ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

World Cup Cricket 2023: ಸಾಬರಮತಿ ದಡದಲ್ಲಿ ಕ್ರಿಕೆಟ್ ಘಮಲು

Published : 3 ಅಕ್ಟೋಬರ್ 2023, 19:33 IST
Last Updated : 3 ಅಕ್ಟೋಬರ್ 2023, 19:33 IST
ಫಾಲೋ ಮಾಡಿ
Comments

ಅಹಮದಾಬಾದ್: ಸಾಬರಮತಿ ನದಿಯ ತಂಗಾಳಿಯಲ್ಲಿಯೂ ಈಗ ಕ್ರಿಕೆಟ್‌ ಘಮಲು ಬೀಸಿ ಬರುತ್ತಿದೆ.

ನದಿ ತಟದಿಂದ ಸ್ವಲ್ಪ ದೂರದಲ್ಲಿರುವ ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ ಈಗ ಕಂಗೊಳಿಸುತ್ತಿದೆ. ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ವೇದಿಕೆಯಾಗಲಿರುವ ಈ ಕ್ರೀಡಾಂಗಣದತ್ತ ವಿಶ್ವದ ಬಹಳಷ್ಟು ದೇಶಗಳ ಕ್ರಿಕೆಟ್ ಅಭಿಮಾನಿಗಳು ಲಗ್ಗೆ ಇಡುತ್ತಿದ್ದಾರೆ. 

ಗುರುವಾರ ಇಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಆದರೆ ಅ.14ರಂದು ಇಲ್ಲಿಯೇ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವೇ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅದಕ್ಕಾಗಿ ತಿಂಗಳಾನುಗಟ್ಟಲೇ ಮುನ್ನವೇ ಅಭಿಮಾನಿಗಳು ಪಂದ್ಯದ ಟಿಕೆಟ್, ಪ್ರಯಾಣಕ್ಕಾಗಿ ವಿಮಾನ ಟಿಕೆಟ್ ಮತ್ತು ವಸತಿಗಾಗಿ ಹೋಟೆಲ್‌ಗಳ ಬುಕಿಂಗ್‌ಗೆ ಮೊರೆಹೋಗಿದ್ದರು.

ಈ ಪಂದ್ಯ ನಡೆಯುವ ಹೊತ್ತಿನಲ್ಲಿಯೇ ನವರಾತ್ರಿಯೂ ಆರಂಭವಾಗುವುದರಿಂದ ಹೋಟೆಲ್, ವಿಮಾನಯಾನದ ಟಿಕೆಟ್‌ಗಳ ಬೆಲೆ ಗಗನಕ್ಕೇರಿವೆ. ಆದರೂ ಕ್ರಿಕೆಟ್‌ಪ್ರೇಮಿಗಳ ಉತ್ಸಾಹ ಕುಂದಿಲ್ಲ.

2020ರಲ್ಲಿ ಬೃಹತ್ ಕ್ರೀಡಾಂಗಣವಾಗಿ ಮರುನಿರ್ಮಾಣವಾದ ನಂತರ ಇಲ್ಲಿ ಮೊದಲ ಬಾರಿಗೆ ವಿಶ್ವಕಪ್ ‍ಪಂದ್ಯಗಳು ನಡೆಯಲಿವೆ.  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರ ತವರೂರು ಕೂಡ  ಆಗಿರುವುದರಿಂದಲೂ ಹೆಚ್ಚು ಗಮನ ಸೆಳೆದಿದೆ. 

ಭಾರತವು ವಿಶ್ವಕಪ್ ಟೂರ್ನಿಗೆ ನಾಲ್ಕನೇ ಬಾರಿ ಆತಿಥ್ಯ ವಹಿಸುತ್ತಿದೆ. ಇದೇ ಮೊದಲ ಬಾರಿಗೆ ಬಿಸಿಸಿಐ  ಮಾತ್ರ ಆಯೋಜನೆಯ ಹೊಣೆ ಹೊತ್ತಿದೆ.

1987ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸಹಭಾಗಿತ್ವ ವಹಿಸಿತ್ತು. 1996ರಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡಗಳ ಸಹಭಾಗಿತ್ವ ಇತ್ತು. 2011ರಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳೂ ಕೈಜೋಡಿಸಿದ್ದವು.

ಏಕತಾ ನಗರಕ್ಕೆ ಟ್ರೋಫಿ

ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಬೃಹತ್ ಪುತ್ಥಳಿ ಇರುವ ಏಕತಾ ನಗರಕ್ಕೆ ಐಸಿಸಿ ವಿಶ್ವಕಪ್ ಟ್ರೋಫಿ ತಲುಪಿತು.

ಮಂಗಳವಾರ ಏಕತಾ ನಗರದಲ್ಲಿ ಟ್ರೋಫಿ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು.

‘ಐಸಿಸಿ ಟ್ರೋಫಿಯು 18 ದೇಶಗಳ  ಪ್ರಮುಖ ನಗರಗಳ ಪರ್ಯಟನೆಯ ನಂತರ ಗುಜರಾತ್‌ ರಾಜ್ಯಕ್ಕೆ ಮರಳಿದೆ ಏಕತಾ ನಗರದಲ್ಲಿಯೂ ಪ್ರದರ್ಶನಗೊಂಡಿತು‘ ಎಂದು ಮೂಲಗಳು ತಿಳಿಸಿವೆ.

ಸಚಿನ್  ಜಾಗತಿಕ ರಾಯಭಾರಿ

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಈ ಬಾರಿ ವಿಶ್ವಕಪ್ ಟೂರ್ನಿಯ ‘ಜಾಗತಿಕ ರಾಯಭಾರಿ‘ಯಾಗಿ ನೇಮಕ ಮಾಡಲಾಗಿದೆ. ಸಚಿನ್ ಆರು ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿರುವ ದಾಖಲೆ ಇದೆ. ಅವರ ಹೆಸರಲ್ಲಿ ಹಲವಾರು ದಾಖಲೆಗಳೂ ಇವೆ. ಗುರುವಾರ ನಡೆಯುವ ಮೊದಲ ಪಂದ್ಯಕ್ಕೂ ಮುನ್ನ ಸಚಿನ್ ಐಸಿಸಿ ಟ್ರೋಫಿಯನ್ನು ಮೈದಾನಕ್ಕೆ ತರಲಿದ್ದಾರೆ. ‘1987ರ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆದಾಗ ಬಾಲ್‌ ಬಾಯ್ ಆಗಿದ್ದೆ. ನಂತರ ದೇಶದ ಪರವಾಗಿ ಆರು ವಿಶ್ವಕಪ್ ಆಡಿದ್ದು ಹೆಮ್ಮೆಯ ವಿಷಯ. 2011ರಲ್ಲಿ ವಿಶ್ವಕಪ್ ಜಯಿಸಿದ್ದು ಕೂಡ ವಿಶಿಷ್ಟವಾಗಿದೆ‘ ಎಂದು ಸಚಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT