ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಎ. ಬರೆದ ಲೇಖನ: ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ

ರಾಜ್ಯದಲ್ಲಿ ಕಾಣಿಸುತ್ತಿರುವುದು ಅಭೂತಪೂರ್ವ ಭ್ರಷ್ಟಾಚಾರ ಪರ್ವ
Last Updated 5 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಕದ್ದು ಓಡಿ ಹೋಗುತ್ತಿರುವವನು ತನ್ನನ್ನು ಬೆನ್ನಟ್ಟಿ ಬರುವ ಗುಂಪಿನೊಳಗೆ ಸೇರಿಕೊಂಡು, ಕಳ್ಳ ಕಳ್ಳ ಅಂತ ತಾನು ಕೂಡಾ ಕೂಗುತ್ತಾ ಎತ್ತಲೋ ಬೆರಳು ಮಾಡಿ ತೋರಿಸಿ ಸಂಭಾವಿತನಂತೆ ನಟಿಸುವ ಕತೆಯನ್ನು ಕೇಳುತ್ತಿರುತ್ತೇವೆ. ಕರ್ನಾಟಕದ ರಾಜಕೀಯವನ್ನು ಇತ್ತೀಚೆಗೆ ಗಮನಿಸಿದವರಿಗೆ ಈ ಕತೆ ನೆನಪಾಗಲೇಬೇಕು.

ಎಲ್ಲಾ ಪೂರ್ವಗ್ರಹವನ್ನು ಮೀರಿ ಯೋಚಿಸುವವರಿಗೆ ಹಿಂದಿನ ನಾಲ್ಕು ವರ್ಷಗಳಲ್ಲಿ ಕಂಡಷ್ಟು ಭ್ರಷ್ಟಾಚಾರ ಈ ರಾಜ್ಯದಲ್ಲಿ ಎಂದೂ ಆಗಿರಲಿಲ್ಲ ಎನ್ನುವುದು ಇಷ್ಟೊತ್ತಿಗೆ ಮನವರಿಕೆಯಾಗಿರಬಹುದು. ಇದನ್ನು ಸಾಬೀತುಪಡಿಸಲು ಬೇಕಾದ ವಿದ್ಯಮಾನಗಳು ಕಣ್ಣಿಗೆ ರಾಚುವಂತೆ ದಿನದಿನವೂ ನಡೆಯುತ್ತಿವೆ. ಇಷ್ಟೆಲ್ಲ ಇರುವಾಗಲೂ ದೆಹಲಿಯಿಂದ ಬಂದು ಕರ್ನಾಟಕ
ದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರೆಲ್ಲಾ ‘ನಮ್ಮನ್ನು ಬಿಟ್ಟರೆ ಉಳಿದ ಎಲ್ಲ ಪಕ್ಷದವರೂ ಭ್ರಷ್ಟರು’ ಅಂತ ವಿರೋಧ ಪಕ್ಷಗಳೆಡೆಗೆ ಬೆರಳು ತೋರಿಸುತ್ತಿದ್ದಾರೆ. ‘ಮದ್ದೇ ಇಲ್ಲ ಅಂದುಕೊಂಡಿದ್ದ ಭ್ರಷ್ಟಾಚಾರಕ್ಕೆ ನಮ್ಮ ನಾಯಕ ನರೇಂದ್ರ ಮೋದಿ ಮದ್ದು ಕಂಡುಹಿಡಿದಿದ್ದಾರೆ’ ಎನ್ನುತ್ತಿದ್ದಾರೆ.

‘ನಮಗೆ ಅಧಿಕಾರ ನೀಡಿದರೆ ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುತ್ತೇವೆ’ ಎಂದೂ ಒಂದಿನಿತೂ ಅಳುಕಿಲ್ಲದೆ ಭಾಷಣ ಬಿಗಿಯುತ್ತಿದ್ದಾರೆ. ಇವರೆಲ್ಲಾ ಚುನಾವಣಾ ಭಾಷಣ ಮಾಡುತ್ತಿದ್ದಾರೋ ಅಥವಾ ಜೋಕ್ಸ್ ಹೇಳುತ್ತಿದ್ದಾರೋ ಎನ್ನುವ ಸಂಶಯ ಬರುತ್ತಿದೆ.

ಇದನ್ನೆಲ್ಲಾ ನೋಡುತ್ತಿದ್ದರೆ ಅನ್ನಿಸುತ್ತದೆ, ಈಗ ಕರ್ನಾಟಕದಲ್ಲೋರ್ವ ಅಣ್ಣಾ ಹಜಾರೆ ಇರಬೇಕಿತ್ತು ಅಂತ. ಹತ್ತು ವರ್ಷಗಳ ಹಿಂದೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್ ಸ್ಥಾಪನೆಯಾಗಿಯೇ ತೀರಬೇಕೆಂದು ದೆಹಲಿಯಲ್ಲಿ ಚಂಡಿ ಹಿಡಿದು ಕುಳಿತ ಹೋರಾಟಗಾರ ಹಜಾರೆ, ಲೋಕಪಾಲ್ ಬಂದಾಕ್ಷಣ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ ಎಂದು ನಂಬಿದ್ದು ಹಾಸ್ಯಾಸ್ಪದವಾಗಿತ್ತು ಎನ್ನುವ ವಿಚಾರ ಹಾಗಿರಲಿ. ಅಂದಿನ ಸರ್ಕಾರದ ಭ್ರಷ್ಟಾಚಾರ ಕುರಿತಂತೆ ಹಜಾರೆಯವರ ತಲೆಯಲ್ಲಿ ಇದ್ದ ವಾಸ್ತವವೆಷ್ಟು, ಭ್ರಮೆಗಳೆಷ್ಟು ಎನ್ನುವ ವಿಚಾರವೂ ಹಾಗಿರಲಿ. ಅವರ ‘ಇಂಡಿಯಾ ಅಗೇನ್ಸ್ಟ್‌ ಕರಪ್ಷನ್’ (ಭ್ರಷ್ಟಾಚಾರದ ವಿರುದ್ಧ ಭಾರತ) ಚಳವಳಿಯ ರಾಜಕೀಯ ಒಳಸುಳಿಗಳೇನೇನಿದ್ದವು ಎನ್ನುವ ವಿಷಯವೂ ಸದ್ಯಕ್ಕೆ ಒತ್ತಟ್ಟಿಗಿರಲಿ. ಇವೆಲ್ಲವುಗಳಾಚೆಗೆ ಕರ್ನಾಟಕದ ಇಂದಿನ ಸಂದರ್ಭದಲ್ಲಿ ಪ್ರಸ್ತುತವಾಗುವುದು ಏನು ಎಂದರೆ, ಮೇಲ್ನೋಟಕ್ಕಾದರೂ ಅಂದು ಹಜಾರೆಯವರ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಒಂದು ನೈತಿಕ ಜನಾಂದೋಲನ ಇಡೀ ದೇಶವೇ ಗಮನಿಸುವ ಹಾಗೆ ನಡೆದಿತ್ತು ಎನ್ನುವುದು. ಈ ಕ್ಷಣದಲ್ಲಿ ಕರ್ನಾಟಕಕ್ಕೆ ಅಂತಹದ್ದೊಂದು ಆಂದೋಲನದ ಅಗತ್ಯವಿದೆ.

ಕರ್ನಾಟಕದಲ್ಲಿ ತಮ್ಮ ಪಕ್ಷದವರು ಭ್ರಷ್ಟತೆಯ ಕೊಳೆಯನ್ನು ನಖಶಿಖಾಂತ ಮೆತ್ತಿಸಿಕೊಂಡಿದ್ದರೂ ದೆಹಲಿಯಿಂದ ಬರುವ ಬಿಜೆಪಿಯ ಮಹಾನ್ ನಾಯಕರಿಗೆಲ್ಲಾ ‘ನಮ್ಮದೇನಿದ್ದರೂ ಶುಭ್ರಧವಳ ಚಾರಿತ್ರ್ಯ’ ಅಂತ ಹೇಳುವ ಧೈರ್ಯ ಬರುವುದಾದರೂ ಹೇಗೆ ಎಂದು ಒಂದು ಕ್ಷಣ ಯೋಚಿಸಿ ನೋಡಿ. ಅಂತಹ ಧೈರ್ಯ ಅವರಿಗೆ ಬರಲು ಕಾರಣ ಏನೆಂದರೆ, ‘ನಾವೆಷ್ಟೇ ಭ್ರಷ್ಟರಾದರೂ ಅದನ್ನು ಪ್ರಶ್ನಿಸುವ ನೈತಿಕ ಶಕ್ತಿ ಇರುವವರು ಈ ರಾಜ್ಯದಲ್ಲಿ ಯಾರೂ ಇಲ್ಲ’ ಎಂದು ಅವರು ಭಾವಿಸಿರುವುದು. ಇದಕ್ಕೆ ಕಾರಣವಿದೆ.

ಸಾಮಾನ್ಯವಾಗಿ ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರ ಪ್ರಕರಣಗಳು ಬಯಲಾದಾಗಲೆಲ್ಲಾ ಅಷ್ಟಿಷ್ಟು ಬೀದಿಗಿಳಿಯುವುದು ವಿರೋಧ ಪಕ್ಷವಾಗಿರುವ ಕಾಂಗ್ರೆಸ್. ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯು ಕಾಂಗ್ರೆಸ್ಸಿನ ವಿಶ್ವಾಸಾರ್ಹತೆಯನ್ನು ಅದೆಷ್ಟರಮಟ್ಟಿಗೆ ನಾಶ ಮಾಡಿದೆ ಎಂದರೆ, ಕಾಂಗ್ರೆಸ್‌ನವರು ಬಿಜೆಪಿಯ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆಂದರೆ ಅದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ, ಬದಲಿಗೆ ಇಕ್ಕಟ್ಟಿನಿಂದ ಪಾರು ಮಾಡುತ್ತದೆ. ಜನರು ಕಾಂಗ್ರೆಸ್ ಹೇಳುವ ಸತ್ಯವನ್ನು ನಂಬುವುದಕ್ಕಿಂತ ಹೆಚ್ಚಾಗಿ ಬಿಜೆಪಿಯವರು ಹೇಳುವ ಸುಳ್ಳುಗಳನ್ನೇ ಸತ್ಯ ಎಂದು ನಂಬುವಂತಹ ಸ್ಥಿತಿಯನ್ನು ಬಿಜೆಪಿ ನಿರ್ಮಿಸಿದೆ.

ಇನ್ನು ಜನತಾದಳ. ಅದು ಭ್ರಷ್ಟಾಚಾರದ ಬಗ್ಗೆ ತಲೆಕೆಡಿಸಿಕೊಂಡ ಉದಾಹರಣೆಗಳೇನೂ ಇಲ್ಲ. ಭ್ರಷ್ಟಾಚಾರ ವಿರೋಧಿ ಆಂದೋಲನದ ಬಸಿರಿಂದ ಮೂಡಿಬಂದ ಆಮ್ ಆದ್ಮಿ ಪಕ್ಷವು ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಏನೂ ಮಾಡುತ್ತಲೂ ಇಲ್ಲ, ಮಾಡದೆ ಸುಮ್ಮನಿರುವುದೂ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ನೈತಿಕ ಶಕ್ತಿಯನ್ನು ಆಮ್ ಆದ್ಮಿ ಪಕ್ಷ ಕೂಡಾ ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಹಾಗೆ ಕಳೆದುಕೊಳ್ಳುತ್ತಿದೆ.

ಇನ್ನು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಲೆಂದೇ ಹುಟ್ಟಿಕೊಂಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಇದೆ. ಆದರೆ ಅದು ನಮ್ಮದೇನಿದ್ದರೂ ನೆಲಮಟ್ಟದ ಭ್ರಷ್ಟಾಚಾರದ ವಿರುದ್ಧದ ಹೋರಾಟ, ಮೇಲ್ಮಟ್ಟದ ಭ್ರಷ್ಟಾಚಾರದ ವಿರುದ್ಧ ಅಲ್ಲ ಎನ್ನುವ ನೀತಿಯನ್ನು ಅನುಸರಿಸುವಂತೆ ಕಾಣುತ್ತದೆ. ಬಿಜೆಪಿಯವರ ವಿರುದ್ಧ ಕೇಳಿಬಂದ 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಕಾಂಗ್ರೆಸ್ ನಡೆಸಿದ್ದ ‘ಪೇಸಿಯೆಮ್’ ಅಭಿಯಾನವನ್ನು ಎಎಪಿಯವರೋ ಕೆ.ಆರ್.ಎಸ್‌.ನವರೋ ರಾಜ್ಯವ್ಯಾಪಿ ಕೈಗೊಂಡಿದ್ದರೆ ಇಲ್ಲೊಂದು ‘ಕರ್ನಾಟಕ ಅಗೇನ್ಸ್ಟ್‌ ಕರಪ್ಷನ್’ ಮಹಾಂದೋಲನ ಘಟಿಸಿಯೇ ಹೋಗುತ್ತಿತ್ತೋ ಏನೋ.

ಒಟ್ಟಿನಲ್ಲಿ ಏನು ಎಂದರೆ, ಕರ್ನಾಟಕದಲ್ಲಿ ಈ ಪರಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಅದಕ್ಕೊಂದು ಸಮರ್ಥ ರಾಜಕೀಯ ಪ್ರತಿರೋಧ ಇಲ್ಲ. ಅಂತಹ ಪ್ರತಿರೋಧ ಒಡ್ಡಲು ಇಲ್ಲಿರುವ ಪಕ್ಷಗಳಿಗೆ ನೈತಿಕ ಶಕ್ತಿ ಇಲ್ಲ, ನೈತಿಕ ಶಕ್ತಿ ಇದ್ದ ಪಕ್ಷಗಳಿಗೆ ಇಚ್ಛಾಶಕ್ತಿ ಇಲ್ಲ. ಹಾಗಾಗಿ ಬೆಕ್ಕುಗಳೇ ಇಲ್ಲದ ಸಾಮ್ರಾಜ್ಯದಲ್ಲಿ ಇಲಿಗಳದ್ದೇ ದರ್ಬಾರು ಎನ್ನುವಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಮಾತೆತ್ತಿದರೆ ‘ಎಲ್ಲ ಕಾಂಗ್ರೆಸ್ ಹುಟ್ಟುಹಾಕಿದ್ದು’ ಎನ್ನುತ್ತಾರೆ. ‘ಕಾಂಗ್ರೆಸ್ ಹುಟ್ಟುಹಾಕಿದ್ದನ್ನು ನೀವು ಯಾಕೆ ಗೊಬ್ಬರ ಹಾಕಿ ಪೋಷಿಸುತ್ತಿದ್ದೀರಿ’ ಎಂದು ಕೇಳಬೇಕಾದ ಮಾಧ್ಯಮಗಳು ‘ಹೌದೌದು ಕಾಂಗ್ರೆಸ್ ಹುಟ್ಟುಹಾಕಿದ್ದು’ ಎಂದು ಬಿಜೆಪಿಯವರ ಜತೆ ಸೇರಿಕೊಂಡು ಭಕ್ತಿಗೀತೆ ಹಾಡುತ್ತವೆ. ಪ್ರತೀ ಪ್ರಕರಣದಲ್ಲೂ ಒಮ್ಮೆ ಅಬ್ಬರಿಸಿದಂತೆ ಮಾಡಿ ಹಾಗೇ ತಣ್ಣಗಾಗಿಬಿಡುತ್ತವೆ.

ಕರ್ನಾಟಕದಲ್ಲಿ ಮುಕ್ಕಾಲುಪಾಲು ಇರುವುದು ಈ ಬಗೆಯ ಮಾಧ್ಯಮಗಳು. ‘ಭಕ್ತಿಗೀತೆ’ ಹಾಡುವುದರಿಂದ ಹೊರಗಿರುವ ಮಾಧ್ಯಮಗಳಿಗೆ ಮಧ್ಯಮ ಮಾರ್ಗದಲ್ಲೇ ಇರುವ ಅನಿವಾರ್ಯ ಇರಬೇಕು. ಜಾಗೃತವಾಗಿರುವ ಮಾಧ್ಯಮ ಶಕ್ತಿಯೊಂದು ಕರ್ನಾಟಕದಲ್ಲಿ ಇದ್ದಿದ್ದರೆ ಹಿಂದಿನ ನಾಲ್ಕು ವರ್ಷಗಳಲ್ಲಿ ಕರ್ನಾಟಕ ಕಂಡ ಭ್ರಷ್ಟತೆ ಚಾರಿತ್ರಿಕ ಅಂತಲೂ, ಅದು ಬಿಜೆಪಿಯ ಮೊದಲ ಸರ್ಕಾರದ ಅವಧಿಯಲ್ಲಿ ಕಂಡದ್ದಕ್ಕಿಂತಲೂ ಭೀಕರವಾದದ್ದು ಅಂತಲೂ ತಿಳಿಸುವ ಸಂದೇಶ ಈ ರಾಜ್ಯದ ಮೂಲೆಮೂಲೆಯನ್ನು ತಲುಪಿ ಮುಂದಿನ ಚುನಾವಣೆಯ ವಿಷಯವೇ ಭ್ರಷ್ಟಾಚಾರವಾಗಿರಬೇಕಿತ್ತು. ನಲವತ್ತು ಪರ್ಸೆಂಟ್ ಕಮಿಷನ್ ಎಂದು ಕಂಟ್ರಾಕ್ಟರ್‌ಗಳು ಬೀದಿಗಿಳಿಯುವುದು, ಲಂಚದ ಹಾವಳಿ ಎದುರಿಸುವ ಶಕ್ತಿ ಇಲ್ಲದೆ ಜನ ಆತ್ಮಹತ್ಯೆ ಮಾಡಿಕೊಳ್ಳುವುದು, ಒಂದಾದ ನಂತರ ಒಂದು ಎಂಬಂತೆ ನೇಮಕಾತಿ ಹಗರಣಗಳು, ಬಿಟ್‌ಕಾಯಿನ್ ಹಗರಣ, ಸ್ಯಾಂಟ್ರೊ ರವಿ ಪ್ರಕರಣ, ಆಳುವ ಪಕ್ಷದವರೇ ಯಾವ್ಯಾವ ಹುದ್ದೆಗೆ ಎಷ್ಟೆಷ್ಟು ಎನ್ನುವ ಲೆಕ್ಕವನ್ನು ಮಾಧ್ಯಮಗಳಿಗೆ ನೀಡುವುದು... ಇವೆಲ್ಲಾ ಹಿಂದೆ ಯಾವತ್ತೂ ಆಗಿರಲಿಲ್ಲ. ಆದರೂ, ಏನೂ ಆಗಿಲ್ಲ ಎನ್ನುವಂತೆ ಆಳುವ ಪಕ್ಷ ಮುಂದಿನ ಚುನಾವಣೆಯನ್ನು ಎದುರು ನೋಡುತ್ತಿದೆ. ಅದಕ್ಕೇ ಹೇಳಿದ್ದು ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ ಬೇಕಾಗಿದ್ದಾರೆ ಎಂದು. ಅಂದರೆ, ರಾಜಕೀಯ ಪಕ್ಷಗಳಾಚೆಗಿನ ಹೋರಾಟ ಶಕ್ತಿಯೊಂದು ರೂಪುಗೊಳ್ಳುವ ಕಾಲ ಬಂದಿದೆ ಎಂದು ಅರ್ಥ.

ಈ ರಾಜ್ಯದಲ್ಲಿ ಇರುವ ಸಮಸ್ತ ನಾಗರಿಕ ಸಮಾಜದ ಸಂಘಟನೆಗಳಿಗಾದರೂ ಕರ್ನಾಟಕದ ಜನಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಅಧಿಕೃತ ಸುಲಿಗೆಯ ಬಗ್ಗೆ ಕಿಂಚಿತ್ ಕಾಳಜಿ ಇದ್ದಿದ್ದರೆ, ಇಷ್ಟೊತ್ತಿಗೆ ಅವರೆಲ್ಲ ಸೇರಿ ಅಣ್ಣಾ ಹಜಾರೆ ಅವರು ದೆಹಲಿಯಲ್ಲಿ ಮಾಡಿದ್ದನ್ನು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಾರಂಭಿಸಬೇಕಿತ್ತಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT