ಭಾನುವಾರ, ಜೂನ್ 13, 2021
21 °C

ನಿಕಾನ್ ಎಸ್66೦೦: ಪರಿಣತರಲ್ಲದವರಿಗೊಂದು ಸರಳ ಕ್ಯಾಮೆರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಕಾನ್‌ನವರು ತುಂಬ ಜಾಹೀರಾತು ಮಾಡುತ್ತಿರುವ ಕ್ಯಾಮೆರಾ ಎಸ್೬೫೦೦. ಅದು ಎಷ್ಟು ಸರಳ ಮತ್ತು ಸಾಧಾರಣ ಎಂದರೆ ಅದು ಪ್ರಿಯಾಂಕ ಛೋಪ್ರಾ ಅವರ ಬೆನ್ನಿಗೆ ನೇತು ಹಾಕಲು ಮಾತ್ರ ಉಪಯುಕ್ತ ಎಂದು ನಾನು ಟ್ವಿಟರ್‌ನಲ್ಲಿ ಒಮ್ಮೆ ತಮಾಷೆ ಮಾಡಿದ್ದೆ. ಅದರ ಉತ್ತರಾಧಿಕಾರಿಯಾಗಿ ನಿಕಾನ್‌ನವರು ಈಗ ಎಸ್‌6600 (Nikon Coolpix S6600) ಎಂಬ ಇನ್ನೊಂದು ಅತಿ ಸರಳ, ಆದರೆ ಹಲವು ರೀತಿಯಲ್ಲಿ ಸುಧಾರಿತ ಕ್ಯಾಮೆರಾ ಹೊರತಂದಿದ್ದಾರೆ. ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಏಮ್- ಆಂಡ್ -ಶೂಟ್ ಮಾದರಿ, 16 ಮೆಗಾಪಿಕ್ಸೆಲ್, 12X ಝೂಮ್, 35 ಮಿ.ಮೀ. ಗೆ ಹೋಲಿಸಿದರೆ 25 – 300 ಮಿ.ಮೀ. ಫೋಕಲ್ ಲೆಂತ್, f/3.3-6.3, ಸಿಮೋಸ್ ಸಂವೇದಕ (CMOS sensor), ಐಎಸ್‌ಓ 125–1600, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 150 ಫೋಟೊ ತೆಗೆಯಬಲ್ಲ ಬ್ಯಾಟರಿ, ತೆರೆಯಬಲ್ಲ, ಮಡಚಬಲ್ಲ ಎಲ್‌ಸಿಡಿ ಪರದೆ, ಪೂರ್ತಿ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ, ಹಲವು ದೃಶ್ಯಗಳ ಆಯ್ಕೆ, ಐಎಸ್‌ಓ ಆಯ್ಕೆ, ಸಂಪೂರ್ಣ ಸ್ವಯಂಚಾಲಿತ (full auto), ವೈಫೈ, 96.9 x 57.1 x 27.2 ಮಿ.ಮೀ. ಗಾತ್ರ, 165 ಗ್ರಾಂ ತೂಕ, ಇತ್ಯಾದಿ. ಈ ಕ್ಯಾಮೆರಾದಲ್ಲಿ ಷಟರ್ ವೇಗ, ಅಪೆರ್ಚರ್, ಪೂರ್ತಿ ಮ್ಯಾನ್ಯುಯಲ್ ಇತ್ಯಾದಿ ಯಾವುದೇ ಆಯ್ಕೆಗಳಿಲ್ಲ. ಬೆಲೆ ಸುಮಾರು ರೂ. 13,500.ನಿಕಾನ್ ಎಸ್6600 ಕ್ಯಾಮೆರಾ ತುಂಬ ಚಿಕ್ಕದಾಗಿದೆ. ಹುಡುಗಿಯರ ಕಿಸೆಯಲ್ಲೂ ಹಿಡಿಸುವಷ್ಟು ಚಿಕ್ಕದಾಗಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ, ಸುಮಾರು ರೂ.40,000 ಬೆಲೆಯ, ಮೇಲ್ದರ್ಜೆಯ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾಗಳಿಗಿಂತ ಇದು ಸ್ವಲ್ಪ ಜಾಸ್ತಿ ಶಕ್ತಿಶಾಲಿಯಾಗಿದೆ ಅಷ್ಟೆ. ಒಂದು ರೀತಿಯಲ್ಲಿ ನೋಡಿದರೆ ರೂ.40,000 ಬೆಲೆಯ ಸ್ಮಾರ್ಟ್‌ಫೋನ್ ಬದಲು ಈ ಕ್ಯಾಮೆರಾ ಮತ್ತು ಸುಮಾರು ರೂ.13,000 ಬೆಲೆಯ ಸ್ಮಾರ್ಟ್‌ಫೋನ್ ಕೊಳ್ಳುವುದು ಒಳ್ಳೆಯದು ಅನ್ನಿಸಬಹುದು.ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಎಲ್‌ಸಿಡಿ ಪರದೆಯನ್ನು ತೆರೆಯಬಹುದು, ತಿರುಗಿಸಬಹುದು ಹಾಗೂ ಮಡಚಬಹುದು. ಆದುದರಿಂದ ಕೆಲವು ಬಟನ್‌ಗಳು ಕ್ಯಾಮೆರಾದ ಮೇಲ್ಭಾಗಕ್ಕೆ ರವಾನೆಯಾಗಿವೆ. ಇಷ್ಟು ಚಿಕ್ಕ ಕ್ಯಾಮೆರಾದಲ್ಲೂ ತೆರೆಯಬಲ್ಲ, ತಿರುಗಿಸಬಲ್ಲ ಪರದೆ ನೀಡಿರುವುದು ಆಶ್ಚರ್ಯ. ಆದರೂ ನಿಕಾನ್‌ ಕ್ಯಾಮೆರಾಗಳ ಬಗ್ಗೆ ನನ್ನ ಒಂದು ಪ್ರಮುಖ ದೂರು ಎಂದರೆ ಅದರಲ್ಲಿ ಐಎಸ್‌ಓ ಬದಲಾಯಿಸಬೇಕಾದರೆ ಹಲವು ಕಡೆ ಒತ್ತಬೇಕು ಎನ್ನುವುದು. ಅದು ಈ ಕ್ಯಾಮೆರಾದಲ್ಲೂ ಬದಲಾವಣೆಯಾಗಿಲ್ಲ. 

ಈ ಕ್ಯಾಮೆರಾದಲ್ಲಿ ವೈಫೈ ಸೌಲಭ್ಯ ಇದೆ. ಆದರೆ ವೈಫೈ ಬಳಸಿ ನೇರವಾಗಿ ಅಂತರಜಾಲಕ್ಕೆ ಫೋಟೊ ಸೇರಿಸುವಂತಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ಗೆ ನಿಕಾನ್‌ನವರ ಆಪ್ ಹಾಕಿಕೊಂಡು ಕ್ಯಾಮೆರಾದಿಂದ ವೈಫೈ ಮೂಲಕ ಸ್ಮಾರ್ಟ್‌ಫೋನಿಗೆ ಫೋಟೊವನ್ನು ವರ್ಗಾಯಿಸಿ ಅಲ್ಲಿಂದ ಅಂತರಜಾಲಕ್ಕೆ ಸೇರಿಸಬೇಕು. ಜಿಪಿಎಸ್ ಸೌಲಭ್ಯವೂ ಇದ್ದಿದ್ದರೆ ಚೆನ್ನಾಗಿತ್ತು. ಸ್ಥಿರ ಚಿತ್ರೀಕರಣ ಪರವಾಗಿಲ್ಲ.

ಚಲನೆಯಲ್ಲಿಲ್ಲದ ವಸ್ತುಗಳ ಫೋಟೊ ಚೆನ್ನಾಗಿ ಮೂಡಿಬರುತ್ತದೆ. ಫ್ಲಾಶ್ ಫೋಟೊಗ್ರಫಿ ತೃಪ್ತಿದಾಯಕವಾಗಿಲ್ಲ. ಯಾವುದಾದರೂ ಸಭಾ ಕಾರ್ಯಕ್ರಮ, ನೃತ್ಯ, ನಾಟಕ, ಯಕ್ಷಗಾನ ಇತ್ಯಾದಿಗಳ ಫೋಟೊಗ್ರಫಿ ಮಾಡಬೇಕೆಂದುಕೊಂಡಿದ್ದರೆ ಈ ಕ್ಯಾಮೆರಾ ನಿಮಗಲ್ಲ. ಅತಿ ಕಡಿಮೆ ಬೆಳಕಿನ ಛಾಯಾಗ್ರಹಣವೂ ಅಷ್ಟಕ್ಕಷ್ಟೆ. ಉತ್ತಮ  ಬೆಳಕಿದ್ದಾಗ ಜನರನ್ನು ಒಂದು ಕಡೆ ನಿಲ್ಲಿಸಿ ಸರಿಯಾಗಿ ಬೆಳಕು ಅವರ ಮುಖದ ಮೇಲೆ ಬಿದ್ದಾಗ ಫೋಟೊ ಚೆನ್ನಾಗಿ ಬರುತ್ತದೆ. ಹೂವುಗಳ ಫೋಟೊ ತೃಪ್ತಿದಾಯಕವಾಗಿ ಮೂಡಿಬರುತ್ತದೆ. ಈ ಕ್ಯಾಮೆರಾದಲ್ಲಿ ವೈಬ್ರೇಶನ್ ರಿಡಕ್ಷನ್ ಇದೆ. ಅಂದರೆ ಫೋಟೊ ತೆಗೆಯುವಾಗ ಕ್ಯಾಮೆರಾ ಸ್ವಲ್ಪ ಅಲುಗಾಡಿದರೂ ಫೋಟೊ ಸ್ಪಷ್ಟವಾಗಿ ಮೂಡಿಬರುತ್ತದೆ.ಇದು ಸ್ಥಿರವಾಗಿರುವ ವಸ್ತುವಿನ ಫೋಟೊಗ್ರಫಿಗೆ ಮಾತ್ರ ಚೆನ್ನಾಗಿ ಅನ್ವಯಿಸುತ್ತದೆ. ಫೋಕಲ್ ಲೆಂತ್ 300ಕ್ಕೆ ತಲುಪಿದಾಗ (ಪೂರ್ತಿ ಝೂಮ್ ಮಾಡಿದಾಗ) ಕೈ ಸ್ವಲ್ಪವೂ ಅಲುಗಾಡಬಾರದು. ಇಂತಹ ಸಂದರ್ಭದಲ್ಲಿ ಅತಿ ಹೆಚ್ಚಿನ ಷಟರ್ ವೇಗವನ್ನು ಆಯ್ಕೆ ಮಾಡಬೇಕೆಂಬುದು ಫೋಟೊಗ್ರಫಿಯ ನಿಯಮ. ಆದರೆ ಈ ಕ್ಯಾಮೆರಾದಲ್ಲಿ ಷಟರ್ ಆಯ್ಕೆ ಇಲ್ಲ. ಆದುದರಿಂದ ವೈಬ್ರೇಶನ್ ರಿಡಕ್ಷನ್ ನಿಮ್ಮ ಸಹಾಯಕ್ಕೆ ಬರುತ್ತದೆ. ಆದರೂ ಫೋಟೊ ತೆಗೆಯುವಾಗ ವಸ್ತು ಚಲಿಸಿದರೆ ಮತ್ತು ವಸ್ತು ಕಡಿಮೆ ಬೆಳಕಿನಲ್ಲಿದ್ದರೆ ಫೋಟೊ ಮಾಸಲಾಗಿ (blur) ಮೂಡಿಬರುತ್ತದೆ.ಈ ಕ್ಯಾಮೆರಾದಲ್ಲಿ ನೀಡಿರುವ ಹಲವು ನಮೂನೆಯ ದೃಶ್ಯಗಳ ಆಯ್ಕೆಯಲ್ಲಿ ಒಂದು ಬಿಂಬ- ಪ್ರತಿಬಿಂಬ ಮಾಡುವುದು. ಕನ್ನಡಿ ಮುಂದೆ ನಿಂತುಕೊಂಡು ಫೋಟೊ ತೆಗೆದಂತೆ ಮಾಡುವ ಸೌಲಭ್ಯ ಇದರಲ್ಲಿದೆ. ಕ್ಯಾಮೆರಾ ತಿರುಗಿಸಿ ತೆಗೆದರೆ ಹಲವು ವಿಚಿತ್ರ ನಮೂನೆಯ ಫೋಟೊ ಪಡೆಯಬಹುದು. ಇದೇನೂ ಅಂತಹ ಅದ್ಭುತ ಸೌಲಭ್ಯವಲ್ಲ. ಫೋಟೊಶಾಪ್‌ ಬಳಸಿಯೂ ಇದನ್ನು ಮಾಡಬಹುದು.ನಿಕಾನ್ ಎಸ್6600 ಕ್ಯಾಮೆರಾದಲ್ಲಿ ಇತ್ತೀಚೆಗೆ ಎಲ್ಲ ಕ್ಯಾಮೆರಾಗಳಲ್ಲಿರುವಂತೆ ವಿಡಿಯೊ ಮಾಡುವ ಸೌಲಭ್ಯವಿದೆ. ಪೂರ್ತಿ ಹೈಡೆಫಿನಿಶನ್ ವಿಡಿಯೊ ಮಾಡಬಹುದು. ವಿಡಿಯೊ ಮಾಡುವಾಗ ಲೆನ್ಸ್ ಝೂಮ್ ಮಾಡಿದರೆ ಅಥವಾ ಕ್ಯಾಮೆರಾವನ್ನು ತಿರುಗಿಸಿದರೆ ವಿಡಿಯೊ ತುಂಬ ತೃಪ್ತಿದಾಯಕವಾಗಿರುವುದಿಲ್ಲ. ಇದು ಸಾಮಾನ್ಯ ಎಲ್ಲ ಏಮ್- ಆಂಡ್- ಶೂಟ್ ಕ್ಯಾಮೆರಾಗಳ ಕೊರತೆಯೇ. ಈ ಕ್ಯಾಮೆರಾ ಅದಕ್ಕೆ ಅಪವಾದವಲ್ಲ. ಅಂದರೆ ಸುಮಾರಾದ ವಿಡಿಯೊ ತಯಾರಿಗೆ ಮಾತ್ರ ಈ ಕ್ಯಾಮೆರಾ ಬಳಸಬಹುದು.ತುಂಬ ದೊಡ್ಡ ವಿಡಿಯೊ ಶೂಟ್ ಮಾಡುವಷ್ಟು ಇದರ ಬ್ಯಾಟರಿ ಶಕ್ತಿಶಾಲಿಯೂ ಅಲ್ಲ. ಈ ಕ್ಯಾಮೆರಾದ ಬ್ಯಾಟರಿ ಅಷ್ಟೇನೂ ಶಕ್ತಿಶಾಲಿಯಾಗಿಲ್ಲ. ಫ್ಲಾಶ್ ಬಳಸಿ ಫೋಟೊ ತೆಗೆದರೆ ಸುಮಾರು 150 ಫೋಟೊ ತೆಗೆಯಬಹುದು. ಬ್ಯಾಟರಿ ಚಾರ್ಜ್ ಮಾಡಲು ಚಾರ್ಜರ್ ಅನ್ನು ಅವರೇ ನೀಡಿರುವ ಯುಎಸ್‌ಬಿ ಕೇಬಲ್ ಮೂಲಕ ಸಂಪರ್ಕಿಸಬೇಕು. ಗಣಕದ ಮೂಲಕವೂ ಚಾರ್ಜ್‌ ಮಾಡಬಹುದು. ಇದು ಒಂದು ಉತ್ತಮ ಸೌಲಭ್ಯ. ಇಷ್ಟೆಲ್ಲ ಗುಣಗಳಿದ್ದರೂ ನನ್ನ ವೈಯಕ್ತಿಕ ಅಭಿಪ್ರಾಯದಂತೆ ಈ ಕ್ಯಾಮೆರಾದ ಬೆಲೆ ತುಸು ಹೆಚ್ಚೇ ಎನ್ನಬಹುದು.  

ವಾರದ ಆಪ್ (app)

ಕಾಲ್ ಬ್ಲಾಕರ್ (Call Blocker)


ಏನೋ ತುರ್ತು ಕೆಲಸದ ಮಧ್ಯದಲ್ಲಿದ್ದಾಗ ಫೋನ್ ಗುಣುಗುಣಿಸುತ್ತದೆ. ಕರೆಗೆ ಉತ್ತರಿಸಿದಾಗ ಅದು ಯಾವುದೋ ಮಾರಾಟದ ಕರೆ ಆಗಿರುತ್ತದೆ. ಈ ಕರೆಗಳು ಸಾಮಾನ್ಯವಾಗಿ +91140 ಎಂಬ ಸಂಖ್ಯೆಯಿಂದ ಪ್ರಾರಂಭವಾಗುತ್ತವೆ. ನೀವು ನಿಮ್ಮ ಫೋನಿನ ಸಂಖ್ಯೆಯನ್ನು ನ್ಯಾಶನಲ್ ಡು ನಾಟ್ ಕಾಲ್ ರಿಜಿಸ್ಟ್ರಿಯಲ್ಲಿ ದಾಖಲಿಸಿದ್ದರೂ ಇಂತಹ ಕರೆಗಳು ಬರುತ್ತಲೇ ಇರುತ್ತವೆ.ಆಂಡ್ರಾಯಿಡ್‌ನಲ್ಲಿ ಕೆಲಸ ಮಾಡುವ ಈ ಕಾಲ್ ಬ್ಲಾಕರ್ ತಂತ್ರಾಂಶ ನಿಮಗೆ ಬೇಡವಾದ ಕರೆಗಳನ್ನು ನಿಷೇಧಿಸಲು ಸಹಾಯ ಮಾಡುತ್ತದೆ. ಮಾರಾಟದ ಕರೆ ಬಂದಂತೆಲ್ಲ ಅದನ್ನು ನಿಷೇಧಿತ ಕರೆಗಳ ಪಟ್ಟಿಗೆ ಸೇರಿಸಬಹುದು. ಎಲ್ಲಕ್ಕಿಂತ ಉತ್ತಮ ಎಂದರೆ +91140 ಸಂಖ್ಯೆಯಿಂದ ಪ್ರಾರಂಭವಾಗುವ ಎಲ್ಲ ಸಂಖ್ಯೆಯ ಕರೆಗಳನ್ನು ನಿಷೇಧಿಸು ಎಂಬುದು. ಈ ಆಪ್‌ನಲ್ಲಿ ಇನ್ನೂ ಹಲವು ಸೌಲಭ್ಯಗಳಿವೆ.

ಗ್ಯಾಜೆಟ್ ಸುದ್ದಿ

ನೋಕಿಯಾದಿಂದ ಆಂಡ್ರಾಯಿಡ್ ಫೋನ್


ನೋಕಿಯಾ ಕಂಪೆನಿ ಆಂಡ್ರಾಯಿಡ್ ಫೋನ್ ತಯಾರಿಸುತ್ತಿದೆ ಎಂಬ ಗಾಳಿಸುದ್ದಿ ಕೊನೆಗೂ ನಿಜವಾಗಿದೆ. ನೋಕಿಯಾ ಕಂಪೆನಿಯನ್ನು ಮೈಕ್ರೋಸಾಫ್ಟ್ ಕೊಂಡುಕೊಂಡಿ ರುವುದರಿಂದ ಅವರೀಗ ಅವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಬಿಟ್ಟು ಪ್ರತಿಸ್ಪರ್ಧಿಯಾಗಿರುವ ಗೂಗ್ಲ್‌ನವರ ಆಂಡ್ರಾಯಿಡ್ ಬಳಸುತ್ತಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.

ಸದ್ಯಕ್ಕೆ ಎಕ್ಸ್, ಎಕ್ಸ್+ ಮತ್ತು ಎಕ್ಸ್‌ಎಲ್ ಎಂಬ ಹೆಸರಿನ ಮೂರು ಫೋನ್‌ಗಳ ಘೋಷಣೆ ಆಗಿದೆ. ಅವು ಭಾರತದಲ್ಲಿ ಯಾವಾಗ ಲಭ್ಯ ಎಂದು ತಿಳಿದಿಲ್ಲ. ಈ ಫೋನ್‌ಗಳು ಪೂರ್ತಿ ಆಂಡ್ರಾಯಿಡ್‌ಮಯ ಆಗಿಲ್ಲ. ಅವು ವಿಂಡೋಸ್‌ಫೋನ್ ಮತ್ತು ಆಂಡ್ರೋಯಿಡ್‌ಗಳ ಸಮ್ಮಿಶ್ರಣವಾಗಿವೆ. ಇವು ಮೈಕ್ರೋಸಾಫ್ಟ್‌ ಕ್ಲೌಡ್, ಸ್ಕೈಪ್, ಬಿಂಗ್ ಇತ್ಯಾದಿಗಳನ್ನು ಬಳಸುತ್ತವೆ.

ಗ್ಯಾಜೆಟ್ ತರ್ಲೆ

ಗಾಳಿಯ ಮಾರಾಟ


ಉಪೇಂದ್ರ ಅವರ ಸಿನಿಮಾ ಒಂದರಲ್ಲಿ ಭಾರತದ ಮಣ್ಣನ್ನು ವಿದೇಶದಲ್ಲಿ ಮಾರಿ ದುಡ್ಡು ಮಾಡುವುದನ್ನು ತೋರಿಸಲಾಗಿತ್ತು. ಇಲ್ಲೊಬ್ಬ ಫ್ರೆಂಚ್ ಗಾಳಿಯನ್ನು ಕಾಲು ಲೀಟರಿನ ಡಬ್ಬದಲ್ಲಿ ತುಂಬಿ ಅದನ್ನು ಮಾರಿ ದುಡ್ಡು ಮಾಡುತ್ತಿದ್ದಾನೆ. ಕಾಲು ಲೀಟರ್ ಫ್ರೆಂಚ್ ಗಾಳಿಗೆ ಸುಮಾರು 7.5 ಡಾಲರ್ ಬೆಲೆಯಿಡಲಾಗಿದೆ. ಆಶ್ಚರ್ಯವೆಂದರೆ ಜನ ಅದನ್ನು ಕೊಂಡುಕೊಳ್ಳುತ್ತಿದ್ದಾರೆ ಕೂಡ.

ಗ್ಯಾಜೆಟ್ ಸಲಹೆ

ರವೀಂದ್ರ ಅವರ ಪ್ರಶ್ನೆ: ನಾನು ನನ್ನ ಆಂಡ್ರಾಯಿಡ್ ಫೋನಿನಲ್ಲಿ ಕಿಂಗ್‌ಸಾಫ್ಟ್‌ ಆಫೀಸ್ ಬಳಸುತ್ತಿದ್ದೇನೆ. ಅದರಲ್ಲಿ ನುಡಿ ತಂತ್ರಾಂಶದಲ್ಲಿ ತಯಾರಿಸಿದ ಕಡತವನ್ನು ಓದುವುದು ಹೇಗೆ? ಸದ್ಯಕ್ಕೆ ನನಗೆ ಅದು ಸರಿಯಾಗಿ ಓದಲು ಆಗುತ್ತಿಲ್ಲ.

ಉ: ನಾನು ಹಲವು ಸಲ ಇದೇ ಪ್ರಶ್ನೆಗೆ ಉತ್ತರಿಸಿದ್ದೇನೆ. ಯುನಿಕೋಡ್ ಅಲ್ಲದ ನುಡಿ ಫಾಂಟ್ ಬಳಸಿ ಕಡತ ತಯಾರಿಸಿದರೆ ಅದನ್ನು ಯಾವುದೇ ಫೋನಿನಲ್ಲಿ ತೆರೆಯಲು ಸಾಧ್ಯವಿಲ್ಲ. ನೀವು ನುಡಿ ಕೀಲಿಮಣೆ ಬಳಸಿ, ಅಥವಾ ಇನ್ಯಾವುದೇ ಕೀಲಿಮಣೆ ತಂತ್ರಾಂಶ ಬಳಸಿ, ಆದರೆ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ ಕಡತ ತಯಾರಿಸಿ. ಆಗ ಅದನ್ನು ಕನ್ನಡ ಯುನಿಕೋಡ್ ಬೆಂಬಲಿತ ಯಾವುದೇ ಫೋನಿನಲ್ಲಿ ಓದಬಹುದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.