ಗುರುವಾರ , ಜೂನ್ 17, 2021
22 °C

ಸಾಧನೆಯ ಗರ್ವ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಪಂಚತಂತ್ರದ ಒಂದು ಪುಟ್ಟ ಕಥೆ

ಒಂದು ದಿನ ಬೇಸಿಗೆಯ ಕಾಲದಲ್ಲಿ ಕಾಡಿನ ರಾಜ ಸಿಂಹ ಭರ್ಜರಿ ಬೇಟೆ­ಯಾಡಿ, ಹೊಟ್ಟೆ ತುಂಬ ತಿಂದು ಮರದ ನೆರಳಿನಲ್ಲಿ ಮಲಗಿತ್ತು. ಗಾಢನಿದ್ರೆ­ಯಲ್ಲಿದ್ದ ಸಿಂಹಕ್ಕೆ ಥಟ್ಟನೆ ಎಚ್ಚರವಾ­ಯಿತು. ಇದಕ್ಕೆ ಕಾರಣ ಅದರ ಕಿವಿಯ ಹತ್ತಿರ ಗುಂಯ್‍ಗುಡುತ್ತಿದ್ದ ಒಂದು ನೊಣ.ಚೆನ್ನಾಗಿ ನಿದ್ರೆ ಮಾಡಬೇಕೆಂದಿದ್ದ ಸಿಂಹಕ್ಕೆ ಭಾರಿ ಕೋಪ ಬಂತು. ನೊಣವನ್ನು ಓಡಿಸಲು ತನ್ನ ಕೇಸರವನ್ನು ಪಟ­ಪಟನೇ ಝಾಡಿಸಿತು. ನೊಣ ಸರ್ರನೇ ಹಾರಿ ಗರಗರನೇ ಸುತ್ತಿ ಬಂದು ಸಿಂಹವನ್ನು ರೇಗಿಸುವಂತೆ ಅದರ ಮೂಗಿನ ಮೇಲೆಯೇ ಕುಳಿತುಕೊಂಡಿತು. ಅದರ ಉದ್ಧಟತ­ನವನ್ನು ಕಂಡು ಸಿಂಹಕ್ಕೆ ಇನ್ನೂ ಸಿಟ್ಟು ಹೆಚ್ಚಾಯಿತು. ತನ್ನ ಬಲಗಾ­ಲನ್ನೆತ್ತಿ ಫಟ್ಟನೇ ನೊಣಕ್ಕೆ ಹೊಡೆಯಲು ಪ್ರಯತ್ನಿಸಿತು.ಆದರೆ ಜಾಣ ನೊಣ ಅಲ್ಲಿಂದ ಪಾರಾಗಿ ಮೇಲೆ ಹಾರಿದಾಗ ಸಿಂಹದ ಕಾಲು ಅದರ ಮುಖಕ್ಕೇ ಅಪ್ಪಳಿಸಿ ಭಯಂಕರ ನೋವಾಯಿತು, ಕಣ್ಣಲ್ಲಿ ನೀರು ಬಂದಿತು. ನೊಣ ಗಹಗಹಿಸಿ ನಕ್ಕಿತು, ‘ನೀನೆಂಥ ರಾಜನಯ್ಯ? ನನ್ನಂಥ ಸಣ್ಣ ಪ್ರಾಣಿ­ಯನ್ನು ಹಿಡಿಯಲೂ ಆಗುವುದಿಲ್ಲ’ ಎಂದಿತು. ಈಗ ಸಿಂಹ ಎದ್ದು ನಿಂತು ಹೋರಾಟಕ್ಕೇ ಮುಂದಾಯಿತು.ನೊಣಕ್ಕೂ ಈ ಯುದ್ಧ ಇಷ್ಟವೇ. ಸುಯ್ಯೆಂದು ಸಿಂಹದ ತಲೆಯನ್ನು ಸುತ್ತುತ್ತ, ಕ್ಷಣಮಾತ್ರದಲ್ಲಿ ಅದರ ಕಣ್ಣಿನ ಹತ್ತಿರ ಬಂದು, ಮತ್ತೆ ಅದರ ಕಿವಿಯಲ್ಲಿ ಸೇರಿ, ಹೊರನುಗ್ಗಿ ತೀರ ಬಾಯಿಯ ಹತ್ತಿರವೇ ಬಂದಿತು. ಅದನ್ನು ಕಚ್ಚಿ ಬಿಡಬೇಕೆಂದು ಸಿಂಹ ಬಾಯ್ತೆರೆದು ಮುನ್ನುಗ್ಗಿದಾಗ, ಮುಂದಿದ್ದ ಮರಕ್ಕೆ ಮುಖ ಜೋರಾಗಿ ಬಡಿದು ಕುಸಿತು ಬಿತ್ತು.  ಕೆಳಗೆ ಬಿದ್ದ ಸಿಂಹವನ್ನು ನೋಡಿ ನೊಣಕ್ಕೆ ಭಾರಿ ಮಜವಾಯಿತು.  ‘ಹೇ, ಹೇ, ಹೇ, ಎಂಥ ಮಜ ಇದು! ಕಾಡಿನ ರಾಜ ನೆಲಕ್ಕೆ ಬಿದ್ದು ಹೊರಳಾಡುತ್ತಿ­ದ್ದಾನೆ.ಒಂದು ನೊಣದಿಂದ ಪಾರಾಗು­ವುದು ಸಾಧ್ಯವಿಲ್ಲ. ನನ್ನ ಶಕ್ತಿ ಎಂಥದ್ದು ತಿಳಿಯಿತೇ? ಎಷ್ಟು ದೊಡ್ಡದು ನಿನ್ನ ದೇಹ? ಏನು ಶಕ್ತಿ ನಿನ್ನ ಕಾಲಿನಲ್ಲಿ? ಎಷ್ಟು ಅಬ್ಬರದ ಘರ್ಜನೆ ನಿನ್ನದು? ನಿನ್ನನ್ನು ಕಂಡರೆ ದೊಡ್ಡ ದೊಡ್ಡ ಪ್ರಾಣಿಗಳು ಹೆದರುತ್ತಾವಂತೆ. ಅವೆಷ್ಟು ಹೇಡಿಗಳಿರಬೇಕು? ಛೇ, ನಿನ್ನ ಶಕ್ತಿ ನನ್ನ ಪುಟ್ಟ ರೆಕ್ಕೆ­ಗಳಿಗೂ ಸಮನಲ್ಲ. ನಿನ್ನಂಥ ಹತ್ತಾರು ಸಿಂಹಗಳನ್ನು ಕ್ಷಣದಲ್ಲಿ ಸೋಲಿಸಬಲ್ಲೆ ನಾನು’ ಹೀಗೆಯೇ ಅದರ  ಬಡಾಯಿ ನಡೆದಿತ್ತು.

ಇದರ ಚೆಲ್ಲಾಟ­ವನ್ನು ಮರದ ಮೇಲಿಂದ ಗಮನಿಸುತ್ತಿದ್ದ ಗಿಳಿಯೊಂದು ನೊಣದ ಹತ್ತಿರ ಹಾರಿ ಬಂದು, ‘ಗೆಳೆಯಾ, ನಿನ್ನ ಶಕ್ತಿ ನಿಜ­ವಾಗಿಯೂ ಅದ್ಭುತವೇ. ಆದರೆ, ನನ್ನೊಂದಿಗೆ ಈ ಮರದ ಕೆಳಗಿನ ಕೊಂಬೆ­ಯವರೆಗೆ ಬರು­ತ್ತೀಯಾ?” ಎಂದು ಕೇಳಿತು. ಈಗ ತಾನೇ ಸಿಂಹವನ್ನು ಸೋಲಿಸಿದ ಅಮಲಿನಲ್ಲಿದ್ದ ನೊಣ ಅದೇ ಅಹಂಕಾ­ರದಿಂದ ಗಿಳಿಯೊಂದಿಗೆ ಹಾರಿತು, ಅದನ್ನೇ ಹಿಂಬಾಲಿಸಿತು.ಗಿಳಿ ಮೇಲೆ ಹಾರುತ್ತ, ಹಾರುತ್ತ ಸರಕ್ಕನೇ ಬದಿಗೆ ಸರಿಯಿತು. ಅದರ ಹಿಂದೆಯೇ ಸಾಗುತ್ತಿದ್ದ ನೊಣ ಗಮನಿಸದೆ ಮುನ್ನು­ಗ್ಗಿದಾಗ ಅಲ್ಲಿ ಹರಡಿಕೊಂಡಿದ್ದ ಜೇಡರ­ಬಲೆಗೆ ಸಿಕ್ಕಿಕೊಂಡಿತು. ಏನೆಲ್ಲ ಒದ್ದಾಡಿದರೂ ಪಾರಾಗುವುದು ಸಾಧ್ಯ­ವಾಗಲಿಲ್ಲ. ಅಷ್ಟರಲ್ಲಿ ಜೇಡರ ಹುಳ ತನ್ನ ಬಲೆಯನ್ನು ಬಿಗಿದು ಇದರ ಪ್ರಾಣವನ್ನು ಹೀರ ತೊಡಗಿತು.ಆಗ ಗಿಳಿ ಹೇಳಿತು. ‘ಅಯ್ಯಾ, ಕಾಡಿನರಾಜ ಸಿಂಹವನ್ನು ಸೋಲಿಸಿದೆ ಎಂದು ಬೀಗುತ್ತಿದ್ದ ನೀನು ಪುಟ್ಟ ಬಲೆಯಿಂದ, ಜೇಡರ ಹುಳದಿಂದ ಪಾರಾಗ­ಲಾರೆ. ಇನ್ನು ನಿನ್ನ ಅಹಂಕಾರಕ್ಕೆ ಅವಕಾಶವಿಲ್ಲ’ ಹೀಗೆ ಹೇಳಿ ಹಾರಿ ಹೋಯಿತು. ಯಾವುದೋ ಪುಣ್ಯ­ವಿಶೇಷ­ದಿಂದ ಕೆಲವೊಮ್ಮೆ ದೊಡ್ಡ ಸಾಧನೆಯಾಗುತ್ತವೆ, ದೊಡ್ಡವರ ಸಾಧನೆ ಸರಿಗಟ್ಟುವ ಅವಕಾಶಗಳು ಬರುತ್ತವೆ.ಆ ಸಾಧನೆ ನಮ್ಮ ತಲೆ ತಿರುಗಿಸಬಾರದು. ಯಾವಾಗಲೂ ಅದೇ ಮಟ್ಟದ ಸಾಧನೆ ಮಾಡಲು ಸಾಧ್ಯ­ವಾಗದೇ ಹೋಗಬಹುದು. ಹಿಂದಿನ ಸಾಧನೆಯನ್ನೇ ತಲೆಯಲ್ಲಿಟ್ಟು­ಕೊಂಡು ಗರ್ವಪಡುತ್ತಿದ್ದರೆ ಒಂದಲ್ಲ ಒಂದು ದಿನ ತೀರ ಸಣ್ಣವರಿಂದಲೇ ಸೋಲು ಕಂಡು ಮುಖಭಂಗಪಡುವಂತಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರಾ­ಗುತ್ತೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.