ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಭಟ್ಟ ಅವರ ಲೇಖನ: ಖೆಡ್ಡಾದಲ್ಲಿ ಬಿದ್ದ ಪ್ರತಿಪಕ್ಷಗಳು

ಶಾಂತಿ, ಸೌಹಾರ್ದಕ್ಕಾಗಿ ಕಾದಿದೆ ಕರ್ನಾಟಕ; ಬೇಕಾಗಿದೆ ಸಹಬಾಳ್ವೆ
Last Updated 26 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ವಿರೋಧ ಪಕ್ಷಗಳು ತೋಡಿದ ಖೆಡ್ಡಾದಲ್ಲಿ ಆಡಳಿತ ಪಕ್ಷ ಬೀಳುವುದು ಸಾಮಾನ್ಯ. ಅಂತಹ ಘಟನೆಗಳು ಕರ್ನಾಟಕ ದಲ್ಲಿ ಸಾಕಷ್ಟು ನಡೆದಿವೆ. ಆಡಳಿತ ಪಕ್ಷವನ್ನು ಮಣಿಸಲು ಪ್ರತಿಪಕ್ಷಗಳು ಪಟ್ಟು ಬಿಗಿ ಮಾಡುವುದೂ ಹೊಸತೇನೂ ಅಲ್ಲ. ಚುನಾವಣೆ ಹತ್ತಿರಕ್ಕೆ ಬಂದಾಗ ಆಡಳಿತ ಪಕ್ಷವನ್ನು ಬೆದರಿಸುವ ರೀತಿಯಲ್ಲಿ ವಿರೋಧ ಪಕ್ಷಗಳು ನಡೆದುಕೊಳ್ಳುವುದೂ ಸಹಜ. ಆದರೆ ಕರ್ನಾಟಕದಲ್ಲಿ ಈ ಬಾರಿ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಆಡಳಿತ ಪಕ್ಷ ತೋಡಿದ ಖೆಡ್ಡಾದಲ್ಲಿ ವಿರೋಧ ಪಕ್ಷಗಳು ಬಿದ್ದಿವೆ. ಸುಲಭಕ್ಕೆ ಮೇಲೆ ಬರಲು ಸಾಧ್ಯವಾಗದಂತೆ ಬಾಣದ ಮೇಲೆ ಬಾಣಗಳನ್ನು ಆಡಳಿತ ಪಕ್ಷ ಬಿಡುತ್ತಿದೆ. ಆ ಪಕ್ಷದ ಬತ್ತಳಿಕೆ ಯಲ್ಲಿ ಇನ್ನೂ ಸಾಕಷ್ಟು ಬಾಣಗಳು ಇವೆಯಂತೆ. ಯಾವ ಬಾಣ ಯಾವಾಗ ಹೊರಕ್ಕೆ ಬರುತ್ತದೆ ಎಂದು ಪ್ರತಿಪಕ್ಷ
ಗಳು ಆತಂಕದಿಂದ ಕಾಯುವಂತಾಗಿದೆ. ಆದರೆ ಒಂದು ಮಾತು ಸತ್ಯ. ಆಡಳಿತ ಪಕ್ಷ ಬಿಡುತ್ತಿರುವ ಬಾಣಗಳಾಗಲೀ ವಿರೋಧ ಪಕ್ಷಗಳ ಪ್ರತಿ ಬಾಣಗಳಾಗಲೀ ಯಾವುದೂ ಜನೋಪಯೋಗಿ ಅಲ್ಲ.

ಕೊಂಚ ಹಿಂದಕ್ಕೆ ಹೋಗಿ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾಗ ರಾಜ್ಯದ ರಾಜಕೀಯ ಹೇಗಿತ್ತು ಎಂದು ನೆನಪಿಸಿಕೊಳ್ಳಿ. ಮೇಕೆದಾಟು ಪಾದಯಾತ್ರೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಕಾಂಗ್ರೆಸ್ ಪಕ್ಷ ಇನ್ನೇನು ಅಧಿಕಾರಕ್ಕೆ ಬರುತ್ತದೆ ಎಂಬ ಉಮೇದು ಕೂಡ ಆ ಪಕ್ಷದ ನಾಯಕರಲ್ಲಿ ಕಾಣಿಸಿಕೊಂಡಿತ್ತು. ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಲು ಶುರುಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಅವರ ಸಂಪುಟದ ಬಹುತೇಕ ಸಚಿವರು ಈ ಬಗ್ಗೆ ಮಾತನಾಡಲು ಆರಂಭಿಸಿದರು. ಸಚಿವ ಗೋವಿಂದ ಕಾರಜೋಳ ಎಲ್ಲ ಪತ್ರಿಕೆಗಳಿಗೂ ಜಾಹೀರಾತು ನೀಡಿ, ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸಲು ಯತ್ನಿಸಿದರು. ಆದರೂ ಕಾಂಗ್ರೆಸ್ ಜಗ್ಗಲಿಲ್ಲ. ಕೋವಿಡ್ ಮಾರ್ಗಸೂಚಿ ಇದ್ದರೂ ಪಾದಯಾತ್ರೆ ಆರಂಭವಾಯಿತು. ಕೋವಿಡ್ ಮೂರನೇ ಅಲೆ ಹೆಚ್ಚಾಗುತ್ತಿದ್ದಂತೆ ಪಾದಯಾತ್ರೆಗೆ ತಾತ್ಕಾಲಿಕ ಬ್ರೇಕ್ ಹಾಕಿದರೂ ನಂತರ ಮತ್ತೆ ನಡೆಯಿತು. ಆ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಉಮೇದು ಎಷ್ಟಿತ್ತೆಂದರೆ, ಉತ್ತರ ಕರ್ನಾಟಕದಲ್ಲಿ ಮಹದಾಯಿ ಪಾದಯಾತ್ರೆ ನಡೆಸುವು ದಾಗಿಯೂ ಪಕ್ಷ ಪ್ರಕಟಿಸಿತು. ಒಮ್ಮೆ ಮೇಕೆದಾಟು ಪಾದ ಯಾತ್ರೆ ನಿಂತು ಮತ್ತೊಮ್ಮೆ ಪಾದಯಾತ್ರೆ ಶುರುವಾಗುವ ನಡುವಿನ ಅಂತರದಲ್ಲಿ ಬಿಜೆಪಿ ಆಟ ಶುರು ಮಾಡಿತು.

ಮೇಕೆದಾಟು ಪಾದಯಾತ್ರೆ ಯಶಸ್ಸಿನಿಂದ ಕಾಂಗ್ರೆಸ್ ತೇಲುತ್ತಿರುವಾಗಲೇ ಉಡುಪಿಯಲ್ಲಿ ಹಿಜಾಬ್ ಗಲಾಟೆ ಆರಂಭವಾಯಿತು. ಅಲ್ಲಿಗೆ ಕಾಂಗ್ರೆಸ್ ಆಟ ಮುಕ್ತಾಯವಾಗಿ ಬಿಜೆಪಿ ಆಟ ಆರಂಭವಾಯಿತು. ರಾಜ್ಯದ ರಾಜಕೀಯ ಸ್ಥಿತಿಯೂ ಉಲ್ಟಾಪಲ್ಟಾ ಆಯಿತು. ಹಿಜಾಬ್ ಗಲಾಟೆ ಆಕಸ್ಮಿಕವಲ್ಲ. ಆಡಳಿತ ಪಕ್ಷ ಕ್ರಿಯೆ ನಡೆಸಲು ಆರಂಭಿಸಿತು. ಪ್ರತಿಪಕ್ಷಗಳು ಪ್ರತಿಕ್ರಿಯೆ ನೀಡಲು ತೊಡಗಿದವು. ಬಿಜೆಪಿ ಮತ್ತು ಅದರ ಸಹವರ್ತಿ ಸಂಘಟನೆಗಳು ಹಿಜಾಬ್ ವಿವಾದವನ್ನು ದೊಡ್ಡದು ಮಾಡುತ್ತಿದ್ದಂತೆ ಅದಕ್ಕೆ ಪ್ರತಿಕ್ರಿಯೆ ನೀಡುವುದಷ್ಟೇ ಕಾಂಗ್ರೆಸ್ ಕೆಲಸವಾಯಿತು. ಹಿಜಾಬ್ ಹಿಂದೆಯೇ ಹಲಾಲ್ ಬಂತು. ಆಜಾನ್ ಬಂತು. ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದ್ದಾಯಿತು. ಹುಬ್ಬಳ್ಳಿಯಲ್ಲಿ ಕೋಮು ಗಲಭೆಯಾಯಿತು. ಒಂದರ ನಂತರ ಒಂದು ಬಾಣಗಳು ಬರುತ್ತಲೇ ಇದ್ದವು. ಅದಕ್ಕೆಲ್ಲಾ ಪ್ರತಿಕ್ರಿಯೆ ನೀಡುವುದರಲ್ಲಿಯೇ ಪ್ರತಿಪಕ್ಷಗಳ ಸಮಯ ವ್ಯರ್ಥವಾಗತೊಡಗಿತು. ಅಲ್ಲಿಗೆ ವಿರೋಧ ಪಕ್ಷಗಳು ಖೆಡ್ಡಾಕ್ಕೆ ಬಿದ್ದಂತಾಯಿತು. ಮಹದಾಯಿ ಪಾದಯಾತ್ರೆ ಮರೆತೇಹೋಯಿತು. ಬೆಲೆ ಏರಿಕೆಯೂ ನೆನಪಾಗಲಿಲ್ಲ.

ಆಡಳಿತ ಪಕ್ಷದ ನಡೆ ಎಷ್ಟೊಂದು ಸೂಕ್ಷ್ಮವಾ ಗಿತ್ತು, ಭಾವನಾತ್ಮಕವಾಗಿತ್ತು ಎಂದರೆ, ಮೇಲ್ನೋಟಕ್ಕೆ ಯಾರಿಗೂ ಇದರಲ್ಲಿ ತಪ್ಪಿದೆ ಎಂದು ಅನ್ನಿಸುತ್ತಲೇ ಇರಲಿಲ್ಲ. ಜನರಿಗೆ ಕೂಡ ಅನುಮಾನ ಬರಲಿಲ್ಲ. ಈ ಆಂದೋಲನ ಎಷ್ಟೊಂದು ಪ್ರಭಾವಶಾಲಿ ಆಗಿತ್ತು ಎಂದರೆ, ಬೆಲೆ ಏರಿಕೆ, ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆಗಳೆಲ್ಲಾ ಗೌಣವಾಗತೊಡಗಿದವು. ಬದುಕಿಗಿಂತ ಭಾವನೆಗೇ ಬೆಲೆ ಹೆಚ್ಚಾಗತೊಡಗಿತು. ‘ನೀವು ಮುಸ್ಲಿಂ ಪರ, ನೀವು ಮುಸ್ಲಿಂ ಪರ’ ಎಂದು ದೂರುವ ಅವರ ಪರಿ ಹೇಗಿತ್ತೆಂದರೆ, ಪ್ರತಿಪಕ್ಷಗಳು ‘ಇಲ್ಲ, ನಾವು ಕೋಮು ಸೌಹಾರ್ದದ ಪರ’ ಎನ್ನುವ ಬದಲು ‘ಹೌದು, ನಾವು ಮುಸ್ಲಿಂ ಪರ’ ಎಂದೇ ಹೇಳುವಂಥ ಸ್ಥಿತಿ ನಿರ್ಮಿಸಿಬಿಟ್ಟರು.

ಈ ನಡುವೆ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಪ್ರಕಟಿಸಿತು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಹೋರಾಟದ ರೂಪುರೇಷೆ ಸಿದ್ಧವಾಯಿತು. ಆದರೆ ಬಿಜೆಪಿ ಮತ್ತು ಅದರ ಮಿತ್ರ ಸಂಘಟನೆಗಳು ಹೊರಬಿಡುತ್ತಿದ್ದ ಬಾಣಗಳ ಸುರಿಮಳೆಯಲ್ಲಿ ಕಾಂಗ್ರೆಸ್ ಹೋರಾಟ ಮೇಲೆ ಬರಲೇ ಇಲ್ಲ. ಜನಸ್ಪಂದನೆಯೂ ಸೂಕ್ತ ಪ್ರಮಾಣದಲ್ಲಿ ಸಿಗಲಿಲ್ಲ. ಕೋಮುವಾದಿಗಳು ವಿಜೃಂಭಿಸುತ್ತಿದ್ದರೂ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ನೆನಪಿಸುವಂತಹ ಪ್ರಯತ್ನ ಪ್ರತಿಪಕ್ಷಗಳಿಂದ ದೊಡ್ಡಮಟ್ಟದಲ್ಲಿ ಆಗಲಿಲ್ಲ. ಕೋಮು ಭಾವನೆ ಉದ್ರೇಕಿಸುವ ಪ್ರಯತ್ನವನ್ನು ಎಷ್ಟೇ ಮಾಡಿದರೂ ನಾವು ಅದಕ್ಕೆ ಜಗ್ಗುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರತಿಪಕ್ಷಗಳು ಸೋತವು. ಜೆಡಿಎಸ್ ಪಕ್ಷ ಕೂಡ ರಾಜ್ಯದಲ್ಲಿ ನೀರಾವರಿ ಯೋಜನೆಗಾಗಿ ಜನತಾ ಜಲಧಾರೆ ಕಾರ್ಯಕ್ರಮ ನಡೆಸಲು ಮುಂದಾಯಿತು. ಜಲಧಾರೆಗಿಂತ ಹೆಚ್ಚಾಗಿ ಕೋಮು ಗಲಾಟೆಯ ಬಗ್ಗೆ ಪ್ರತಿಕ್ರಿಯೆ ನೀಡುವುದರಲ್ಲಿಯೇ ಆ ಪಕ್ಷದ ಸಮಯ
ವ್ಯರ್ಥವಾಗತೊಡಗಿತು.

ಇದರ ನಡುವೆ ಶೇ 40ರಷ್ಟು ಕಮಿಷನ್ ವಿಚಾರ ಜೋರಾಯಿತು. ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆ ಕೊಡಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ಸು ಗಳಿಸಿತು. ಆದರೆ ಆ ವಿಚಾರ ತಾರ್ಕಿಕ ಅಂತ್ಯ ಪಡೆಯುವುದಕ್ಕೆ ಮೊದಲೇ ಹುಬ್ಬಳ್ಳಿ ಕೋಮು ಗಲಭೆ ಜೋರಾಯಿತು. ‘ಈಶ್ವರಪ್ಪ ಬಂಧನವಾಗುವವರೆಗೆ ನಮ್ಮ ಹೋರಾಟ’ ಎಂದು ಕಾಂಗ್ರೆಸ್ ಗರ್ಜಿಸಿತ್ತಾದರೂ ಹುಬ್ಬಳ್ಳಿ ಗಲಭೆ ಎಲ್ಲವನ್ನೂ ಮರೆಸಿತು. ಪಿಎಸ್ಐ ನೇಮಕಾತಿ ಹಗರಣ ಹೊರಕ್ಕೆ ಬಿತ್ತು. ನೇಮಕಾತಿ ಹಗರಣಗಳು ಒಂದರ ಹಿಂದೆ ಒಂದು ಹೊರಬರುತ್ತಲೇ ಇವೆ. ಅವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳಿಗೆ ಸಮಯವೇ ಸಿಗುತ್ತಿಲ್ಲ. ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೊವೊಂದನ್ನು ಬಿಡುಗಡೆ ಮಾಡಿದ್ದೇ ತಡ, ಅವರಿಗೇ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ. ಈಗ ಅದಕ್ಕೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಮುಖಂಡರು ಮುಂದಾದರು. ಇದು ಹೀಗೆಯೇ ಮುಂದುವರಿಯುತ್ತಿದೆ.

ಇವೆಲ್ಲಾ ರಾಜಕೀಯಗಳು, ಚುನಾವಣೆ ಹೊಸ್ತಿಲಲ್ಲಿ ಇವೆಲ್ಲಾ ಮಾಮೂಲು ಎಂದುಕೊಳ್ಳಬಹುದು. ಆದರೆ ರಾಜ್ಯದ ಮತದಾರರಿಗೆ ಇದ್ಯಾವುದೂ ಬೇಕಿಲ್ಲ. ಅವರು ಬೆಲೆ ಏರಿಕೆಯ ಬೇಗೆಯಲ್ಲಿ ಬೇಯುತ್ತಿದ್ದಾರೆ. ಬೆಲೆ ಏರಿಕೆಯನ್ನು ತಡೆಯುವಂತಹ ಭಗೀರಥ ಯಾರಾದರೂ ಬಂದಾರೆಯೇ ಎಂದು ಎದುರು ನೋಡುತ್ತಿದ್ದಾರೆ. ರಾಜ್ಯ ದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿ, ತಮ್ಮಷ್ಟಕ್ಕೆ ತಾವು ದುಡಿದು ತಿನ್ನುವ ಅವಕಾಶಕ್ಕಾಗಿ ಅವರು ಕಾಯುತ್ತಿದ್ದಾರೆ. ಅವರಿಗೆ ಹಿಜಾಬ್ ಬೇಡ, ಅವರಿಗೆ ಬೇಕಾಗಿರುವುದು ಜಾಬ್. ಕೋಮು ಸಂಘರ್ಷ ಅವರಿಗೆ ಬೇಡ. ಅವರಿಗೆ ಬೇಕಾಗಿರುವುದು ಸಹಬಾಳ್ವೆ. ಬೆಳಿಗ್ಗೆ ಬೆಳಿಗ್ಗೆ ಆಜಾನ್ ಕೇಳಿಬರಲಿ ಅಥವಾ ಹನುಮಾನ್ ಚಾಲೀಸಾ ಕೇಳಿಬರಲಿ, ಅದಕ್ಕೆಲ್ಲಾ ಕಿವಿಗೊಡಲು ಅವರಿಗೆ ಪುರಸತ್ತು ಇಲ್ಲ. ಅವರಿಗೆ ಬೇಕಾಗಿದ್ದು ದುಡಿಯುವ ಕೈಗೆ ಕೆಲಸ. ಅದಕ್ಕೆ ಶಾಂತಿ ನೆಲೆಸಬೇಕು. ಸೌಹಾರ್ದ ಮುಂದು ವರಿಯಬೇಕು. ಅದಕ್ಕಾಗಿ ಕಾದಿದೆ ಕರ್ನಾಟಕ.

ಆಡಳಿತ ಪಕ್ಷ ಬಿಡುವ ಬಾಣಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿ ಅಥವಾ ನಿರ್ಲಕ್ಷಿಸಿ ಜನರ ಕರೆಗೆ ಓಗೊಡದಿದ್ದರೆ ಮತದಾರರು ಕೂಡ ಸೂಕ್ತ ಸಮಯದಲ್ಲಿ ಸೂಕ್ತ ಪ್ರತಿಕ್ರಿಯೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT