ಬುಧವಾರ, ಜನವರಿ 22, 2020
17 °C

ಚುನಾವಣಾ ಪ್ರಚಾರದ ಸೈಬರ್ ಸಾಧ್ಯತೆಗಳು

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವೇನಿತ್ತು? ಇಂಥದ್ದೊಂದು ಪ್ರಶ್ನೆಯನ್ನು ಹಿಂದಿನ ಯಾವ ಚುನಾವಣೆಗಳ ಸಂದರ್ಭ­ದಲ್ಲಿಯೂ ನಾವು ಕೇಳಿಕೊಂಡಿರಲಿಲ್ಲ. ಆದರೆ ಈ ಬಾರಿ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಹಲವು ಕಾರಣಗಳಿವೆ.ಈ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ರೂವಾರಿ ಎಂದು ಹೇಳಲಾಗುತ್ತಿರುವ ಬಿಜೆಪಿ ಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾರತೀಯ ರಾಜಕಾರಣಿಗಳಲ್ಲೇ ಅತಿ ಹೆಚ್ಚು ಸಂಖ್ಯೆಯ ಫೇಸ್‌ಬುಕ್ ಅಭಿಮಾನಿಗಳು ಮತ್ತು ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿರುವ ವರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಅನುಭವಿಗಳೂ ಹುಬ್ಬೇರಿಸುವಂಥ ಸಾಧನೆ ಮಾಡಿರುವ ಆಮ್ ಆದ್ಮಿ ಪಾರ್ಟಿಗೆ ಸೈಬರ್ ಜಗತ್ತಿನಲ್ಲಿ ಬಹುದೊಡ್ಡ ಅಭಿಮಾನಿ ಬಳಗವಿದೆ.ಹಾಗೆಯೇ ಐಎಎಂಎಐಗಾಗಿ (ಇಂಟರ್‌ ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ) ಐರಿಸ್ ನಾಲೆಜ್ ಫೌಂಡೇ ಷನ್ ನಡೆಸಿದ ಅಧ್ಯಯನ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂಥ ಸಾಮಾಜಿಕ ಜಾಲ ತಾಣಗಳು ಮತದಾರರನ್ನು ಪ್ರಭಾವಿಸಬಹುದಾದ 160 ಲೋಕಸಭಾ ಕ್ಷೇತ್ರಗಳ ಪಟ್ಟಿಯೊಂದನ್ನು ತಯಾ ರಿಸಿದೆ. ಇದರಲ್ಲಿ ಕರ್ನಾಟಕದ 12 ಲೋಕ ಸಭಾ ಕ್ಷೇತ್ರಗಳೂ ಇವೆ. ಅಂದ ಹಾಗೆ ಗೂಗಲ್ ಕೂಡಾ ಭಾರತಕ್ಕಾಗಿ ವಿಶೇಷ ಚುನಾವಣಾ ಪೋರ್ಟಲ್ ಒಂದನ್ನು ಆರಂಭಿಸಿದೆ.ಈ ಎಲ್ಲಾ ಅಂಶಗಳ ಜೊತೆಗೆ ಮತ್ತೊಂದು ಅಂಕಿ-ಅಂಶವನ್ನೂ ಪರಿಗಣಿಸಲೇ ಬೇಕು. ಸದ್ಯ ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ 10ರಷ್ಟು ಮಂದಿಯನ್ನು ಮಾತ್ರ ಇಂಟರ್‌ನೆಟ್ ತಲು ಪಿದೆ. ಇದರಲ್ಲಿ ಸೈಬರ್‌ಕೆಫೆಯಲ್ಲಿ ಇಂಟರ್‌ ನೆಟ್ ಬಳಸುವವರಿಂದ ಆರಂಭಿಸಿ ಮೊಬೈಲ್‌ ಫೋನ್‌ನಲ್ಲಿ ಇಂಟರ್‌ನೆಟ್ ಬಳಸುವವರ ತನಕದ ಎಲ್ಲರೂ ಸೇರುತ್ತಾರೆ. 2008ರ ಲೋಕ ಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಮತದಾರರ ಸಂಖ್ಯೆ ಸುಮಾರು 44 ಕೋಟಿ. ಇಂಟರ್‌ನೆಟ್ ಬಳಸುವ ಎಲ್ಲರೂ ಈ ಮತ ದಾರರಲ್ಲಿ ಸೇರಿದ್ದಾರೆಂದು ಭಾವಿಸುವಂತಿಲ್ಲ.ಏಕೆಂದರೆ ಒಟ್ಟು ಇಂಟರ್‌ನೆಟ್ ಬಳಕೆದಾರರ ಪೈಕಿ ಕೇವಲ ಶೇಕಡಾ 7ರಷ್ಟು ಮಂದಿ ಮಾತ್ರ ಗ್ರಾಮೀಣ ಪ್ರದೇಶಗಳಿಗೆ ಸೇರಿದವರು. ಸಾಮಾ ನ್ಯವಾಗಿ ಮತ ಚಲಾಯಿಸುವ ಮತದಾರರ ಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿಯೇ ಇದೆ. ಹಾಗಾದರೆ ಇಂಟರ್‌ನೆಟ್ ಮೂಲಕ ತಲು ಪಲು ಸಾಧ್ಯವಿರುವ ಮತದಾರರು ಯಾರು? ಐರಿಸ್ ನಾಲೆಜ್ ಫೌಂಡೇಶನ್ ಗುರುತಿಸು ತ್ತಿರುವ 160 ಲೋಕಸಭಾ ಕ್ಷೇತ್ರದಲ್ಲಿರುವ ಮತದಾರರು ಎಂಬ ತೀರ್ಮಾನಕ್ಕೆ ಬರುವು ದರಲ್ಲಿ ತಪ್ಪಿಲ್ಲ ಅನ್ನಿಸುತ್ತದೆ.ವಿದ್ಯಾವಂತ ಮಧ್ಯಮ ವರ್ಗದ ಬಹುದೊಡ್ಡ ಸಮೂಹವೊಂದನ್ನು ನವ ಮಾಧ್ಯಮ ತಲುಪು ತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಒಟ್ಟು ಮತದಾರರ ಸಂಖ್ಯೆಯ ಎದುರಿಟ್ಟು ನೋಡು ವಾಗ ಇದರ ಪ್ರಮಾಣ ಬಹಳ ಸಣ್ಣದೆಂಬಂತೆ ಕಂಡರೂ ಈ ವರ್ಗ ಅಭಿಪ್ರಾಯವನ್ನು ರೂಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ.ಆಮ್ ಆದ್ಮಿ ಪಾರ್ಟಿಗೆ ಬದಲಾವಣೆ ಸಾಧ್ಯ ಎಂದು ಸಾಬೀತು ಮಾಡಲು ಸಾಧ್ಯವಾದುದರ ಹಿಂದೆ ಈ ವರ್ಗದ ಪಾತ್ರ ಇದ್ದೇ ಇದೆ. ಅಣ್ಣಾ ಹಚಾರೆಯವರ ಚಳವಳಿಯ ಪರವಾಗಿ ರೂಪುಗೊಂಡ ಜನಾಭಿಪ್ರಾಯದ ಹಿಂದೆ ಈ ವರ್ಗವಿದೆ. ಆದರೆ ಈ ವರ್ಗವನ್ನು ವಶಪಡಿಸಿ ಕೊಳ್ಳುವ ಶಕ್ತಿ ಅಥವಾ ಮತದಾರನನ್ನು ಮತಗಟ್ಟೆಯ ತನಕ ಎಳೆದು ತರುವ ಶಕ್ತಿ ನವ ಮಾಧ್ಯಮಕ್ಕೆ ಇದೆಯೇ?ಈ ಪ್ರಶ್ನೆಗಿರುವ ಉತ್ತರ ಮಾತ್ರ ಬಹಳ ನಿರಾಶದಾಯಕ ಮತ್ತು ಸಂಕೀರ್ಣ. ಬಹುಶಃ ಇದನ್ನು ರಾಮಚಂದ್ರ ಗುಹಾ ಅವರು ಹೇಳುವ ಏಕಕಾಲದಲ್ಲಿ ನಡೆಯುವ ಹಲವು ಕ್ರಾಂತಿಗಳ ಪರಿಕಲ್ಪನೆಯ ಮೂಲಕ ಅರ್ಥ ಮಾಡಿಕೊಳ್ಳ ಬೇಕೇನೋ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹಲವು ಶತಮಾನಗಳ ಅವಧಿಯಲ್ಲಿ ನಡೆದ ಈ ಐದು ಕ್ರಾಂತಿಗಳು ಭಾರತದಲ್ಲಿ ಒಟ್ಟೊಟ್ಟಿಗೇ ನಡೆಯುತ್ತಿವೆ.ವಸಾಹತುಶಾಹಿಯಿಂದ ಕಳಚಿ ಕೊಂಡು ಉಜ್ವಲ ರಾಷ್ಟ್ರವಾಗಿ ಮೇಲೇಳುತ್ತಿರು ವಾಗಲೇ ಪ್ರಜಾಪ್ರಭುತ್ವವೂ ಅದಕ್ಕೆ ಸೇರಿ ಕೊಂಡಿತು. ಈ ಪ್ರಕ್ರಿಯೆಯ ಮಧ್ಯೆಯೇ ಕೃಷಿ ಆರ್ಥಿಕತೆಯಿಂದ ಕೈಗಾರಿಕಾ ಆರ್ಥಿಕತೆಯ ಕಡೆಗಿನ ಪ್ರಯಾಣವೂ ಆರಂಭವಾಗಿದೆ. ಇದರ ಫಲವೆಂಬಂತೆ ನಗರೀಕರಣದ ಕ್ರಾಂತಿ ನಡೆ ಯುತ್ತಿದೆ. ಇವೆಲ್ಲವನ್ನೂ ಒಟ್ಟಾಗಿ ಪ್ರಭಾವಿಸು ವಂಥ ಸಾಮಾಜಿಕ ಕ್ರಾಂತಿಯೂ ಚಾಲನೆ ಯಲ್ಲಿದೆ ಎಂದು ರಾಮಚಂದ್ರ ಗುಹಾ ಅಭಿಪ್ರಾಯ ಪಡುತ್ತಾರೆ.ಇಂಥದ್ದೇ ಒಂದು ಪ್ರಕ್ರಿಯೆ ನವ ಮಾಧ್ಯಮ ಅರ್ಥಾತ್ ಸೈಬರ್ ಮಾಧ್ಯಮ ಕ್ಷೇತ್ರದಲ್ಲೂ ನಡೆಯುತ್ತಿದೆ. ಭಾರತದಲ್ಲಿ ನವ ಮಾಧ್ಯಮದ ಬಳಕೆದಾರರ ಸಂಖ್ಯೆ ಬಹುದೊಡ್ಡ ಪ್ರಮಾಣ ದಲ್ಲಿ ಹೆಚ್ಚುತ್ತಿರುವುದಂತೂ ನಿಜ. ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಭಾರತ ಮೂರನೇ ದೊಡ್ಡ ಶಕ್ತಿ. ಗೂಗಲ್ ಭಾರತಕ್ಕೆ ಪ್ರತ್ಯೇಕವಾದ ಚುನಾವಣಾ ಪೋರ್ಟಲ್ ಆರಂಭಿಸುತ್ತಿರುವುದರ ಹಿಂದೆ ಇರುವುದೂ ಈ ಸಂಖ್ಯಾ ಬಲವೇ. ಆದರೆ ಸೈಬರ್ ಮಾಧ್ಯಮ ಆರಂಭ ದಿಂದಲೂ ವಿಶ್ವಾಸಾರ್ಹತೆಯ ಕೊರತೆಯಿಂದ ನರಳುತ್ತಿದೆ.ಅದೆಂಥಾ ಸ್ಫೋಟಕ ವಿಷಯವಾದರೂ ಪಾರಂಪರಿಕ ಮಾಧ್ಯಮಗಳು ಅದನ್ನು ಕೈಗೆತ್ತಿಕೊಳ್ಳದೇ ಹೋದರೆ ಅದು ಸ್ಫೋಟಕ ಸುದ್ದಿಯಾಗುವುದೇ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ‘ರಾಡಿಯಾ ಟೇಪ್‌ ಗಳು’. ಮುಖ್ಯವಾಹಿಯ ಮಾಧ್ಯಮಗಳು ಇದನ್ನು ಕೈಗೆತ್ತಿಕೊಂಡ ಮೇಲಷ್ಟೇ ಈ ಹಗರಣದ ರಾಜಕೀಯ ಪರಿಣಾಮಗಳು ಗೋಚರಿಸತೊಡಗಿದ್ದು.ಭಾರತದ ಸೈಬರ್ ಮಾಧ್ಯಮ ಜಗತ್ತನ್ನು ಅರ್ಥ ಮಾಡಿಕೊಳ್ಳುವಾಗ ಭಾರತದಲ್ಲಿ ಪತ್ರಿಕೆಗಳ ಪ್ರಸರಣ ಹೆಚ್ಚುತ್ತಿರುವುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಇದು ವಿಶ್ವದ ಬೇರೆಲ್ಲೂ ಸಂಭವಿಸಿದ ಬೆಳವಣಿಗೆ. ಅಮೆರಿಕ ಮತ್ತು ಯೂರೋಪಿನಲ್ಲಿ ಸೈಬರ್ ಮಾಧ್ಯಮದ ಶಕ್ತಿ ಹೆಚ್ಚಿದಂತೆ ಮುದ್ರಣ ಮಾಧ್ಯಮ ಕುಸಿ ಯುತ್ತಲೇ ಹೋಯಿತು. ಆದರೆ ಭಾರತದಲ್ಲಿ ಈಗ ಸಂಭವಿಸುತ್ತಿರುವ ಸೈಬರ್ ಕ್ರಾಂತಿಗೂ ಯೂರೋಪ್ ಮತ್ತು ಅಮೆರಿಕದಲ್ಲಿ ಸಂಭವಿಸಿದ ಸೈಬರ್ ಕ್ರಾಂತಿಯ ಮಧ್ಯೆ ಒಂದು ಮುಖ್ಯ ಭಿನ್ನತೆ ಇದೆ.ಅಲ್ಲೆಲ್ಲಾ ಸುದ್ದಿ ಪತ್ರಿಕೆಗಳ ಬದಲಿಗೆ ವೆಬ್‌ಸೈಟ್‌ನಲ್ಲಿ ದೊರೆತಾದ ಅದು ಕೇವಲ ಮಾಧ್ಯಮದ ಬದಲಾವಣೆ ಮಾತ್ರ ಆಗಿತ್ತು. ಬದಲಾದ ಮಾಧ್ಯಮದ ಬಗ್ಗೆ ಯಾವ ಸಂಶಯಗಳೂ ಇರಲಿಲ್ಲ. ಈ ಪ್ರಶ್ನೆಗಳು ಈಗಿನವು. ಅಂದರೆ ಭಾರತದಲ್ಲಿ ಸೈಬರ್ ಕ್ರಾಂತಿ ಸಂಭವಿಸುವ ಹೊತ್ತಿಗೆ ಸೈಬರ್ ಮಾಧ್ಯಮದ ವಿಶ್ವಾಸಾರ್ಹತೆಯ ಕುರಿತ ಪ್ರಶ್ನೆಗಳನ್ನೂ ಕೇಳಲಾಗುತ್ತಿದೆ.ಇದನ್ನು ಇನ್ನೊಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ಸೈಬರ್ ಜಗತ್ತಿನಲ್ಲಿ ಸುದ್ದಿ ಮಾಧ್ಯಮವೊಂದು ಎಷ್ಟು ಪರಿಣಾಮಕಾರಿ­ಯಾಗಿರಬಹುದು ಎಂಬುದಕ್ಕೆ ಮೊದಲ ಸಾಕ್ಷ್ಯ ಒದಗಿಸಿದ್ದು ‘ತೆಹಲ್ಕಾ’. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ರಾಜಕೀಯ ಬದುಕನ್ನೇ ಕೊನೆಗೊಳಿಸುವಂಥ ಸ್ಫೋಟಕ ಸುದ್ದಿಯನ್ನು ‘ತೆಹಲ್ಕಾ’ ತನ್ನ ಆನ್‌ ಲೈನ್ ಅವತಾರದಲ್ಲಿ ಬೆಳಕಿಗೆ ತಂದಿತ್ತು. ಆನ್‌ಲೈನ್ ಅವತಾರದಲ್ಲಿ ‘ತೆಹಲ್ಕಾ’ಗೆ ಬೆಳೆಯಲು ಆಗಲಿಲ್ಲ.ಅದು ಅನಿವಾರ್ಯವಾಗಿ ಟ್ಯಾಬ್ಲಾಯ್ಡ್ ಪತ್ರಿಕೆಯೊಂದನ್ನು ಆರಂಭಿಸಿ ಕೊನೆಗೆ ಮುಖ್ಯವಾಹಿನಿಯ ನಿಯತಕಾಲಿಕಗಳ ಗಾತ್ರದ ಪತ್ರಿಕೆಯೊಂದನ್ನು ಪ್ರಕಟಿಸಲಾರಂಭಿಸಿತು. ಜಗತ್ತಿನಾದ್ಯಂತ ಪತ್ರಿಕೆಗಳು ಮುದ್ರಣ ಆವೃತ್ತಿಯನ್ನು ನಿಲ್ಲಿಸಿ ಆನ್‌ಲೈನ್‌ಗೆ ಸೀಮಿತಗೊಳ್ಳುವ ಬಗ್ಗೆ ಯೋಚಿಸುತ್ತಿದ್ದ ಕಾಲಘಟ್ಟದಲ್ಲಿ ‘ತೆಹಲ್ಕಾ’ ಆನ್‌ಲೈನ್‌ನಿಂದ ಮುದ್ರಣಕ್ಕೆ ಬಂತು.ಹೀಗೆ ಅಪ್ರದಕ್ಷಿಣೆಯಲ್ಲಿ ಒಂದು ವೃತ್ತವನ್ನು ಪೂರ್ಣಗೊಳಿಸಿದ ‘ತೆಹಲ್ಕಾ’ ಈಗ ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದೆ. ಆದರೆ ಅದೂ ಆನ್‌ಲೈನ್ ಮಾಧ್ಯಮ ಜಗತ್ತಿ ನಲ್ಲಿ ಐತಿಹಾಸಿಕ ಮಹತ್ವವಿರುವ ಮಾಧ್ಯಮ ಸಂಸ್ಥೆಯ ವಿಶ್ವಾಸಾರ್ಹತೆಗೆ ಪೆಟ್ಟು ನೀಡುತ್ತಿದೆ ಎಂಬುದಿಲ್ಲಿ ಗಮನಾರ್ಹ.ಶಿಕ್ಷಿತ ಮಧ್ಯಮ ವರ್ಗವನ್ನು ಆಕರ್ಷಿಸಲು ಅತ್ಯುತ್ತಮ ಮಾರ್ಗ, ನೇರವಾಗಿ ಮತದಾರ ನನ್ನು ಸಂಪರ್ಕಿಸುವ ಮಾಧ್ಯಮ ಎಂದೆಲ್ಲಾ ಹೇಳಲಾಗುತ್ತಿರುವ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಂಥ ಸಾಮಾಜಿಕ ಮಾಧ್ಯಮಗಳನ್ನು ರಾಜಕೀಯ ಪಕ್ಷಗಳು ಬಳಸುತ್ತಿರುವ ಬಗೆ ಯಲ್ಲೇ ವಿಶ್ವಾಸಾರ್ಹತೆಯ ಪ್ರಶ್ನೆಗಳಿವೆ.ಕೋಬ್ರಾಪೋಸ್ಟ್ ಡಾಟ್ ಕಾಂ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾದಂತೆ ಫೇಸ್‌ಬುಕ್ ಅಭಿಮಾನಿಗಳನ್ನೂ, ಟ್ವಿಟ್ಟರ್ ಹಿಂಬಾಲಕರನ್ನೂ ಲಕ್ಷಗಳ ಸಂಖ್ಯೆಯಲ್ಲಿ ಸೃಷ್ಟಿಸಿಕೊಡಬಲ್ಲ ಕಂಪೆನಿಗಳಿವೆ. ಇದು ಕುಟುಕು ಕಾರ್ಯಾಚರಣೆಯಲ್ಲಿ ಬಯ ಲಾಗಬೇಕಾದ ವಿಚಾರವೇನೂ ಆಗಿರಲಿಲ್ಲ. ರಾಜಕಾರಣಿಗಳ ಮಿಲಿಯಗಟ್ಟಳೆ ಹಿಂಬಾಲಕರು ಮತ್ತು ಅಭಿಮಾನಿಗಳಲ್ಲಿ ಕನಿಷ್ಠ ಮೂರನೇ ಒಂದರಷ್ಟು ಈ ಬಗೆಯ ‘ಕೃತಕ ಅಭಿಮಾನಿ’ ಗಳಿರುವುದು ಹಳೆಯ ವಿಚಾರ.ಇತ್ತೀಚೆಗೆ ಟ್ರುತ್ ಆಫ್ ಗುಜರಾತ್ ಎಂಬ ವೆಬ್‌ಸೈಟ್ ನರೇಂದ್ರ ಮೋದಿ, ಶಶಿತರೂರ್, ಸುಷ್ಮಾ ಸ್ವರಾಜ್ ಮತ್ತು ಅರವಿಂದ್ ಕೇಜ್ರಿ ವಾಲ್ ಮುಂತಾದವರ ಟ್ವಿಟ್ಟರ್ ಹಿಂಬಾಲಕರು ಯಾರು ಎಂಬುದನ್ನು ಶೋಧಿಸಲು ಹೊರ ಟಿತು. ಸ್ಕ್ರೇಪರ್ ವಿಕಿ ಎಂಬ ಮುಕ್ತ ತಂತ್ರಾಂಶವನ್ನು ಬಳಸಿ ಅವರು ನಡೆಸಿದ ಶೋಧನೆಯ ಸಂಪೂರ್ಣ ವಿವರಗಳು https ://github.com/freethinker/twfollowers ಲಭ್ಯವಿವೆ. ಯಾರು ಕೃತಕ ಹಿಂಬಾಲಕರು ಎಂಬುದನ್ನು ಪತ್ತೆ ಹಚ್ಚುವುದೇನೂ ಕಷ್ಟವಲ್ಲ. ಒಮ್ಮೆಯೂ ಟ್ವೀಟ್ ಮಾಡದ, ಸ್ವತಃ ಯಾವ ಹಿಂಬಾಲಕರೂ ಇಲ್ಲದ ಮತ್ತು ನಿರ್ದಿಷ್ಟ ರಾಜಕಾರಣಿಯನ್ನು ಹೊರತು ಪಡಿಸಿ ಬೇರೆ ಯಾರನ್ನೂ ಹಿಂಬಾಲಿಸದ ಟ್ವಿಟ್ಟರ್ ಬಳಕೆದಾರ ಇದ್ದರೆ ಆತ ನಿಜ ಬಳಕೆದಾರನಲ್ಲ ಎನ್ನಬಹುದು.ನರೇಂದ್ರಮೊದಿಯವರ 25ಲಕ್ಷ ಮಂದಿ ಟ್ವಿಟ್ಟರ್ ಅನುಯಾಯಿಗಳಲ್ಲಿ ಶೇಕಡಾ 36ರಷ್ಟು ಮಂದಿ ಒಮ್ಮೆಯೂ ಟ್ವೀಟ್ ಮಾಡಿಲ್ಲ, ಶೇಕಡಾ 28ರಷ್ಟು ಮಂದಿಗೆ ಒಬ್ಬ ಅನುಯಾಯಿಯೂ ಇಲ್ಲ, ಶಶಿ ತರೂರ್ ಅವರ 19 ಲಕ್ಷ ಮಂದಿ ಟ್ವಿಟ್ಟರ್ ಅನುಯಾಯಿಗಳಲ್ಲಿ ಒಮ್ಮೆಯೂ ಟ್ವೀಟ್ ಮಾಡದವವರ ಸಂಖ್ಯೆ ಶೇಕಡಾ 28. ತಮಗೆ ಅನುಯಾಯಿಗಳೇ ಇಲ್ಲದವರ ಸಂಖ್ಯೆ ಶೇಕಡಾ 14.  ಸುಷ್ಮಾ ಸ್ವರಾಜ್ ಅವರ ಎಂಟು ಲಕ್ಷ ಅನುಯಾಯಿಗಳ ಪೈಕಿ ಶೇಕಡಾ 27ರಷ್ಟು ಮಂದಿ ಒಮ್ಮೆಯೂ ಟ್ವೀಟ್ ಮಾಡಿಲ್ಲ.ಶೇಕಡಾ 20ರಷ್ಟು ಅನುಯಾಯಿಗಳಿಗೆ ತಮ್ಮದೇ ಆದ ಅನುಯಾಯಗಳೂ ಇಲ್ಲ. ಅರವಿಂದ್ ಕೇಜ್ರಿವಾಲ್ ಅವರ 7.5 ಲಕ್ಷ ಟ್ವಿಟ್ಟರ್ ಅನುಯಾಯಿಗಳಲ್ಲಿ ಶೇಕಡಾ 26ರಷ್ಟು ಮಂದಿ ಒಮ್ಮೆಯೂ ಟ್ವೀಟ್ ಮಾಡಿಲ್ಲ. ಶೇಕಡಾ 20ರಷ್ಟು ಮಂದಿಗೆ ಅನುಯಾಯಿಗಳೇ ಇಲ್ಲ. ಇಂಥ ಕೃತಕ ಅನುಯಾಯಿಗಳ ಏಕೈಕ ಕೆಲಸವೆಂದರೆ ತಮ್ಮ ನಾಯಕರ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿರುವಂತೆ ತೋರಿಸುವುದು ಮಾತ್ರ.ಈ ಅಂಕಿ-ಅಂಶಗಳು ಭಾರತೀಯ ರಾಜ ಕಾರಣವನ್ನು ಅರಿತವರಿಗೆ ಆಶ್ಚರ್ಯವನ್ನೇನೂ ಉಂಟು ಮಾಡುವುದಿಲ್ಲ. ಏಕೆಂದರೆ ರಾಜ ಕಾರಣಿಗಳ ಪ್ರಚಾರ ಸಭೆಗಳಿಗೆ ಜನರನ್ನು ಇದೇ ಬಗೆಯಲ್ಲಿ ಕರೆತರಲಾಗುತ್ತದೆ. ಅದೇ ತಂತ್ರ ಸೈಬರ್ ಜಗತ್ತಿನಲ್ಲಿ ಮತ್ತೊಂದು ಬಗೆಯಲ್ಲಿ ಬಳಕೆಯಾಗುತ್ತಿದೆಯಷ್ಟೇ. ಅಂದರೆ ಅಭ್ಯರ್ಥಿ ಯೊಬ್ಬನ ಫೇಸ್‌ಬುಕ್ ಅಭಿಮಾನಿಗಳು ಅಥವಾ ಟ್ವಿಟ್ಟರ್ ಬಳಕೆದಾರರ ಸಂಖ್ಯೆಯನ್ನು ನೋಡಿಕೊಂಡು ಆತನಿಗೆ ಸಿಗಬಲ್ಲ ಓಟುಗಳ ಸಂಖ್ಯೆಯನ್ನು ಊಹಿಸಲು ಸಾಧ್ಯವಿಲ್ಲ.ಆದರೆ ಈ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಚುನಾವಣಾ ಸತ್ಯವನ್ನು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಭಾನುವಾರ (ಡಿ.8) ಟ್ವೀಟ್ ಮಾಡಿದ್ದಾರೆ. ಅದನ್ನು ಹೀಗೆ ಅನುವಾದಿಸಬಹುದು ”ಸಾರ್ವ ಜನಿಕ ಸಭೆಗಳಿಗೆ ಬರುವ ದೊಡ್ಡ ಸಂಖ್ಯೆಯ ಜನರು ಓಟುಗಳಾಗಬೇಕೆಂದಿಲ್ಲ. ಆದರೆ ಕಡಿಮೆ ಜನಗಳು ಬರುವ ಸಭೆಗಳು ಖಂಡಿತವಾಗಿಯೂ ಅಪಾಯದ ಮುನ್ಸೂಚನೆ”. ಸಾರ್ವಜನಿಕ ಸಭೆ ಎಂಬುದನ್ನು ಸಾಮಾಜಿಕ ಜಾಲತಾಣ ಎಂದು ಬದಲಾಯಿಸಿಕೊಂಡು ಓದಿಕೊಂಡರೆ ರಾಜ ಕಾರಣಿಗಳೇಕೆ ಈ ಮಾಧ್ಯಮಕ್ಕೆ ಮುಗಿಬೀಳು ತ್ತಿದ್ದಾರೆ ಎಂಬುದೂ ಅರ್ಥವಾಗಬಹುದು. ­­ನಿಮ್ಮ ಅನಿಸಿಕೆ ತಿಳಿಸಿ: editorpagefeedback@prajavani.co.in

ಪ್ರತಿಕ್ರಿಯಿಸಿ (+)