ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಮೌನಂ ಮೋದಿ ಲಕ್ಷಣಂ...

ಮಾತಾಡದವ ಮೌನಿ, ಮಾತಾಡಲೇಬೇಕಾದಾಗ ಮಾತಾಡದವ ಮಹಾಮೌನಿ
Published 29 ಮಾರ್ಚ್ 2024, 21:15 IST
Last Updated 29 ಮಾರ್ಚ್ 2024, 21:15 IST
ಅಕ್ಷರ ಗಾತ್ರ

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಾವಾಚಾಳಿ. ಆಕರ್ಷಕ ಮಾತಿನ ಮೋಡಿಗಾರರೂ ಹೌದು. ವೇದಿಕೆಯ ಮೇಲೆ ಅವರು ಮಾತನಾಡುತ್ತಿದ್ದರೆ ತಲೆದೂಗುವ ಕೋಟ್ಯಂತರ ಜನರಿದ್ದಾರೆ. ಅವರು ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಅದನ್ನು ಶ್ರದ್ಧೆಯಿಂದ ಆಲಿಸುವ ಮತ್ತು ಪಾಲಿಸುವ ಬಹಳಷ್ಟು ಮಂದಿ ಇದ್ದಾರೆ. ಅವರು ‘ಕೈಮುಗಿಯಿರಿ’ ಎಂದರೆ ಕೈಮುಗಿಯುತ್ತಾರೆ, ‘ದೀಪ ಹಚ್ಚಿ’ ಎಂದರೆ ದೀಪ ಹಚ್ಚುತ್ತಾರೆ, ‘ಜಾಗಟೆ ಬಾರಿಸಿ’ ಎಂದರೆ ಬಾರಿಸುತ್ತಾರೆ, ‘ಕಸಬರಿಕೆ ಹಿಡಿಯಿರಿ’ ಎಂದರೆ ಹಿಡಿದು ಕಸ ಗುಡಿಸುತ್ತಾರೆ.

ಆ ಮಟ್ಟಿಗೆ ಸದ್ಯಕ್ಕೆ ಭಾರತದಲ್ಲಿ ಅವರಷ್ಟು ಪ್ರಭಾವಿ ವಾಕ್‌ ಚತುರರು ಯಾರೂ ಇಲ್ಲ. ಅವರು ‘ಮನ್ ಕಿ ಬಾತ್’ನಲ್ಲಿ ಮಾತನಾಡುತ್ತಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ. ಪರೀಕ್ಷೆ ಹತ್ತಿರ ಬಂದರೆ ಮಕ್ಕಳಿಗೆ ಟಿಪ್ಸ್ ನೀಡುತ್ತಾರೆ. ದೇಶದ ಯಾವುದೋ ಮೂಲೆಯಲ್ಲಿ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸಾಧನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಾರೆ. ಇಂತಿರ್ಪ ನರೇಂದ್ರ ಮೋದಿ ಅವರಿಗೆ ಒಂದು ಐಬೂ ಇದೆ. ಅವರು ಬಾಕಿ ಎಲ್ಲ ಸಂದರ್ಭಗಳಲ್ಲಿಯೂ ಹೆಚ್ಚೇ ಎನ್ನುವಷ್ಟು ಮಾತನಾಡುತ್ತಾರೆ. ಆದರೆ ಈ ದೇಶದ ಪ್ರಧಾನಿಯಾಗಿ ಮಾತನಾಡಲೇಬೇಕಾದ ಸಂದರ್ಭದಲ್ಲಿ ಮಾತ್ರ ಮೌನದ ಮೊರೆ ಹೋಗುತ್ತಾರೆ.

ಏಕಕಾಲಕ್ಕೆ ಮಹಾವಾಚಾಳಿಯೂ ಮಹಾ ಮೌನಿಯೂ ಆಗಿರುವ ವಿಚಿತ್ರ ವ್ಯಕ್ತಿತ್ವ ಅವರದ್ದು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ನರೇಂದ್ರ ಮೋದಿ ಅವರು ‘ಮೌನಮೋಹನ್ ಸಿಂಗ್’ ಎಂದು ಲೇವಡಿ ಮಾಡಿದ್ದರು. ಮನಮೋಹನ್ ಸಿಂಗ್ ವಾಚಾಳಿ ಆಗಿರಲಿಲ್ಲ. ಆದರೆ ಮಾತನಾಡಬೇಕಾದ ಸಂದರ್ಭದಲ್ಲಿ ಮಾತನಾಡದೇ ಇರುತ್ತಿರಲಿಲ್ಲ. ಮನಮೋಹನ್ ಸಿಂಗ್ ಅವರೂ 10 ವರ್ಷ ಪ್ರಧಾನಿಯಾಗಿದ್ದರು. ನರೇಂದ್ರ ಮೋದಿ ಅವರೂ 10 ವರ್ಷ ಪ್ರಧಾನಿಯಾಗಿದ್ದಾರೆ. ಆದರೆ ಈ ಅವಧಿಯಲ್ಲಿ ಮೋದಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸಲಿಲ್ಲ. ಅವರು ಸಂಸತ್ತಿನಲ್ಲಿ ಮಾತನಾಡಿದ್ದೂ ಕಡಿಮೆ. ಪ್ರಶ್ನೆಗೆ ಉತ್ತರಿಸಿದ್ದೂ ಅಷ್ಟಕ್ಕಷ್ಟೆ. ಅವರ ಮಾತು ಕೇಳಬೇಕು ಎಂದರೆ ಸಾರ್ವಜನಿಕ ಸಮಾರಂಭಕ್ಕೇ ಕಾಯಬೇಕು.

ಮಣಿಪುರದ ವಿಷಯವನ್ನೇ ತೆಗೆದುಕೊಳ್ಳಿ. ಅಲ್ಲಿ ಒಂದೂವರೆ ವರ್ಷದಿಂದ ಜನಾಂಗೀಯ ಗಲಭೆ ನಡೆಯುತ್ತಲೇ ಇದೆ. 60 ಸಾವಿರಕ್ಕೂ ಹೆಚ್ಚು ಜನ
ನಿರಾಶ್ರಿತರಾಗಿದ್ದಾರೆ. 12 ಸಾವಿರಕ್ಕೂ ಹೆಚ್ಚು ಜನ ರಾಜ್ಯ ಬಿಟ್ಟು ಓಡಿಹೋಗಿದ್ದಾರೆ. 200ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿದೆ. ದೇಶದ ಅತ್ಯಂತ ಪುಟ್ಟ ರಾಜ್ಯದಲ್ಲಿ ಇಷ್ಟೆಲ್ಲಾ ಹಿಂಸೆ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಅವರದ್ದು ಮಾತಿಲ್ಲ, ಕತೆಯಿಲ್ಲ. 2001ರಲ್ಲಿ ಇಂತಹದೇ ಸ್ಥಿತಿ ಉಂಟಾದಾಗ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿದ್ದರು. ಆದರೆ ಈಗ ಸಾಂತ್ವನದ ಮಾತಿಗೂ ಬರ. ಮಣಿಪುರ ಈಗಲೂ ಅವರ ಮಾತಿಗಾಗಿ ಕಾಯುತ್ತಲೇ ಇದೆ. ಸಾಂತ್ವನದ ನುಡಿಗಾಗಿ ಇಡೀ ಮಣಿಪುರದ ಜನ ‘ಶಬರಿ’ಯರಾಗಿದ್ದಾರೆ. 

ನರೇಂದ್ರ ಮೋದಿ ಅವರ ಮಹಾಮೌನಕ್ಕೆ ಮತ್ತೊಂದು ಉದಾಹರಣೆ ಎಂದರೆ ಕುಸ್ತಿಪಟುಗಳ ಪ್ರತಿ ಭಟನೆ. ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ, ಸಂಸದರೂ ಆದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕುಸ್ತಿಪಟುಗಳು ವರ್ಷಾನುಗಟ್ಟಲೆ ನಡೆಸಿದ ಪ್ರತಿಭಟನೆಗೂ ಅವರು ತುಟಿಪಿಟಿಕ್ಕೆನ್ನಲಿಲ್ಲ. ಒಲಿಂಪಿಕ್ಸ್ ಪದಕಗಳನ್ನು ವಾಪಸು ಮಾಡಿದಾಗಲೂ, ಪದಕ ವಿಜೇತರೆಲ್ಲ ಹಾದಿಬೀದಿಯಲ್ಲಿ ಮುಷ್ಕರಕ್ಕೆ ಇಳಿದಾಗಲೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈಗಲೂ ಆ ಕಿಚ್ಚು ಕಡಿಮೆಯಾಗಿಲ್ಲ.   

2017ರಿಂದ ರೈತರು ಈವರೆಗೆ 6 ಬಾರಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಜಾರಿ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಅವರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ವರ್ಷಗಟ್ಟಲೆ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸು ಪಡೆದುಕೊಂಡರೂ ನಮ್ಮ ಪ್ರಧಾನಿಯಿಂದ ಸಾಂತ್ವನದ ಮಾತು ಬರಲೇಇಲ್ಲ. ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿಗೆ ಒತ್ತಾಯಿಸಿ ಮತ್ತೆ ಪ್ರತಿಭಟನೆಗೆ ಇಳಿದಾಗಲೂ ಅವರಿಂದ ಪ್ರತಿಕ್ರಿಯೆ ಬರಲಿಲ್ಲ. ಚುನಾವಣೆ ಬಂದಿದ್ದರಿಂದ ರೈತರ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದರೂ ಬೇಗುದಿ ಹಾಗೆಯೇ ಇದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅತ್ಯಂತ ಪ್ರಸಿದ್ಧ ಘೋಷಣೆ ಎಂದರೆ ‘ನಾ ಖಾವೂಂಗಾ, ನಾ ಖಾನೆ ದೂಂಗಾ (ನಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ)’ ಎಂಬುದು. ದೇಶದ ಬೇರೆ ಬೇರೆ ಭಾಗಗಳಲ್ಲಿ ಭ್ರಷ್ಟರು ಎಂದು ಗುರುತಿಸಿಕೊಂಡವರು, ಇ.ಡಿ, ಸಿಬಿಐ, ಐ.ಟಿ ದಾಳಿಗೆ ಒಳಗಾದವರು ಒಬ್ಬರ ಹಿಂದೆ ಒಬ್ಬರಂತೆ ಬಿಜೆಪಿಯನ್ನು ಸೇರಿ ಪಕ್ಷವನ್ನು ಶ್ರೀಮಂತ
ಗೊಳಿಸಿದಾಗಲೂ ಅವರದ್ದು ಮೌನ ಸಮ್ಮತಿ. ‘ಬಿಜೆಪಿ ಈಗ ವಾಷಿಂಗ್ ಮಷೀನ್ ಆಗಿದೆ’ ಎಂದು ಮಹಾರಾಷ್ಟ್ರದ ಮುಖಂಡ ಶರದ್ ಪವಾರ್ ಅವರು ಹೇಳಿದಾಗಲೂ ಉತ್ತರವೇನೂ ಬರಲಿಲ್ಲ.

ಕೇರಳ, ತಮಿಳುನಾಡು, ತೆಲಂಗಾಣ, ಪಂಜಾಬ್, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ರಾಜ್ಯಪಾಲರು ಅಲ್ಲಿನ ಸರ್ಕಾರಗಳಿಗೆ ದೈನಂದಿನ ಕೆಲಸ ಮಾಡುವುದಕ್ಕೂ ಬಿಡದೆ ಕಿರುಕುಳ ನೀಡುತ್ತಿದ್ದರೂ ಯಾವುದೇ ಕ್ರಮವಿಲ್ಲ. ಮಸೂದೆಗಳಿಗೆ ಸಹಿ ಹಾಕದೇ ಇರುವುದು, ವಿಧಾನಮಂಡಲ ಅಧಿವೇಶನದಲ್ಲಿ ಭಾಷಣ ಮಾಡದಿರುವುದು, ಸಚಿವರಿಗೆ ಪ್ರಮಾಣವಚನ ಬೋಧಿಸಲೂ ಹಿಂದೇಟು ಹಾಕುವ ರಾಜ್ಯಪಾಲರ ಕ್ರಮ ಕಣ್ಣಿಗೆ ಕಾಣುವುದೇ ಇಲ್ಲ. ಇವೆಲ್ಲ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮಾತ್ರ ನಡೆಯುತ್ತವೆ. ರಾಜ್ಯಪಾಲರ ನಡೆ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರುತ್ತಾ ಬುದ್ಧಿ ಕಲಿಸುತ್ತಿದ್ದರೂ ಪ್ರಧಾನ ಮಂತ್ರಿಗಳಿಂದ ಪ್ರತಿಕ್ರಿಯೆ ಇಲ್ಲ. ದೆಹಲಿಯಲ್ಲಿಯೂ ಲೆಫ್ಟಿನೆಂಟ್ ಗವರ್ನರ್ ಅಲ್ಲಿನ ಚುನಾಯಿತ ಸರ್ಕಾರಕ್ಕೆ ಬಹಳಷ್ಟು ಅಡ್ಡಗಾಲು ಹಾಕಿದಾಗಲೂ ಅದನ್ನು ನಸುನಗುತ್ತಾ ವೀಕ್ಷಿಸಿದ್ದು ಬಿಟ್ಟರೆ ಹೆಚ್ಚಿನ ಪ್ರತಿಕ್ರಿಯೆ ಇಲ್ಲ. 

ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ಅವರು ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು’ ಎಂದು ಹೇಳಿಕೆ ನೀಡಿದರು. ಬಿಜೆಪಿಯ ಇನ್ನೂ ಕೆಲವರು ನಾಯಕರು ಇಂತಹ ಹೇಳಿಕೆಯನ್ನು ನೀಡಿದಾಗಲೂ ಅವರದ್ದು ಮಹಾಮೌನ. ‘ಮೌನಂ ಸಮ್ಮತಿ ಲಕ್ಷಣಂ’ ಎಂದು ಒಪ್ಪಿಕೊಳ್ಳಬೇಕೇ ಬೇಡವೇ ಎಂದು ಗೊತ್ತಾಗದ ಸ್ಥಿತಿ ಪ್ರಜೆಗಳದ್ದು.

2020ರಲ್ಲಿ ಕೊರೊನಾ ಓಡಿಸುವುದಕ್ಕಾಗಿ ದಿಢೀರ್ ಲಾಕ್‌ಡೌನ್ ಪ್ರಕಟಿಸಿದಾಗ ವಲಸೆ ಕಾರ್ಮಿಕರು ಚಿತ್ರಹಿಂಸೆ ಅನುಭವಿಸಿದರು. ನೂರಾರು ಕಿ.ಮೀ. ದೂರ ಕಾಲ್ನಡಿಗೆಯ ಲ್ಲಿಯೇ ತೆರಳಿದರು. ಹಲವಾರು ಮಂದಿ ನಡೆಯುತ್ತಾ ನಡೆಯುತ್ತಾ ಅಸುನೀಗಿದರು. ಗರ್ಭಿಣಿಯರು, ಬಾಣಂತಿ ಯರು, ವೃದ್ಧರು, ಮಕ್ಕಳು ಎಂಬ ಭೇದಭಾವ ಇಲ್ಲದೆ ಎಲ್ಲರೂ ದಿಕ್ಕಾಪಾಲಾದರು. ಅನ್ನ, ನೀರು ಸಿಗದೆ ಪರಿತಪಿಸಿದರು. ಆಗಲೂ ನಮ್ಮವರದ್ದು ಜಾಣ ಕುರುಡು, ಜಾಣ ಕಿವುಡು.  

ಅರುಣಾಚಲ ಪ್ರದೇಶ ಕುರಿತಂತೆ ದೇಶದ ಗಡಿಯಲ್ಲಿ ಚೀನಾ ತಂಟೆ ನಡೆಸುತ್ತಲೇ ಇದೆ. ಸರ್ಜಿಕಲ್ ಸ್ಟ್ರೈಕ್ ಎಂಬುದು ಪಾಕಿಸ್ತಾನಿ ಉಗ್ರರಿಗಷ್ಟೇ ಸೀಮಿತವಾಗಿದೆ. ಚೀನಾ ತಂಟೆ ಬಗ್ಗೆ ನಮ್ಮವರದ್ದು ಮೌನವ್ರತ.

‘ಮನಮೋಹನ್ ಸಿಂಗ್ ಅವರು ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಮಾತೇ ಆಡುತ್ತಿಲ್ಲ’ ಎಂದು ನರೇಂದ್ರ ಮೋದಿ ಅವರು 2014ರಲ್ಲಿ ಟೀಕಿಸಿದ್ದರು. ಈ ವಿಷಯಗಳ ಬಗ್ಗೆ ಈಗ ಮಾತನಾಡದಂತೆ ಮೋದಿ ಅವರನ್ನು ತಡೆದವರು ಯಾರು? ಮಾತನಾಡದೇ ಇರುವುದು ಮೌನವಲ್ಲ. ಮಾತನಾಡಲೇಬೇಕಾದ ಸಂದರ್ಭದಲ್ಲಿ ಮಾತನಾಡದಿರುವುದು ಮಹಾಮೌನ. ಈಗ ಬಂದಿದೆ ಮತದಾರರು ಮಾತನಾಡುವ ಸಮಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT