ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಭಟ್ಟ ಅಂಕಣ| ಎಂಥಾ ಮೋಜಿನ ಕುದುರಿ...

ಖಾತೆ ಹಂಚಿಕೆ ಬಗ್ಗೆ ಸಚಿವರು ಕ್ಯಾತೆ ತೆಗೆಯುವುದು ಏನನ್ನು ಸೂಚಿಸುತ್ತದೆ?
Last Updated 28 ಜನವರಿ 2021, 0:54 IST
ಅಕ್ಷರ ಗಾತ್ರ

ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ‘ಕೊಟ್ಟ ಕುದುರೆಯನೇರ ಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ...’ ಎಂಬ ಅಲ್ಲಮ ಪ್ರಭುಗಳ ವಚನವನ್ನು ಪದೇ ಪದೇ ಹೇಳುತ್ತಿದ್ದರು. ಆ ಮಾತು ಅವರಿಗೆ ಈಗ ಮರೆತ ಹಾಗಿದೆ. ಅದನ್ನು ನೆನಪಿಸಿ ಕೊಳ್ಳುವ ಜರೂರತ್ತು ಬಂದಿದೆ. ಅವರೊಬ್ಬರೇ ನೆನಪಿಸಿಕೊಂಡರೆ ಸಾಲದು. ತಮ್ಮ ಸಂಪುಟದ ಸಚಿವರಿಗೂ ಅದನ್ನು ಬಾಯಿಪಾಠ ಮಾಡಿಸಬೇಕಿದೆ.

ಯಡಿಯೂರಪ್ಪ ಏನೋ ಹೊಸ ಕುದುರೆಯನ್ನು ಖರೀದಿಸಿ ಏರಿ ಆಗಿದೆ. ಕುದುರೆ ಅಡ್ಡಾದಿಡ್ಡಿ ಓಡುತ್ತಿದ್ದರೂ ತಮ್ಮ ಅನುಭವದ ಬಲದಿಂದ ಅವರು ಅದನ್ನು ಓಡಿಸುತ್ತಿದ್ದಾರೆ. ಆದರೆ ಅವರ ಸಮೀಪವರ್ತಿಗಳು ತಮಗೆ ಕೊಟ್ಟ ಕುದುರೆಯನ್ನು ಏರಲಾಗದೇ ಚಡಪಡಿಸುತ್ತಿದ್ದಾರೆ.
ಕುದುರೆಯೇ ಸರಿ ಇಲ್ಲ ಎಂದು ದೂರುತ್ತಿದ್ದಾರೆ. ಈ ಕುದುರೆಯಾಟವನ್ನು ರಾಜ್ಯದ ಜನ ನೋಡಿ ನಗುತ್ತಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಐದು ದಿನಗಳಲ್ಲಿ ಖಾತೆಗಳನ್ನು ನಾಲ್ಕು ಬಾರಿ ಬದಲಾವಣೆ ಮಾಡಲಾಗಿದೆ. ಹೀಗೆ ಪದೇ ಪದೇ ಖಾತೆ ಬದಲಾಯಿಸುವುದು ದುರ್ಬಲ ನಾಯಕತ್ವದ ಸೂಚನೆ ಎನ್ನುವುದು ಒಂದೆಡೆಯಾದರೆ, ಆಡಳಿತಯಂತ್ರ ಸರಿಯಾಗಿ ಕೆಲಸ ಮಾಡುವುದಕ್ಕೂ ಇದು ಅಡ್ಡಿಯಾಗುತ್ತದೆ. ಇಂದು ಒಬ್ಬ ಮಂತ್ರಿ, ನಾಳೆ ಇನ್ನೊಬ್ಬ ಎಂದಾದರೆ ಅಧಿಕಾರಿಗಳೂ ಯಾರ ಮಾತನ್ನೂ ಕೇಳುವುದಿಲ್ಲ. ಅಲ್ಲದೆ ಬೆದರಿಕೆ ಹಾಕಿದರೆ ಏನನ್ನಾದರೂ ಮಾಡಿಸಿಕೊಳ್ಳಬಹುದು ಎಂಬ ಮನೋಭಾವ ಬೆಳೆದುಬಿಟ್ಟರೆ, ಆಡಳಿತಯಂತ್ರ ನಿಯಂತ್ರಣಕ್ಕೆ ಸಿಗುವುದಿಲ್ಲ. ಸಿ.ಡಿ ತೋರಿಸಿ, ಬ್ಲ್ಯಾಕ್‌ಮೇಲ್ ಮಾಡಿ ಸಚಿವರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹೊಸ್ತಿಲಲ್ಲಿಯೇ ರಾಜೀನಾಮೆ ಬೆದರಿಕೆಗೆ ಬಗ್ಗಿ ಖಾತೆಗಳನ್ನು ಬದಲಾವಣೆ ಮಾಡಿದರೆ, ಎಲ್ಲ ಆರೋಪಗಳಲ್ಲಿಯೂ ಹುರುಳಿದೆ ಎಂಬ ಭಾವನೆ ಬರುತ್ತದೆ.

ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯು ಮುಖ್ಯಮಂತ್ರಿ ಅವರ ಪರಮಾಧಿಕಾರ. ಕೊಟ್ಟ ಖಾತೆಯನ್ನು ತೆಗೆದುಕೊಂಡು ಅದರಲ್ಲಿ ಸಾಧನೆ ಮಾಡಿ ತೋರಿಸಬೇಕು. ಖಾತೆಯ ಬಗ್ಗೆ ತಕರಾರು ತೆಗೆದರೆ ‘ನಾನು ಈ ಖಾತೆ ಕೊಟ್ಟಿದ್ದೇನೆ. ಕೆಲಸ ಮಾಡುವುದಾದರೆ ಮಾಡಿ. ಇಲ್ಲವಾದರೆ ಜಾಗ ಖಾಲಿ ಮಾಡಿ’ ಎಂದು ಹೇಳುವ ಧೈರ್ಯವನ್ನು ಮುಖ್ಯಮಂತ್ರಿ ತೋರಬೇಕು. ಅದನ್ನು ಬಿಟ್ಟು, ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದಾಗ ಏಕಾಏಕಿ ಖಾತೆಯನ್ನು ಬದಲಾವಣೆ ಮಾಡುವುದಾದರೆ ಅದು ತುಘಲಕ್ ಆಡಳಿತವಾಗುತ್ತದೆ.
ಕೊಟ್ಟ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ಅದನ್ನು ನಿರ್ಲಕ್ಷ್ಯ ಮಾಡಿದ ಮುಖ್ಯಮಂತ್ರಿಗಳೂ ರಾಜ್ಯದಲ್ಲಿ ಆಗಿ ಹೋಗಿದ್ದಾರೆ ಎನ್ನುವುದನ್ನೂ ಯಡಿಯೂರಪ್ಪ ನೆನಪಿಸಿಕೊಳ್ಳಬೇಕು.

ವೀರೇಂದ್ರ ಪಾಟೀಲ್ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಟಿ.ಎನ್.ನರಸಿಂಹಮೂರ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮನಸ್ಸು ಇರಲಿಲ್ಲ. ಆದರೆ ನರಸಿಂಹಮೂರ್ತಿ ಅವರು ರಾಜೀವ್‌ ಗಾಂಧಿ ಅವರಿಂದ ಒತ್ತಡ ತಂದರು. ಅದಕ್ಕಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಆಗ ಅಷ್ಟೇನೂ ಮಹತ್ವ ಅಲ್ಲದ ವಸತಿ ಖಾತೆಯನ್ನು ಅವರಿಗೆ ನೀಡಲಾಗಿತ್ತು. ಇದರಿಂದ ನರಸಿಂಹಮೂರ್ತಿ ಅಸಮಾಧಾನಗೊಂಡರು. ಖಾತೆ ಬದಲಿಸಿ ಎಂದು ವೀರೇಂದ್ರ ಪಾಟೀಲರ ಮೇಲೆ ಒತ್ತಡ ಹಾಕಿದರು. ಆದರೆ ಅದಕ್ಕೆ ಪಾಟೀಲರು ಸೊಪ್ಪು ಹಾಕಲೇ ಇಲ್ಲ. ನರಸಿಂಹಮೂರ್ತಿ ಮತ್ತೆ ದೂರನ್ನು ರಾಜೀವ್‌ ಗಾಂಧಿ ಬಳಿಗೇ ತೆಗೆದುಕೊಂಡು ಹೋದರು. ‘ನೋಡಿ ನಿಮ್ಮನ್ನು ಸಚಿವರನ್ನಾಗಿ ಮಾಡಿ ಎಂದಿರಿ. ಅದಕ್ಕೆ ಮುಖ್ಯಮಂತ್ರಿಗೆ ಹೇಳಿ ಸಚಿವ ಪದವಿ ಕೊಡಿಸಿದ್ದೇನೆ. ಈಗ ನಿಮಗೆ ಬೇಕಾದ ಖಾತೆಯನ್ನೂ ಕೊಡಿ ಎಂದು ನಾನು ಅವರಿಗೆ ಹೇಳಲಾರೆ. ಅದು ಮುಖ್ಯಮಂತ್ರಿ ಅಧಿಕಾರ’ ಎಂದು ರಾಜೀವ್‌ ಗಾಂಧಿ ಹೇಳಿದರಂತೆ. ಎಷ್ಟೇ ಒತ್ತಡ ಬಂದರೂ ಪಾಟೀಲರು ನರಸಿಂಹಮೂರ್ತಿ ಅವರ ಖಾತೆಯನ್ನು ಬದಲಾಯಿಸಲಿಲ್ಲ. ಅದೇ ರೀತಿ ದೇವರಾಜ ಅರಸು ಕೂಡ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವ ಒತ್ತಡಕ್ಕೂ ಮಣಿಯುತ್ತಿರಲಿಲ್ಲ.

ಈಗ ಇಲ್ಲಿ ಏನಾಗಿದೆ ನೋಡಿ. ಒಂದಿಷ್ಟು ಶಾಸಕರು ಸಚಿವರಾಗಿಲ್ಲ ಎಂದು ಕೊರಗುತ್ತಿದ್ದಾರೆ. ಕೆಲವು ಸಚಿವರು ಕೊಟ್ಟ ಖಾತೆ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸಚಿವ ರಮೇಶ ಜಾರಕಿಹೊಳಿ ಅವರು ‘ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಪುನರ್‌ರಚನೆಯಾಗುತ್ತದೆ’ ಎಂದು ಹೇಳಿಕೆ ನೀಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮುಖ್ಯಮಂತ್ರಿಯಾಗಲಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಲಿ, ಉಸ್ತುವಾರಿಯಾಗಲಿ, ಹೈಕಮಾಂಡ್ ಆಗಲಿ ಯಾರೂ ಮಾತನಾಡಿಲ್ಲ. ಇದೆಲ್ಲಾ ಏನನ್ನು ತೋರಿಸುತ್ತದೆ?

ಯಡಿಯೂರಪ್ಪ ಅವರು ಅತ್ಯಂತ ಹಿರಿಯ ರಾಜಕಾರಣಿ. ಹೋರಾಟದ ಮೂಲಕ ಮೇಲೆ ಬಂದವರು. ಸಾಕಷ್ಟು ಅನುಭವವನ್ನು ಹೊಂದಿದವರು. ರಾಜ್ಯದಲ್ಲಿ ತಮ್ಮದೇ ಆದ ವರ್ಚಸ್ಸು ಇರುವವರು. ಜಾತಿಯ ಬಲ ಕೂಡ ಅವರಿಗೆ ಇದೆ. ಇಷ್ಟೆಲ್ಲಾ ಇರುವಾಗ ಅವರು ಖಡಕ್ ನಿರ್ಧಾರ ಕೈಗೊಳ್ಳುವ ಧೈರ್ಯವನ್ನು ತೋರಿಸಬೇಕು. ಇಲ್ಲವಾದರೆ ನಾಯಿಯು ಬಾಲ ಅಲ್ಲಾಡಿಸುವ ಬದಲು ಬಾಲವೇ ನಾಯಿಯನ್ನು ಅಲ್ಲಾಡಿಸಲು ಶುರು ಮಾಡುತ್ತದೆ. ಅದರ ಲಕ್ಷಣ ಈಗ ರಾಜ್ಯದಲ್ಲಿ ಕಾಣುತ್ತಿದೆ.

ಖಾತೆ ಹಂಚಿಕೆ ಬಗ್ಗೆ ಕ್ಯಾತೆ ತೆಗೆಯುವುದು ದುರ್ಬಲ ನಾಯಕತ್ವದ ಲಕ್ಷಣವೂ ಹೌದು, ಸಚಿವರ ದೌರ್ಬಲ್ಯವೂ ಹೌದು. ಕೊಟ್ಟ ಖಾತೆಯನ್ನು ಸರಿಯಾಗಿ ನಿರ್ವಹಿಸಿ ಅದಕ್ಕೊಂದು ಘನತೆ ತಂದ ಸಾಕಷ್ಟು ಮಹನೀಯರು ನಮ್ಮ ರಾಜ್ಯದಲ್ಲೇ ಇದ್ದಾರೆ. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಸವಲಿಂಗಪ್ಪ ಅವರಿಗೆ ಆಗಿನ ಕಾಲಕ್ಕೆ ಯಾರಿಗೂ ಬೇಡವಾದ ಪರಿಸರ ಖಾತೆಯನ್ನು ನೀಡಲಾಗಿತ್ತು. ಅದಕ್ಕೆ ಬಸವಲಿಂಗಪ್ಪ ಅಸಮಾಧಾನಗೊಳ್ಳಲಿಲ್ಲ. ಪರಿಸರಕ್ಕೆ ಸಂಬಂಧಿಸಿದ ಎಲ್ಲ ಕಾಯ್ದೆ, ನಿಯಮಗಳನ್ನು ಅಭ್ಯಾಸ ಮಾಡಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಯತ್ನಿಸಿದರು. ಇದರಿಂದ ಪರಿಸರ ಖಾತೆಗೆ ಘನತೆ ಬಂತು. ಅದೇ ರೀತಿ ಅಬ್ದುಲ್ ನಜೀರ್ ಸಾಬ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಗೆ ಘನತೆಯನ್ನು ತಂದರು. ಈಗಲೂ ಗ್ರಾಮೀಣಾಭಿವೃದ್ಧಿ ಎಂದರೆ ಅದಕ್ಕೆ ನಜೀರ್ ಸಾಬ್ ಅವರೇ ಮಾದರಿಯಾಗಿದ್ದಾರೆ.

ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ತುಮಕೂರಿನ ವೀರಣ್ಣ ಅವರಿಗೆ ಸಣ್ಣ ಉಳಿತಾಯ ಮತ್ತು ಲಾಟರಿ ಖಾತೆಯನ್ನು ನೀಡಲಾಗಿತ್ತು. ವೀರಣ್ಣ ಅವರು ಅದನ್ನು ಸಮರ್ಥವಾಗಿ ನಡೆಸಿ, ಈ ಖಾತೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಷ್ಟು ಮಹತ್ವ ಎನ್ನುವುದನ್ನು ತೋರಿಸಿಕೊಟ್ಟರು. ಅಲ್ಲದೆ ಮುಖ್ಯಮಂತ್ರಿ ಇಲ್ಲದಾಗ ಹಣಕಾಸು ಖಾತೆಯನ್ನೂ ಕೆಲಕಾಲ ನಿರ್ವಹಿಸಿದರು. ಅದೇ ರೀತಿ ಪ್ರಾಥಮಿಕ ಶಿಕ್ಷಣ ಖಾತೆಯಲ್ಲಿ ಗೋವಿಂದೇಗೌಡರು ರಾಜ್ಯದ ಜನ ಎಂದೂ ಮರೆಯಬಾರದ ಸಾಧನೆಯನ್ನು ಮಾಡಿದರು. ಕೊಟ್ಟ ಕುದುರೆಯನ್ನು ಏರಿ, ತಾನೊಬ್ಬ ವೀರ, ಶೂರ ಎಂದು ತೋರಿಸುವುದು ಎಂದರೆ ಹೀಗೆ. ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಇದನ್ನು ಮನದಟ್ಟು ಮಾಡುವ ಛಾತಿಯನ್ನು ಮುಖ್ಯಮಂತ್ರಿ ಈಗ ತೋರಿಸಬೇಕಾಗಿದೆ.

ಕೊಟ್ಟ ಕುದುರೆಯನ್ನು ಏರಿ ತಾವೊಬ್ಬರೇ ಸರಿಯಾಗಿ ಓಡಿಸಿದರೆ ಸಾಲದು. ಸೇನಾಧಿಪತಿಯ ಕುದುರೆ ಮುಂದೆ ಸರಿಯಾಗಿಯೇ ಓಡಬೇಕು. ಹಿಂದಿರುವ ತಮ್ಮ ತಂಡದ ಎಲ್ಲ ಸದಸ್ಯರೂ ಕುದುರೆಯನ್ನು ಸರಿಯಾಗಿ ಓಡಿಸುವಂತೆಯೂ ಮಾಡಬೇಕು. ಇಲ್ಲವಾದರೆ ಸೇನಾಧಿಪತಿಗೆ ಸೋಲು ಅನಿವಾರ್ಯವಾಗುತ್ತದೆ. ಬಾಲ ಅಲ್ಲಾಡಿಸುವವರಿಗೆ ಮಣೆ ಹಾಕುವುದು ಸಲ್ಲ. ಹಾಗಂತ ಬಾಲವೇ ನಾಯಿಯನ್ನು ಅಲ್ಲಾಡಿಸಲೂ ಅವಕಾಶ ನೀಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT