ಮಂಗಳವಾರ, ಜೂನ್ 22, 2021
27 °C

ಬಾಗಿಲು ತಟ್ಟಿದ ಅವಕಾಶ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಬ್ಬ ಮನುಷ್ಯ ನಿರಾಸೆಯ ಮಡುವಿನಲ್ಲಿ ಸಿಕ್ಕಿಬಿದ್ದಿದ್ದ. ತಾನು ಏನು ಮಾಡಿದರೂ ಸರಿಯಾಗುತ್ತಿಲ್ಲ ಎಂದುಕೊಳ್ಳುತ್ತಿದ್ದ. ಆತನ ಸ್ನೇಹಿತನೊಬ್ಬ ಹೇಳಿದ, `ನನಗೂ ಹೀಗೆಯೇ ಆಗುತ್ತಿತ್ತು. ನಾನು ನಮ್ಮ ಊರಿನ ಮಠಕ್ಕೆ ಹೋಗಿ ಗುರುಗಳನ್ನು ಕೇಳಿದೆ.ಅವರು ನನಗೆ ಕೆಲವು ಸಲಹೆಗಳನ್ನು ನೀಡಿದರು. ಅವುಗಳನ್ನು ಪಾಲಿಸಿದ ನಂತರ ನನಗೆ ತುಂಬ ಅನುಕೂಲವಾಗಿದೆ.ಈತನೂ ಹೊರಟ ಗುರುಗಳನ್ನು ನೋಡಲು. ದಾರಿಯಲ್ಲಿ ಒಂದು ದೊಡ್ಡ ಮರವನ್ನು ಕಂಡ. ಅದರ ಎಲೆಗಳೆಲ್ಲ ಉದುರಿ ಬೋಳಾಗಿ ನಿಂತಿದೆ. ಈ ಕಾಲದಲ್ಲಿ ಎಲ್ಲ ಮರಗಳು ಹಸಿರು ತುಂಬಿರುವಾಗ ಇದೊಂದೇ ಮರ ಬೋಳಾಗಿರುವುದು ಆಶ್ಚರ್ಯವೆನ್ನಿಸಿತು.ಅದಕ್ಕಿಂತ ಆಶ್ಚರ್ಯವೆಂದರೆ ಮರ ಮನುಷ್ಯರ ಮಾತನಾಡಿತು, `ಗೆಳೆಯಾ, ನನ್ನ ಬೇರಿಗೆ ಮಾತ್ರ ನೀರು ದೊರಕುತ್ತಿಲ್ಲ, ದಯಮಾಡಿ ಸಹಾಯ ಮಾಡು~ ಎಂದಿತು. ಗುರುಗಳ ಮಾರ್ಗದರ್ಶನದ ಅವಸರದಲ್ಲಿದ್ದ ಮನುಷ್ಯ ಅದರ ಕರೆ ಕೇಳದೆ ಮುಂದೆ ನಡೆದ.ಮುಂದೆ ದಾರಿ ಸಾಗಿದಾಗ ಅಲ್ಲೊಂದು ರೈತ ಕುಟುಂಬವನ್ನು ಕಂಡ. ಅವರೆಲ್ಲ ಮರದ ಕೆಳಗೆ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದರು. ಹಿರಿಯ ರೈತ ತನ್ನ ಗೋಳು ಹೇಳಿಕೊಂಡ, `ನನ್ನ ಹೊಲದಲ್ಲಿ ಏನೇನೂ ಬೆಳೆಯುವುದಿಲ್ಲ. ಬರೀ ಕಲ್ಲು ತುಂಬಿದೆ. ನಮ್ಮ ತಂದೆ ಬಿಟ್ಟು ಹೋದ ಜಮೀನಿದು. ಇದನ್ನು ಬಿಟ್ಟರೆ ನಮಗೆ ಬೇರೆ ಗತಿ ಇಲ್ಲ.ಹೇಗೆ ಜೀವನ ನಡೆಸುವುದೋ ತೋಚುತ್ತಿಲ್ಲ.~ ಈ ಮನುಷ್ಯನಿಗೆ ತನ್ನ ಚಿಂತೆಯೇ ಬಹಳ ದೊಡ್ಡದಾದ್ದರಿಂದ ಅವರ ತೊಂದರೆಯನ್ನು ಮನಸ್ಸಿನೊಳಗೆ ತರುವ ವಿಚಾರವನ್ನು ಮಾಡದೇ ಗುರುವಿದ್ದ ಊರಿನಡೆಗೆ ನಡೆದ.ಕೊನೆಗೂ ಗುರುವನ್ನು ಕಂಡ. ತನ್ನ ಸಮಸ್ಯೆಯನ್ನು ವಿಸ್ತಾರವಾಗಿ ಹೇಳಿಕೊಂಡು ಅತ್ತ. ಪರಿಹಾರವನ್ನೂ ಕೇಳಿದ. ಗುರು ಹೇಳಿದ,  `ನಿನ್ನ ಸಮಸ್ಯೆ ವಿಶೇಷವಾದದ್ದೇನಲ್ಲ. ಬಹಳಷ್ಟು ಜನರಲ್ಲಿ ಇರುವುದೇ. ನಿನ್ನ ದೋಷವೆಂದರೆ ಅವಕಾಶಗಳು ಬಾಗಿಲುತಟ್ಟಿದಾಗ ನೀನು ಅವುಗಳಿಗೆ ಸ್ಪಂದಿಸಲಿಲ್ಲ. ಆಮೇಲೆ ಅವಕಾಶಗಳೇ ದೊರೆಯಲಿಲ್ಲ ಎಂದು ಕೊರಗುತ್ತೀ. ಇನ್ನು ಮೇಲೆ ಅವಕಾಶಗಳು ಎಲ್ಲಿಂದಲೋ, ಯಾವ ರೂಪದಿಂದಲೋ ಬಂದರೂ ಅವುಗಳನ್ನು ಛಲದಿಂದ ಸ್ವೀಕರಿಸು, ನಿನಗೆ ಒಳ್ಳೆಯದಾಗುತ್ತದೆ.~ಈ ಮನುಷ್ಯ ದಾರಿಯಲ್ಲಿ ತಾನು ಕಂಡ ಮರ ಮತ್ತು ರೈತನ ಬಗ್ಗೆ ಹೇಳಿದ. ಆಗ ಗುರು ನಕ್ಕು ಹೇಳಿದ, `ರೈತನಿಗೆ ಇರುವುದೂ ನಿನ್ನ ಸಮಸ್ಯೆಯೇ. ಅವನ ಹೊಲ ಇರುವುದೇ ವಜ್ರದ ಗಣಿಗಳ ಮೇಲೆ. ಅವನು ಅಲ್ಲಿ ಧಾನ್ಯವನ್ನು ಬೆಳೆಯುವ ಬದಲು ಗಣಿಗಾರಿಕೆ ಮಾಡಿದರೆ ಶ್ರಿಮಂತನಾಗುತ್ತಾನೆ.ಇನ್ನು ಮರದ ವಿಷಯ. ಅದರ ಬೇರುಗಳಿಗೆ ನೀರು ಹರಿದು ಬರುವ ದಾರಿಯಲ್ಲಿ ಹಿಂದೆಂದೋ ದರೋಡೆಕೋರರು ಲೂಟಿ ಮಾಡಿದ ಕಬ್ಬಿಣದ ತಿಜೋರಿಯೊಂದನ್ನು ಹೂತುಬಿಟ್ಟಿದ್ದಾರೆ. ಹೀಗಾಗಿ ಮರದ ಬೇರಿಗೆ ನೀರು ದೊರೆಯುವಂತಿಲ್ಲ.ಯಾರಾದರೂ ಅದನ್ನು ಅಗೆದು ತೆಗೆದರೆ ಮರದ ಬೇರಿಗೆ ನೀರು ಸಿಗುವುದರ ಜೊತೆಗೆ ಅವನಿಗೂ ಅಪಾರವಾದ ಐಶ್ವರ್ಯ ದೊರಕುತ್ತದೆ.~

ಮನುಷ್ಯ ಮರಳಿ ಮನೆಗೆ ನಡೆದ. ಅವನಿಗೆ ಅವಸರ. ಅದೃಷ್ಟ ಬಾಗಿಲು ತಟ್ಟಿದಾಗ ತಾನು ಮನೆಯಲ್ಲಿ ಇರಬೇಡವೇ? ದಾರಿಯಲ್ಲಿ ರೈತನಿಗೆ ಹೇಳಿದ, `ನೀನು ಗಣಿಗಾರಿಕೆ ಮಾಡು. ಶ್ರಿಮಂತನಾಗುತ್ತೀ.~ ರೈತ,  `ನೀನೇ ಬಂದು ಮಾಡಪ್ಪ, ಎಲ್ಲವನ್ನು ನೀನೇ ತೆಗೆದುಕೊ. ನನಗೆ ವಯಸ್ಸಾಯಿತು. ಹೊಲವನ್ನು ನಿನಗೇ ಬರೆದುಕೊಡುತ್ತೇನೆ~ ಎಂದ. ಇವನಿಗೋ ಮನೆಗೆ ಮರಳಿ ಬರುವ ಅವಸರ.ಮರಕ್ಕೂ ಗುರುಗಳು ಹೇಳಿದ ಸಮಾಧಾನ ತಿಳಿಸಿದ. `ನೀನೇ ತಿಜೋರಿ ತೆಗೆದುಬಿಟ್ಟು ಹಣ ತೆಗೆದುಕೊಂಡು ಬಿಡು, ನನಗೂ ಮುಕ್ತಿ ಕೊಡು~ ಎಂದಿತು ಮರ.  `ಅಯ್ಯೋ ಅದನ್ನೆಲ್ಲ ಮಾಡುತ್ತ ಕೂಡ್ರುವುದಕ್ಕೆ ಸಮಯವೆಲ್ಲಿದೆ?~ ಮನುಷ್ಯ ಮನೆಗೆ ಓಡಿ ಬಂದ. ಬಾಗಿಲು ಹಾಕಿಕೊಂಡು ಕುಳಿತ, ಅದೃಷ್ಟ ಬಾಗಿಲು ತಟ್ಟಲೆಂದು. ಅದೆಂದೂ ತಟ್ಟಲೇ ಇಲ್ಲ. ಇವನು ಹೀಗೆಯೇ ಕೊರಗುತ್ತ ಉಳಿದ.ಎರಡು ಅವಕಾಶಗಳು ತಾನಾಗಿಯೇ ಹುಡುಕುತ್ತ ಬಂದರೂ ಅವುಗಳನ್ನು ಗಮನಿಸದೇ ಬಂದಿರುವ, ಕಾಣದ ಅವಕಾಶಕ್ಕಾಗಿ ಕಾಯುತ್ತ ಕುಳಿತ ಮನುಷ್ಯನ ಕಥೆಯೇ ನಮ್ಮಲ್ಲಿ ಬಹಳಷ್ಟು ಜನರ ಕಥೆಯೂ ಆಗಿದೆ.ನಮಗೆ ಅವಕಾಶಗಳು ಬಂದಾಗ ಅವುಗಳನ್ನು ಗಮನಿಸದೇ ಹೋಗುತ್ತೇವೆ, ಅವುಗಳ ಪ್ರಯೋಜನವನ್ನು ಪಡೆಯುವುದಿಲ್ಲ. ಅವಕಾಶಗಳು ಯಾವ ರೂಪದಲ್ಲಿ ಬರುತ್ತವೋ ತಿಳಿಯದು. ಅದಕ್ಕೆ ಮೈಯೆಲ್ಲ ಕಣ್ಣಾಗಿರಬೇಕು. ಬಂದ ಅವಕಾಶಗಳು ಸರಿದು ಹೋದ ಮೇಲೆ ಗೊಣಗಿದರೆ ಪ್ರಯೋಜನವಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.