ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದ್ದದ್ದನ್ನೂ ಕೆಡಿಸಿದ ಮದ್ದಿನ ಕತೆ

ಆಪರೇಷನ್ ಕಮಲ 2.0 ಆಡಿಯೊದಲ್ಲಿ ಕೇಳಿಸಿದ್ದು ಸಂವಿಧಾನದ ಮರಣಶಾಸನ
ಫಾಲೋ ಮಾಡಿ
Comments

ಭಾರತದ ಪ್ರಜಾತಂತ್ರ ಬಹುಪಾಲು ನಿಂತಿರುವುದು ಸುಳ್ಳುಗಳ ಮೇಲೆ. ಇದು ಇಂದಿನ ಸತ್ಯವೂ ಹೌದು. ಹಿಂದಿನ ಸತ್ಯವೂ ಹೌದು. ಊಹಿಸಬಹುದಾದಷ್ಟು ಭವಿಷ್ಯದ ಸತ್ಯವೂ ಹೌದು. ಸುಳ್ಳುಗಳು ಈ ವ್ಯವಸ್ಥೆಯಲ್ಲಿ ಸಹಜ, ಸ್ವಾಭಾವಿಕ. ಸತ್ಯ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡರೂ ಅದು ಅಸಹಜ ಮತ್ತು ಒಂದು ಅಪವಾದ ಎನ್ನುವಂತಿರುತ್ತದೆ. ಇಲ್ಲೊಂದು ವಿಚಿತ್ರವಿದೆ.

ಸುಳ್ಳುಗಳಿಂದ, ಸುಳ್ಳುಗಳಿಗಾಗಿ, ಸುಳ್ಳುಗಳೇ ನಿಭಾಯಿಸುವ ಈ ವ್ಯವಸ್ಥೆಯಲ್ಲೂ ಯಾರಾದರೂ ಸುಳ್ಳು ಹೇಳುತ್ತಿದ್ದಾರೆ ಎನ್ನುವುದಕ್ಕೆ ಹಸಿ ಪುರಾವೆಯೊಂದು ಸಿಕ್ಕಾಗ ಆ ಬಗ್ಗೆ ಜನ ಬೇಸತ್ತುಕೊಳ್ಳುತ್ತಾರೆ, ಹೇಸಿಗೆ ಪಡುತ್ತಾರೆ.

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ತನ್ನ ಆಪರೇಷನ್ ಕಮಲ 2.0 ದಂಧೆಯ ಬಗ್ಗೆ ಕಳೆದ ಒಂಬತ್ತು ತಿಂಗಳಿಂದ ಹೇಳುತ್ತಿರುವುದೆಲ್ಲಾ ಸುಳ್ಳು ಅಂತ ಎಲ್ಲರಿಗೂ ಗೊತ್ತಿತ್ತು. ಆದರೂ ಈ ಸುಳ್ಳುಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯವೊಂದು ಆಡಿಯೊ ಕ್ಲಿಪ್ ರೂಪದಲ್ಲಿ ಸಿಕ್ಕ ನಂತರ ಮತ್ತು ಆ ಮುದ್ರಿಕೆಯಲ್ಲಿರುವ ಧ್ವನಿ ತನ್ನದೇ ಎಂದು ದಂಧೆಯ ರೂವಾರಿ ನಾಯಕರು ಒಪ್ಪಿಕೊಂಡ ನಂತರ ಕರ್ನಾಟಕದ ರಾಜಕೀಯ ಅನಿಶ್ಚಿತತೆಯ ನೆರಳು– ಬೆಳಕಿನಾಟ ಕೆಟ್ಟ ರಾಜಕಾರಣದ ಮತ್ತಷ್ಟು ಕೆಟ್ಟ ಅಂಕ ಅಂತ ಕಾಣಿಸಿಕೊಳ್ಳುತ್ತಿರುವುದು ಈ ಕಾರಣಕ್ಕೇ.

ಹೋದವರ್ಷ ನಡೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯು ಕೂದಲೆಳೆ ಅಂತರದಲ್ಲಿ ಅಧಿಕಾರವಂಚಿತವಾಗಿ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಬೇಕಾಗಿ ಬಂದದ್ದು ಹಳೆಯ ಕತೆ. ಅಷ್ಟಾದರೂ ಸ್ಥಾನಗಳನ್ನು ಗಳಿಸಲು ಬಿಜೆಪಿ ಅನುಸರಿಸಿದ ಮಾರ್ಗ ಗಳನ್ನು ಒಂದು ಕ್ಷಣ ಮರೆತು ಚುನಾವಣಾನಂತರ ಅದಕ್ಕೆ ಬಂದ ಅವಸ್ಥೆಯನ್ನು ನಿಷ್ಪಕ್ಷಪಾತವಾಗಿ ಗಮನಿಸಿದವರಿಗೆ ಆ ಪಕ್ಷದ ಬಗ್ಗೆ ಒಂದಷ್ಟು ಅನುಕಂಪ ಮೂಡಿತ್ತು. ಈ ಅನುಕಂಪವು ಮೈತ್ರಿ ಸರ್ಕಾರದ ನಡೆ–ನುಡಿ–ಲಯ ತಪ್ಪತೊಡಗಿದಂತೆ ಸ್ವಲ್ಪಸ್ವಲ್ಪ ದಟ್ಟವಾಗುತ್ತಲೂ ಇತ್ತು. ಈ ಪರಿಸ್ಥಿತಿಯನ್ನೇ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡು ರಾಜ್ಯದಲ್ಲಿ ಬೆಳೆಯಬೇಕಿದ್ದ ಮತ್ತು ಬೆಳೆಯಬಹುದಾಗಿದ್ದ ಬಿಜೆಪಿ, ಚುನಾವಣೆಯ ನಂತರ ಅನುಸರಿಸುತ್ತಾ ಬಂದ ಪರಮ ಸ್ವಯಂಘಾತಕ ರಾಜಕೀಯ ವಿಚಿತ್ರವೂ, ಅಸಂಗತವೂ ಆಗಿದೆ.

ಅಧಿಕಾರದ ಅಂಚಿನವರೆಗೂ ಬಂದು ಅಧಿಕಾರ ವಂಚಿತರಾದೆವು ಎನ್ನುವ ಒಂದೇ ಕಾರಣಕ್ಕಾಗಿ, ಚುನಾವಣಾನಂತರ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರವನ್ನು ಉರುಳಿಸಲು ಯಾವ ವಾಮಮಾರ್ಗ ಹಿಡಿದರೂ ಅದು ಸರಿ ಎನ್ನುವಂತಿತ್ತು ಬಿಜೆಪಿಯ ವರಸೆ. ಅತ್ಯಧಿಕ ಸ್ಥಾನಗಳನ್ನು ಪಡೆದ ತಾನು ವಿರೋಧ ಪಕ್ಷವಾಗಿಯೂ, ಅತ್ಯಲ್ಪ ಸ್ಥಾನ ಪಡೆದ ಪಕ್ಷವೊಂದರ ನಾಯಕ ಮುಖ್ಯಮಂತ್ರಿಯೂ ಆಗಿರುವ ಬೆಳವಣಿಗೆಯನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಕಷ್ಟವಿರಬಹುದು. ಆದರೆ, ಹೀಗೆ ಆಗಿಹೋದದ್ದರಲ್ಲಿ ಅಸಾಂವಿಧಾನಿಕ
ವಾದದ್ದು ಏನೂ ಇಲ್ಲ, ನಿಯಮಬಾಹಿರ ಎನ್ನುವಂತಹದ್ದು ಏನೂ ಇಲ್ಲ, ಹಾಗೆಯೇ ಅನೈತಿಕವಾದದ್ದೂ ಏನೂ ಇಲ್ಲ. ಹೆಚ್ಚೆಂದರೆ ಹೀಗೆಲ್ಲಾ ಆಗಿದ್ದು ಈಗಿರುವ ವ್ಯವಸ್ಥೆಯ ಮಿತಿಯೊಂದನ್ನು ತೋರಿಸುತ್ತಿತ್ತು ಅಷ್ಟೇ.

ಇಷ್ಟನ್ನು ಅರ್ಥಮಾಡಿಕೊಂಡು ನೆಟ್ಟಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಈಗಲಾದರೂ ಸಹಜವಾಗಿ ಬೆಳೆಯುತ್ತಿತ್ತು. ರಾಜ್ಯ ಬಿಜೆಪಿಯ ಈ ತನಕದ ಬೆಳವಣಿಗೆ ಸಂಪೂರ್ಣ ಸಹಜವಾಗಿ ನಡೆದಿಲ್ಲ. ಯಾಕೆಂದರೆ ಅದು ಈ ತನಕ ಬೆಳೆದದ್ದು ಆ ಕಡೆಯಿಂದ ಈ ಕಡೆಯಿಂದ ಮಂದಿಯನ್ನು ಸೇರಿಸಿಕೊಂಡು. ಅದು ಈ ತನಕ ಬೆಳೆದದ್ದು ಕ್ಷಣಿಕವಾದ ಅನುಕಂಪದ ಅಲೆಯೊಂದನ್ನು ನೆಚ್ಚಿಕೊಂಡು. ಅದು ಈ ತನಕ ಬೆಳೆದದ್ದು ದಕ್ಷಿಣ ಭಾರತದ ಮಟ್ಟಿಗೆ ಕೆಲಸಕ್ಕೆ ಬಾರದ ಧರ್ಮರಾಜಕಾರಣದ ಸೂತ್ರವೊಂದನ್ನು ನಂಬಿಕೊಂಡು.

ಇವುಗಳನ್ನು ಬದಿಗಿಟ್ಟು ತನ್ನದೇ ಸ್ವಂತ ಮಾರ್ಗವೊಂದರಲ್ಲಿ ಸಾಗುವ ಅವಕಾಶವೊಂದು ಈ ಬಾರಿ ರಾಜ್ಯ ಬಿಜೆಪಿಯ ಮುಂದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡ ಸ್ಥಿತಿಯಲ್ಲಿ ಅಂತಹ ನೇಪಥ್ಯವೊಂದು ಬಿಜೆಪಿಯ ಪಾಲಿಗೆ ಸಿದ್ಧಗೊಳ್ಳುವುದರಲ್ಲಿತ್ತು. ಈ ಅವಕಾಶ ಬಳಸಿಕೊಳ್ಳದೆ ಆಪರೇಷನ್ ಕಮಲ 2.0 ದಂಧೆಯ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಲು ಹೊರಟ ಬಿಜೆಪಿಯ ನಡೆ ಅಸಾಂವಿಧಾನಿಕವೂ, ಅನೈತಿಕವೂ ಆಗಿತ್ತು. ಇನ್ನೊಂದಷ್ಟು ಕಾದಿದ್ದರೆ ಮೈತ್ರಿಯೊಳಗಣ ವೈರುಧ್ಯ
ಗಳಿಂದಾಗಿ ಹೇಗೂ ಬಿಜೆಪಿಗೆ ಅಧಿಕಾರ ಹಿಡಿಯುವ ಸಾಧ್ಯತೆ ನಿರ್ಮಾಣವಾಗಿದ್ದರೂ ಆಗಬಹುದಿತ್ತು.

ಆ ಪಕ್ಷಕ್ಕೆ ಅಷ್ಟು ವ್ಯವಧಾನವಿರಲಿಲ್ಲ. ಸಾಮಾನ್ಯವಾಗಿ ಇಂಥ ಸ್ಥಿತಿಯಲ್ಲಿ ಸಿಲುಕಿದ ಪಕ್ಷಗಳು ವ್ಯವಸ್ಥೆಯನ್ನು ಕೆಡಿಸುವಷ್ಟು ಕೆಡಿಸಿ ತಾವೂ ಸಾಧ್ಯವಾದಷ್ಟು ಲಾಭ ಪಡೆದುಕೊಳ್ಳುತ್ತವೆ. ಆದರೆ ಬಿಜೆಪಿ ಈ ಬಾರಿ ಆಡಿದ ಆಟ, ಹೂಡಿದ ಹೂಟ ಹೇಗಿತ್ತು ಎಂದರೆ, ವ್ಯವಸ್ಥೆಯನ್ನು ಇನ್ನಿಲ್ಲದಂತೆ ಕೆಡಿಸಿತು. ತಾನು ಲಾಭ ಪಡೆಯುವುದು ಬಿಡಿ, ಇದ್ದದ್ದನ್ನೂ ಕಳೆದುಕೊಂಡಿತು. ಬಹುಶಃ ಇಂತಹದ್ದೊಂದು ಸ್ವಯಂಘಾತಕ ಮಾರ್ಗವನ್ನು ಯಾವ ಪಕ್ಷವೂ ಯಾವ ರಾಜ್ಯದಲ್ಲೂ ಅನುಸರಿಸಿದ್ದಿಲ್ಲ. ಆ ಮಟ್ಟಿಗೆ ಇದು ಚಾರಿತ್ರಿಕ.

ಮುಂದೊಂದು ದಿನ ಬಿಜೆಪಿ, ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿದರೂ ಹಿಡಿಯಬಹುದು. ಆದರೆ ಅಪೂರ್ಣ ಆಪರೇಷನ್ ಕಮಲದ ಮೂಲಕ ಬಿಜೆಪಿ ರಾಜ್ಯದ ಜನರ ಮುಂದೆ ತೆರೆದಿಟ್ಟ ಅಧಿಕಾರ ರಾಜಕಾರಣದ ಭೂಗತ ದಂಧೆಯ ಕರಾಳ ಮುಖವಿದೆಯಲ್ಲಾ ಅದು ಆ ಪಕ್ಷವನ್ನು ಬಹುಕಾಲ ಬೇತಾಳದಂತೆ ಕಾಡಲಿದೆ. ‘ಅವರು ಅಲ್ಲಿ ಹಾಗೆ ಮಾಡಲಿಲ್ಲವೇ?’ ‘ಇವರು ಮತ್ತೆಲ್ಲೂ ಹೀಗೆ ಮಾಡಲಿಲ್ಲವೇ?’ ಎನ್ನುವ ಬಿಜೆಪಿ ರಾಜ್ಯ ನಾಯಕರ ಸವಕಲು ಸಮರ್ಥನೆ ಪರಮ ಬಾಲಿಶವಾಗಿದೆ. ‘ಏನೂ ಆಗಿಲ್ಲ, ನಮಗೇನೂ ಸಂಬಂಧವಿಲ್ಲ’ ಎನ್ನುವಂತೆ ವರ್ತಿಸು
ತ್ತಿರುವ ಅದರ ರಾಷ್ಟ್ರೀಯ ನಾಯಕರ ನಡೆ ಅನುಮಾನಾಸ್ಪದವೂ, ಅವಮಾನಕರವೂ, ಅನುಕೂಲಸಿಂಧುವೂ ಆಗಿ ಕಾಣಿಸುತ್ತದೆ. ಆ ಆಡಿಯೊ ಕ್ಲಿಪ್‌ನಲ್ಲಿ ಇರುವ ಎಂಬತ್ತೋ ತೊಂಬತ್ತೋ ನಿಮಿಷದ ಸಂಭಾಷಣೆಯ ಪದ ಪದವನ್ನೂ ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಳಬೇಕು. ಮೈಯೆಲ್ಲಾ ಕಿವಿಯಾಗಿ ಕೇಳಬೇಕು. ಅದರಲ್ಲಿರುವುದು ರಾಜಕೀಯ ತಂತ್ರಗಾರಿಕೆಯ ಮಾತುಕತೆ ಮಾತ್ರವಲ್ಲ. ಅದರಲ್ಲಿರುವುದು ಈ ದೇಶದ ಸಂವಿಧಾನದ ಆಶಯಕ್ಕೆ ಬರೆದ ಮರಣಶಾಸನ. ಅಕ್ಷರಶಃ ಮರಣಶಾಸನ.

ಈ ಮಧ್ಯೆ ಆಡಿಯೊ ಕ್ಲಿಪ್ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆ ಶಾಸಕರ ಅಭೂತಪೂರ್ವ ಗಾಂಭೀರ್ಯ, ಸಂಸದೀಯ ಪ್ರಬುದ್ಧತೆಗೆ ಸಾಕ್ಷಿಯಾಗಿತ್ತು ಎಂದು ಮಾಧ್ಯಮಗಳು ಬರೆದವು. ಈ ಪ್ರಬುದ್ಧತೆ, ಗಾಂಭೀರ್ಯ ಇತ್ಯಾದಿಗಳೆಲ್ಲಾ ಇವೆಯಲ್ಲ ಅವು ಎಲ್ಲೋ ಒಂದು ಕ್ಷಣ ಮಿಂಚಿ ಮಾಯವಾಗುವ ಉಲ್ಕೆಗಳಂತಲ್ಲ. ಅವೆಲ್ಲಾ ಇದ್ದವರಲ್ಲಿ ಇರುತ್ತವೆ, ಇಲ್ಲದೇ ಹೋದವರಲ್ಲಿ ಇರುವುದಿಲ್ಲ. ಸಂಸತ್ತಾಗಲೀ, ಯಾವುದೇ ರಾಜ್ಯದ ವಿಧಾನಸಭೆಯಾಗಲೀ ಇಡಿಯಾಗಿ ಪ್ರಬುದ್ಧವಾದ ಸಂಸದೀಯ ನಡವಳಿಕೆಯನ್ನು ಒಂದೇ ಒಂದು ಕ್ಷಣದ ಮಟ್ಟಿಗಾದರೂ ತೋರುವ ಸ್ಥಿತಿಯಲ್ಲಿ ಇಂದು ಇಲ್ಲ. ಪ್ರಜಾತಂತ್ರ ಪ್ರಜ್ಞೆ ಇರುವ ರಾಜಕಾರಣಿ ಅಲ್ಲೊಬ್ಬ ಇಲ್ಲೊಬ್ಬ ಇರಬಹುದು.

ನಿಜಕ್ಕೂ ಮೊನ್ನೆ ವಿಧಾನಸಭೆಯಲ್ಲಿ ಕಂಡದ್ದು ಹುಸಿ ಗಾಂಭೀರ್ಯ. ತೋರಿಕೆಯ ಪ್ರಬುದ್ಧತೆ. ಇನ್ನೊಂದು ಮಾತು ಆಡಿದರೆ ಎಲ್ಲಿ ಇನ್ನೂ ದೊಡ್ಡ ಕಗ್ಗಂಟಲ್ಲಿ ಸಿಕ್ಕಿಕೊಳ್ಳುತ್ತೇವೋ ಎನ್ನುವ ಆತಂಕ ಬಿಜೆಪಿಯವರನ್ನು ಗಂಭೀರವಾಗಿರುವಂತೆ ಮಾಡಿತು. ಬಲೆಗೆ ಬಿದ್ದ ಮಿಕವನ್ನು ಸರಿಯಾಗಿ ಪಳಗಿಸದಿದ್ದರೆ ಇನ್ನೊಂದು ಅವಕಾಶ ಸಿಗಲಾರದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿನ ಮಂದಿಯನ್ನು ನಿಯಂತ್ರಿಸಿತು. ಎರಡೂ ಕಡೆಯವರ ಬಕಧ್ಯಾನದಲ್ಲಿ ಮಹಾನ್ ಸಂಸದೀಯ ಧ್ಯಾನವನ್ನೂ, ಜ್ಞಾನವನ್ನೂ ಕಂಡ ಮಾಧ್ಯಮಗಳದ್ದು ಇನ್ನೊಂದು ಕತೆ. ಆಪರೇಷನ್ ಕಮಲ 2.0 ದಂಧೆಯಲ್ಲಿ ಅವುಗಳ ಪಾತ್ರವೂ ಇದೆ. ಅದನ್ನೂ ಇಲ್ಲಿ ಸೇರಿಸೋಣ ಎಂದರೆ ಜಾಗ ಉಳಿದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT