ಸೋಮವಾರ, ಆಗಸ್ಟ್ 10, 2020
25 °C

ಜಗದ ಬೆಳಕಿಂಡಿ ಸರ್ಕಾರಿ ಶಾಲೆ

ಐ.ಎಂ.ವಿಠಲಮೂರ್ತಿ Updated:

ಅಕ್ಷರ ಗಾತ್ರ : | |

ಜಗದ ಬೆಳಕಿಂಡಿ ಸರ್ಕಾರಿ ಶಾಲೆ

ಸಾರ್ವತ್ರಿಕ ಶಿಕ್ಷಣ ಮತ್ತು ಶಾಲಾ ವ್ಯವಸ್ಥೆ ಕುರಿತು ಕೆಲವು ವರ್ಷಗಳಿಂದ ರಾಜ್ಯವೂ ಸೇರಿದಂತೆ ದೇಶದ ಎಲ್ಲ ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಸಾಕಷ್ಟು ಜಾಗೃತಿ ಸಹ ಉಂಟಾಗಿದೆ. ಪ್ರಾಥಮಿಕ ಶಿಕ್ಷಣ ಹೇಗಿರಬೇಕು, ಯಾವ ಮಾಧ್ಯಮದಲ್ಲಿ ಇರಬೇಕು, ಏನು ಕಲಿಸಬೇಕು, ಯಾವುದನ್ನು ಕಲಿಸಬಾರದು... ಮೊದಲಾದ ಸಂಗತಿಗಳ ವಿಷಯವಾಗಿ ಬಹು ರೀತಿಯ, ಕೆಲವೊಮ್ಮೆ ತದ್ವಿರುದ್ಧ ಅಭಿಪ್ರಾಯಗಳು ಮಂಡಿತವಾಗುತ್ತವೆ. ಇವೆಲ್ಲವೂ ಶಿಕ್ಷಣ ತಜ್ಞರಿಗೆ ಸಂಬಂಧಿಸಿದ ವಿಷಯಗಳು. ನಾನು ಈಗ ಹೇಳ ಹೊರಟಿರುವುದು ಅದಾವುದರ ಕುರಿತೂ ಅಲ್ಲ.ನಾನು ಶಾಲೆಗಳಲ್ಲಿ ಓದಿದ ದಿನಗಳ ಕುರಿತು ಹೇಳಿದರೆ ಅದು ಬರಿ ನನ್ನ `ಕಥೆ' ಆಗುವುದಿಲ್ಲ. ಅದೇ ಕಾಲಮಾನದಲ್ಲಿ ಹಳ್ಳಿಗಳಲ್ಲಿ ಹುಟ್ಟಿದ, ನನ್ನ ತಲೆಮಾರಿನ, ನನ್ನ ವಯೋಮಾನದ ಹಲವಾರು ಜನರ ಕಥೆಯಾಗುತ್ತದೆ ಎಂಬುದು ನನ್ನ ಖಚಿತ ನಂಬಿಕೆ. ನಾನು ಅಕ್ಷರ ಕಲಿಯುವ ವೇಳೆಗೆ ನಮ್ಮೂರು ಐರವಳ್ಳಿಯಲ್ಲಿ ಶಾಲೆ ಇರಲಿಲ್ಲ. ನಾಲ್ಕಾರು ಕಿ.ಮೀ. ದೂರದ ಊರುಗಳಿಗೆ ನಡೆದುಕೊಂಡೇ ಹೋಗಬೇಕಿತ್ತು. ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದ ಕಾರಣ ಆ ಸಮಯದಲ್ಲಿ ಶಾಲೆಗಳಿಗೆ ಚಕ್ಕರ್ ಹೊಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು.ಪರಮೇಶ್ವರಾಚಾರ್ ಎಂಬ ಹಾರ‌್ಮೋನಿಯಂ ಮೇಷ್ಟ್ರು ಊರಿಗೆ ನಾಟಕ ಕಲಿಸಲು ಬಂದಿದ್ದರು. `ಊರಿನಲ್ಲಿ ಶಾಲೆ ಇಲ್ಲ. ಈ ಧಡಿಯ ಗಂಡಸರಿಗೆ ರಾತ್ರಿ ಹೊತ್ತು ನಾಟಕ ಕಲಿಸೋ ಬದಲು ಓದುವ ಮಕ್ಕಳಿಗೆ ಬೆಳಗಿನ ಹೊತ್ತು ಅಕ್ಷರ ಕಲಿಸೀ ಮೇಷ್ಟ್ರೆ' ಎಂದು ಹೇಳಿದರು ನಮ್ಮೂರಿನ ಭಕ್ತಾನ್ ಪಟೇಲ್ ಹೊಟ್ಟೆಗೌಡ್ರು. ನಾಟಕದಲ್ಲಿ ಪಾರ್ಟ್ ಮಾಡುವ ಹುಮ್ಮಸ್ಸಿನಲ್ಲಿದ್ದ ಹಲವಾರು ನಟ ಭಯಂಕರರಿಗೆ ಬಹಳ ನಿರಾಸೆಯಾಯಿತು. ಈ ಹಿನ್ನೆಲೆಯಲ್ಲಿ ನಮ್ಮೂರಿನ ದೇವೀರಮ್ಮನ ದೇವಸ್ಥಾನದಲ್ಲಿ ಪ್ರಾರಂಭವಾಯಿತು ಕೂಲಿಮಠ. ನನ್ನ ಮೊದಲ ಶಾಲೆ ಇದೇ ಕೂಲಿಮಠ. ಪರಮೇಶ್ವರಾಚಾರ್ ಅವರಿಗೆ ಅಕ್ಕಿ, ಬೇಳೆ, ಬೆಲ್ಲ, ಕಾಫಿಪುಡಿ, ಮೆಣಸಿನ ಕಾಯಿ... ಹೀಗೆ ವಿವಿಧ ಸಾಮಗ್ರಿಗಳ ಮೂಲಕ `ಕೂಲಿ' ಸಂದಾಯವಾಗುತ್ತಿತ್ತು.ಕೂಲಿಮಠದಲ್ಲಿದ್ದ 10-12 ಮಕ್ಕಳಲ್ಲಿ ನಾನೇ ಚಿಕ್ಕವನೆಂಬ ನೆನಪು. ಒಂದು ದಿನ ಸೋಮಾರಿ ತನದಿಂದ ಏನೋ ನೆಪ ಹೇಳಿ, ಕೂಲಿಮಠಕ್ಕೆ ಚಕ್ಕರ್ ಹೊಡೆದು ಊರಿನ ಹುಣಸೇಮರದ ಅಡಿಯಲ್ಲಿ ಆಟವಾಡುತ್ತಿದ್ದೆ. ನಮ್ಮ ತಂದೆ ಬೇಲೂರಿನಿಂದ ಬಂದರು. ನಾನು ಗಾಬರಿಯಾದೆ. `ಶಾಲೆಗೆ ಏಕೆ ಹೋಗಲಿಲ್ಲ' ಎಂದು ಕೇಳಿದರು. `ಜ್ವರ.. ಸ್ಕೂಲಿಗೆ ಹೋಗಬೇಡ ಅಂತ ಅಮ್ಮ ಹೇಳ್ತು' ಅಂದೆ. ಕುತ್ತಿಗೆ ಬಳಿ ಕೈಯಿಟ್ಟು ಪರೀಕ್ಷೆ ಮಾಡಿ ನನಗೆ ಜ್ವರ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡ ನಮ್ಮ ತಂದೆ, ಅಲ್ಲೇ ಬೇಲಿಯಿಂದ ಒಂದು ಕೋಲು ಎಳೆದುಕೊಂಡು, ಎಡಗೈಯಲ್ಲಿ ನನ್ನನ್ನು ಎತ್ತಿ ಹಿಡಿದು, ಬಲಗೈನಿಂದ ಕೋಲಿನಲ್ಲಿ ಬಾರಿಸುತ್ತಾ ಕೂಲಿಮಠಕ್ಕೆ ಕರೆದೊಯ್ದರು. ಅಡ್ಡಬಂದ ನಮ್ಮ ತಾಯಿ ಹಾಗೂ ಕೂಲಿಮಠದ ಮೇಷ್ಟ್ರಿಗೆ ಆ ಮುಳ್ಳು ಕೋಲಿನ ರುಚಿ ಚೆನ್ನಾ ಗಿಯೇ ಗೊತ್ತಾಯಿತು. ಕೂಲಿಮೇಷ್ಟ್ರು ನನ್ನನ್ನು ತಬ್ಬಿ ಹಿಡಿದು ದೇವೀರಮ್ಮನ ಸನ್ನಿಧಿಯಲ್ಲಿ ಕೂರಿಸಿದರು.ಅಂದು ರಾತ್ರಿ ತಂದೆಯ ಪಕ್ಕದಲ್ಲಿ ಮಲಗಿದ್ದ ನನಗೆ ಬಹಳ ಹೊತ್ತಿನ ತನಕ ನಿದ್ರೆ ಬರಲಿಲ್ಲ. ಹೊರಗಡೆ ಜೋರಾಗಿ ಮಳೆ ಸುರಿಯುವ ಶಬ್ದ. ನಿಧಾನವಾಗಿ ನನ್ನ ಹಣೆ ಮೇಲೆ ಕೈಯಿಟ್ಟು ನೇವರಿಸಿದ ನನ್ನ ತಂದೆ, `ಏನ್ ಮಗನೆ ಬಹಳ ನೋವಾಯಿತಾ?' ಎಂದರು. ನನಗೆ ದುಃಖ ಒತ್ತರಿಸಿಕೊಂಡು ಬಂದು ಅವರನ್ನು ತಬ್ಬಿಕೊಂಡು ಜೋರಾಗಿ ಅಳಲು ಶುರುಮಾಡಿದೆ. ನನ್ನನ್ನು ಅಷ್ಟೊಂದು ದಂಡಿಸಿದ್ದಕ್ಕೆ ಅವರಿಗೂ ನೋವಾಗಿತ್ತು ಎನಿಸಿತು. `ಇನ್ನುಮುಂದೆ ಅಷ್ಟು ಜೋರಾಗಿ ಹೊಡೆಯುವುದಿಲ್ಲ' ಎಂದು ಹೇಳಿ ಸಂತೈಸಿ, ಸಮಾಧಾನಪಡಿಸಿದರು. ಶೀಘ್ರದಲ್ಲೇ ನಿದ್ರೆಗೆ ಜಾರಿದೆ. ನನ್ನ ಮೊದಲ ಅಕ್ಷರ ಕಲಿಕೆ ಮತ್ತು ಅದಕ್ಕಾಗಿ ತಿಂದ ಏಟುಗಳು ನೆನಪಾದಾಗ ನನ್ನ ಬದುಕು ರೂಪಿಸಿದ, ಈಗ ಇಲ್ಲದ, ನನ್ನ ತಂದೆಯನ್ನು ನೆನೆದು ಭಾವುಕನಾಗುತ್ತೇನೆ.ನಮ್ಮೂರಿಗೆ ಶಾಲೆ ಮಂಜೂರಾಗಲು ನಮ್ಮ ತಂದೆಯವರು ಬಹಳ ಮುತುವರ್ಜಿ ವಹಿಸಿ ಸತತ ಪ್ರಯತ್ನ ಮಾಡಿದ್ದರು. ನಮ್ಮ ತಂದೆ ಐ.ಪಿ.ಮಲ್ಲೇಗೌಡರು ಐರವಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ ಮೊದಲಿಗರು. ಐರವಳ್ಳಿಯ ಮೇಷ್ಟ್ರು ಮಲ್ಲೇಗೌಡ್ರು ಎಂದೇ ಜನಪ್ರಿಯವಾಗಿದ್ದರು. ಮೇಷ್ಟ್ರ ಕೆಲಸದ ಜೊತೆಗೆ ಕೃಷಿ, ಕಾಫಿತೋಟ, ಊರುಗಳಲ್ಲಿ ನ್ಯಾಯ ಪಂಚಾಯಿತಿ... ಹೀಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಲ್ಕು ಜನಕ್ಕೆ ಬೇಕಾಗಿದ್ದರು. ಮುಂಗೋಪ ಮತ್ತು ಸ್ಥಳೀಯವಾಗಿ ನ್ಯಾಯ ದಾನಕ್ಕೆ ಹೆಸರುವಾಸಿಯಾಗಿದ್ದರು.ಐರವಳ್ಳಿ ಜೊತೆಗೆ ಪಕ್ಕದ ಊರುಗಳಾದ ದೇವಲಾಪುರ, ವಾಗಿನಕೆರೆ, ಸಿಂಗಾಪುರದ ಜನ ಸಹ ಶಾಲೆಗಾಗಿ ನಮ್ಮೂರೇ ಸೂಕ್ತ ಸ್ಥಳವೆಂದು ಪೈಪೋಟಿ ನಡೆಸಿದ್ದರು. ಶಾಲೆ ಆರಂಭಿಸುವ ಬಗ್ಗೆ ಸ್ಥಳ ತನಿಖೆಗೆ ಬೇಲೂರಿನ ಸ್ಕೂಲ್ ಇನ್ಸ್‌ಪೆಕ್ಟರ್ ಬರುವ ದಿನವೂ ನಿಗದಿಯಾಯಿತು. ಆ ವೇಳೆಗಾಗಲೇ ಶಾಲೆ ಪ್ರಾರಂಭಿಸಲು ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ನಮ್ಮೂರಿನವರು ಮಾಡಿಕೊಂಡಿದ್ದರು. ಸ್ಕೂಲ್ ಇನ್ಸ್‌ಪೆಕ್ಟರ್ ಬೇಲೂರಿನಿಂದ ಹೊರಟು ನಮ್ಮೂರ ಗಡಿಯಾದ ಸಿಂಗಾಪುರಪೇಟೆ ಬಳಿ ಬಂದಿಳಿದರು. ಊರಿನ ಜನರೆಲ್ಲ ಅವರ ಆಗಮನಕ್ಕೆ ಕಾತರದಿಂದ ಕಾದಿ ದ್ದರು. ಐದು ವರ್ಷದವನಾದ ನಾನು ಊರಿನ ಗಡಿಗೆ ಎಲ್ಲರ ಜೊತೆ ಹೋಗಿದ್ದೆ. ತುಂಬಾ ಸೊಗಸಾದ ಸೂಟ್ ಮತ್ತು ಮೈಸೂರು ಪೇಟಾ ಧರಿಸಿದ್ದ, ಸ್ಕೂಲ್ ಇನ್ಸ್‌ಪೆಕ್ಟರ್ ನೋಡಿದವರಲ್ಲಿ ಅಷ್ಟೇ ಗೌರವ ಭಾವ ಮೂಡಿಸುವಂತಿದ್ದರು. ಅವರು ಬಸ್ಸಿನಿಂದ ಇಳಿದ ಕೂಡಲೇ ಹಳ್ಳಿ ಮುಖಂಡರು ಹಾರ ತುರಾಯಿಗಳೊಂದಿಗೆ ಸ್ವಾಗತಿಸಿದರು.ಈ ನಡುವೆ ನಮ್ಮೂರಿನ ಕಹಳೆಮರಿ (ಕಹಳೆ ಊದುತ್ತಿದ್ದವನ ಹೆಸರು) ಉಸಿರುಗಟ್ಟಿ ಊದಿದ ಕಹಳೆ ಕೂಗು ಕೇಳಿ, ಸ್ಕೂಲ್ ಇನ್ಸ್ ಪೆಕ್ಟರ್ ಬೆಚ್ಚಿ ನಿಂತು, ಒಂದು ಕ್ಷಣ ಭಾವಪರವಶರಾದಂತೆ ಕಂಡರು. ಏಳು ಊರಿಗೆ ಕೇಳುತ್ತಿದ್ದ ಕಹಳೆಮರಿ ಕಹಳೆ ಪ್ರಾಯಶಃ ಅವರನ್ನು ಸಂತೃಪ್ತಿಪಡಿಸಿದಂತಿತ್ತು. ಅದರಿಂದಲೋ ಅಥವಾ ಜನರ ಒತ್ತಾಯದಿಂದಲೋ, ಒಟ್ಟಿನಲ್ಲಿ, 1957ರ ಆಗಸ್ಟ್ 9ರಂದು ನಮ್ಮೂರಿಗೆ ಶಾಲೆ ಬಂತು. ಕೂಲಿಮಠ ಬಿಟ್ಟರೆ, `ಐರವಳ್ಳಿ ಪ್ರಾಥಮಿಕ ಶಾಲೆ'ಯೇ ನಾನು ಕ್ರಮಬದ್ಧ ಶಿಕ್ಷಣ ಪಡೆದ ನನ್ನ ಮೊದಲ ಶಾಲೆ. ಅಲ್ಲಿ ಓದಿದ ನಾನು, ನನ್ನ ತಂದೆಯ ನಂತರ, ನಮ್ಮೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ಎರಡನೆಯವನು. ನಂತರದ ದಿನಗಳಲ್ಲಿ ನೂರಾರು ಜನ ಉತ್ತಮವಾಗಿ ಓದಿ ಈ ಶಾಲೆಗೆ ಕೀರ್ತಿ ತಂದರು. ಐರವಳ್ಳಿಯಲ್ಲಿ ಮೂರು ವರ್ಷ ಓದಿದ ನಂತರ ಡಬಲ್ ಪ್ರಮೋಷನ್ ಪಡೆದು 5-6ನೇ ತರಗತಿಯನ್ನು ಚಿಕ್ಕಮೇದೂರು ಮಿಡ್ಲ್ ಸ್ಕೂಲ್; 7ನೇ ತರಗತಿಯನ್ನು ಗೆಂಡೇಹಳ್ಳಿ; 8-10ನೇ ತರಗತಿಯನ್ನು ಬೇಲೂರಿನ ಮುನ್ಸಿಪಲ್ ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದು, 18 ವರ್ಷಕ್ಕೇ ಪದವೀಧರನಾಗಿದ್ದೆ. ಸಡಗರ-ಸಂಭ್ರಮದಿಂದ ಶುರುವಾಗಿದ್ದ ನಮ್ಮೂರ ಶಾಲೆ ಈಗ ಮಕ್ಕಳಿಲ್ಲದ ಕಾರಣ ಮುಚ್ಚುವ ಸ್ಥಿತಿ ತಲುಪಿದೆ. ಸುತ್ತಮುತ್ತ ನಾಯಿ ಕೊಡೆಗಳಂತೆ ಪ್ರಾರಂಭವಾದ ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ತರಾತುರಿಯಲ್ಲಿದ್ದಾರೆ.ನಾನು ಕೆಲಸ ಮಾಡಿದ ಎಲ್ಲ ಜಿಲ್ಲೆಗಳು ಹಾಗೂ ಊರುಗಳಲ್ಲಿ ಸರ್ಕಾರಿ ಶಾಲೆಗಳು ಮತ್ತು ಹಾಸ್ಟೆಲ್‌ಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೆ. ಗದಗ ತಾಲ್ಲೂಕಿನ ಹುಲಕೋಟಿ ಸಮೀಪದ ವೆಂಕಟಾಪುರ ಸರ್ಕಾರಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ಗೋಡೆ ಬರಹ ಹೀಗಿತ್ತು: `ಕುಳಿತು ಹೇಳುವವನ ಕೆಲಸ ಇಡಿ ಊರೇ ಮಾಡಿದರೂ ತೀರದು'. ಈ ಮಾತು ಸರ್ಕಾರಿ ಶಾಲೆಗಳ ಸುಧಾರಣೆಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಅನ್ವಯಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ಎಷ್ಟು ಮಾಡಿದರೂ ಮುಗಿಯದಷ್ಟು ಕೆಲಸ ಅಲ್ಲಿದೆ.ಬಳ್ಳಾರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಒಂದು ಹೊಸ ಪ್ರಯೋಗಕ್ಕೆ ಕೈಹಾಕಿದೆ. ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ಕೊರತೆಯಿತ್ತು. ಇದ್ದಂತಹ ಕೊಠಡಿಗಳು ಸಹ ದರಿದ್ರ ಸ್ಥಿತಿಯಲ್ಲಿದ್ದವು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಕೊಠಡಿಗಳನ್ನು ನಿರ್ಮಿಸುವುದು, ಹಳೆ ಕೊಠಡಿಗಳನ್ನು ದುರಸ್ತಿಗೊಳಿಸುವುದು ಮತ್ತು ಮಕ್ಕಳ ಅನುಪಾತದಲ್ಲಿ ಶಿಕ್ಷಕರನ್ನು ನೇಮಿಸುವುದು... ಇವೇ ಮೊದಲಾದ ಕಾರ್ಯಕ್ರಮಗಳನ್ನು ಕೈಗೊಂಡೆ. ಇದಕ್ಕೆ ಒಂದು ನೀಲಿನಕ್ಷೆಯನ್ನು ಸಿದ್ಧಪಡಿಸಿ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ವೈ. ಘೋರ್ಪಡೆ ಅವರಿಗೆ ತೋರಿಸಿದೆ. ಅವರು ತುಂಬಾ ಖುಷಿಪಟ್ಟು ಪ್ರೋತ್ಸಾಹಿಸಿದರು. ಜಿಲ್ಲೆಯ ಎಲ್ಲ ಶಾಸಕರಿಗೆ ಕ್ರಿಯಾ ಯೋಜನೆ ಒಪ್ಪಿಗೆಯಾಯಿತು. ಅದೇ ರೀತಿ ಜಲಾನಯನ ಅಭಿವೃದ್ಧಿ ಯೋಜನೆಗಳನ್ನೂ ಸಿದ್ಧಪಡಿಸಿ ಒಪ್ಪಿಗೆ ಪಡೆದೆವು. ಈ ಯೋಜನೆಗಳಿಗೆ ಅಂದಿನ ಜಿಲ್ಲಾಧಿಕಾರಿ ಸಿ.ಎಸ್. ಕೇದಾರ್ ಅವರು ಸಹಕರಿಸಿದರು. ಇಡೀ ವರ್ಷದ ಆಯವ್ಯಯದಲ್ಲಿ ಬಹುಪಾಲು ಹಣ ವನ್ನು ಶಿಕ್ಷಣ ಮತ್ತು ಜಲಾನಯನ ಕಾರ್ಯಗಳಿಗೆ ವಿನಿಯೋಗಿಸಿದೆವು. 10 ತಿಂಗಳಲ್ಲಿ 850 ಹೊಸ ಶಾಲಾ ಕೊಠಡಿ ನಿರ್ಮಿಸಿ, 1,200 ಹಳೆ ಕೊಠಡಿ ದುರಸ್ತಿಗೊಳಿಸಿ, ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ನೇಮಿಸಿ ದಾಖಲೆ ಸೃಷ್ಟಿ ಮಾಡಿದೆವು.ಪ್ರತಿ ಹಳ್ಳಿಯಲ್ಲಿಯೂ ಸರ್ಕಾರಿ ಶಾಲೆಗೆ ಅತ್ಯಂತ ಸುಂದರವಾದ ಕಟ್ಟಡ ಇರಬೇಕೆಂಬ ನನ್ನ ಬಯಕೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಹಾಗೂ ಗ್ರಾಮಸ್ಥರು ಸಹಕರಿಸಿದರು. ಇಡೀ ಯೋಜನೆ ಎಷ್ಟು ಪಾರದರ್ಶಕವಾಗಿತ್ತೆಂದರೆ, ಪ್ರತಿ ಶಾಲೆಯಲ್ಲೂ ಅದಕ್ಕೆ ತಗುಲಿದ ವೆಚ್ಚ ಹಾಗೂ ಕೆಲಸ ನಿರ್ವಹಿಸಿದ ತಂಡದ ಸದಸ್ಯರ ಹೆಸರು ಹಾಕಿದ್ದೆವು. ಜಿಲ್ಲಾ ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗದ ಎಲ್ಲ ಎಂಜಿನಿಯರ್‌ಗಳ ಸಭೆ ಕರೆದು, `ನಾವು, ನೀವೆಲ್ಲ ಸರ್ಕಾರಿ ಶಾಲೆಗಳಲ್ಲಿ ಓದಿ, ಈ ಸ್ಥಾನಗಳಿಗೆ ಬಂದಿದ್ದೇವೆ; ಅವುಗಳ ಋಣ ತೀರಿಸಲು ಇದೊಂದು ಒಳ್ಳೆಯ ಅವಕಾಶ. ಎಲ್ಲರೂ ತಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಬೇಕು' ಎಂದು ನಾನು ಮಾಡಿದ ಗಂಭೀರ ಮನವಿ ಕೆಲಸ ಮಾಡಿತ್ತು. `ಈ ಕಾರ್ಯದಲ್ಲಿ ಲೋಪ ಎಸಗಿದರೆ ನಿಮ್ಮ ಮಕ್ಕಳಿಗೆ ಕೇಡಾಗುವುದು ಶತಃಸಿದ್ಧ' ಎಂದು ಭಾವನಾತ್ಮಕವಾಗಿಯೂ ಅಂಜಿಕೆ ಹಾಕಿದ್ದೆ. ಪ್ರತಿಯೊಬ್ಬರೂ ಬಹಳ ಪ್ರೀತಿ, ನಿಸ್ಪೃಹತೆಯಿಂದ ಕಾರ್ಯ ನಿರ್ವಹಿಸಿದರು. ಕೆಲವೊಂದು ಕಡೆ ಹಣಕ್ಕೆ ಕೊರತೆಯಾದಾಗ, ತಾವೇ ಗ್ರಾಮಸ್ಥರಿಂದ ಕಾಡಿ, ಬೇಡಿ ಅತಿ ಸುಂದರವಾದ ಶಾಲಾ ಕೊಠಡಿಗಳನ್ನು ನಿರ್ಮಿಸಿದರು. ಇಡೀ ಕಾರ್ಯಕ್ರಮದಲ್ಲಿ ನನ್ನ ಬೆಂಬಲಕ್ಕೆ ನಿಂತವರು, ಸಚಿವರಾಗಿದ್ದ ಘೋರ್ಪಡೆ ಮತ್ತು ಜಿಲ್ಲೆಯ ಶಾಸಕರು. ನಾನು ಓದಿದ ಸರ್ಕಾರಿ ಶಾಲೆಗಳ ಸ್ವಲ್ಪವಾದರೂ ಋಣವನ್ನು ತೀರಿಸಿದೆನೆಂಬ ತೃಪ್ತಿ ಆಗ ನನಗಾಗಿತ್ತು.ಆಗಿನ ಕಾಲದಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಶಾಲೆಗೆ ಎಂದರೆ ಊರ ಮುಂದಿನ ಭೂಮಿಯನ್ನು ಬಿಟ್ಟು ಕೊಡುತ್ತಿದ್ದ ದಾನಿಗಳಿಗೆ ಲೆಕ್ಕವೇ ಇರುತ್ತಿರಲಿಲ್ಲ. ರಾಜ್ಯದ ನೂರಾರು ಹಳ್ಳಿಗಳಲ್ಲಿ ಅಂತಹ ದಾನದ ಭೂಮಿಯಲ್ಲೇ ಶಾಲೆಗಳು ತಲೆ ಎತ್ತಿವೆ. ರೋಣ ತಾಲ್ಲೂಕಿನ ಮೆಣಸಗಿ ಎಂಬ ಗ್ರಾಮದಲ್ಲಿ ಲಿಂಗಬಸವೇಶ್ವರ ಪುರಾಣ ಪ್ರವಚನಕ್ಕೆ  ಸಂಗ್ರಹವಾದ ದೇಣಿಗೆಯಿಂದ ಗ್ರಾಮಸ್ಥರು ಪ್ರೌಢಶಾಲೆ ಕಟ್ಟಿದ್ದರು. ವಿದ್ಯೆಯ ವಿಷಯ ಬಂದರೆ ನಮ್ಮ ಜನ ತುಂಬಾ ಉದಾರಿಗಳು.ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ, ನಮ್ಮ ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಲು ಸಾಧ್ಯ ಎಂಬುದು ನಾನು ಬಳ್ಳಾರಿ ಸೇವೆಯಲ್ಲಿ ಕಲಿತ ಪಾಠ. ಸರ್ಕಾರಿ ಶಾಲೆಗಳ ಅಗತ್ಯಕ್ಕೆ ಸರಿಯಾದ ಸಮಯದಲ್ಲಿ ಸ್ಪಂದಿಸದಿದ್ದ ಕಾರಣದಿಂದ ಖಾಸಗಿ ಶಾಲೆಗಳು ಎಲ್ಲೆಂದರಲ್ಲಿ ತಲೆಯೆತ್ತಲು ಅವಕಾಶವಾಯಿತು. ಅಗತ್ಯವಾದ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅವಜ್ಞೆ ತೋರಿದ್ದರ ಪರಿಣಾಮ, ಅವು ಇಂದು ಹಿಂದೆ ಬಿದ್ದಿವೆ. ಶಾಲೆಗಳಿಗೆ ವ್ಯವಸ್ಥೆ ಕಲ್ಪಿಸುವುದು ಇಂದಿನ ದಿನಮಾನದಲ್ಲಿ ಕೇವಲ ಯಾಂತ್ರಿಕವಾಗಿಬಿಟ್ಟಿದ್ದು ಅಂತರಾಳದಿಂದ ಬಂದ ಬಯಕೆಯಾಗಿ ಉಳಿದಿಲ್ಲ. ಸಮುದಾಯದ ನೈಜ ಪಾಲ್ಗೊಳ್ಳುವಿಕೆಗೆ ಅವಕಾಶ ಇಲ್ಲದೆ, ಶಾಲಾ ಸುಧಾರಣಾ ಸಮಿತಿಗಳು ಸಹ ರಾಜಕೀಯ ವೇದಿಕೆಯಂತಾಗಿವೆ.ದಶಕಗಳ ಹಿಂದಿದ್ದ ಶಿಕ್ಷಕರ ಕೊರತೆ, ವೇತನ ಸಮಸ್ಯೆ, ಪೀಠೋಪಕರಣಗಳ ಅಲಭ್ಯತೆ ... ಮೊದಲಾದ ಸಮಸ್ಯೆಗಳು ಹಾಗೇ ಮುಂದುವರಿದಿವೆ. ಶಾಲೆಗಳು ಶುರುವಾಗಿ ತಿಂಗಳಾದ ಬಳಿಕವೂ ಪಠ್ಯಪುಸ್ತಕ, ಸಮವಸ್ತ್ರದ ಅಭಾವ ಪ್ರತಿವರ್ಷದ ಪ್ರಹಸನವಾಗಿದೆ. ಹಳೆಯ ತಪ್ಪುಗಳಿಂದ ಪಾಠ ಕಲಿಯಲು ನಮಗೆ ಇನ್ನೂ ಎಷ್ಟು ವರ್ಷಗಳು ಬೇಕು? ಮುಂದಿನ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಆಗಲೇ ಯೋಚಿಸಿದರಾಯಿತು ಎನ್ನುವ ಧೋರಣೆ ಸರಿಯಲ್ಲ. ಬಸ್ ಹೋದ ಮೇಲೆ ಟಿಕೆಟ್ ಪಡೆದ ಪ್ರಯಾಣಿಕನ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳು ಮತ್ತೆ ಸಜ್ಜುಗೊಳ್ಳಬೇಕಾದ ಅಗತ್ಯ ಇದ್ದೇ ಇದೆ.ಇಂದೂ ಮಧ್ಯಮ ಮತ್ತು ಬಡವರ್ಗದ ಜನರಿಗೆ ಸರ್ಕಾರಿ ಶಾಲೆಗಳ ಅಗತ್ಯವಿದೆ. ಸರ್ಕಾರಿ ಶಾಲೆಗಳು ತಲುಪುವ ವ್ಯಾಪ್ತಿ ಮತ್ತು ವಿಸ್ತಾರವನ್ನು ಖಾಸಗಿ ಶಾಲೆಗಳು ಮುಟ್ಟುವುದು ಅಸಾಧ್ಯ. ಈ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದರ ಮೂಲಕ ಪ್ರಾಥಮಿಕ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರಿಗೆ ತಮ್ಮ ಬದ್ಧತೆ ಮತ್ತು ದಕ್ಷತೆ ಸಾಬೀತುಮಾಡಲು ಒಳ್ಳೆಯ ಅವಕಾಶ ಇದೆ.

ಗ್ರಾಮಾಂತರ ಪ್ರದೇಶಗಳಲ್ಲಿ ನಾಲ್ಕಾರು ಕಿ.ಮೀ. ದೂರ ನಡೆದು ಹೋಗಿ ಬರುವುದೇ ಒಂದು ರೋಚಕ ಅನುಭವ. ದಾರಿಯುದ್ದಕ್ಕೂ ಸಿಗುವ ಗಿಡಮರ, ಪ್ರಾಣಿ-ಪಕ್ಷಿ, ಹುಳು-ಹುಪ್ಪಟೆ, ಹಳ್ಳ-ಕೊಳ್ಳ... ಇವೆಲ್ಲ ಹೊಸ ಅನುಭವವನ್ನು ಕಟ್ಟಿಕೊಡುತ್ತವೆ. ಸರ್ಕಾರಿ ಶಾಲೆಗಳಲ್ಲಿ ಈ ರೀತಿಯ ಓದು, ಮಕ್ಕಳಲ್ಲಿ ಒಂದು `ಅಸಾಮಾನ್ಯ ಸಾಮಾನ್ಯ ಪ್ರಜ್ಞೆ' (uncommon common sense)  ತಂದುಕೊಡುತ್ತದೆ. ಆಟ-ಪಾಠ ಗಳೊಂದಿಗೆ ನಿಸರ್ಗವನ್ನು ಅರಿಯಲು ಅನುವು ಮಾಡಿಕೊಟ್ಟ ಸರ್ಕಾರಿ ಶಾಲೆಗಳಿಂದ ನಾನು ಪಡೆದದ್ದು ಬೆಟ್ಟದಷ್ಟು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.