ಗುರುವಾರ , ಮೇ 6, 2021
22 °C

ಒಳಿತು ಕೆಡುಕುಗಳ ವಿಷವರ್ತುಲಗಳು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಕೆಲವು ದಿನಗಳ ಹಿಂದೆ ನನ್ನ ಪ್ರಿಯ  ಓದುಗ ರೊಬ್ಬರು ತಮ್ಮ ಹೆಸರನ್ನು ಬಯಲು ಪಡಿಸದೆ ನನಗೊಂದು ಪತ್ರ ಬರೆದಿದ್ದರು. ಆ ಪತ್ರದ ದನಿ ಆತಂಕ, ನೋವುಗಳಿಂದ ತುಂಬಿತ್ತು. ಆಳದ ಪಾಪಪ್ರಜ್ಞೆ ಅವರನ್ನು ಉರಬಡಕೊಂಡು ತಿನ್ನುತ್ತಿತ್ತು. ಕಾರಣ ಹೀಗಿತ್ತು: ಅವರು ಚಿಕ್ಕಂದಿ ನಿಂದ ಧ್ಯಾನ, ಪೂಜೆ, ಜಪ-ತಪ ಇತ್ಯಾದಿ ನೇಮಗಳನ್ನು ಕಠೋರವಾಗಿ ನಡೆಸಿಕೊಂಡು ಬಂದಿದ್ದರಂತೆ. ಆದರೆ ಒಂದು ದಿನ ಅವರಲ್ಲಿ ವಿಚಾರಾಗ್ನಿ ಹಠಾತ್ತನೆ ಜಾಗೃತವಾಯಿತು. ತಾವು ನಿಷ್ಠೆಯಿಂದ ಆಚರಿಸುತ್ತಿದ್ದ ವ್ರತಾದಿಗಳು ಕಂದಾಚಾರವೆಂದೂ ಅರ್ಥಹೀನವೆಂದೂ ತೀವ್ರ ವಾಗಿ ಅನಿಸತೊಡಗಿ ಎಲ್ಲವನ್ನೂ ಪ್ರಶ್ನಿಸತೊಡ ಗಿದರು. ತಮ್ಮ ಗತದ ಪಾಪಗಳಿಗಾಗಿ ಪ್ರಾಯ ಶ್ಚಿತ್ತ ಮಾಡಿಕೊಳ್ಳಲು ಯಥೇಚ್ಛವಾಗಿ ಮಾಂಸಾ ಹಾರ, ಮದ್ಯಪಾನಗಳನ್ನು ಶುರು ಮಾಡಿದರು. ಅದರೆ ವ್ರತ ಬಿಟ್ಟರೂ ಸುಖ ಸಿಗಲಿಲ್ಲ. ಅಶಾಂತಿ ಹೆಚ್ಚಾಯಿತು. ಮಾಡಬಾರದ ಏನನ್ನೋ ಮಾಡಿ ಬಿಟ್ಟೆನೆಂಬ ದಿಗಿಲು ಕಾಡತೊಡಗಿತು.ಅವರು ನನ್ನನ್ನು ಗುರು ಎಂದು ಸಂಬೋಧಿ ಸಿದ್ದರು. ಶಿಷ್ಯನೊಬ್ಬನು ಗುರುವಿನಲ್ಲಿ ಅತಿ ಪ್ರಾಮಾಣಿಕವಾಗಿ ನಿವೇದನೆ ಮಾಡಿಕೊಳ್ಳುವ ಧಾಟಿಯಲ್ಲಿ ಪತ್ರ ಬರೆದಿದ್ದರು. ಬಹುಶಃ ಅವರು  ತಮ್ಮ ಹೆಸರನ್ನು ಬಯಲು ಮಾಡದಿರಲು ಕಾರಣ ನಾನು ಅದನ್ನು ಇತರರಿಗೆ ತಿಳಿಸಬಹು ದೆಂಬ ಭಯವಲ್ಲ. ಬದಲಾಗಿ ತಾನು ತಪಿತಸ್ಥ ನೆಂಬುವ ಭಾವನೆ ತಮ್ಮ ಹೆಸರನ್ನೂ ಹೇಳಲಾ ಗದ ಮಟ್ಟಿಗೆ ಅವರಿಗೆ ನಾಚಿಕೆಯುಂಟು ಮಾಡಿತ್ತು. ಅವರು ತಿಳಿದುಕೊಂಡ ಹಾಗೆ ನಾನು ಗುರುವೇನೂ ಆಗಿಲ್ಲ. ಗುರುವಲ್ಲದ್ದರಿಂದ ನನಗೆ ಶಿಷ್ಯರೂ ಇಲ್ಲ. ಆದರೆ ಅವರು ಅನುಭವಿಸುತ್ತಿದ್ದ ಯಾತನೆ ನನ್ನ ಮನಸ್ಸನ್ನು ಕಲಕಿಬಿಟ್ಟಿತು. ಕೇವಲ ವಿಚಾರವಾದಿಯಾಗಿ ಅದನ್ನು ನೋಡುವುದು ಸಾಧ್ಯವಾಗಲಿಲ್ಲ. ನನ್ನ ಮಟ್ಟಿಗೆ ಅವರ ಸಮಸ್ಯೆ ಸಮಸ್ಯೆಯೇ ಆಗಿರಲಿಲ್ಲ. ಆದರೆ ನನ್ನ, ಅವರ ಪರಿಸ್ಥಿತಿಗಳು ಬೇರೆ. ಅವರ ಯಾತನೆಯ ಕಾರಣ ಕ್ಕಿಂತ ಹೆಚ್ಚಾಗಿ ಅವರ ಯಾತನೆಯೇ ನನ್ನಲ್ಲಿ ಯಾತನೆಯನು್ನ ಉಂಟುಮಾಡಿತು.ನಾನು ಅವರಿಗೆ ಹೀಗೆ ಬರೆದೆ:

ಹಿಂದೆ ನೀವು ಮಾಡಿದ ಪೂಜೆ-ಪುನಸ್ಕಾರಗಳು ಅಂದಿನ ನಿಮ್ಮ ಮಾನಸಿಕ ಅಗತ್ಯಗಳನ್ನು ಪೂರೈಸಿ ದ್ದವು. ಆದರೆ ಈಗ ಅದರ ಅಗತ್ಯ ತಪ್ಪಿಹೋಗಿದೆ. ನಿಮ್ಮ ವಿಕಾಸದ ಈಗಿನ ಹಂತದಲ್ಲಿ ಮಾಂಸ ಮದ್ಯಗಳ ಅಗತ್ಯ ಬಂದಿದೆ. ಎಲ್ಲಿಯವರೆಗೆ ನಿಮಗೆ ಇವುಗಳಿಂದ ಬಿಡುಗಡೆ ಸಿಗುತ್ತದೋ ಅಲ್ಲಿಯವರೆಗೆ ಇವು ಮುಂದುವರಿಯುತ್ತವೆ. ಪೂಜೆ-ಪುನಸ್ಕಾರಗಳು ಹೇಗೋ ಹಾಗೆಯೇ ಮಾಂಸ- ಮದ್ಯಗಳೂ ಸರಿಯೂ ಅಲ್ಲ, ತಪ್ಪೂ ಅಲ್ಲ. ಆದ್ದರಿಂದ ಹಿಂದಿನ ಅಥವಾ ಇಂದಿನ ಹವ್ಯಾಸಗಳನ್ನು  ಹೇಯವೆಂದು ಬಗೆಯದೆ ಈ ಜಗತ್ತಿನಲ್ಲಿ ನಿಮ್ಮ ಆಸೆ, ಅಗತ್ಯಗಳನ್ನು ಲೋಕ ಕಂಟಕವಾಗದಂತೆ ಪೂರೈಸಿಕೊಳ್ಳುವತ್ತ ಗಮನ ಕೊಡಿ...ನನ್ನ ಮಾತುಗಳಿಂದ ಅವರಿಗೆ ಸಮಾಧಾನ ಸಿಕ್ಕಿತೆಂದು ಕಾಣುತ್ತದೆ.. ಅವರ ಮುಂದಿನ ಪತ್ರದ ದನಿ ಶಾಂತವಾಗಿತ್ತು.

ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇಂಥ ಅವಸ್ಥಾಂತರಗಳ ಕೊಂಡ ಹಾಯಬೇಕಾ ಗುತ್ತದೆ. ಅದು ನಾವು ನಮಗಾಗಿ ಮಾಡಿಕೊಳ್ಳ ಲೇಬೇಕಾದ ಕ್ರಿಯಾವಿಧಿ. ಆಗ ನಮಗೆ ಬೇಕಾದ್ದು ಉಪದೇಶವಲ್ಲ, ಬುದ್ಧಿವಾದವಲ್ಲ. ಒಂದು ಸಾಂತ್ವನದ ಮಾತು, ಒಂದು ಕರುಣೆಯ ಸ್ಪರ್ಶ ಅಂತಹ ಕೊರಕಲುಗಳನ್ನು ದಾಟಲು ನಮಗೆ ನೆರವಾಗುತ್ತದೆ. ಸರಿ-ತಪ್ಪುಗಳ ಪಾಂಡಿತ್ಯ ಆ ಯಾತನೆಯನ್ನು ಇನ್ನೂ ಅಸಹನೀಯವಾಗಿಸು ತ್ತದೆ. ನಾನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬ ಪಾಪಭಾವನೆಯ ವಿಷಬೀಜವನ್ನು ಬಿತ್ತಿದವರಾರು? ಪುಣ್ಯ- ಪಾಪಗಳ ಕಲ್ಪನೆಗಳು ಸಾಮಯಿಕವೆಂಬುದನ್ನರಿಯದೆ ಯಾಕೆ ಇಷ್ಟೊಂದು ಮಂದಿ ಇಷ್ಟೊಂದು ನೋವು ತಿನ್ನು­ತ್ತಾರೆ? ಇವೇನೂ ಅತ್ಯಂತ ಗಹನವಾದ ಪ್ರಶ್ನೆಗಳಲ್ಲ. ಆದರೂ ಪಾಪ -ಪುಣ್ಯಗಳ ತುಮುಲ ಮಾನವ ಸಹಜವಾಗಿರುವುದರಿಂದಲೇ ಅದು ಪುರಾಣ-ಕತೆಗಳಲ್ಲಿ, ಲೋಕಾನುಭವದಲ್ಲಿ ಪುನರುಕ್ತವಾಗುವುದು. ಶಾಪ-ಉಶ್ಶಾಪ, ಪರಿಹಾರ- ಪ್ರಾಯಶ್ಚಿತ್ತಗಳು ಸಾರ್ವಕಾಲಿಕ ವಾಗಿರುವುದು. ಪಾಪದ ಇನ್ನೊಂದು ಹೆಸರು ಅಪರಾಧ, ಜುಲುಮೆ. ಪ್ರಾಯಶ್ಚಿತ್ತದ ಇನ್ನೊಂದು ಹೆಸರು ದಂಡನೆ, ಸಜಾ.ಜಪಾನೀ ಕಾದಂಬರಿಕಾರ ಯೂಕಿಯೋ ಮಿಷಿಮಾ ‘ಟೆಂಪಲ್ ಆಫ್ ದ ಗೋಲ್ಡನ್ ಡಾನ್’ ಎಂಬ ಕಾದಂಬರಿ ಬರೆದಿದ್ದಾನೆ. ಅದರ ಕಥಾನಾಯಕ ಒಂದು ಝೆನ್ ಮಠದಲ್ಲಿ ಕಠೋರ ನೇಮಗಳನ್ನು ಅದೆಷ್ಟೋ ವರ್ಷ ಪಾಲಿ ಸಿಕೊಂಡು ಬಂದ ಮೇಲೆ ಒಂದು ದಿನ ಅವನಿಗೆ ಇದೆಲ್ಲದರ ಬಗ್ಗೆಯೂ ಅಸಹ್ಯವುಂಟಾಗುತ್ತದೆ. ಆ ಅಸಹ್ಯಭಾವನೆ ತೀವ್ರ ದ್ವೇಷವಾಗಿ ಮಾರ್ಪಟ್ಟು ತನ್ನನ್ನು ಪೊರೆದ ಮಠ ಮತ್ತದರ ದೇಗುಲಗಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಾನೆ.ಪಾಪ-ಪುಣ್ಯಗಳ ಸಂಘರ್ಷವನ್ನು ಇದಕ್ಕೆ ತದ್ವಿ ರುದ್ಧವಾದ ರೀತಿಯಲ್ಲಿ ಗಿರೀಶ್‌ಚಂದ್ರ ಘೋಷನ ಬಿಲ್ವಮಂಗಲ್ ಬಂಗಾಳಿ ನಾಟಕದ ಕಥಾ ನಾಯಕ ಇಷ್ಟೇ ಆತ್ಮವಿನಾಶಕ ರೀತಿಯಲ್ಲಿ ಪರಿ ಹರಿಸಿಕೊಳ್ಳುತ್ತಾನೆ. ಕುಲೀನ ಕನ್ಯೆಯೊಬ್ಬಳನ್ನು ಕಾಮದ ಕಣ್ಣಿನಿಂದ ಕಂಡೆನೆಂಬ ಅಪರಾಧಿ ಪ್ರಜ್ಞೆ ಯಿಂದ ತನ್ನ ಕಣ್ಣುಗಳನ್ನೇ ಕಿತ್ತುಕೊಳ್ಳುತ್ತಾನೆ.ಇನ್ನು ಕೆಲವರು ಇಂತಹ ತುಮುಲಗಳನ್ನು ಇತ್ಯಾತ್ಮಕ ರೀತಿಯಲ್ಲಿ ಪರಿಹರಿಸಿಕೊಳ್ಳುತ್ತಾರೆ. ನನ್ನ ಪರಿಚಯದ ಒಬ್ಬರು ತಮ್ಮ ಹೆಂಡತಿ ಯನ್ನೂ ಸದಾ ಚಿತ್ರಹಿಂಸೆಗೊಳಪಡಿಸುತ್ತಿದ್ದರು. ಒಂದು ದಿನ ಆಯಮ್ಮ ಇದನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿತು. ಆ ನಂತರ ಆ ಗೆಳೆ ಯರಿಗೆ ತಮ್ಮ ಪಾಪದ ಅರಿವಾಯಿತು. ಅವರು ತಮ್ಮ ಆಸ್ತಿ-ಪಾಸ್ತಿಗಳನ್ನು ಬರ್ಖಾಸ್ತು ಮಾಡಿ ಸನ್ಯಾಸಿಯಾಗಿ ಲೋಕಕಲ್ಯಾಣಕ್ಕೆ ತೊಡಗಿದರು. ಆತ್ಮಕಲ್ಯಾಣದ ಹಾದಿಯನ್ನೂ ಹಿಡಿದರು.ಹೀಗೆ ಇತ್ಯಾತ್ಮಕವಾಗಿಯಾಗಲೀ ನೇತ್ಯಾತ್ಮಕ ವಾಗಿಯಾಗಲೀ ಪಾಪ-ಪುಣ್ಯಗಳ ದಂದುಗವನ್ನು ದಾಟಹೊರಟವರು ಮಾನಸಿಕವಾಗಿ ಬಿಡುಗಡೆ ಹೊಂದಿದರೆ? ತಮ್ಮನ್ನು ದಂಡಿಸಿ ಕೊಂಡವರು ಕೆಟ್ಟರು. ದಂಡಿಸಿಕೊಳ್ಳದವರೂ ಕೆಟ್ಟರು. ನಾನು ಪಾಪಿಷ್ಟನೆಂಬ ಆತ್ಮದ್ವೇಷದಿಂದ ಅವರು ಬಿಡುಗಡೆ ಹೊಂದಲಿಲ್ಲ.ಹಲಬಗೆಯ ಕೃತ್ಯಗಳನ್ನು ಅಪರಾಧಗಳೆಂದು ಗುರುತಿಸಿ ಅವುಗಳಿಗೆ ತಕ್ಕ ಶಾಸ್ತಿ ಮಾಡಲೋ ಸುಗ ವಿವಿಧ ಸಜೆಗಳನ್ನು ನೀಡುವುದು ಎಲ್ಲ ನೀತಿ ಸಂಹಿತೆಗಳ ಉದ್ದೇಶ. ಸಜೆಯ ಭೀತಿ ಅಪರಾಧ ಗಳನ್ನು ತಡೆಯಬಲ್ಲುದೆಂಬ ವಿಶ್ವಾಸದಿಂದಲೇ ದಂಡಸಂಹಿತೆಗಳ ನಿರ್ಮಾಣ. ಮಾನವರು ಮೂಲಭೂತವಾಗಿ ಸ್ವಾರ್ಥಿಗಳೂ ಕ್ರೂರಿಗಳೂ ಆಗಿರುವುದರಿಂದ ಸಜೆಯ ಭೀತಿ ಹೊರಟು ಹೋದರೆ ಇಡೀ ಸಮಾಜ ಮತ್ಸ್ಯನೀತಿಯ ಕಡ ಲಾಗಿಬಿಡುತ್ತದೆಂದು ಅನಾದಿಕಾಲದಿಂದ ಜನ ನಂಬುತ್ತಾ ಬಂದಿದ್ದಾರೆ. ಚಾಣಕ್ಯನ

ಅರ್ಥಶಾಸ್ತ್ರದ ಬುನಾದಿ ಇದೇ. ಸಂಘರ್ಷವನ್ನು ಪರಪೀಡನೆಯನ್ನು ಪೋಷಿಸುವ ವೀರಯುಗದ ಮೌಲ್ಯಗಳಿಗೂ ಇದೇ ಆಧಾರ.

ದೇವರನ್ನು ಸೃಷ್ಟಿಸಿದ ಧರ್ಮಗಳೂ ಈ ನಂಬುಗೆಯಿಂದ ಹುಟ್ಟಿ ಈ ನಂಬುಗೆಯನ್ನೇ ಬಲ ಪಡಿಸುತ್ತಾ ಬಂದಿವೆ.ಗ್ರಾಹಂ ಗ್ರೀನ್‌ನ ಪವರ್ ಅಂಡ್ ಗ್ಲೋರಿ ಕಾದಂಬರಿಯಲ್ಲಿ ಬರುವ ಒಂದು ಪತ್ರ ಕುತೂ ಹಲಕಾರಿ. ಆತನೊಬ್ಬ ಧರ್ಮ ಬೋಧಕ. ಪ್ರತೀ ಭಾನುವಾರ ಚರ್ಚಿನಲ್ಲಿ ತನ್ನ ಅನುಯಾಯಿ ಗಳಿಗೆ ಆತ ಕಾಮ ಎಷ್ಟು ಭಯಂಕರವಾದುದು ಎಂಬುದರ ಬೋಧನೆ ನೀಡಿದ ಬಳಿಕ ಮನೆಗೆ ಬಂದವನೇ ಹೆಂಡತಿಯ ಮೇಲೆ ಪಶುವಿನಂತೆ ಎರಗತೊಡಗುತ್ತಾನೆ. ತನ್ನ ಪತನಕ್ಕೆ ಕಾರಣ ಳಾದ ಹೆಂಡತಿಯನ್ನು ಇಡೀ ವಾರ ನಿಂದಿಸ ತೊಡಗುತ್ತಾನೆ.ಹೆಣ್ಣನ್ನು ಪಾಪಕೂಪವಾಗಿ ನೋಡಿರುವ ಧರ್ಮಗಳು  ಇದೇ ರೀತಿಯಲ್ಲಿ ವ್ಯವಹರಿಸುತ್ತಾ ಬಂದಿವೆ. ಧರ್ಮಗಳ ಜೊತೆಗೆ ಗಂಡಾಳಿಕೆಯ ಸ್ವಾರ್ಥವೂ ತಗುಲುಹಾಕಿ ಕೊಂಡಿತ್ತು. ಅತ್ಯಂತ ಮಾನವೀಯವಾದ ತತ್ವಗಳನ್ನು ಹೇಳುತ್ತಾ ಬಂದ ಧರ್ಮಗಳು ಸ್ತ್ರೀ ದ್ವೇಷವನ್ನು ಪೋಷಿಸಿದವು. ಹೆಂಗಸರಿಗೆ ಮೋಕ್ಷ ವಿಲ್ಲವೆಂದು ಸಾರಿದವು.  ಹೆಂಗಸಿನ ಬಯಕೆಯನ್ನು ಗಂಡಸರ ಅಂಕೆಯಲ್ಲಿಡುವ ಸಂಸ್ಥೆಗಳನ್ನೂ ವಿಧಿಗಳನ್ನೂ ಸ್ಥಾಪಿಸಿದವು.ಈಗ ಕಾಲ ಬದಲಾಗುತ್ತಿದೆ. ಹೆಂಗಸರು ತಮ್ಮ ಆದ್ಯತೆಗಳನ್ನು ಮುಂದಿಡತೊಡಗಿದ್ದಾರೆ. ಆದರೆ ಹಿಂದೆ ಗಂಡಸರು ಹೆಂಗಸರನ್ನು ಪಾಪ ಕೂಪವೆಂದು ನಂಬಿದ ಹಾಗೆ ಇಂದಿನ ಉಗ್ರ ಮಹಿಳೆಯರು ತಮ್ಮ ಎಲ್ಲ ಸಮಸ್ಯೆಗಳಿಗೂ ಗಂಡ ಸರೇ ಕಾರಣವೆಂದು ತಿಳಿಯುತ್ತಿದ್ದಾರೆ. ಇದೇ ರೀತಿ ಹಿಂದೆ ಶೋಷಣೆಗೊಳಪಟ್ಟ ಸಮುದಾಯ ದವರು ಇಂದು ಬಿಡುಗಡೆಯ ಹಾದಿಯಲ್ಲಿ ದ್ದಾರೆ. ಇದು ಸ್ವಾಗತಾರ್ಹ.ಆದರೆ ತಮ್ಮನ್ನು ಶೋಷಿಸಿದ ಸಮುದಾಯಗಳ ಮೇಲಿನ ಪ್ರತೀ ಕಾರವೇ ತಮ್ಮ ಬಿಡುಗಡೆಯೆಂಬುವಂತೆ ವರ್ತಿ ಸುತ್ತಿರುವುದು ಹೇಗೆ ಮೈತ್ರಿ-ಕರುಣೆಗಳಿಗೆ ಎಡೆ ಮಾಡಿಕೊಡುವುದೋ ಗೊತ್ತಿಲ್ಲ. ಈ ರೀತಿಯ ಪ್ರಕ್ರಿಯೆಗಳು ಒಂದು ತೆರನ ಶ್ರೇಣೀಕೃತ ಶೋಷ ಣೆಯನ್ನು ಇನ್ನೊಂದು ರೀತಿಯಲ್ಲಿ ಮುಂದುವರಿ ಸಿಕೊಂಡು ಹೋಗುತ್ತವೆ. ಪಾತ್ರಧಾರಿಗಳು ಬದಲಾಗುತ್ತಿದ್ದಾರೆಯೇ ಹೊರತು ಪಾತ್ರಗಳಾ ಗಲೀ ಘಟನೆಗಳಾಗಲೀ ಬದಲಾಗುತ್ತಿಲ್ಲ. ಇದನ್ನು ಬಿಡುಗಡೆಯೆಂದು ಹೇಗೆ ತಿಳಿಯುವುದು?

ಶೋಷಣೆ -ಹಿಂಸೆಗಳ ಮರುಕಳಿಸುವ ಇತಿ ಹಾಸದ ವಿಷವರ್ತುಲದಿಂದ ಹೊರಬರುವುದು ಹೇಗೆ?ಯೇ ದೇಶ ಚರಿತ್ರ ಚೂಸಿನಾ ಏಮುನ್ನದಿ ಗರ್ವಕಾರಣಂ

ನರಜಾತಿಚರಿತ್ರ ಸಮಸ್ತಂ ಪರಪೀಡನ ಪರಾಯಣತ್ವಂ

(ಯಾವ ದೇಶದ ಚರಿತ್ರೆಯನ್ನೇ ನೋಡಿ; ಏನಿದೆ ಹೆಮ್ಮೆಪಡುವುದಕ್ಕೆ ನರಜಾತಿಯ ಇಡೀ ಚರಿತ್ರೆಯೇ ಒಂದು ನೆಪ ಹೆರರ ಹಿಂಸಿಸುವುದಕ್ಕೆ)ತೆಲುಗು ಕವಿ ಶ್ರೀ ಶ್ರೀ ಹೀಗೆಂದದ್ದು ಗತದ ಚರಿತ್ರೆಯನ್ನು ಕುರಿತು. ಆದರೆ ಇದು ಇಂದಿನ, ಮುಂದಿನ ಬೆಳವಣಿಗೆಗಳ ವರ್ಣನೆಯೂ  ಆಗಬಹುದೆಂಬ ಸೂಚನೆಗಳು ನಮ್ಮೊಳಗೆ, ಹೊರಗೆ ನಿಚ್ಚಳವಾಗಿ ಕಾಣುತ್ತಿವೆ.ಯಾಕೆಂದರೆ ನಾವೆಲ್ಲರೂ ಪಾಪದ, ಕೇಡಿನ ಕಾರಣಗಳನ್ನು ನಮ್ಮ ಹೊರಗಿನ ವ್ಯಕ್ತಿಗಳಲ್ಲಿ, ಗುಂಪುಗಳಲ್ಲಿ, ಸಮುದಾಯಗಳಲ್ಲಿ, ಧರ್ಮ ಗಳಲ್ಲಿ, ಸಿದ್ಧಾಂತಗಳಲ್ಲಿ ಕಾಣುತ್ತಿದ್ದೇವೆ. ಆದರೆ ನಾವು ಕಾಣುತ್ತಿರುವ ತಥ್ಯದ ನಿರ್ಮಾಣದಲ್ಲಿ ನಮ್ಮ ಪಾತ್ರವೂ ಇದೆಯೆಂಬುದನ್ನು ಮರೆಯು ತ್ತಿದ್ದೇವೆ. ಎಲ್ಲೆಡೆ ಕೇಡನ್ನೇ ನೋಡುವ ಮನ ಒಳಿ ತನ್ನು ಹೇಗೆ ನಿರ್ಮಿಸೀತು? ಪಾಪ-ಪ್ರಾಯಶ್ಚಿತ್ತಗಳ ವಿಷವರ್ತುಲಗಳಿಂದ ಹೇಗೆ ಮುಕ್ತವಾದೀತು?ಚಾಣಕ್ಯ ಹೇಳಿದ ಮತ್ಸ್ಯನ್ಯಾಯದಿಂದ ಭಿನ್ನ ವಾದ ಲೋಕದೃಷ್ಟಿಯೊಂದನ್ನು ನಾಗಾರ್ಜುನ ಶಾತಕರ್ಣಿಗೆ ಬರೆದ ಪತ್ರದಲ್ಲಿ ಹೇಳಿದ. ಕೇಡು ಗಳನ್ನು ಕೊನೆಗೊಳಿಸುವ ಮಾರ್ಗ ಶಿಕ್ಷೆಯಲ್ಲ, ಕ್ಷಮೆ ಎಂದು ಸಾರಿದ. ಇದು ಬುದ್ಧ ಹೇಳಿದ ಸನಾತನ ಧರ್ಮದ ಹಾದಿ: ದ್ವೇಷದಿಂದ ದ್ವೇಷ ವನ್ನು ಎಂದೂ ನೀಗಿಸಲಾಗುವುದಿಲ್ಲ. ನಿರ್ದ್ವೇಷ ದಿಂದ ಮಾತ್ರ ಅದನ್ನು ನೀಗಿಸಬಹುದು. ಇದೇ ಸನಾತನ ಧರ್ಮ.ಆದ್ದರಿಂದಲೇ ಬೌದ್ಧಧರ್ಮ ದಲ್ಲಿ ಮೈತ್ರಿ-ಕರುಣೆಗಳಿಗೆ ವಿಶೇಷ ಒತ್ತು ನೀಡಿರು ವುದು. ಇತರ ಧರ್ಮ, ಪಂಥಗಳು ಈ ತತ್ವವನ್ನು ಇಷ್ಟು ಸ್ಪಷ್ಟವಾಗಿ ಹೇಳಿದ್ದು ಕಾಣಬರುವುದಿಲ್ಲ ವಾದರೂ ಜಗತ್ತಿನ ಎಲ್ಲ ಹಿರಿಯ ಜೀವಗಳೂ ಇತ್ತ ಕಡೆಗೇ ತುಡಿಯುವ ಅಸಂಖ್ಯ ನಿದರ್ಶನ ಗಳಿವೆ. ಸೂಳೆಯನ್ನು ಮಾನವಳನ್ನಾಗಿ ಕಂಡ ಏಸು, ಬಾಡಿದ ಪೈರನ್ನು ಕಂಡಾಗಲೆಲ್ಲಾ ನಾನೂ ಬಾಡುತ್ತಾಹೋದೆ ಎಂದ ರಾಮಲಿಂಗ ಅಡಿ ಗಳು, ಅನಾಥ ಶಿಶುಗಳನ್ನು ತಮ್ಮವೆಂದು ಆತು ಕೊಂಡ ಮದರ್ ತೆರೇಸಾ ಎಲ್ಲರೂ ಈ ಕಡೆಗೇ ಬೆರಳು ಮಾಡುವಂತೆ ಕಾಣುತ್ತಾರೆ.

ಪಾಪ-ಪುಣ್ಯ, ಒಳಿತು-ಕೆಡುಕುಗಳನ್ನಾಧರಿಸಿದ ಸಂಘರ್ಷಾತ್ಮಕ ಮೌಲ್ಯಗಳು, ಧರ್ಮಗಳು ಮತು್ತ ರಾಜಕೀಯ ವ್ಯವಸ್ಥೆಗಳು ಇಳಾತಳವನ್ನು ನಾವು ಕಟ್ಟಿದ ನರಕವನ್ನಾಗಿಸಿವೆ. ನಮ್ಮನ್ನು ನಾವೇ ದ್ವೇಷಿಸಿಕೊಳ್ಳುವ ಸ್ಥಿತಿಗೆ ಕರೆತಂದಿವೆ.ಈ ಸಂಘರ್ಷಾತ್ಮಕ ಒಳ ಮತ್ತು ಹೊರ ಒತ್ತಡಗಳಿಂದ ಬಿಡಿಸಿಕೊಂಡು ಕರುಣೆ ಮತ್ತು ಕ್ಷಮೆಗಳ ಮೂರ್ತಿಯಾದ ಶಿವ-ಅವಲೋಕಿತೇ ಶ್ವರನ ಕಣ್ಣುಗಳಿಂದ ನಾವು ನಮ್ಮನ್ನು ಜಗತ್ತನ್ನು ಕಾಣತೊಡಗಿದರೆ ನಮ್ಮ ದೃಷ್ಟಿ ಮಾತ್ರವಲ್ಲ ನಮ್ಮ ಮುಂದಿನ ಸೃಷ್ಟಿಯೂ ಬದಲಾಗಬಲ್ಲು ದೆಂಬುದನ್ನು ನಮ್ಮಲ್ಲಿ ಎಷ್ಟು ಮಂದಿ ನಂಬು ತ್ತೇವೆ? ನನಗೆ ನೊಂದು, ಬೆಂದು ಆ ಪತ್ರ ಬರೆದ ಗೆಳೆಯರು ತಮ್ಮ ಹಿಂದಿನ ಮತ್ತು ಇಂದಿನ ತಪ್ಪು-­ಗಳನ್ನು ಕ್ಷಮೆ ಮತ್ತು ಕರುಣೆಯಿಂದ ಕಂಡಿದ್ದರೆ ಪಶ್ಚಾತ್ತಾಪ -ಪ್ರಾಯಶ್ಚಿತ್ತಗಳಿಲ್ಲದೇ ತಮ್ಮ ಅವ ಸ್ಥಾ­ಂತರವನ್ನು ಆಂತರಿಕ ವಿಕಾಸದ ಒಂದು ಹಂತ­ವೆಂದು ಸಮಾಧಾನ­ಚಿತ್ತರಾಗಿರ­ಬಹು­ದಾಗಿತ್ತು.

ನಿಮ್ಮ ಅನಿಸಿಕೆ ತಿಳಿಸಿ: : editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.