ಶನಿವಾರ, ಜೂಲೈ 11, 2020
29 °C

ಮಹಿಳಾ ಮೀಸಲಾತಿ: ಆಗದಿರಲಿ ಸಂಖ್ಯೆಗಳ ರಾಶಿ

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಮೊನ್ನೆ ತಾನೇ ರಾಜ್ಯದ 30 ಜಿಲ್ಲಾ ಪಂಚಾಯಿತಿಗಳು ಹಾಗೂ 176 ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳಲ್ಲಿ ಶೇಕಡ 55ರಷ್ಟು ಸ್ಥಾನಗಳಲ್ಲಿ ಮಹಿಳೆಯರು ಚುನಾ ಯಿತರಾಗಿರುವುದು ಭಾರತೀಯ ಪ್ರಜಾಸ ತ್ತೆಯ ಇತಿಹಾಸದಲ್ಲಿ ಖಂಡಿತವಾಗಿಯೂ ಒಂದು ಕ್ರಾಂತಿಕಾರಿ ಘಟ್ಟ. ಕರ್ನಾಟಕ ಪಂಚಾ ಯಿತಿ ರಾಜ್ (ತಿದ್ದುಪಡಿ) ಕಾಯಿದೆ 2010ರ ಅನ್ವಯ, ಶೇ 50 ರಷ್ಟು ಸ್ಥಾನಗಳನ್ನು ಮಹಿಳೆ ಯರಿಗಾಗಿಯೇ ಮೀಸಲಿಟ್ಟಿದ್ದು ಈ ಬೆಳವಣಿಗೆಗೆ ಮೂಲ ಕಾರಣವಾಗಿದ್ದು ಇದು ವರೆಗೂ ಪ್ರಧಾನವಾಗಿ ಪುರುಷ ಕೇಂದ್ರಿತವಾ ಗಿದ್ದ ಸ್ಥಳೀಯ ಸಂಸ್ಥೆಗಳಲ್ಲಿ ಎರಡು ಅಧಿಕಾರ ಕೇಂದ್ರಗಳಾದರೂ ಲಿಂಗಸಮಾನತೆಯ ಗುರಿ ಸಾಧಿಸುವತ್ತ ಹೆಜ್ಜೆ ಇಟ್ಟಿರುವುದು ಮಹಿಳಾ ಪರ ಹೋರಾಟಕ್ಕೆ ಸಂದಿರುವ ಪ್ರಥಮ ಜಯ.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಸದಸ್ಯರ ಸಂಖ್ಯೆ ಅರ್ಧಕ್ಕಿಂತ ಹೆಚ್ಚಾಗಿರುವುದು ಮಹಿಳೆಯರ ರಾಜಕೀಯ ಸಬಲೀಕರಣದ ಪ್ರಯತ್ನಗಳಿಗೆ ಬಲವನ್ನು ಒಂದೆಡೆ ನೀಡಿದರೆ, ಮತ್ತೊಂದೆಡೆ ಜಿಲ್ಲಾ ಪಂಚಾಯಿತಿಗಳ ಶೇ 50ರಷ್ಟು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟದ್ದು ರಾಜ್ಯ ರಾಜಕಾರಣ ಬದಲಾವಣೆಯ ಮತ್ತೊಂದು ಮಜಲನ್ನು ಏರಲು ಪೂರಕ ವಾದ ಹೊಸದೊಂದು ಪರಿಸ್ಥಿತಿಯನ್ನು ಸೃಷ್ಟಿ ಸಿದೆ. 1980ರ ದಶಕದಲ್ಲೇ ಸಾರ್ವಜನಿಕ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅರ್ಧಪಾಲು ದೊರೆಯಬೇಕೆಂಬ ಕರೆಯನ್ನು ಮಹಿಳಾ ಚಳವಳಿ ನೀಡಿದ್ದು, ಇಂದು ಆ ಅರ್ಥದಲ್ಲಿ ಎರಡು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಮಪಾಲು ಅವಕಾಶಗಳು ದೊರೆತಿವೆ.ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ 1,013 ಸ್ಥಾನಗಳಲ್ಲಿ 539, ಎಂದರೆ ಶೇ 53.2ರಷ್ಟು ಹಾಗೂ 176 ತಾಲ್ಲೂಕು ಪಂಚಾಯಿತಿಗಳ 3,659 ಸ್ಥಾನಗಳಲ್ಲಿ 2,018 ಎಂದರೆ ಶೇ 55.15 ಸ್ಥಾನಗಳನ್ನು ಮಹಿಳೆಯರು ಗಳಿಸಿದ್ದಾರೆ. ಸುಮಾರು 100-120 ಮಹಿಳೆಯರು ಮುಕ್ತ ಸ್ಪರ್ಧೆ ಇದ್ದಂಥ ಸಾಮಾನ್ಯ ಸ್ಥಾನಗಳಲ್ಲಿ ಚುನಾಯಿತ ರಾಗಿರುವುದು ಕೂಡ ಮತ್ತೊಂದು ವಿಶೇಷ.ಈಗಾಗಲೇ ಪ್ರಕಟವಾಗಿರುವ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗ ಳಲ್ಲಿಯೂ ಶೇ 50ರ ತತ್ವವನ್ನು ಅನುಸರಿಸ ಲಾಗಿದ್ದು ಮಹಿಳೆಯರಿಗೆ ಅರ್ಧಕ್ಕಿಂತ ಸ್ವಲ್ಪವೇ ಹೆಚ್ಚು ಪ್ರಮಾಣದ ಮೀಸಲಾತಿ ದೊರೆತಿದೆ. ಮೂವತ್ತು ಜಿಲ್ಲಾ ಪಂಚಾಯಿ ತಿಗಳಲ್ಲಿ 5ರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಮಹಿಳೆಯರಿಗೆ ಮೀಸಲಾ ಗಿದ್ದರೆ, 11ರಲ್ಲಿ ಅಧ್ಯಕ್ಷ ಸ್ಥಾನಗಳು ಹಾಗೂ 11ರಲ್ಲಿ ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆ ಯರಿಗೆ ಮೀಸಲಿಡಲಾಗಿದೆ. ಇದುವರೆಗೂ ‘ಪರಿಕಲ್ಪನೆ’ಯಾಗಿಯೇ ಉಳಿದಿದ್ದ ಮಹಿಳೆ ಯರಿಗೆ ರಾಜಕೀಯ ಅಧಿಕಾರದಲ್ಲಿ ಸಮಪಾ ಲನ್ನು ನೀಡುವ ಯೋಜನೆ, ಇನ್ನೇನು ‘ಆಚ ರಣೆ’ಯಾಗಿ ಪರಿವರ್ತಿತವಾಗಿಯೇ ಬಿಡ್ತು ಎನ್ನುವ ಮಾತುಗಳು ರಾಜಕೀಯ ಮತ್ತು ಸಾರ್ವಜನಿಕ ವಲಯಗಳೆರಡರಲ್ಲೂ ಕೇಳಿ ಬರುತ್ತಿವೆ.ದೇಶಕ್ಕೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆ ಯರು ರಾಜಕೀಯ ನಿರ್ಧಾರಗಳನ್ನು ತೆಗೆದು -ಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರು ವುದು ಇದೇ ಮೊದಲು ಎನ್ನುವುದು ಸಂತಸದ ಸಂಗತಿಯಾದರೂ ಈ ಭಾಗವಹಿಸುವಿಕೆಯ ಸ್ವರೂಪವನ್ನು ಕುರಿತಂತೆ ಒಂದು ಮೂಲ ಭೂತವಾದ ಪ್ರಶ್ನೆಯನ್ನು ಎತ್ತುವುದು ಮುಖ್ಯ. ಅದೇನೆಂದರೆ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೇವಲ ‘ಸಂಖ್ಯಾತ್ಮಕ’ವೋ ಅಥವಾ ‘ಗುಣಾತ್ಮಕ’ವೋ ಎಂಬುದು.ಸಮಾಜದ ಅನುಕೂಲಗಳಿಂದ ವಂಚಿತರಾ ಗಿರುವ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರೆಯಬೇಕಾದರೆ, ಆ ವರ್ಗದ ಸಂಖ್ಯಾಬಲ ಹೆಚ್ಚಳವಾಗಬೇಕಾದ್ದು ಅನಿವಾರ್ಯ. ಆದರೆ ಈ ಹೆಚ್ಚಳ ಕೇವಲ ತೋರಿಕೆಗಾಗಿರದೆ ಆ ವರ್ಗದ ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಅವರ ಸ್ಥಿತಿ-ಗತಿಗಳಲ್ಲಿ ಅರ್ಥಪೂರ್ಣವಾದ ಬದಲಾವಣೆಗಳನ್ನು ತರುವಂಥದ್ದಾಗಬೇಕು. ರಾಜಕೀಯವನ್ನು ಪ್ರವೇಶಿಸಿರುವ ಮಹಿಳೆಯರ ವಿಚಾರದಲ್ಲಿ ಹಾಗಾಗಿದೆಯೇ ಅಥವಾ ಇನ್ನು ಮುಂದಾದರೂ ಹಾಗಾಗುವುದೇ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಲು ಇದು ಸೂಕ್ತ ಸಮಯ.ಕುಟುಂಬವೆಂಬ ಸೀಮಿತ ವಲಯದಲ್ಲಿ ತಮ್ಮ ಇಡೀ ಬದುಕನ್ನು ಸವೆಸಿದ್ದ ಅನೇಕ ಮಹಿಳೆಯರಿಗೆ ಸಾರ್ವಜನಿಕ ವಲಯವನ್ನು ಪ್ರವೇಶ ಮಾಡಲು ಅನುವು ಮಾಡಿಕೊಟ್ಟ ಎರಡು ವ್ಯವಸ್ಥೆಗಳೆಂದರೆ ಸ್ಥಳೀಯ ಸಂಸ್ಥೆಗಳ ಲ್ಲಿನ ಮಹಿಳಾ ಮೀಸಲಾತಿ ಮತ್ತು ಸ್ವಸಹಾಯ ಸಂಘಗಳು. ಮೀಸಲಾತಿಯೆಂಬ ಅವಕಾಶವಿಲ್ಲ ದಿದ್ದಲ್ಲಿ ಈಗ ಚುನಾಯಿತರಾಗಿರುವ ಅತಿ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಈ ಕಾರಣದಿಂದಲೇ ರಾಜ ಕೀಯ ಅಧಿಕಾರವನ್ನು ಪಡೆದ ಮಹಿಳೆಯರು ತಮ್ಮ ಹೊಸ ಪಾತ್ರಗಳಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ತೋರುತ್ತಿರುವುದು.ಸಾರ್ವಜನಿಕ ಜೀವನವನ್ನು ಹೇಗೆ ನಿಭಾ ಯಿಸಬೇಕೆಂಬ ಅನುಭವದ ಕೊರತೆ ತಂದೊ ಡ್ಡಿದ ಸಮಸ್ಯೆ-ಸವಾಲುಗಳನ್ನು ಎದುರಿಸಿ ಇಂದು ಅನೇಕ ಮಹಿಳೆಯರು ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಎಷ್ಟು ಸತ್ಯವೋ, ಇಂದಿಗೂ ತಮ್ಮ ಕುಟುಂಬದ ಪುರುಷರ ಮತ್ತು ಪಕ್ಷದ ಪುರುಷ ನಾಯಕರ ಕೈಗೊಂಬೆಗಳಂತೆ ನಡೆದುಕೊಳ್ಳು ತ್ತಿರುವ ಮಹಿಳಾ ಜನಪ್ರತಿನಿಧಿಗಳೂ ನಮ್ಮ ನಡುವೆ ಇದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಇತ್ತೀಚಿನ ಚುನಾವಣೆಗಳಲ್ಲಿ ಗೆದ್ದು ಬಂದ ಅನೇಕ ಮಹಿಳೆಯರೂ ಈ ಎರಡನೇ ಗುಂಪಿಗೆ ಸೇರಿರುವಂಥ ಸೂಚನೆಗಳು ಈಗಾಗಲೇ ಲಭ್ಯವಾಗಿವೆ. ತಮ್ಮ ಗೆಲವು ಸ್ಥಳೀಯ ಶಾಸಕರು ಅಥವಾ ಸಂಸದರ ಕೃಪಾಕಟಾಕ್ಷದಿಂದಲೇ ಎಂದು ಬಿಂಬಿಸುತ್ತಾ ತಮ್ಮ ಪಾತ್ರ ಹಾಗೂ ಜವಾಬ್ದಾರಿಗಳ ಬಗ್ಗೆ ಗಂಭೀರವಾಗಿ ಚಿಂತನೆಯಲ್ಲಿ ತೊಡಗದಂಥ ಮಹಿಳಾ ಜನಪ್ರತಿನಿಧಿಗಳು ತಮ್ಮ-ತಮ್ಮ ಕಾರ್ಯಕ್ಷೇತ್ರ ಗಳಲ್ಲಿ ಎಂಥ ಬದಲಾವಣೆಗಳನ್ನು ತರಬಹುದು ಎಂಬ ಶಂಕೆ ಈಗಾಗಲೇ ಮೂಡುತ್ತಿದೆ.ಚುನಾವಣಾ ಫಲಿತಾಂಶಗಳು ಘೋಷಣೆ ಯಾದ ನಂತರ ಬಿಡುಗಡೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ನೋಡಿದರೆ ಹಲವಾರು ಜಿಲ್ಲಾ ಪಂಚಾಯಿತಿಗಳ ವಿಚಾರದಲ್ಲಿ ಮಹಿಳಾ ಪ್ರತಿನಿಧಿಗಳ ಅಥವಾ ಪಂಚಾಯಿತಿಗಳ ಬಲವರ್ಧನೆಗಿಂತ ಪಕ್ಷಗಳ ಸ್ವಹಿತ ರಕ್ಷಣೆಯೇ ಮುಖ್ಯ ಎನ್ನುವುದು ನೇರವಾಗಿಯೇ ಗೋಚರವಾಗುತ್ತದೆ. ಯಾವ-ಯಾವ ಸ್ಥಾನಕ್ಕೆ ಯಾವ-ಯಾವ ಜಾತಿಯ ಸದಸ್ಯರು ಆಯ್ಕೆಯಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೂಡ ಕೆಲವು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳನ್ನು ಮೀಸಲಾಗಿಡಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.ಇದೂ ಸಾಲದು ಎಂಬಂತೆ ಅಧ್ಯಕ್ಷ ಗಾದಿಯ ಆಕಾಂಕ್ಷಿಗಳ ಮೇಲೆ ಕೆಲ ಷರತ್ತುಗಳನ್ನು ಹೇರಿರುವುದರಿಂದ ರಾಜಕೀಯ ಅನುಭವವಿ ರುವ ಕೆಲ ಮಹಿಳೆಯರು ಸ್ಪರ್ಧೆಯಿಂದ ದೂರವೇ ಉಳಿಯುತ್ತಾರೆ. ಪಕ್ಷಗಳ ಒಲವು ಸಹಜವಾಗಿಯೇ ತಮ್ಮ ಮಾತುಗಳನ್ನು ಕೇಳುವ ಹಾಗೂ ಸ್ವತಂತ್ರ್ಯ ವ್ಯಕ್ತಿತ್ವವನ್ನು ಹೊಂದದವರ ಕಡೆಯಿರುವುದರಿಂದ ಅಂಥ ಮಹಿಳೆಯರನ್ನೇ ನಾಯಕತ್ವದ ಸ್ಥಾನಗಳಿಗೆ ಆಯ್ಕೆ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿಲ್ಲ.ರಾಜಕೀಯ ಅಧಿಕಾರವನ್ನು ಗಳಿಸಲು ಹಾಗೂ ಗಳಿಸಿದ ಅಧಿಕಾರವನ್ನು ಉಳಿಸಿಕೊ ಳ್ಳಲು ನಡೆಯುವ ನಿರ್ಲಜ್ಜ ಸ್ಪರ್ಧೆಯಲ್ಲಿ ಅನೇಕ ಬಾರಿ ಮಹಿಳೆಯರು ನೇಪಥ್ಯಕ್ಕೆ ಸರಿ ಯುತ್ತಾರಷ್ಟೇ ಅಲ್ಲ, ಅವರ ಸ್ವಾಭಿಮಾನದ ತೀವ್ರ ಹರಣವಾಗುತ್ತದೆ. ಇಷ್ಟೆಲ್ಲ ಆದರೂ ಪ್ರತಿ ಚುನಾವಣೆಯಲ್ಲಿಯೂ ಮಹಿಳೆಯರನ್ನು ರಾಜಕೀಯ ದಾಳಗಳಾಗಿ ಬಳಸಿಕೊಳ್ಳುವ ಪರಿಪಾಠ ಮಾತ್ರ ತಪ್ಪಿಲ್ಲ. ಅವರವರ ರಾಜ ಕೀಯ ಲೆಕ್ಕಾಚಾರಗಳಿಗೆ ತಕ್ಕಂತೆ ಮಹಿಳೆಯ ರಿಗೆ ಸ್ಥಾನಗಳನ್ನು ನೀಡುತ್ತಾರೆ, ಇಲ್ಲ, ನೀಡಿದ ಸ್ಥಾನಗಳನ್ನು ಕಿತ್ತುಕೊಳ್ಳುತ್ತಾರೆ, ಅದೂ ಇಲ್ಲ ವೆಂದರೆ ಸ್ಥಾನದ ಆಸೆ ತೋರಿಸಿ ಕೊನೆಯ ಗಳಿ ಗೆಯಲ್ಲಿ ಮತ್ಯಾರಿಗೋ ಟಿಕೆಟ್ಟನ್ನು ನೀಡುತ್ತಾರೆ.ಪ್ರತಿ ಚುನಾವಣೆಯಲ್ಲೂ ಇವೆಲ್ಲ ನಡೆ ಯುವಂಥ ಸಂಗತಿಗಳೇ. ಆದ್ದರಿಂದ ಈ ಹೊತ್ತು ಇಷ್ಟೊಂದು ಸಂಖ್ಯೆಯಲ್ಲಿ ಚುನಾಯಿ ತರಾಗಿರುವ ಮಹಿಳೆಯರು ತಮ್ಮ ಸಾಮರ್ಥ್ಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲವ ರ್ಧನೆಗೆ ಏನು ಮಾಡಬಹುದು ಎಂಬ ಪ್ರಶ್ನೆ ಯನ್ನೆತ್ತಿ ಅದಕ್ಕೆ ಉತ್ತರಗಳನ್ನು ಹುಡುಕು ವುದು ಸೂಕ್ತ. ಮೊದಲಿಗೆ, ಎಲ್ಲ ಮಹಿಳೆ ಯರೂ ಪಕ್ಷಾತೀತವಾಗಿ, ತಮ್ಮ ಘನತೆ ಮತ್ತು ಗೌರವಗಳನ್ನು ಗಾಳಿಗೆ ತೂರುತ್ತಿರುವಂಥ ಸ್ವಾರ್ಥ ರಾಜಕೀಯ ಸಂಸ್ಕೃತಿಯನ್ನು ಪ್ರಶ್ನಿಸಿ ಪ್ರತಿಭಟಿಸುವಂಥ ಮನೋಭಾವವನ್ನು ಬೆಳೆಸಿ ಕೊಂಡು ತಮ್ಮತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಪಕ್ಷ ಭೇದವನ್ನು ಮರೆತು ಶ್ರಮಿಸಲು ಪಣ ತೊಡಬೇಕು. ಪಕ್ಷಗಳ ನಡುವಣ ಸೆಣಸಾಟ ದಲ್ಲಿ, ಪ್ರತಿಷ್ಠೆಯ ಮೆರೆದಾಟದಲ್ಲಿ ಕ್ಷೇತ್ರಗಳು ಬಡವಾಗಿರುವಂಥ ನಿದರ್ಶನಗಳು ನಮ್ಮ ಮುಂದೆ ನೂರಾರಿವೆ. ಇದಕ್ಕಿಂತ ಭಿನ್ನವಾದ ರಾಜಕೀಯ ಪರಿಸರವನ್ನು ಸೃಷ್ಟಿಸಿ ಸ್ಥಳೀಯ ಆದ್ಯತೆಗಳಿಗೆ ಗಮನಹರಿಸುವಂಥ ಒಂದು ಹೊಸ ಸಂಸ್ಕೃತಿಯನ್ನೇ ಮಹಿಳಾ ಪ್ರತಿನಿಧಿಗಳು ನಿರ್ಮಾಣ ಮಾಡಲು ಸನ್ನದ್ಧರಾಗಬೇಕು.ಮಹಿಳಾ ಮೀಸಲಾತಿಯನ್ನು ಸುತ್ತುವರೆದಿ ರುವ ಒಂದು ಪ್ರಮುಖ ಪ್ರಶ್ನೆಯೆಂದರೆ ‘ಅಧಿಕಾರವನ್ನು ಮಹಿಳೆಯರಿಗೆ ನೀಡುವುದ ರಿಂದ ಯಾವ ವಿಶೇಷವಾದ ಬದಲಾವಣೆಗಳು ಸಮಾಜದಲ್ಲಿ ಉಂಟಾಗುತ್ತವೆ’ ಎಂಬುದು. ಇದಕ್ಕೆ ಉತ್ತರವೊಂದೇ. ಬದುಕಿನ ತೀರಾ ಮೂಲಭೂತ ಅಗತ್ಯಗಳೆನಿಸುವ ಪರಿಶುದ್ಧ ಕುಡಿಯುವ ನೀರಿನ ಮೂಲಗಳು, ಶೌಚಾಲ ಯಗಳು, ಪ್ರಾಥಮಿಕ ಶಿಕ್ಷಣ, ಹೆರಿಗೆ ಆಸ್ಪತ್ರೆ ಗಳು, ಆಹಾರ ಶೇಖರಣೆ - ಸಂರಕ್ಷಣೆ  ವಿತ ರಣೆ, ಸುರಕ್ಷಿತ ಅಡಿಗೆ ಮನೆಗಳು, ಜಾನುವಾ ರುಗಳ ಲಾಲನೆ - ಪಾಲನೆ, ಮಕ್ಕಳ ಆರೋಗ್ಯ, ಕೌಟುಂಬಿಕ ಹಿಂಸೆ  ಇವೇ ಮುಂತಾದ ವಿಚಾರ ಗಳತ್ತ ಮಹಿಳೆಯರ ಗಮನ ಸಹಜವಾಗಿಯೇ ಹೆಚ್ಚು ಹರಿಯುತ್ತದೆ. ಮಹಿಳೆಯರು ನಿರ್ಧಾ ರಗಳನ್ನು ತೆಗೆದುಕೊಳ್ಳುವಂಥ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾದಾಗ, ಅವರ ಸಂಯುಕ್ತ ಧ್ವನಿಗಳು ಗಟ್ಟಿಯಾಗಿ ಮೊಳಗಿ ದಾಗ ಬಹು ಕಾಲದಿಂದ ಅಲಕ್ಷಿತವಾಗಿರುವ ಇಂಥ ಅಗತ್ಯಗಳ ಪೂರೈಕೆಗೆ ಹೊಸ ಇಂಬು ದೊರೆಯಬಹುದೇನೋ ಎಂಬ ಆಶಯ ಮಹಿಳಾ ಮೀಸಲಾತಿಯ ಹಿಂದಡಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲ ಪುರುಷರಲ್ಲಿ ಲಿಂಗ ಸೂಕ್ಷ್ಮತೆಯ ಕೊರತೆಯಿದೆಯೆಂದಾ ಗಲಿ, ಇಂಥ ವಿಚಾರಗಳತ್ತ ಅವರ ಗಮನ ಹರಿಯುವುದೇ ಇಲ್ಲವೆಂದಾಗಲಿ ಇದರ ಅರ್ಥವಲ್ಲ, ಆದರೆ ಮಹಿಳೆಯರ ವಿಶೇಷ ಜೈವಿಕ-ಸಾಮಾಜಿಕ  ಆರ್ಥಿಕ ಸ್ಥಿತಿಗಳ ಹಿನ್ನೆಲೆ ಯಲ್ಲಿ ನಾವು ಬದುಕನ್ನು ವಿಶ್ಲೇಷಿಸಿದಾಗ ಈ ಎಲ್ಲ ವಿಷಯಗಳಿಗೆ ಮಹಿಳೆಯರ ಸ್ಪಂದನ ಹೆಚ್ಚು.ಮಹಿಳಾ ಮೀಸಲಾತಿಯ ಕಲ್ಪನೆಯಾಗಲಿ ಆಚರಣೆಯಾಗಲಿ ಕರ್ನಾಟಕಕ್ಕೆ ಹೊಸದೇನಲ್ಲ. ಸ್ಥಳೀಯ ಸಂಸ್ಧೆಗಳಿಗೆ ಆಡಳಿತದ ಅಧಿಕಾರ ವನ್ನು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಪ್ರಕ್ರಿಯೆಯ ಮೂಲಕ ನೀಡಲು ಅಸ್ತಿತ್ವಕ್ಕೆ ಬಂದ ಪಂಚಾಯಿತಿ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಧಾನಗಳನ್ನು ನೀಡ ಬೇಕೆಂಬ ಕಾಯಿದೆ ಕರ್ನಾಟಕದಲ್ಲಿ 1983 ರಲ್ಲೇ ಅಸ್ತಿತ್ವಕ್ಕೆ ಬಂದಿದ್ದು, ಇಡೀ ದೇಶದಲ್ಲಿ ಮಹಿಳಾ ಮೀಸಲಾತಿಯ ಚಳವಳಿಗೆ ಮಾದರಿ ಒದಗಿಸಿದ ಕೀರ್ತಿ ನಮ್ಮ ರಾಜ್ಯದ್ದು.ನಮ್ಮ ಮುಂದಿರುವ ಈಗಿನ ಆದ್ಯತೆಯೆಂದರೆ ಈಗ ಚುನಾಯಿತರಾಗಿರುವ ಮಹಿಳಾ ಪ್ರತಿನಿಧಿಗಳ ಸಾಮಾನ್ಯ ಜ್ಞಾನ, ಆಡಳಿತಾತ್ಮಕ ಅರಿವು ಮತ್ತು ಸಾರ್ವಜನಿಕ ಸ್ಧಾನಗಳ ಸಮರ್ಥ ನಿರ್ವಹಣೆ - ಈ ಮೂರು ವಿಚಾರಗಳಲ್ಲಿ ನಿರಂತರ ತರಬೇತಿಯನ್ನು ಒದಗಿಸುವುದು. ಈ ಜವಾಬ್ದಾರಿಯನ್ನು ಇನ್ನು ಮುಂದೆ ಪ್ರಗತಿಪರ ಸ್ವಾಯತ್ತ ಮಹಿಳಾ ಸಂಘಟನೆಗಳು, ಮಹಿಳಾ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರಗಳು ಹಾಗೂ ಪ್ರಜ್ಞಾವಂತ ನಾಗರಿಕ ಸಮಾಜ ತೆಗೆದುಕೊಳ್ಳಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.