ಮಂಗಳವಾರ, ಜೂನ್ 15, 2021
26 °C

ಉಡುಗೊರೆಯ ಹೊರೆ; ಪ್ರಾಮಾಣಿಕತೆಗೆ ಬರೆ

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಕೆಲವು ತಿಂಗಳುಗಳ ಹಿಂದೆ, ಅಂದರೆ ಭ್ರಷ್ಟಾಚಾರ ವಿರೋಧಿ ಆಂದೋಲನ ಮೇರುಸ್ಥಿತಿಯಲ್ಲಿದ್ದಾಗ ದೆಹಲಿಯಲ್ಲಿನ ಸ್ನೇಹಿತರೊಬ್ಬರು ನನ್ನನ್ನು ಭೇಟಿ ಮಾಡಿದ್ದರು. ಅವರು ಹೆಸರಾಂತ ಉದ್ದಿಮೆ ಸಮೂಹವೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ.ನಾವಿಬ್ಬರೂ ರಾಷ್ಟ್ರದಲ್ಲಿನ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಆಡಳಿತದಲ್ಲಿನ ತೊಡಕುಗಳ ಬಗ್ಗೆ ಮಾತನಾಡಲು ಆರಂಭಿಸಿದೆವು. ಈ ಸಂದರ್ಭದಲ್ಲಿ, ತಮ್ಮ ಕಂಪೆನಿಯು ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಲಂಚ ನೀಡಬಾರದೆಂಬ ನಿಯಮ ಅಳವಡಿಸಿಕೊಂಡಿದೆ ಎಂದು ಅವರು ತಿಳಿಸಿದರು.ಅವರ ಸಂಸ್ಥೆ ವ್ಯಾಪಾರದಲ್ಲಿ ನೀತಿ ನಿಯಮಕ್ಕೆ ಬದ್ಧವಾಗಿರುವುದನ್ನು ಅರಿತಿದ್ದ ನನಗೆ ಈ ವಿಷಯ ಕೇಳಿ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಅವರು ಆ ನಂತರ ಹೇಳಿದ ಸಂಗತಿ ಮಾತ್ರ ನನ್ನನ್ನು ಚಿಂತೆಗೀಡು ಮಾಡಿತು.

 

ದೀಪಾವಳಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಲು ತಮ್ಮ ಕಂಪೆನಿ ಕೆಲವಾರು ಕೋಟಿ ರೂಪಾಯಿಗಳನ್ನೇ ವ್ಯಯಿಸುತ್ತದೆ ಎಂದು ಅವರು ತಿಳಿಸಿದರು.ನನ್ನ ಸ್ನೇಹಿತರಿಗಾಗಲೀ ಅಥವಾ ಅವರ ಕಂಪೆನಿಗಾಗಲೀ ಉಡುಗೊರೆ ನೀಡುವುದರಲ್ಲಿ ತಪ್ಪೇನೂ ಕಂಡಿರಲಿಲ್ಲ. ಇದೊಂದು ಸೌಜನ್ಯಪೂರ್ಣವಾದ ನಡವಳಿಕೆ ಮತ್ತು ಸಾಂಸ್ಕೃತಿಕವಾಗಿ ಸ್ಪಂದಿಸುವ ವಿಧಾನ ಎಂಬುದು ಅವರ ಪ್ರಾಮಾಣಿಕವಾದ ಭಾವನೆಯಾಗಿತ್ತು.

 

ತಾವು ಉಡುಗೊರೆ ಕೊಡುವುದರ ಹಿಂದೆ ಯಾವುದೇ ಪ್ರತಿಫಲಾಪೇಕ್ಷೆ ಇರುವುದಿಲ್ಲ ಹಾಗೂ ಅದು ಭವಿಷ್ಯದಲ್ಲಿ ಅಧಿಕಾರಿಗಳಿಂದ ಯಾವುದೇ ಸೇವೆಯನ್ನೂ ನಿರೀಕ್ಷಿಸಿ ನೀಡುವ ಲಂಚವಲ್ಲ ಎಂಬುದು ಅವರ ಧೋರಣೆಯಾಗಿತ್ತು.ಈ ಮಾತುಕತೆಯ ಸಂದರ್ಭದಲ್ಲಿ ನನಗೆ, ಈ ವರ್ಷದ ಜನವರಿಯಲ್ಲಿ ಕರ್ನಾಟಕ ಸರ್ಕಾರ ಸೇವಾ ನಿಯಮಗಳಿಗೆ ಸದ್ದಿಲ್ಲದೇ ತಂದಿರುವ ತಿದ್ದುಪಡಿ ನೆನಪಿಗೆ ಬಂತು. ಎ, ಬಿ ಮತ್ತು ಸಿ ದರ್ಜೆಯ ಅಧಿಕಾರಿಗಳು 5 ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ಪಡೆಯುವುದನ್ನು ನಿರ್ಬಂಧಿಸುತ್ತಿದ್ದ ಈ ನಿಯಮವನ್ನು ತಿದ್ದುಪಡಿಯ ಮೂಲಕ ಸರ್ಕಾರ ಇದೀಗ ಸಡಿಲಗೊಳಿಸಿದೆ.

 

ಹಣದ ಅಪಮೌಲ್ಯ, ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಮಾರುಕಟ್ಟೆ ದರ ಎಲ್ಲವನ್ನು ಪರಿಗಣಿಸಿಯೇ ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮ 1966ಕ್ಕೆ ತಿದ್ದುಪಡಿ ತರಲಾಗಿದೆ ಎಂಬುದು ಸರ್ಕಾರದ ತರ್ಕವಾಗಿದೆ. ಈ ಬದಲಾದ ನಿಯಮದಿಂದ ಅಧಿಕಾರಿಗಳು ಈಗ ತಮ್ಮ ತಿಂಗಳ ಮೂಲ ವೇತನಕ್ಕೆ ಸರಿಸಮನಾದ ಮೌಲ್ಯದ ಉಡುಗೊರೆಗಳನ್ನು ಪಡೆಯಬಹುದಾಗಿದೆ.

 

ಈ ಮೂಲ ವೇತನವು ಅಧಿಕಾರಿಗಳ ದರ್ಜೆ ಮತ್ತು ಬಡ್ತಿಗೆ ಅನುಗುಣವಾಗಿ ಇರುತ್ತದೆ. ಇದರ ಜೊತೆಗೆ ಸರ್ಕಾರಿ ಅಧಿಕಾರಿಗಳು ನಮ್ಮಲ್ಲಿ ಇರುವ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳಿಗೆ ಅನುಸಾರವಾಗಿ ಮದುವೆ, ವಿವಾಹ ವಾರ್ಷಿಕೋತ್ಸವ, ಅಂತ್ಯಸಂಸ್ಕಾರ ಅಥವಾ ಧಾರ್ಮಿಕ ಸಮಾರಂಭಗಳ ವೇಳೆ ಉಡುಗೊರೆಗಳನ್ನು ಸ್ವೀಕರಿಸಲು ಕೂಡ ಈ ನಿಯಮ ಅವಕಾಶ ಕಲ್ಪಿಸುತ್ತದೆ.ನಿಯಮದ 14ನೇ ಸೆಕ್ಷನ್ ಪ್ರಕಾರ, ಅಧಿಕಾರಿಗಳು ಅಥವಾ ನೌಕರರು ನಿಗದಿತ ಮಿತಿಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನೇನಾದರೂ ಪಡೆದುಕೊಂಡಿದ್ದೇ ಆದಲ್ಲಿ, ಅದನ್ನು ಅವರು ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ.

 

ಆದರೆ ಬಹುತೇಕ ನೌಕರರು ಇಂತಹ ಹೆಚ್ಚುವರಿ ಉಡುಗೊರೆಗಳ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದೇ ಇಲ್ಲ, ಮಾತ್ರವಲ್ಲ, ಈ ನಿಯಮ ಉಲ್ಲಂಘನೆಗಾಗಿ ಯಾರಾದರೂ ದಂಡ ಕಟ್ಟಿದ ಒಂದೇ ಒಂದು ಉದಾಹರಣೆಯೂ ನಮ್ಮ ಮುಂದೆ ಇಲ್ಲ.ನಿಯಮದಲ್ಲಿ ಆದ ಈ ಬದಲಾವಣೆಯನ್ನು ಕೆಲ ಪತ್ರಿಕೆಗಳಷ್ಟೇ ವರದಿ ಮಾಡಿದವು. ಈ ವಿಷಯವನ್ನು ನಾನು ನನ್ನ ಕೆಲವು ಸ್ನೇಹಿತರು ಮತ್ತು ಸಹೋದ್ಯೋಗಿಗಳ ಗಮನಕ್ಕೆ ತಂದಾಗ, ಅವರಿಗೆ ಇದೊಂದು ತಮಾಷೆಯ ಸಂಗತಿಯಾಗಿ ಕಂಡಿತು.

 

ಸಾವಿರಾರು ಕೋಟಿ ರೂಪಾಯಿಯ ಭ್ರಷ್ಟಾಚಾರದ ಹಗರಣಗಳು ಬೆಳಕಿಗೆ ಬರುತ್ತಿರುವ ಈಗಿನ ಸಂದರ್ಭದಲ್ಲಿ, ಸರ್ಕಾರಿ ನೌಕರರಿಗೆ ನೀಡುವ ಉಡುಗೊರೆಗಳನ್ನು ಯಾರಾದರೂ ದೊಡ್ಡ ವಿಷಯ ಮಾಡಲು ಹೊರಡುವುದು ಅಸಂಬದ್ಧ ಸಂಗತಿಯಂತೆಯೇ ಕಾಣುತ್ತದೆ.ಸರ್ಕಾರಿ ನೌಕರರು ಸಹ ಎಲ್ಲರಂತೆಯೇ ಸಂಘಜೀವಿಗಳಾಗಿದ್ದು ಅವರಿಗೂ ತಮ್ಮದೇ ಆದ ಸಂಬಂಧಗಳು ಇರುತ್ತವೆ, ಹೀಗಾಗಿ ಸರ್ಕಾರ ಅವರ ಮೇಲೆ ಹಕ್ಕು ಚಲಾಯಿಸಲು ಮುಂದಾಗುವುದು ಸರಿಯಲ್ಲ ಎಂದು ವಾದಿಸುವವರೂ ಇದ್ದಾರೆ.ಈ ವಾದದಲ್ಲಿ ಸ್ವಲ್ಪ ಮಟ್ಟಿನ ಹುರುಳಿರಬಹುದು. ಆದರೆ ಸಾರ್ವಜನಿಕ ಬದುಕಿನ ಪ್ರಾಮಾಣಿಕತೆಯ ಬಗ್ಗೆಯೂ ನಾವು ಯೋಚಿಸಬೇಕಾಗುತ್ತದೆ. ಸಾರ್ವಜನಿಕ ಆಡಳಿತಕ್ಕೆ ಸೇರುವ ವ್ಯಕ್ತಿಗಳು ತಮ್ಮಿಂದ ಸಮಾಜ ಏನನ್ನು ನಿರೀಕ್ಷಿಸುತ್ತದೆ ಎಂಬುದರ ಅರಿವಿದ್ದೇ ಸ್ವಯಂ ಇಚ್ಛೆಯಿಂದ ಆ ವಲಯವನ್ನು ಪ್ರವೇಶಿಸಿರುತ್ತಾರೆ.ತಮ್ಮ ವ್ಯವಹಾರಗಳು ಮತ್ತು ಕ್ರಿಯೆಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಇರುವುದರ ಜೊತೆಗೆ ತಮ್ಮ ನಡವಳಿಕೆಯನ್ನು ಗಮನಿಸಿದಾಗಲೂ ಯಾವುದೇ ರೀತಿಯ ಅನುಮಾನ ಬಾರದಂತೆ ಇರಬೇಕಾಗುತ್ತದೆ. ಲಂಚಕ್ಕೆ ಉಡುಗೊರೆಯ ಮುಖವಾಡ ತೊಡಿಸಿ, ಸಾರ್ವಜನಿಕ ಆಡಳಿತದ ಈ ಅನಿಷ್ಟಕ್ಕೆ ಶಿಷ್ಟತೆಯ ಮುದ್ರೆಯನ್ನು ಸುಲಭವಾಗಿ ಒತ್ತಿಬಿಡುವ ಸಾಧ್ಯತೆಯೂ ಇರುತ್ತದೆ.ವಿಶ್ವದ ಹಲವಾರು ರಾಷ್ಟ್ರಗಳು ಸಾರ್ವಜನಿಕ ನೌಕರರಿಗೆ ಸಂಬಂಧಿಸಿದಂತೆ ನಿಶ್ಚಿತ ನೀತಿ ಸಂಹಿತೆ ಹೊಂದಿರುವುದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಾವು ಭಾರತದಲ್ಲಿ ಪಾಲಿಸುತ್ತಿರುವ ಬಹುತೇಕ ನಿಯಮಗಳು ಬ್ರಿಟಿಷರ ಕಾಲದಿಂದ ಅನುಸರಿಸುತ್ತಾ ಬಂದಂಥವು. ಸರ್ಕಾರಿ ನೌಕರರು ಅನುಸರಿಸಬೇಕಾದ ನಿಯಮಗಳನ್ನು ಕೌಟಿಲ್ಯ ಸಹ ತನ್ನ ಅರ್ಥಶಾಸ್ತ್ರದಲ್ಲಿ ಪ್ರಸ್ತಾಪಿಸಿದ್ದಾನೆ.ಕೆಲ ವರ್ಷಗಳ ಹಿಂದೆ ಬ್ರಿಗೇಡಿಯರ್ ಆಗಿ ಭಾರತೀಯ ಸೇನೆಯಿಂದ ನಿವೃತ್ತರಾಗಿರುವ ಯಶಸ್ವಿ ಹೃದಯ ಶಸ್ತ್ರಚಿಕಿತ್ಸಕ ಹಾಗೂ ಈಗ ನಮ್ಮಂದಿಗೆ ಸ್ವಯಂಸೇವಕರಾಗಿರುವ ಡಾ. ರಾಜನ್ ಅವರೊಂದಿಗೆ ಈ ಎಲ್ಲ ವಿಷಯಗಳನ್ನೂ ನಾನು ಚರ್ಚಿಸಿದೆ. ಎರಡನೇ ಮಹಾಯುದ್ಧದ ತರುವಾಯ 1946ರಲ್ಲಿ ತಮಗಾದ ಅನುಭವವೊಂದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.ಉತ್ತರ ಬಂಗಾಳದ ಕುಗ್ರಾಮವೊಂದರಲ್ಲಿ, ಸೇನೆಗೆ ಸೇರಿದ ವೈದ್ಯಕೀಯ ಘಟಕವೊಂದನ್ನು ನಿಯೋಜಿಸಲಾಗಿತ್ತು. ಇದೊಂದನ್ನು ಬಿಟ್ಟರೆ ಆ ಪ್ರದೇಶದ ಸುತ್ತಮುತ್ತ ಬೇರ‌್ಯಾವ ವೈದ್ಯಕೀಯ ಸೌಲಭ್ಯವೂ ಇರಲಿಲ್ಲ. ಈ ಘಟಕ ಸ್ಥಳೀಯ ಗ್ರಾಮಸ್ಥರಿಗೂ ವೈದ್ಯಕೀಯ ಚಿಕಿತ್ಸೆ ನೀಡುತ್ತಿತ್ತು.

 

ಒಂದು ದಿನ ಜಮೀನ್ದಾರರೊಬ್ಬರು ಈ ಘಟಕದಲ್ಲಿ ವೈದ್ಯಕೀಯ ನೆರವು ಕೋರಿದರು. ಜಮೀನ್ದಾರರು ಸ್ಥಳೀಯವಾಗಿ ಪ್ರಮುಖ ವ್ಯಕ್ತಿ ಆಗಿದ್ದರಿಂದ ಅವರ ಮನೆಗೇ ತೆರಳಿ ಚಿಕಿತ್ಸೆ ನೀಡಲು ಘಟಕದ ಮುಖ್ಯಸ್ಥರು ಯುವ ಕ್ಯಾಪ್ಟನ್ ಎ.ಬಿ.ರೇ ಅವರನ್ನು ನಿಯೋಜಿಸಿದ್ದರು.

 

ರೇ ಅವರ ಚಿಕಿತ್ಸೆಯಿಂದ ಜಮೀನ್ದಾರರು ಶೀಘ್ರದಲ್ಲೇ ಗುಣಮುಖರಾದರು. ಇದರಿಂದ ಸಂತುಷ್ಟರಾದ ಅವರು, ಇದಕ್ಕೆ ಪ್ರತಿಯಾಗಿ ದೊಡ್ಡ ಬುಟ್ಟಿಯ ತುಂಬಾ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟರು. ಈ ಸಂಗತಿಯನ್ನು ಕ್ಯಾಪ್ಟನ್ ಯಾವುದೇ ಮುಚ್ಚುಮರೆ ಇಲ್ಲದೆ ಬ್ರಿಟಿಷ್ ಕಮಾಂಡಿಂಗ್ ಅಧಿಕಾರಿಗೆ ತಿಳಿಸಿದರು.ಮಾವಿನ ಹಣ್ಣುಗಳನ್ನು ವಾಪಸ್ ಕಳುಹಿಸಿದರೆ ಜಮೀನ್ದಾರರ ಮನಸ್ಸಿಗೆ ನೋವಾಗುತ್ತದೆ, ಒಪ್ಪಿಕೊಂಡಿದ್ದೇ ಆದರೆ ನಡವಳಿಕೆ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ. ಇಂತಹ ದ್ವಂದ್ವದಲ್ಲಿ ಏನು ಮಾಡಬೇಕೆಂದು ತೋಚದ ಕಮಾಂಡಿಂಗ್ ಅಧಿಕಾರಿ, ಸ್ಥಳೀಯ ಮುಖ್ಯ ಕಚೇರಿಗೆ ಈ ಸಂಬಂಧ ಟೆಲಿಗ್ರಾಂ ಒಂದನ್ನು ರವಾನಿಸಿದರು.

`ನಾವು ಒದಗಿಸಿದ ಸೇವೆಗಾಗಿ ಸ್ಥಳೀಯ ಮುಖಂಡರೊಬ್ಬರು ನಮ್ಮ ಘಟಕಕ್ಕೆ ಬುಟ್ಟಿ ತುಂಬಾ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅದನ್ನು ಏನು ಮಾಡಬೇಕೆಂಬ ಬಗ್ಗೆ ಸಲಹೆ ನೀಡಿ~ ಎಂದು ಅದರಲ್ಲಿ ಕೇಳಿದ್ದರು. ಆಗ ಮುಖ್ಯ ಕಚೇರಿಯು `ಈ ಉಡುಗೊರೆಯ ಮೌಲ್ಯ ಎಷ್ಟು~ ಎಂಬುದನ್ನು ತಿಳಿಸುವಂತೆ ಸೂಚಿಸಿತು.

 

ಕ್ಯಾಪ್ಟನ್ ರೇ ಅವರನ್ನು ಮಾವಿನಹಣ್ಣಿನ ಮೌಲ್ಯ ತಿಳಿದುಕೊಂಡು ಬರಲು ಸ್ಥಳೀಯ ಮಾರುಕಟ್ಟೆಗೆ ಕಳುಹಿಸಲಾಯಿತು. ನಂತರ ಘಟಕವು ಮಾವಿನ ಹಣ್ಣಿನ ಮೌಲ್ಯ ನಾಲ್ಕೂವರೆ ರೂಪಾಯಿ ಎಂದು ತಿಳಿಸಿ ಮುಖ್ಯ ಕಚೇರಿಗೆ ಮತ್ತೊಂದು ಟೆಲಿಗ್ರಾಂ ರವಾನಿಸಿತು.

 

ಕಡೆಗೂ ಈ ಉಡುಗೊರೆಯನ್ನು ಒಪ್ಪಿಕೊಳ್ಳುವಂತೆ ಮುಖ್ಯ ಕಚೇರಿ ಅನುಮತಿ ನೀಡಿತು. ಆದರೆ ಇಷ್ಟೆಲ್ಲಾ ಆಗುವ ಹೊತ್ತಿಗೆ ಆ ಮಾವಿನ ಹಣ್ಣುಗಳೆಲ್ಲಾ ಕೊಳೆತೇ ಹೋಗಿದ್ದವು.

ಈ ಉದಾಹರಣೆಯನ್ನು ಗಮನಿಸಿದಾಗ, ಇದೊಂದು ಕಾನೂನಿಗೆ ಅತಿಯಾಗಿ ಜೋತು ಬಿದ್ದ ನಿದರ್ಶನದಂತೆ ಕಾಣಬಹುದು.ಆದರೆ ಇದರ ಹಿಂದಿರುವ ಅಂತಃಸ್ಸತ್ವವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ನೀಡುವ ಸವಲತ್ತುಗಳು ಮತ್ತು ಸೇವೆ ಅರ್ಹ ಫಲಾನುಭವಿಗಳನ್ನು ತಲುಪುವಂತಾಗುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹು ಮುಖ್ಯವಾದುದು.ಈ ವಿಷಯದಲ್ಲಿ ಯಾವುದೇ ದುರುದ್ದೇಶ ಅಥವಾ ಪಾರದರ್ಶಕತೆಯ ಕೊರತೆ ಕಂಡುಬಂದಿದ್ದೇ ಆದರೆ, ಅದು ಸಾರ್ವಜನಿಕ ಆಡಳಿತದ ಮೇಲೆ ತೀವ್ರ ದುಷ್ಪರಿಣಾಮವನ್ನೇ ಉಂಟು ಮಾಡುತ್ತದೆ. ಸಾರ್ವಜನಿಕ ನೌಕರರು ನಿಷ್ಪಕ್ಷಪಾತವಾಗಿದ್ದು ಉಡುಗೊರೆಗಳಂತಹ ಯಾವುದೇ ಬಗೆಯ ಪ್ರಲೋಭನೆಗಳಿಗೆ ಒಳಗಾಗಬಾರದು ಎಂಬ ನಿರೀಕ್ಷೆ ಹೊಂದಲಾಗಿದೆ.ತಾವು ವ್ಯವಹರಿಸುವ ವ್ಯಕ್ತಿಗಳಿಂದ ಉಡುಗೊರೆ ಪಡೆಯುವುದರಿಂದ ತಮ್ಮ ನಿರ್ಧಾರದ ಸಾಮರ್ಥ್ಯದ ಮೇಲೆ ಅದು ಪರಿಣಾಮ ಬೀರಬಹುದು ಮತ್ತು ಉಡುಗೊರೆ ನೀಡುವವರ ಬೇಡಿಕೆಗಳಿಗೆ ಮಣಿಯುವಂತೆ ಮಾಡಿಬಿಡಬಹುದು.ಸಾರ್ವಜನಿಕ ಆಡಳಿತದಲ್ಲಿ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಸರ್ಕಾರ ಹಲವು ನಿಯಮಗಳನ್ನು ರೂಪಿಸಿದ್ದರೂ ವಾಸ್ತವದಲ್ಲಿ ಅವನ್ನೆಲ್ಲಾ ಜಾರಿಗೊಳಿಸಲು ಕಾರ್ಯಸಾಧ್ಯ ಆಗದೇ ಇರಬಹುದು. ಅಂತಿಮವಾಗಿ, ನಿಯಮಗಳೇನಿದ್ದರೂ ಕೇವಲ ಮಾರ್ಗದರ್ಶಿ ಸೂತ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಕಾರ್ಯ ನಿರ್ವಹಣೆಗೆ ಒಂದು ಚೌಕಟ್ಟನ್ನಷ್ಟೇ ಒದಗಿಸಿಕೊಡುತ್ತವೆ.ಹೀಗಾಗಿ ಒಂದೂವರೆ ಕೋಟಿ ಸಾರ್ವಜನಿಕ ನೌಕರರ ಮೇಲೆ ಸದಾ ಕಾಲ ಹದ್ದಿನ ಕಣ್ಣಿಡಲು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿ ಸರ್ಕಾರಿ ನೌಕರರೂ ತಮಗೆ ತಾವೇ ವಿಧಿಸಿಕೊಳ್ಳುವ ನೈತಿಕತೆ ಮತ್ತು ಮೌಲ್ಯಗಳೇ ಅಂತಿಮವಾಗಿ ಪ್ರಯೋಜನಕ್ಕೆ ಬರುವುದು.ಹೀಗಾದಾಗ ಯಾರ ಮನಸ್ಸಿನಲ್ಲೂ ಯಾವುದೇ ಬಗೆಯ ಸಂಶಯಕ್ಕೂ ಆಸ್ಪದ ಇರದು. ಇಂತಹ ಆಶಯಕ್ಕೆ ಪೂರಕವಾದ ವಾತಾವರಣವನ್ನು ಸರ್ಕಾರ ಒದಗಿಸಿಕೊಡಬೇಕೇ ಹೊರತು ಈಗಿರುವ ಮಾನದಂಡಗಳನ್ನೇ ದುರ್ಬಲಗೊಳಿಸುವ ಪ್ರಯತ್ನ ಮಾಡಬಾರದು.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.