ಮಂಗಳವಾರ, ಸೆಪ್ಟೆಂಬರ್ 21, 2021
22 °C

ಸ್ನೇಹದ ಬದುಕು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಬೋಧಿಸತ್ವ ಒಂದು ಕಪ್ಪು ಬಣ್ಣದ ಜಿಂಕೆಯಾಗಿ ಹುಟ್ಟಿದ್ದಾಗ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದ. ಜಿಂಕೆಯ ಕೊಂಬುಗಳು ಅಲಂಕಾರವಾಗಿದ್ದವು. ಅದು ನದಿಯ ಬದಿಯಲ್ಲಿದ್ದ ಪೊದೆಯಲ್ಲಿ ವಾಸವಾಗಿತ್ತು. ಹತ್ತಿರದ ಮರದ ಮೇಲಿದ್ದ ಮರಕುಟಿಕ ಪಕ್ಷಿ ಹಾಗೂ ಒಂದು ಆಮೆಯೊಂದಿಗೆ ಅದರ ಸ್ನೇಹವಾಗಿತ್ತು, ಮೂರೂ ಪ್ರಾಣಿಗಳು ಅತ್ಯಂತ ಸ್ನೇಹದಿಂದದ್ದವು.

ಒಂದು ದಿನ ಬೇಟೆಗಾರ ನದಿಯ ತೀರಕ್ಕೆ ಬಂದಾಗ ಜಿಂಕೆಯ ಹೆಜ್ಜೆಗಳನ್ನು ಕಂಡು ಬಲೆಯನ್ನು ಹಾಸಿಹೋದ. ಬೆಳಗಿನ ಜಾವದಲ್ಲಿ ನೀರು ಕುಡಿಯಲು ಹೋದ ಜಿಂಕೆ ಬಲೆಯಲ್ಲಿ ಸಿಲುಕಿ ಒದ್ದಾಡಿತು. ಸ್ನೇಹಿತರನ್ನು ಕೂಗಿ ಕರೆಯಿತು. ಪಕ್ಷಿ ಹಾಗೂ ಆಮೆಗಳು ಓಡಿಬಂದು ತಮ್ಮ ಸ್ನೇಹಿತ ಸಿಕ್ಕಿಹಾಕಿಕೊಂಡದ್ದನ್ನು ಕಂಡು ದು:ಖಿಸಿದವು.

ಬೆಳಗಾದೊಡನೆ ಬೇಟೆಗಾರ ಬಂದು ಜಿಂಕೆಯನ್ನು ಹಿಡಿದುಕೊಂಡು ಹೋಗುತ್ತಾನೆ ಎಂದು ಮರುಗಿದವು. ಆಗ ಮರಕುಟಿಕ ಪಕ್ಷಿ ಆಮೆಗೆ ಹೇಳಿತು, ‘ಮಿತ್ರಾ, ನಿನಗೆ ಹಲ್ಲುಗಳಿವೆ, ಅವುಗಳಿಂದ ಈ ಬಲೆಯ ಹಗ್ಗಗಳನ್ನು ಕಡಿದುಬಿಡು. ಅದಕ್ಕೆ ಸಮಯ ಬೇಕಾದೀತು. ನಾನು ಹೋಗಿ ಬೇಡ ಬರದಂತೆ ಮಾಡುತ್ತೇನೆ. ನಂತರ ಪಕ್ಷಿ ಹಾರಿ ಬೇಡನ ಮನೆಗೆ ಹೋಗಿ ಹೊರಗೆ ಕಾದುಕೊಂಡಿತು. ಬೇಡ ಮನೆಯಿಂದ ಹೊರಗೆ ಬರುವಹೊತ್ತಿಗೆ ಪಟಪಟನೆ ರೆಕ್ಕೆ ಬಡಿದು ಹಾರಿ ಬೇಡನ ಮುಖಕ್ಕೆ ಹೊಡೆದು ದೂರ ಹೋಯಿತು. ಬೇಡ ಹಕ್ಕಿಯನ್ನು ನೋಡಿದ.

‘ಛೇ ಇದು ಅಪಶಕುನದ ಪಕ್ಷಿ. ಬೆಳಿಗ್ಗೆಯೇ ಮುಂದೆ ಬಂದಿದೆ. ಈಗಲೇ ಹೋದರೆ ಯಾವ ಕೆಲಸವೂ ಆಗುವುದಿಲ್ಲ’ ಎಂದು ಹೋಗಿ ಮತ್ತೆ ಮಲಗಿದ. ಎರಡು ತಾಸಿನ ಮೇಲೆ ಮತ್ತೆ ಎದ್ದು ಹೊರಡಲು ಸಿದ್ಧನಾದ. ಮೊದಲು ಮುಂದಿನ ಬಾಗಿಲಿಗೆ ಹೋದಾಗ ಅಪಶಕುನದ ಪಕ್ಷಿ ಬಂದಿತು. ಈಗ ಹಿಂದಿನ ಬಾಗಿಲಿನಿಂದ ಹೊರಡುತ್ತೇನೆ ಎಂದುಕೊಂಡು ಹೊರಗೆ ಬಂದ. ಅಲ್ಲಿಯೇ ಕಾಯ್ದುಕೊಂಡಿದ್ದ ಪಕ್ಷಿ ಮತ್ತೆ ಹಾರಿಹೋಗಿ ಅವನ ಮುಖಕ್ಕೆ ಬಡಿಯಿತು. ‘ಇವತ್ತು ಯಾಕೋ ಸಮಯ ಸರಿಯಿಲ್ಲ, ಯಾವ ಬೇಟೆಯೂ ದೊರಕಲಿಕ್ಕಿಲ್ಲ ಎಂದು ಮತ್ತೆ ಮಲಗಿದ.

ಪಕ್ಷಿ ಹಾರಿ ನದೀತೀರಕ್ಕೆ ಬಂದಿತು. ಪಾಪ! ಹಗ್ಗ ಕತ್ತರಿಸಿ ಆಮೆಯ ಹಲ್ಲುಗಳಿಗೆ ತುಂಬ ನೋವಾಗಿತ್ತು. ಬಾಯಿಯಿಂದ ರಕ್ತ ಬರುತ್ತಿತ್ತು. ಹಕ್ಕಿಯೂ ತನ್ನ ಕೊಕ್ಕಿನಿಂದ ಕುಕ್ಕಿ ಸಹಕರಿಸಿತು. ಜಿಂಕೆ ಬಲೆಯಿಂದ ಹೊರಗೆ ಬರುವಷ್ಟರಲ್ಲಿ ಬೇಡ ಅಲ್ಲಿಗೆ ಬಂದೇ ಬಿಟ್ಟ. ಜಿಂಕೆ ಕಾಡಿನೊಳಗೆ ಓಡಿ ಹೋಯಿತು. ಬೇಡ ಆಮೆಯನ್ನು ಒಂದು ಚೀಲದಲ್ಲಿ ಹಾಕಿ ಕಟ್ಟಿದ. ತನ್ನನ್ನು ಉಳಿಸಿದ ಆಮೆ ಈಗ ತಾನೇ ಸಿಕ್ಕಿಕೊಂಡಿತಲ್ಲ ಎಂದು ಜಿಂಕೆ ಬೇಡ ಹೊರಟ ದಾರಿಯಲ್ಲಿ ಅಶಕ್ತವಾದಂತೆ ಬಿದ್ದುಕೊಂಡಿತು.

ಬೇಡ ಹಿಡಿಯಲು ಬಂದಾಗ ಸ್ವಲ್ಪ ದೂರ ಹೋಗಿ ನಿಂತಿತು. ಮತ್ತೆ ಅದನ್ನು ಹಿಡಿಯಲು ಓಡುತ್ತ ಬೇಡ ಬೆನ್ನತ್ತಿದ. ಸಾಕಷ್ಟು ದೂರ ಕಾಡಿನಲ್ಲಿ ಹೋದಾಗ ವೇಗದಿಂದ ಮರಳಿ ಓಡಿಬಂದು ತನ್ನ ಕೊಂಬುಗಳಿಂದ ಆಮೆಯನ್ನಿಟ್ಟಿದ್ದ ಚೀಲವನ್ನು ಹರಿದು ಆಮೆಯನ್ನು ನೀರಿಗೆ ತಳ್ಳಿಬಿಟ್ಟಿತು. ನಂತರ ತಾನೂ ಓಡಿಹೋಗಿ ಅವಿತುಕೊಂಡಿತು. ಇದನ್ನು ಕಂಡು ಪಕ್ಷಿ ಸಂತೋಷಪಟ್ಟಿತು. ಬೇಡ ಮರಳಿ ಬಂದು ಹರಿದ ಚೀಲವನ್ನು ನೋಡಿ, ‘ಇಂದು ಅಪಶಕುನದ ಪಕ್ಷಿ ಎದುರು ಬಂದದ್ದರಿಂದ ಯಾವ ಬೇಟೆಯೂ ಸಿಗಲಿಲ್ಲ ಎಂದು ದು:ಖದಿಂದ ಮರಳಿ ಹೋದ. ಮೂವರೂ ಸ್ನೇಹಿತರು ದೀರ್ಘಕಾಲ ಸಂತೋಷದಿಂದಿದ್ದರು.

ಪಶುಪಕ್ಷಿಗಳೇ ಸ್ನೇಹದಿಂದ ಬದುಕಿದಾಗ, ಪರಸ್ಪರ ಸಹಕಾರಿಯಾಗಿ ಬದುಕನ್ನು ಹಸನು ಮಾಡಿಕೊಂಡಿದ್ದಾದರೆ ಶ್ರೇಷ್ಠ ಸೃಷ್ಟಿಯಾದ ಮನುಷ್ಯನೇಕೆ ಅದನ್ನು ಸಾಧಿಸುವಲ್ಲಿ ವಿಫಲನಾಗುತ್ತಿದ್ದಾನೆ ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.