ಮಂಗಳವಾರ, ಮೇ 24, 2022
23 °C

ಹಡಗು ಕಟ್ಟುವ ದಾರ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನನ್ನಕ್ಕ, ಭಾವ ಮದ್ರಾಸಿನಲ್ಲಿದ್ದಾಗ ನಾನು ಆಗಾಗ ಹೋಗಿ ಬರುತ್ತಿದ್ದೆ. ಒಂದು ಬಾರಿ ಹೀಗೆ ಹೋದಾಗ ಒಬ್ಬನೇ ಮದ್ರಾಸಿನ ಬಂದರನ್ನು ನೋಡಿ ಬರಲು ಹೋದೆ. ಅದೊಂದು ಸಂಪೂರ್ಣ ಬೇರೆ ಪ್ರಪಂಚವೇ. ಅಲ್ಲಿ ಬಂದು ತಂಗುವ ಭಾರೀ ಭಾರೀ ಹಡಗುಗಳನ್ನು ನೋಡುವುದೇ ಸೊಗಸು.

 

ಇನ್ನೊಂದೆಡೆಗೆ ವಸ್ತು ಸಾಗಣಿಕೆ ಹಡಗುಗಳಲ್ಲಿ ಭಾರೀ ಗಾತ್ರದ ಸರಕುಗಳನ್ನು ತುಂಬುವುದನ್ನು ನೋಡಿದಾಗ ಅದೆಷ್ಟು ಪರಿಶ್ರಮದ ಅಪಾರ ವೈಜ್ಞಾನಿಕವಾದ ಕ್ರಿಯೆ ಎಂಬುದು ಅರ್ಥವಾಗುತ್ತದೆ.ಯಾವ ತೂಕದ ಪೆಟ್ಟಿಗೆಯನ್ನು ಎಲ್ಲಿಟ್ಟರೆ ಸರಿ ಎಂಬುದನ್ನು ಸರಿಯಾಗಿ ಯೋಚಿಸಲಾಗುತ್ತದೆ. ಆದರೆ ಅದನ್ನು ಮಾಡುವವರು ಬಹುಶಃ ಶಾಲೆಯನ್ನು ಕಾಣದ ಅನಕ್ಷರಸ್ಥ ಕೂಲಿ ಮಾಡುವ ಜನರು. ಅವರು ನಿರಾಯಾಸವಾಗಿ ಅನುಭವದಿಂದ ಮಾಡುವ ಕೆಲಸ ಭಾರೀ ಡಿಗ್ರಿಗಳನ್ನು ಪಡೆದ ಎಂಜಿನಿಯರುಗಳನ್ನು ಬೆರಗುಗೊಳಿಸಬಲ್ಲದು. ಈ ಸರಕು ಸಾಗಾಣಿಕೆ ಹಡಗುಗಳು ಬಂದರಕ್ಕೆ ಬಂದಾಗ ಅವನ್ನು ಎಳೆದು ಗಟ್ಟಿಯಾಗಿ ಕಬ್ಬಿಣದ ಕಂಬಗಳಿಗೆ ಕಟ್ಟುತ್ತಾರೆ. ಅದು ಬಹಳ ಭದ್ರವಾಗಿರಬೇಕು. ಇಲ್ಲವಾದರೆ ಸಾಮಾನು ಇಳಿಸುವಾಗ ಅಥವಾ ಎತ್ತರದ ತೆರೆ ಅಪ್ಪಳಿಸಿದಾಗ ಹಡಗಿನ ಬದಿಗಳು ಕಾಂಕ್ರೀಟಿನ ಗೋಡೆಗಳಿಗೆ ಬಡಿದು ಸೀಳಿ ಹೋಗಬಹುದು.ಹೀಗೆ ಕಟ್ಟಲು ದಪ್ಪದಪ್ಪವಾದ ನೈಲಾನ್ ಹಗ್ಗಗಳಿವೆ. ಒಂದೊಂದು ನಮ್ಮ ರಟ್ಟೆಗಳಿಗಿಂತ ದಪ್ಪವಾದವು. ಅವುಗಳನ್ನು ಎತ್ತುವುದೇ ಅಸಾಧ್ಯ. ಅವುಗಳನ್ನು ಹಡಗಿಗೆ ಹೇಗೆ ಕಟ್ಟುತ್ತಾರೆಂಬುದನ್ನು ನೋಡಲು ಕಾಯ್ದು ಕುಳಿತೆ. ಮಧ್ಯಾಹ್ನ ಒಂದು ಹಡಗು ಬಂದಿತು. ಅದು ತೀರಕ್ಕೆ ಹತ್ತಿರ ಬರುತ್ತಿದ್ದಂತೆ ಅದರ ಮುಂಭಾಗದ ತುದಿಯ ಮೇಲೆ ಇಬ್ಬರು ಕಾಣಿಸಿಕೊಂಡರು. ತುಂಬ ಹತ್ತಿರಕ್ಕೆ ಬಂದಾಗ ಅವರಲ್ಲೊಬ್ಬ ಕೈಯಲ್ಲಿ ಹಿಡಿದಿದ್ದ ಬಿರುಸಾದ ಚೆಂಡನ್ನು ಬೀಸಿ ತೀರದ ಮೇಲೆ ಎಸೆದ. ತೀರದಲ್ಲಿದ್ದವರಲ್ಲಿ ಒಬ್ಬ ಹೋಗಿ ಆ ಚೆಂಡನ್ನು ಹಿಡಿದು ಎಳೆದ. ಅದಕ್ಕೊಂದು ನೂಲು.ನಿಧಾನಕ್ಕೆ ನೂಲನ್ನು ಎಳೆದಾಗ ಅವರ ಹಿಂದೆ ಒಂದು ಸ್ವಲ್ಪ ಹೆಚ್ಚು ದಪ್ಪನಾದ ನೈಲಾನ್ ಹಗ್ಗ ಬಂದಿತು. ಅದನ್ನು ಪೂರ್ತಿ ಎಳೆದಾಗ ಅದರ ಹಿಂದೆ ಇನ್ನೂ ದಪ್ಪನಾದ ಹಗ್ಗ! ಆಗ ನಾಲ್ಕಾರು ಜನ ಬಂದು ಅದನ್ನು ಎಳೆಯತೊಡಗಿದರು. ಅದರ ಹಿಂದೆ ಈ ರಟ್ಟೆ ಗಾತ್ರದ ಹಗ್ಗ ಬಂತು. ಅದನ್ನು ಹತ್ತಾರು ಜನ ಜೋರಾಗಿ ಎಳೆದಾಗ ಹಡಗು ನಿಧಾನಕ್ಕೆ ತೀರಕ್ಕೆ ಬಂದು ಅಂಟಿಕೊಂಡಿತು. ಆಗ ನನಗೆ ಅರ್ಥವಾಯಿತು.ಇಷ್ಟು ದಪ್ಪವಾದ ಹಗ್ಗ ತೀರಕ್ಕೆ ಹೇಗೆ ಬಂದಿತು ಎಂಬುದು! ಹೀಗೆಯೇ ನಾಲ್ಕಾರು ಕಡೆಗೆ ಬಿಗಿದು ಕಟ್ಟಿದ ಮೇಲೆ ಸಾಮಾನುಗಳನ್ನು ನಿರಾತಂಕವಾಗಿ ಕೆಳಗೆ ಇಳಿಸಲು ಪ್ರಾರಂಭಿಸಿದರು. ಅಷ್ಟು ದೊಡ್ಡ ಹಡಗನ್ನು ತೀರಕ್ಕೆ ಕಟ್ಟಲು ಸಹಾಯವಾದದ್ದು ಯಾವುದು? ಹಡಗಿನ ನಾಯಕನ ಚಾಣಾಕ್ಷತನವೇ? ಬಂದರಿನ ಕೂಲಿಯಾಳುಗಳ ಶಕ್ತಿಯೇ? ಹಡಗಿನ ಭದ್ರ ರಚನೆಯೇ? ತೀರದ ಮೇಲಿದ್ದ ಕಬ್ಬಿಣದ ಕಂಬಗಳ ಬಲವೇ? ನನಗನ್ನಿಸಿದಂತೆ ಇವೆಲ್ಲವೂ ಮುಖ್ಯವೇ.

 

ಆದರೆ ಹಡಗಿನಿಂದ ತೀರಕ್ಕೆ ಹಗ್ಗವನ್ನು ತಲುಪಿಸಲು ಮೊದಲು ಕಾರಣವಾದದ್ದು ಚೆಂಡು ಮತ್ತು ಅದಕ್ಕೆ ಜೋಡಿಸಿದ ತೆಳುವಾದ ದಾರ. ಆ ದಾರವನ್ನು ಹಿಂಬಾಲಿಸಿ ತಾನೇ ದಪ್ಪನಾದ ಹಗ್ಗ ಬಂದದ್ದು? ಅಷ್ಟು ದಪ್ಪನಾದ ಹಗ್ಗವನ್ನು ಅಷ್ಟು ದೂರ ಹಡಗಿನಿಂದ ಎಸೆಯುವುದು ಸಾಧ್ಯವಿತ್ತೇ? ಆಗ ನನಗೆ ಥಟ್ಟನೇ ಹೊಳೆಯಿತು. ನಮ್ಮ ಸಂಸಾರವೂ ಹಡಗೇ ಅಲ್ಲವೇ? ನಮ್ಮ ಬದುಕು ಭದ್ರವಾಗಿ ತೀರದಲ್ಲಿ ನೆಲೆಸಬೇಕಾದರೆ ಅದನ್ನು ಗಟ್ಟಿಯಾಗಿ ಕಟ್ಟಬೇಕು. ಆಗ ಹಗ್ಗದಂಥ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಬಹುದೇನೋ? ಆದರೆ ಸಂಸಾರ ಸುಖಮಯವಾಗಬೇಕಾದರೆ ಆ ಸಣ್ಣ ನೂಲಿನಂಥ ಪುಟ್ಟ ಪುಟ್ಟ ಕ್ರಿಯೆಗಳು ಮುಖ್ಯ.ಇವೇ ಆ ದಪ್ಪ ಹಗ್ಗವನ್ನು ಹತ್ತಿರಕ್ಕೆ ತರುವಂಥವುಗಳು. ಪರಸ್ಪರ ವಿಶ್ವಾಸ, ಸಂಪೂರ್ಣ ನಂಬಿಕೆ, ಆಗಾಗ ಬೆನ್ನು ತಟ್ಟಿ ಪ್ರೋತ್ಸಾಹ, ನೋವಿನಲ್ಲಿ ಕೈಹಿಡಿದು ಕಣ್ಣೊರೆಸಿ ಹೇಳುವ ಒಂದು ಮಾತಿನ ಸಾಂತ್ವನ, ನಿನ್ನೊಡನೆ ನಾನಿದ್ದೇನೆಂದು ತೋರುವ ಕಣ್ಣ ನೋಟ ಇವಿಷ್ಟು ಸಾಲವೇ ಸಂಸಾರದ ಹಡಗನ್ನು ಭದ್ರವಾಗಿ ಕಟ್ಟಲು? ವಜ್ರದ ಹಾರ, ಬೆಲೆಬಾಳುವ ಕಾರಿನಂಥ ಬಲಿಷ್ಠ ಹಗ್ಗಗಳಿಗಿಂತ ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ಈ ಸಂವೇದನೆಗಳು ಭದ್ರತೆಯನ್ನು ತರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.