ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು: ಕ್ಯಾಮೆರಾಕಣ್ಣಿನ ಸುಂದರ ದೃಶ್ಯ

Last Updated 1 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಅ ಜಮಾಸು ಒಂದು ತಿಂಗಳ ಹಿಂದಿನ ಭಾನುವಾರದ ಬೆಳಗು, ಬೆಂಗಳೂರಿನ ಲಾಲ್‌ಭಾಗದಲ್ಲಿರುವ ಕೆರೆಯ ಬಳಿ ನಿಂತಿದ್ದೆ. ತೆಳ್ಳಗಿನ ಮಂಜಿನ ಪದರವನ್ನು ಹೊದ್ದ ಕೆರೆಯಲ್ಲಿ ಕಪ್ಪುರೆಕ್ಕೆಯ ಉದ್ದ ಕೊಕ್ಕಿನ ಹಕ್ಕಿಗಳು ಈಜಾಡುವುದನ್ನೂ ಅವು ಕೆರೆಯೊಳಗಿನ ಮೀನು ಹಿಡಿಯುವುದನ್ನೂ ನಿರುಕಿಸುತ್ತ ನಿಂತಿದ್ದೆ. ಅಲ್ಲೇ ಪಕ್ಕದಲ್ಲಿ ಹಂಸಗಳು ತೇಲುತ್ತಿದ್ದರೂ ನನ್ನ ದೃಷ್ಟಿ ಕೆರೆಯಲ್ಲಿ ದೂರದಲ್ಲಿ ಈಜಾಡುತ್ತಿರುವ ಹಕ್ಕಿಗಳ ಗುಂಪೊಂದರ ಮೇಲೆ ನೆಟ್ಟಿತ್ತು. ಕೈಯಲಿರುವ ಕ್ಯಾಮೆರಾವನ್ನು ಅಲ್ಲಿಯ ಬೆಳಕಿಗೆ ಹೊಂದಿಸುವುದರೊಳಗೆ ಹಕ್ಕಿಗಳು ನೀರ ಬಿಟ್ಟು ತುಸು ಮೇಲೆದ್ದು ನೀರಿನ ಮೇಲ್ಮೈ ಮೇಲೆ ಹಾರಲು ಶುರುಮಾಡಿದವು. ಹಕ್ಕಿಗಳ ರೆಕ್ಕೆ ನೀರಿಗೆ ತಾಗಿ ಅಲೆಗಳನ್ನು ಉಂಟುಮಾಡುತ್ತಿರುವುದನ್ನು ನೋಡುತ್ತ ಅವು ಇನ್ನೆಲ್ಲಿ ನೀರಿಗೆ ಇಳಿಯಬಹುದು ಎಂದು ಯೋಚಿಸುತ್ತಿರುವಾಗಲೇ ‘ಅಲ್ನೋಡಿ ಅಲ್ಲಿ ಹೋಗಿ ಕೂತವು ಅವು’ ಎಂದ ದನಿಯೊಂದು ಕೇಳಿತು. ತಿರುಗಿ ನೋಡಿದರೆ ಬೂದುಬಣ್ಣದ ಪ್ಯಾಂಟು, ಅರೆಗೆಂಪು ಬಣ್ಣದ ಸ್ವೆಟರ್ ತೊಟ್ಟು, ತಲೆಗೊಂದು ಕ್ಯಾಪು ಹಾಕಿಕೊಂಡಿದ್ದ ಸುಮಾರು ಎಪ್ಪತ್ತೈದರಿಂದ ಎಂಬತ್ತರ ಹರೆಯದ ವ್ಯಕ್ತಿಯೊಬ್ಬರು ಉದ್ದನೆಯ ಲೆನ್ಸಿನ ಕ್ಯಾಮೆರಾವನ್ನು ಹಿಡಿದು ನಿಂತಿದ್ದರು. ಮುಗುಳ್ನಕ್ಕೆ ನಾನು. ‘ನೀವೂ ಹಕ್ಕಿಯನ್ನು ಹಿಡಿಯಲು ಬಂದಿದ್ದಿರೋ? ಕ್ಯಾಮೆರಾದಲ್ಲಿ...’ ಎಂದು ಕೇಳಿದೆ. ‘ಇಷ್ಟುದ್ದದ್ದ ಕ್ಯಾಮೆರ ಹಿಡಿದುಕೊಂಡು ಫೋಕಸ್ ಮಾಡುವಾಗ ಕೈ ನಡುಗುತ್ತದೆ, ಆದರೂ ಇದೊಂಥರದ ಸುಖ. ಒಂಥರದ ಧ್ಯಾನಾವಸ್ಥೆ. ವಾರಕ್ಕೊಮ್ಮೆ ಅಲ್ಲಿಲ್ಲಿ ತಿರುಗಾಡಿ ಒಂದಿಷ್ಟು ಫೋಟೊ ತೆಗೆದರೆ ವಾರಪೂರ್ತಿ ಕೆಲಸ ನಮ್ಮಂಥವರಿಗೆ’ ಎಂದರು.

ಹವ್ಯಾಸವು ಒಂದೇ ಆಗಿರುವಾಗ ಸ್ನೇಹಿತರಾಗಲು ಬಹಳ ಸಮಯ ಹಿಡಿಯುವುದಿಲ್ಲ. ಅಲ್ಲೇ ಅನತಿ ದೂರದಲ್ಲಿದ್ದ ಕಲ್ಲ ಬೆಂಚಿನ ಮೇಲೆ ನಾವಿಬ್ಬರೂ ಕೂತು ಹರಟುತ್ತಿರುವಾಗ ತಿಳಿದದ್ದಿಷ್ಟು. ಉತ್ಸಾಹದ ಬುಗ್ಗೆಯಂತಿದ್ದ ಅಜ್ಜ ನಿವೃತ್ತ ಇಂಜಿನಿಯರ್. ಮೂವತ್ತೈದು ನಲವತ್ತು ವರ್ಷಗಳ ಹಿಂದೆಯೇ ಛಾಯಾಗ್ರಹಣದ ಹುಚ್ಚು ಹತ್ತಿಸಿಕೊಂಡವರು. ಕಪ್ಪು-ಬಿಳುಪಿನ ಚಿತ್ರಗಳಿಂದ ಹಿಡಿದು ಬಣ್ಣದ ಚಿತ್ರಗಳನ್ನು ರೋಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಡಾರ್ಕ್ ರೂಮಿನಲ್ಲಿ ಡೆವಲಪ್ ಮಾಡಿದವರು. ಅಮೆರಿಕೆಯಲ್ಲಿರುವ ಮಗಳು ಈಗ ಹೊಸ ಲೆನ್ಸ್ ಕೊಟ್ಟುಕಳುಹಿಸಿದ್ದಾಳೆಂದೂ ಅದನ್ನು ಹಿಡಿದುಕೊಂಡು ಲಾಲ್‌ಬಾಗಿಗೆ ಬಂದಿರುವರೆಂದೂ ಅವರು ಹೇಳಿದರು.

ಅವರ ಹೆಂಡತಿಗೆ ಈ ಹರೆಯದಲ್ಲಿ ಅವರು ಹೀಗೆಲ್ಲ ಓಡಾಡುವುದು ಇಷ್ಟವಿಲ್ಲವಂತೆ. ಲೆನ್ಸ್ ಕಳುಹಿಸಿಕೊಟ್ಟ ಮಗಳಿಗೆ ಅಪ್ಪನಿಗೆ ಮಗಳ ಬೆಂಬಲ ಬೇರೆ ಎಂದು ಬಯ್ಯುತ್ತಿದ್ದಾರಂತೆ. ಕನ್ನಡಕದೊಳಗಿನಿಂದ ನನ್ನ ಕಡೆ ನೋಡುತ್ತ ಅಜ್ಜ ‘ನೋಡಮ್ಮಾ, ಮನೆಯಲ್ಲಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಕ್ಯಾಮೆರಾವನ್ನು ಬಿಟ್ಟು ಎಲ್ಲಾದರೂ ಹೋದೆ ಎಂದಿಟ್ಟುಕೊಳ್ಳಿ. ಅದ್ಯಾರನ್ನೋ ಬಿಟ್ಟು ಬಂದ ಭಾವ. ಎಲ್ಲಿಗೆ ಹೋದರೂ ಈ ಕೋನದಿಂದ ಇದನ್ನು ಸೆರೆಹಿಡಿಯಬೇಕಿತ್ತು, ಆಹಾ! ಆ ಫ್ರೇಮಿನಲ್ಲಿ ಒಂದು ಫೊಟೊ ತೆಗೆದಿದ್ದರೆ... ಛೆ ಕ್ಯಾಮೆರಾವನ್ನು ಬಿಟ್ಟು ಬರಬಾರದಿತ್ತು ಎಂದು ಅನಿಸಲು ಶುರುವಾಗಿಬಿಡುತ್ತದೆ. ಇಲ್ಲಿಯವರೆಗೆ ಆ ಹಕ್ಕಿಗಳ ನೋಡುತ್ತ ಫೊಟೊ ತೆಗೆಯುತ್ತಿದೆ ನೋಡಿ, ಸುತ್ತಲಿನ ಪರಿವೆಯೂ ಇರಲಿಲ್ಲ. ಈ ಫೊಟೊಗ್ರಫಿ ಇದೆಯಲ್ಲ ಅದೊಂದು ಧ್ಯಾನ! ಅದನ್ನು ಇಷ್ಟಪಡುವವರಿಗೆ ಕ್ಯಾಮೆರವೊಂದು ಕೈಯಲಿದ್ದರೆ ಸಾಕು ಧ್ಯಾನಸ್ಥಸ್ಥಿತಿಗೆ ಮನಸ್ಸು ತೆರಳಿಬಿಡುತ್ತದೆ. ಧ್ಯಾನ ಮಾಡುವವರು ಹೇಗೆ ಭ್ರೂಮಧ್ಯದಲ್ಲಿ ದೃಷ್ಟಿಯನ್ನು ನೆಡುತ್ತಾರೋ ಹಾಗೆ ಫೊಟೊ ತೆಗೆಯುವವರು ಒಂದು ಕಣ್ಣನ್ನು ಮುಚ್ಚಿ ’ವ್ಯೂವ್ ಫೈಂಡರ್’ನಲ್ಲಿ ದೃಷ್ಟಿಯನ್ನು ಕೇಂದ್ರಿಕರಿಸುತ್ತಾರೆ. ನಿಧಾನಕ್ಕೆ ವಸ್ತುವಿನತ್ತ ಫೋಕಸ್ ಮಾಡುತ್ತ ತಾವು ಉಸಿರಾಡುವುದನ್ನೇ ಮರೆತಂತಿರುತ್ತಾರೆ. ಆ ಕ್ಷಣಕ್ಕೆ ಅವರು ಫೋಕಸ್ ಮಾಡಿರುವ ಆ ವಸ್ತುವೇ ಅವರ ಪಾಲಿನ ಭಗವಂತ’ ಎಂದರು ನಗುತ್ತ. ‘ಹಕ್ಕಿಗಳು ಮತ್ತೆ ಹಾರಿ ಬಂದವು ನೋಡಿ’ ಎನ್ನುತ್ತ ನಿಧಾನಕ್ಕೆ ಎದ್ದರು.

ನಾನಲ್ಲೇ ಕೂತಿದ್ದೆ, ಅವರು ಹೇಳಿದ ಮಾತುಗಳ ಮೆಲುಕು ಹಾಕುತ್ತ. ಅದೆಷ್ಟು ಸತ್ಯವಿತ್ತು ಆ ಅಜ್ಜ ಹೇಳಿದ ಮಾತುಗಳಲ್ಲಿ! ಒಂದಿಷ್ಟು ವರ್ಷಗಳ ಹಿಂದಿನ ಮಾತಿರಬೇಕು. ನನಗೆ ಫೊಟೊಗ್ರಫಿಯ ಗಂಧಗಾಳಿಯೂ ಗೊತ್ತಿರಲಿಲ್ಲ. ಆದರೆ ಬರವಣಿಗೆಯ ಹುಚ್ಚಿತ್ತು. ನಾನು ಪ್ರತಿನಿತ್ಯ ನಡೆಯುವ ದಾರಿಯ ಆಚೀಚೆ ಬದಿಗೆ ಯಾವ ಮರವಿದೆ? ಯಾರ ಮನೆಯಿದೆ? ಯಾವ ಹೂಗಿಡವಿದೆ? ಯಾವ ಅಂಗಡಿಯಿದೆ? ಊಹೂಂ ಯಾವುದನ್ನೂ ಗಮನಿಸುತ್ತಿರಲಿಲ್ಲ. ನನ್ನದೇ ಲೋಕದಲ್ಲಿ ಯಾವುದೋ ಒಂದು ಕವನದ ಸಾಲುಗಳ ಹೆಣೆಯುತ್ತಲೋ ಅಥವಾ ಯಾವುದೋ ಒಂದು ಕಥೆಯ ಪಾತ್ರಗಳನ್ನು ಚಿತ್ರಿಸುತ್ತಲೋ ನಡೆಯುತ್ತಿದ್ದೆ. ಫೊಟೊಗ್ರಫಿಯ ಗೀಳು ಹತ್ತಿದ ಮೇಲೆ ಸಣ್ಣ ಸಣ್ಣ ವಿಷಯವನ್ನೂ ಸೋಜಿಗವೆಂಬಂತೆ ನೋಡುತ್ತೇನೆ. ಮರದ ಮೇಲೆ ಸಾಗುತ್ತಿರುವ ಕೆಂಪಿರುವೆಯನ್ನು ಅದರ ಮೇಲೆಲ್ಲಾದರೂ ಸೂರ್ಯನ ಕಿರಣ ಬಿದ್ದು ಹಿಂಬೆಳಕಲ್ಲಿ ಫೊಟೊ ತೆಗೆಯಬಹುದೇನೋ ಎಂದು ನೋಡುತ್ತೇನೆ; ಪಕ್ಕದ ಮನೆಯ ಬಾಲ್ಕನಿಯ ಕಿಟಕಿಯ ಎದುರಿರುವ ಹೂಕುಂಡದಲ್ಲಿ ಹೂವರಳಿರುವುದು ಅವರ ಮನೆಯವರಿಗಿಂತ ಮೊದಲೇ ನನಗೆ ಗೊತ್ತಾಗಿರುತ್ತದೆ, ಊರಿಗೆ ಹೋದರೆ ಬೆಳಿಗ್ಗೆ ಬೇಗನೆ ಎದ್ದು ಅಮ್ಮನ ಹೂದೋಟದಲ್ಲಿ ಹೂವಿನ ರಸವ ಕುಡಿಯಲು ಬರುವ ಉದ್ದನೆಯ ಚುಂಚಿನ ಹಕ್ಕಿಗಾಗಿ ಗಂಟೆಗಟ್ಟಲೇ ಕಾಯುತ್ತೇನೆ; ಗದ್ದೆಯಲ್ಲಿ ಹುಲ್ಲಿನ ಮೇಲೆ ಮುಗುಮ್ಮಾಗಿ ಕುಳಿತಿರುವ ಇಬ್ಬನಿಗಳ ಲೋಕಕ್ಕೆ ಜಾರಿದರೆ ಒಂದೆರಡು ಗಂಟೆಗಳು ಜಾರಿದ್ದೂ ತಿಳಿದಿರುವುದಿಲ್ಲ; ಸಂಜೆಯ ಹೊತ್ತಿಗೆ ತೋಟದಂಚಿನ ಹೊಳೆಯಲ್ಲಿ ಹಾದು ಹೋಗುವ ಹಾಯಿ ದೋಣಿಗಾಗಿ ಎಷ್ಟು ಹೊತ್ತು ಕಾದಿದ್ದೇನೆ ಎನ್ನುವುದು ಅಲ್ಲಿ ಆ ಹೊಳೆಯಲ್ಲಿ ಹರಿದಿರುವ ನೀರಿಗೆ ಮಾತ್ರ ತಿಳಿದರಬೇಕು. ರಾಶಿನಕ್ಷತ್ರಗಳ ಹೊತ್ತಿರುವ ಬಾನಿನ ಫೋಟೊ ತೆಗೆಯುವುದಂತೂ ಮಹಾತಪಸ್ಸು! ಮದುವೆಯ ಫೋಟೊಗ್ರಫಿಗೆ ಹೋದರಂತೂ ಒಂದು ಚಂದನೆಯ ಕೋನದ ಫೊಟೊಗಾಗಿ ನಾವು ಹಾಕಿಕೊಂಡಿರುವ ಚಂದದ ಬಟ್ಟೆಯನ್ನೂ ಲೆಕ್ಕಕ್ಕಿಟ್ಟುಕೊಳ್ಳದೆ (ಅದು ಬಿಳಿಯದಾಗಿದ್ದರೂ ಸರಿ) ನೆಲದಮೇಲೆ ಮಕಾಡೆ ಮಲಗಿ ಫೋಟೊ ತೆಗೆದದ್ದಿದ್ದೆ. ಅಷ್ಟೊಂದು ಏಕಾಗ್ರತೆಯನ್ನು ಒಂದು ಹವ್ಯಾಸ ನಮಗೆ ಅರಿವಿಲ್ಲದೆಯೇ ಕಲಿಸಿಬಿಡುತ್ತದೆ. ಅದೂ ಈಗಿನ ಡಿಜಿಟಲ್ ಕ್ಯಾಮೆರಾಯುಗದಲ್ಲಿ ಒಂದು ಚೆಂದನೆಯ ಫೋಟೊಗಾಗಿ ನೂರಾರು ಫೋಟೊಗಳನ್ನು ಕ್ಲಿಕ್ಕಿಸಿಬಿಡುತ್ತೇವೆ. ನಂತರ ಆ ಫೋಟೊದಲ್ಲಿ ಚೆನ್ನಾಗಿ ಬಂದಿರುವ ಒಂದನ್ನು ಹುಡುಕುವುದೂ ಒಂದು ಸವಾಲೇ. ನಾನು ಹುಡುಗಿಯರ ಹಾಸ್ಟೆಲಿನಲ್ಲಿ ಇದ್ದಾಗಲಂತೂ ಚಂದನೆಯ ಸೀರೆಯನುಟ್ಟು ‘ನನ್ನದೊಂದು ಫೋಟೊ ತೆಗೆದು ಕೊಡುವಿಯಾ?’ ಎಂದು ಕೇಳಿದ ಅದ್ಯಾವ ಹುಡುಗಿಗೂ ‘ಇಲ್ಲ’ ಎಂದಿಲ್ಲ. ತಮ್ಮ ಚಂದನೆಯ ಫೊಟೊವನ್ನು ನೋಡಿ ಹುಡುಗಿಯರ ಮೊಗದಲ್ಲರಳುವ ನಗುವೊಂದಿದೆಯಲ್ಲ ಅದು ಒಂಥರದ ಆತ್ಮತೃಪ್ತಿಯನ್ನು ನೀಡುತ್ತಿತ್ತು. ಬರಿಗಣ್ಣಿಗೆ ತೀರ ಸಾಮಾನ್ಯ ಎನಿಸುವ ಒಂದು ದೃಶ್ಯ ಫೋಟೊಗ್ರಾಫರನ ಕೈಚಳಕದಿಂದ ಒಂದು ದೃಶ್ಯಕಾವ್ಯವಾಗಬಹುದು. ಅದು ಆ ಫೊಟೊತೆಗೆದವರ ಸೌಂದರ್ಯಪ್ರಜ್ಞೆಯ ಸಂಕೇತ.

ಎಷ್ಟೆಲ್ಲ ವಿಚಾರಗಳು ತಲೆಯಲ್ಲಿ ಸುಳಿಯುತ್ತಿದ್ದವು. ಅಜ್ಜ ಫೊಟೊ ತೆಗೆಯುವುದನ್ನು ಮುಗಿಸಿ ಕ್ಯಾಮೆರಾವನ್ನು ಬ್ಯಾಗಿನೊಳಗಿಟ್ಟುಕೊಂಡಿದ್ದರು. ನಾನಲ್ಲಿಯೇ ಕುಳಿತೇ ಇದ್ದೆ ಅವರನ್ನೇ ಗಮನಿಸುತ್ತ ‘ನಾನಿನ್ನು ಹೊರಡುತ್ತೇನಮ್ಮ, ಪುರುಸೊತ್ತಾದಾಗ ನಮ್ಮನೆಗೆ ಬಾ ಹಳೆಯ ಕ್ಯಾಮೆರಾಗಳನ್ನು ನೋಡುವಿಯಂತೆ’ ಎಂದರು ಅವರು. ‘ಸರಿ’ ಎನ್ನುತ್ತ ತಲೆಯಾಡಿಸಿದೆ.

ಕೆರೆಯ ಮೇಲಿನ ಮಂಜು ಕರಗುವುದರೊಳಗೆ ನನ್ನ ತಲೆಯಲ್ಲೊಂದು ಸರಳ ಅಧ್ಯಾತ್ಮದ ಚಿಂತನೆಯ ಬಿತ್ತಿದ ಅಜ್ಜ ಹೊರಟ ದಾರಿಯನ್ನೊಮ್ಮೆ ನೋಡಿ ವಿಸಿಟಿಂಗ್ ಕಾರ್ಡ್ ನೋಡಿದೆ. ಅವರ ಹೆಸರಿನ ಪಕ್ಕ ಎರಡೂ ಕೈಗಳನ್ನೆತ್ತಿದ ಹೊಟ್ಟೆ ಡುಮ್ಮ ’ಲಾಫಿಂಗ್ ಬುದ್ಧ’ ಕೈಯಲ್ಲಿ ಕ್ಯಾಮೆರಾವನ್ನು ಹಿಡಿದುಕೊಂಡಿದ್ದದ್ದು ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT