ಸೋಮವಾರ, ಆಗಸ್ಟ್ 2, 2021
20 °C

ಮಾನ ಹರಾಜು, ಈಗ ನೊಬೆಲ್ ಪದಕ ಹರಾಜು

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಮಾನ ಹರಾಜು, ಈಗ ನೊಬೆಲ್ ಪದಕ ಹರಾಜು

ಈ ದಿನ ವಿಜ್ಞಾನರಂಗದಲ್ಲಿ ಒಂದು  ವಿಲಕ್ಷಣ ಘಟನೆ ನಡೆಯುತ್ತಿದೆ. ಜೀವಂತ ವಿಜ್ಞಾನಿ­ಯೊಬ್ಬನ ನೊಬೆಲ್ ಪದಕ ಮೊದಲ ಬಾರಿಗೆ ಹರಾಜುಕಟ್ಟೆಗೆ ಬರುತ್ತಿದೆ. ನಮ್ಮೆಲ್ಲರ ದೇಹದ ಕಣ­ಕಣದಲ್ಲಿರುವ ಡಿಎನ್‌ಎ ಎಂಬ ವಸ್ತುವಿನ ಸ್ವರೂಪ ಹೇಗಿದೆ ಎಂಬುದನ್ನು ೧೯೫೩ರಲ್ಲಿ ಪತ್ತೆ ಹಚ್ಚಿ ನೊಬೆಲ್ ಪ್ರಶಸ್ತಿ ಪಡೆದ ಖ್ಯಾತ ವಿಜ್ಞಾನಿ ಜೇಮ್ಸ್ ವ್ಯಾಟ್ಸನ್ ತನ್ನ

ಚಿನ್ನದ ಪದಕವನ್ನು ಹರಾ­ಜಿಗೆ ಇಟ್ಟಿದ್ದು, ಇಂದು (ಡಿಸೆಂಬರ್ ೪) ಅದು ನ್ಯೂಯಾರ್ಕಿನ ಹೆಸರಾಂತ ಕ್ರಿಸ್ಟೀಸ್ ಹರಾಜುಕಟ್ಟೆಯಲ್ಲಿ ಲಿಲಾವಾಗುತ್ತಿದೆ. ಅಂದಾಜು ಮೂವತ್ತು ಲಕ್ಷ ಡಾಲರ್ ಮೌಲ್ಯದ ಅದನ್ನು ಯಾರು ಪಡೆಯುತ್ತಾರೊ, ಏಕೆ ಪಡೆ­ಯು­ತ್ತಾರೊ ಆ ವಿಚಾರ ಹೇಗೂ ಇರಲಿ;  ಜೀವನ­­ದುದ್ದಕ್ಕೂ ವಿವಾದಗಳನ್ನೇ ಹಾಸಿಹೊದ್ದ ವ್ಯಾಟ್ಸನ್ (೮೬) ತನ್ನ ಬದುಕಿನ ಸಂಜೆಯ ವೇಳೆಗೆ ಇನ್ನೊಂದಿಷ್ಟು ಚರ್ಚೆಯನ್ನು ಹುಟ್ಟು­ಹಾಕು­ತ್ತಿ­ದ್ದಾನೆ.ಭಾರೀ ಬುದ್ಧಿವಂತ ಎನಿಸಿದ ಈ ವಿಜ್ಞಾನಿಯ ಸಂಶೋಧನೆಗಳು ೨೦ನೇ ಶತಮಾನದ ಅತ್ಯಂತ ಪ್ರಮುಖ ಕೊಡುಗೆಗಳೆಂದು ಪರಿಗಣಿಸಲಾಗಿದೆ. ಈ ಹಿಂದೆ ಅದೆಷ್ಟೊ ಬಾರಿ ನಾಲಗೆಯನ್ನು ತೀರ ಸಡಿಲ ಬಿಟ್ಟು, ಅದರ ಪರಿಣಾಮವಾಗಿ ಸಾರ್ವ­ಜ­ನಿಕ ರಂಗದಿಂದ ಅಕ್ಷರಶಃ ಆತ ಬಹಿಷ್ಕೃತ­ನಾಗಿ­ದ್ದಾನೆ. ‘ನಾನು ಬದುಕಿದ್ದೇನೆ ಎಂಬುದನ್ನೇ ಯಾರೂ ಪರಿಗಣಿಸುತ್ತಿಲ್ಲ. ಯಾರಿಗೂ ಬೇಡ­ವಾಗಿ­ರುವ ಅವ್ಯಕ್ತಿ (ಅನ್‌ಪರ್ಸನ್) ಆಗಿಬಿಟ್ಟಿ­ದ್ದೇನೆ. ಪದಕದ ಹರಾಜಿನಿಂದ ಬರುವ ಹಣವನ್ನು ವಿಜ್ಞಾನ ಸಂಸ್ಥೆಗಳಿಗೆ ದಾನ ಕೊಡುತ್ತೇನೆ ಅಥವಾ ಡೇವಿಡ್ ಹಾಕ್ನಿಯ ವರ್ಣಚಿತ್ರವನ್ನು ಖರೀದಿಸು­ತ್ತೇನೆ’ ಎಂದಿದ್ದಾನೆ. ನೊಬೆಲ್ ಪ್ರಶಸ್ತಿ ಲಭಿಸಿದ ನಂತರದ ೪೦ ವರ್ಷ­ಗಳ ಕಾಲ ಆತ ಜೀವವಿಜ್ಞಾನ ರಂಗದ ಅತ್ಯಂತ ಮಹತ್ವದ ವ್ಯಕ್ತಿಯೆನಿಸಿದ್ದ. ಮನುಷ್ಯನ ತಳಿನಕ್ಷೆಯನ್ನು ತಯಾರಿಸುವ ಮಹಾನ್ ಕೆಲಸ­ದಲ್ಲಿ ಇತರ ಹತ್ತಾರು ನೊಬೆಲ್ ವಿಜೇತರ ತಂಡದ ಮುಂದಾಳಾಗಿ ವ್ಯಾಟ್ಸ್‌ನ ಅಪ್ರತಿಮ ಸಾಧನೆಯನ್ನು ಮೆರೆದಿದ್ದ. ಅದೆಷ್ಟೊ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಿಗೆ ಮತ್ತು ಕಂಪನಿಗಳಿಗೆ ಆತ ಮುಖ್ಯಸ್ಥ ಇಲ್ಲವೆ ಮಾರ್ಗದರ್ಶಕನಾಗಿದ್ದ. ಹೀಗಿದ್ದ ವ್ಯಾಟ್ಸನ್ ೨೦೦೭ರಲ್ಲಿ ಹಠಾತ್ತಾಗಿ ಅಪಖ್ಯಾತಿಯ ಪ್ರಪಾತಕ್ಕೆ ಬಿದ್ದ. ಕರಿಯರ ಬುದ್ಧಿ-­ಮತ್ತೆ ಕೆಳಮಟ್ಟದ್ದೆಂದು ಯಾವುದೊ ಉಪನ್ಯಾಸ­ದಲ್ಲಿ ಹೇಳಿಬಿಟ್ಟ. ‘ಕರಿಯರು ನಮ್ಮಷ್ಟೇ ಬುದ್ಧಿ­ವಂತ­ರೆಂದು ತಿಳಿದು ಆಫ್ರಿಕಾ ಖಂಡದ ರಾಷ್ಟ್ರ­ಗಳಿಗೆ ಅಷ್ಟೆಲ್ಲ ನೆರವು ಸುರಿಯುತ್ತಿದ್ದೇವೆ; ಭೂಮಿಯ ಮೇಲಿನ ಮನುಷ್ಯರಲ್ಲೆಲ್ಲ ಸಮನಾದ ಬುದ್ಧಿಮತ್ತೆ ಇದೆಯೆಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವಲ್ಲವೆಂದು ಕರಿಯರನ್ನು ನೌಕರಿಗೆ ಇಟ್ಟುಕೊಂಡವರಿಗೆಲ್ಲ ಮನದಟ್ಟಾಗು­ತ್ತದೆ’ ಎಂದು ಹೇಳಿದ.ಈ ಹೇಳಿಕೆ ಅದೆಷ್ಟು ಸ್ಫೋಟಕಾರಿ ಆಗಿತ್ತೆಂದರೆ ಮಾರನೆಯ ದಿನವೇ ಆತನನ್ನು ಹೆಸರಾಂತ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಸಂಶೋಧನ ಸಂಸ್ಥೆಯ ಕುಲಪತಿ ಸ್ಥಾನದಿಂದ ಉಚ್ಚಾಟನೆ ಮಾಡ­ಲಾಯಿತು. ಆತನಿಗಾಗಿ ಆಯೋಜಿಸ­ಲಾ­ಗಿದ್ದ ಸನ್ಮಾನ ಸಮಾರಂಭಗಳೆಲ್ಲ ರದ್ದಾದವು. ಆತನ ಉಪನ್ಯಾಸಕ್ಕೆ ನೀಡಿದ್ದ ಆಮಂತ್ರಣಗಳನ್ನೆಲ್ಲ  ವಿವಿಧ ವಿಜ್ಞಾನ ಸಂಸ್ಥೆಗಳು ಹಿಂದಕ್ಕೆ ಪಡೆದವು. ‘ನಮ್ಮ ಇಡೀ ವಿಜ್ಞಾನವೃಂದದ ಮಾನವೇ ಈತ­ನಿಂದಾಗಿ ಹರಾಜಾಯಿತು. ಅಪ್ರತಿಮ ಸಂಶೋಧಕ­ನೊಬ್ಬ ತನ್ನ ವೃತ್ತಿಯನ್ನು ಹೀಗೆ ತುಚ್ಛವಾಗಿ ಕೊನೆಗೊಳಿಸಿಕೊಂಡ’ ಎಂದರು, ಅಮೆರಿಕದ ವಿಜ್ಞಾನಿಗಳ ಒಕ್ಕೂಟದ ಅಧ್ಯಕ್ಷ ಹೆನ್ರಿ ಕೆಲ್ಲಿ.  ಅದಕ್ಕೂ ಮೊದಲು ಕೂಡ ವ್ಯಾಟ್ಸನ್ ಆಗಾಗ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದ: ಬಿಸಿಲಲ್ಲಿ ಓಡಾಡುವ ಕಂದು ತ್ವಚೆಯ ವ್ಯಕ್ತಿಗಳಲ್ಲಿ ಲೈಂಗಿಕ ಆಸಕ್ತಿ ಜಾಸ್ತಿ ಎಂದು ಒಮ್ಮೆ ಹೇಳಿದ್ದರೆ, ದಢೂತಿ ವ್ಯಕ್ತಿಗಳಲ್ಲಿ ಮುನ್ನುಗ್ಗುವ ಮನೋಬಲ ಕಡಿಮೆ ಎಂದು ಇನ್ನೊಮ್ಮೆ ಹೇಳಿ ಟೀಕೆಗೊಳಗಾಗಿದ್ದ.ಅವೆಲ್ಲ ಹೇಗೂ ಇರಲಿ, ಆತ ಸಂಶೋಧಿಸಿದ ಡಿಎನ್‌ಎ ಬಗ್ಗೆ ತುಸು ನೋಡೋಣ: ಇಂದು ಯಾವುದೋ ವಿವಾಹಿತ ಮಹಿಳೆ ತನ್ನ ಮೇಲೆ ಪರಪುರುಷನೊಬ್ಬ ಬಲಾತ್ಕಾರ ಮಾಡಿದನೆಂದು ದೂರುತ್ತಾಳೆ. ಸಾಕ್ಷ್ಯರೂಪದಲ್ಲಿ ತನ್ನ ಒಳ

ಉಡು­ಪು­ಗಳನ್ನು ತೋರಿಸುತ್ತಾಳೆ. ವಿಧಿವಿಜ್ಞಾನ ಪ್ರಯೋ­ಗಾಲಯದ ತಜ್ಞರು ಆ ಬಟ್ಟೆಯನ್ನು ಕೆಮಿಕಲ್‌ನಲ್ಲಿ ತೊಳೆದು ನೂಲಿಗೆ ಅಂಟಿಕೊಂಡ ವೀರ್ಯ, ಜೊಲ್ಲು, ರೋಮ ಅಥವಾ ತ್ವಚೆಯ ಕಣಗಳಲ್ಲಿನ ಡಿಎನ್‌ಎಯನ್ನು ವಿಶ್ಲೇಷಣೆ ಮಾಡಿ, ಅದರ ನಕ್ಷೆ ಬರೆಯುತ್ತಾರೆ. ದೂರಿನಲ್ಲಿ ಹೆಸರಿಸ­ಲಾದ ವ್ಯಕ್ತಿಯ ವೀರ್ಯ, ರೋಮ, ತ್ವಚೆಯ ಕಣವನ್ನು ಪೊಲೀಸರು ಸಂಗ್ರಹಿಸಿ ಅದನ್ನೂ ಪ್ರಯೋಗಾಲಯಕ್ಕೆ ಕೊಡುತ್ತಾರೆ. ಮಹಿಳೆಯ ಒಳ ಉಡುಪಿಗೆ ಅಂಟಿಕೊಂಡ ಡಿಎನ್‌ಎಗೂ ಆಪಾದಿತನ ಡಿಎನ್‌ಎಗೂ ಹೋಲಿಕೆ ಕಂಡು ಬಂದಿದೆಯೆ ಇಲ್ಲವೆ ಎಂಬುದರ ವರದಿಯನ್ನು ನ್ಯಾಯಾ­ಲಯಕ್ಕೆ ಒಪ್ಪಿಸುತ್ತಾರೆ.ಡಿಎನ್‌ಎ ಎಂದರೆ ಏನು?

ನಮ್ಮ ಶರೀರದಲ್ಲಿ ಅಂದಾಜು ಒಂದು ಕೋಟಿ ಶತಕೋಟಿ (ಹತ್ತು ಸಾವಿರ ಟ್ರಿಲಿಯನ್) ಜೀವ­ಕೋಶಗಳಿವೆ. ಆ ಒಂದೊಂದರ ಮಧ್ಯೆ ಒಂದೊಂದು ಬೀಜಕೇಂದ್ರ ಇದೆ. ಅದರಲ್ಲಿ ಸುರುಳಿ ಸುತ್ತಿ-­ಕೊಂಡಂತೆ ೪೬ ತಂತುಗಳಿದ್ದು ಅವಕ್ಕೆ ‘ವರ್ಣ­ತಂತು’ ಎನ್ನುತ್ತಾರೆ. ಅವುಗಳಲ್ಲಿ ೨೩ ಅಮ್ಮನ ಕಡೆಯಿಂದ ಬಂದಿದ್ದು; ಇನ್ನುಳಿದ ೨೩ ಅಪ್ಪನ ಕಡೆ­ಯಿಂದ ಬಂದಿದ್ದು. ಆ ಒಂದೊಂದು ವರ್ಣತಂತು­ವಿನಲ್ಲೂ ಕಂಡುಬರುವ ಅತ್ಯಂತ ಚಮತ್ಕಾರಿಕ ವಸ್ತುವೇ ಡಿಎನ್‌ಎ. ತಿರುಪಣಿ ಏಣಿಯಂತೆ ಕಾಣುವ ಅದನ್ನು ಜಗ್ಗಿ ಎಳೆದರೆ ಎರಡು ಮೀಟರ್ ಉದ್ದವಾಗುತ್ತದೆ. ನಿಮ್ಮ ಶರೀರ­ದಲ್ಲಿರುವ ಎಲ್ಲ ಜೋಡಿ ಪಟ್ಟಿಯನ್ನು ಸೇರಿಸಿದರೆ ಅದು ಅಂದಾಜು ಎರಡು ಕೋಟಿ ಕಿಲೊಮೀಟರ್ ಉದ್ದದ್ದಾಗುತ್ತದೆ. ಅದರ ಏಕೈಕ ಉದ್ದೇಶ ಏನೆಂದರೆ ಇನ್ನಷ್ಟು ಡಿಎನ್‌ಎಗಳನ್ನು ಸೃಷ್ಟಿ ಮಾಡು­ವುದು. ಆಹಾರ ಸಿಕ್ಕಷ್ಟು ಸಮಯವೂ ತನ್ನನ್ನೇ ಮರುಸೃಷ್ಟಿ ಮಾಡುತ್ತ ಹೋಗುವುದು. ಅಲ್ಲಲ್ಲಿ ಕೊಂಚ ಎಡವಟ್ಟು ಆಗುತ್ತದೆ.ಈ ಅಂಕಣವನ್ನು ನೀವು ನೆರಳಚ್ಚು ಪ್ರತಿ (ಝೆರಾಕ್ಸ್) ಮಾಡಿ ಅದೇ ಪ್ರತಿಯನ್ನು ಮತ್ತೆ ಝೆರಾಕ್ಸ್ ಮಾಡಿ, ಆ ಝೆರಾಕ್ಸನ್ನೇಮತ್ತೆ ಝೆರಾಕ್ಸ್ ಮಾಡುತ್ತ ಹೋದರೆ ಅಲ್ಲಲ್ಲಿ ಚಿಕ್ಕ ಪುಟ್ಟ ಚುಕ್ಕಿ­ಗಳು ಮೂಡುತ್ತವೆ. ಮೂಲ ಅಕ್ಷರ ತುಸು ಮಾಯ­ವಾಗುತ್ತದೆ. ಇನ್ನಷ್ಟು ಚುಕ್ಕಿಗಳು ಮೂಡು­­ತ್ತವೆ. ಒಂದೆರಡು ಸಾವಿರ ಬಾರಿ, ಅಥವಾ ಕೆಲವು ಲಕ್ಷ ಬಾರಿ ಹೀಗೆ ಮಾಡುತ್ತ ಹೋದರೆ ಈ ಅಂಕಣದ ಬದಲು ಬೇರೆಯದೇ ಚಿತ್ರಣ ಸಿದ್ಧವಾಗಿರುತ್ತದೆ. ಅದನ್ನೇ ನಾವು ವಿಕಾಸ ಎನ್ನು­ತ್ತೇವೆ. ಹಾಗೆಂದು ಡಿಎನ್‌ಎ ಎಂಬ ಈ ಯಂತ್ರಕ್ಕೆ  ಜೀವ ಇಲ್ಲ. ಅದನ್ನು ನಾಶ ಮಾಡಲು ಸಾಧ್ಯವೂ ಇಲ್ಲ. ಆದ್ದರಿಂದಲೇ ಎಂದೋ ಚಿಂದಿ­ಯಾದ ಬಟ್ಟೆಗೆ ಅಂಟಿದ ರಕ್ತದ ಕಣದಲ್ಲೂ ಅದನ್ನು ಪತ್ತೆ ಮಾಡಬಹುದು; ಹತ್ತಿಪ್ಪತ್ತು ಲಕ್ಷ ವರ್ಷಗಳ ಹಿಂದಿನ ಮೂಳೆ ಸಿಕ್ಕರೆ ಅದರಲ್ಲೂ ಆಗಿನ ಜೀವಿಯ ಲಕ್ಷಣಗಳನ್ನು ಪಟ್ಟಿ ಮಾಡ­ಬಹುದು.ಇಡೀ ಜಗತ್ತಿನಲ್ಲಿ ಒಂದು ಜೀವಿಯ ಡಿಎನ್‌ಎ ಇದ್ದ ಹಾಗೆ ಇನ್ನೊಂದು ಜೀವಿಯದು ಇರಲು ಸಾಧ್ಯವಿಲ್ಲ. ಏಕೆಂದರೆ ಪ್ರತಿ ಡಿಎನ್‌ಎ ತಿರುಪಣಿ ಏಣಿಯ ಪಾವಟಿಗೆಗಳೂ ಎ-–ಸಿ–-ಟಿ–-ಜಿ ಎಂಬ ನಾಲ್ಕು ಕೆಮಿಕಲ್ ಅಕ್ಷರಗಳಿಂದ ರೂಪಿತವಾಗಿವೆ. ಮನುಷ್ಯನ ಒಂದೊಂದು ಡಿಎನ್‌ಎಯಲ್ಲಿ ೩೨೦ ಕೋಟಿ ಕೆಮಿಕಲ್ ಅಕ್ಷರಗಳ ಮಾಲೆ ಇರುತ್ತದೆ. ಸುದೀರ್ಘ ಗ್ರಂಥವೊಂದರ ಅಕ್ಷರಗಳು, ಪದಗಳು, ವಾಕ್ಯಗಳು, ಪುಟಗಳು, ಅಧ್ಯಾಯಗಳ ಹಾಗೆ ಅವೆಲ್ಲ ಸೇರಿ ಆಯಾ ವ್ಯಕ್ತಿಯ ಚಹರೆಯ ವರ್ಣನೆ ಮಾಡುತ್ತವೆ. ಅದರಲ್ಲಿ ನಮ್ಮದಷ್ಟೇ ಅಲ್ಲ, ತಮ್ಮ ತಾಯಿ ತಂದೆಯರ ಪೂರ್ವಜರ ಹಾಗೂ ಅವರ ಪೂರ್ವಜರ ಲಕ್ಷಣಗಳ ವರ್ಣನೆ ಕೂಡ ಇರುತ್ತದೆ.ಅದರ ಅಸ್ತಿತ್ವ ನಮಗೆ ಗೊತ್ತಾಗಿದ್ದೇ ಒಂದು ರೋಚಕ ಚರಿತ್ರೆ. ೧೯೪೦ರ ದಶಕದಲ್ಲಿ ಎಲ್ಲೆಡೆ ಎರಡನೆ ಮಹಾಯುದ್ಧ ನಡೆಯುತ್ತಿದ್ದಾಗ ನಮ್ಮೊ­ಳಗಿನ ಈ ಬ್ರಹ್ಮಾಂಡದ ಸುಳಿವು ಕೆಲವರಿಗೆ ಸಿಕ್ಕಿತ್ತು. ವರ್ಣತಂತು ಪತ್ತೆಯಾಯಿತು. ಒಂದೆಡೆ ಇಡೀ ಭೂಮಂಡಲವನ್ನು ಸುಟ್ಟು ಹಾಕಬಲ್ಲ ಪರ­ಮಾಣು ಬಾಂಬ್ ತಯಾರಿಸಲು ತೀವ್ರ ಪೈಪೋ­ಟಿಯ ಸಿದ್ಧತೆ ನಡೆದಾಗ ಇನ್ನೊಂದೆಡೆ ಜೀವಿ­ಯೊಳಗಿನ ಡಿಎನ್‌ಎ ರಚನೆ ಹೇಗಿದೆ ಎಂಬುದನ್ನು ಪತ್ತೆ ಹಚ್ಚಲು ಅಮೆರಿಕ ಮತ್ತು ಯುರೋಪ್‌­ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಇಂಗ್ಲಂಡ್‌ನ ನಾಲ್ಕು ಜನರ ತಂಡಕ್ಕೆ ಯಶಸ್ಸು ಸಿಕ್ಕಿತು. ಮಾರಿಸ್ ವಿಲ್ಕಿನ್ಸ್, ಫ್ರಾನ್ಸಿಸ್ ಕ್ರಿಕ್, ಜೇಮ್ಸ್ ವ್ಯಾಟ್ಸನ್ ಜೊತೆಗೆ ರೊಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳೆಯ ಒಟ್ಟೂ ಪ್ರಯತ್ನ ಅದಾಗಿತ್ತು.ತಮಾಷೆ ಎಂದರೆ ಅವರು ಎಂದೂ ಒಗ್ಗಟ್ಟಾಗಿ ಕೆಲಸ ಮಾಡಲಿಲ್ಲ. ತಂತಮ್ಮೊಳಗೆ ಜಗಳವಾಡುತ್ತಿದ್ದರು. ಅಷ್ಟೇಕೆ, ಅವರು ಜೀವ­ಕೋಶ­ಗಳ ಅಧ್ಯಯನದಲ್ಲಿ ಹೊಸಬರಾಗಿದ್ದರು. ರೊಸಾಲಿಂಡ್ ಪಾಪ, ಹಗಲು ರಾತ್ರಿ ಜೀವಕೋಶ­ಗಳ ಮೇಲೆ ಎಕ್ಸ್ ಕಿರಣಗಳನ್ನು ಹಾಯಿಸುತ್ತ ಚಿತ್ರ ತೆಗೆಯುತ್ತಿದ್ದಳು. ಆಕೆ ತೆಗೆದ ಚಿತ್ರಗಳನ್ನು ಇವರು ವಿಶ್ಲೇಷಣೆ ಮಾಡಿ, ಡಿಎನ್‌ಎಯ ನಿಜವಾದ ಸ್ವರೂಪ ಹೀಗಿದ್ದೀತು, ಹಾಗಿದ್ದೀತು ಎಂದು ತರ್ಕಿ­ಸುತ್ತಿದ್ದರು. ಕ್ರಿಕ್ ಮತ್ತು ವ್ಯಾಟ್ಸನ್ ಕೊನೆಗೂ ೧೯೫೩ರಲ್ಲಿ ಒಂದಿಷ್ಟು ಕಬ್ಬಿಣದ ಪಟ್ಟಿಗಳನ್ನು ತಿರುಪಣೆ ಪಾವಟಿಗೆಯ ಹಾಗೆ ಮೊಳೆ ಹೊಡೆದು ಜೋಡಿಸಿ ‘ಡಿಎನ್‌ಎ ಹೀಗೇ ಇದೆ’ ಎಂದು ಘೋಷಿಸಿದರು. ಜಗತ್ತು ನಿಬ್ಬೆರಗಾಯಿತು.ಅದಾಗಿ ಹತ್ತು ವರ್ಷಗಳ ನಂತರ ಆ ನಾಲ್ವರಿಗೆ ನೊಬೆಲ್ ಘೋಷಣೆ ಆಗಬೇಕಿತ್ತು. ಆದರೆ ಬಹು­ಮುಖ್ಯ ಕೆಲಸ ಮಾಡಿದ್ದ ಮಹಿಳೆ ರೊಸಾಲಿಂಡ್ ಎಕ್ಸ್ ರೇ ಯಂತ್ರದ ಬಳಿ ಜಾಸ್ತಿ ಸಮಯ ಕಳೆದಿ­ದ್ದರಿಂದ ತನ್ನ ೩೭ನೇ ವರ್ಷದಲ್ಲಿ ತೀರಿಕೊಂಡಳು. ಅವಳು ತೆಗೆದ ಎಕ್ಸ್ ರೇ ಚಿತ್ರಗಳನ್ನು ಕದ್ದು ಓದಿ ಡಿಎನ್‌ಎ ಲಕ್ಷಣಗಳನ್ನು ಊಹಿಸಿದ ಇತರ ಮೂವ­ರಿಗೆ ಪ್ರಶಸ್ತಿ ಸಿಕ್ಕಿತು. ವ್ಯಾಟ್ಸನ್ ಚುರುಕು ಬುದ್ಧಿ ಅಲ್ಲಿಯೂ ಕೊಂಕಾಗಿಯೇ ಇತ್ತು. ಆತ ತನ್ನ ‘ಡಬಲ್ ಹೆಲಿಕ್ಸ್’ ಹೆಸರಿನ ಆತ್ಮಕತೆಯಲ್ಲಿ ರೊಸಾಲಿಂಡ್ ಬಗ್ಗೆ ಒಳ್ಳೆಯ ಮಾತನ್ನು ಬರೆಯ­ಲಿಲ್ಲ. ಅವಳು ತನ್ನ ಎಕ್ಸ್ ರೇ ಚಿತ್ರಗಳನ್ನು ಗುಟ್ಟಾ­ಗಿಡುತ್ತಿದ್ದಳು. ನೋಡಲು ಚೆನ್ನಾಗಿದ್ದರೂ ಉಡು­ಪಿನ ಬಗ್ಗೆ ಕಾಳಜಿ ಇಲ್ಲದ ದಡ್ಡಿ ಎಂದೆಲ್ಲ ಗೇಲಿ ಮಾಡಿದ. ಡಿಎನ್‌ಎಯ ಅಸಲೀ ರಹಸ್ಯ ಏನು ಗೊತ್ತೆ? ಅದರ ರಹಸ್ಯವನ್ನು ಬಿಡಿಸಿದಷ್ಟೂ ಅದು ತನ್ನಲ್ಲಿ ಇನ್ನಷ್ಟು ರಹಸ್ಯಗಳಿವೆ ಎಂಬುದನ್ನು ತೋರಿಸು­ತ್ತಿದೆ. ಉದ್ದನ್ನ ರೇಲ್ವೆ ಹಳಿಯಲ್ಲಿ ಮಧ್ಯೆ ಮಧ್ಯೆ ನಿಲ್ದಾಣಗಳಿರುವ ಹಾಗೆ ಮಾನವ ಡಿಎನ್‌ಎಯ ೩೨೦ ಕೋಟಿ ಅಡ್ಡಪಟ್ಟಿಗಳಲ್ಲಿ ಶೇ ೩ರಷ್ಟು ಮಾತ್ರ ನಿರ್ದಿಷ್ಟ ಸ್ವರೂಪದ, ನಿರ್ದಿಷ್ಟ ಕೆಲಸ ಮಾಡುವ ಗುಣಾಣು (ಜೀನ್)ಗಳೆನಿಸಿವೆ. ಇನ್ನುಳಿದ ೯೭ ಭಾಗಗಳ ಅಡ್ಡಪಟ್ಟಿಗಳು ಏಕಿವೆ ಎಂಬುದೇ ಗೊತ್ತಿಲ್ಲ. ಅದಕ್ಕೆ ‘ಜಂಕ್ ಡಿಎನ್‌ಎ’ ಅಂದರೆ ನಿರುಪಯುಕ್ತ ಸರಪಳಿ ಎಂತಲೇ ಕರೆ­ಯುತ್ತಾರೆ. ಯಾತಕ್ಕೂ ಪ್ರಯೋಜನ ಇಲ್ಲದ ಇವನ್ನೇ ವಿಧಿ ವಿಜ್ಞಾನಿಗಳು ಅಪರಾಧ ಪತ್ತೆಗೆ ಬಳಸುತ್ತಾರೆ.ಮಹಿಳೆಯ ಬಟ್ಟೆಗೆ ಅಂಟಿಕೊಂಡ ರೋಮವನ್ನೊ ವೀರ್ಯಾಣುವನ್ನೊ ತೆಗೆದು ಅದ­ರಲ್ಲಿರುವ ಡಿಎನ್‌ಎಯಲ್ಲಿನ ನಿರುಪಯುಕ್ತ ಪಟ್ಟಿಯ ಆಚೆ ಈಚೆ ಇರುವ ಗುಣಾಣು ನಿಲ್ದಾಣ ಹೇಗಿದೆ ಎಂದು ನೋಡುತ್ತಾರೆ. ಅವೆರಡರ ನಡು­ವಣ ಖಾಲಿ ಪಟ್ಟಿಯ ಉದ್ದ ಎಷ್ಟಿದೆ ನೋಡು­ತ್ತಾರೆ. ಆಪಾದಿತನ ಡಿಎನ್‌ಎಯಲ್ಲಿ ಅಂಥ ಲಕ್ಷಣಗಳು ಕಾಣದಿದ್ದರೆ ಆತ ನಿರ್ದೋಷಿ. ಕಂಡಿದ್ದೇ ಆದರೆ ಆತನ ಮಾನ ಹರಾಜು. ಇದುವರೆಗೆ ಗಳಿಸಿದ ಪ್ರತಿಷ್ಠೆಯೂ ಹರಾಜು. ಡಿಎನ್‌ಎಯ ಉದ್ದೇಶ ಅದು ಅಲ್ಲವೇ ಅಲ್ಲ! ಆದರೂ ಇವೊತ್ತಿನ ಸಂದರ್ಭದಲ್ಲಿ ಡಿಎನ್‌ಎಯ ಸ್ವರೂಪವನ್ನು ಜಗತ್ತಿಗೆ ತೋರಿಸಿಕೊಟ್ಟವನ ಮಾನ ಸಮ್ಮಾನಗಳೆಲ್ಲ ಮತ್ತೊಮ್ಮೆ ಹರಾಜಿಗೆ ಬಂದಿವೆ. ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.