಕೇ ತಾವೋ ಪಂಥದ ಸ್ಥಾಪಕ ಲಾ-ಓ-ತ್ಸು ಹೇಳುತ್ತಾನೆ, ಬಾಗುವುದು ಪಕ್ವತೆಯ ಲಕ್ಷಣ. ಅದು ಮನುಷ್ಯರಲ್ಲಿ ಅಮರತ್ವದ ಲಕ್ಷಣವೂ ಹೌದು.

ಪ್ರತಿಕ್ರಿಯಿಸಿ (+)