ಗುರುವಾರ , ಸೆಪ್ಟೆಂಬರ್ 24, 2020
21 °C

ವ್ಯಕ್ತ ಮತ್ತು ಅವ್ಯಕ್ತ ದಶೆಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು |
ತೇಲುವುದಮೇಯಸತ್ಪದಲಿ ಮೇಯಜಗ ||
ಮೂಲದಶೆಯೊಳಗೊಂದು, ಮಾಪನದ ಬಗೆಗೆರಡು |
ಗಾಳಿಯುಸಿರುಗಳಂತೆ – ಮಂಕುತಿಮ್ಮ || 101 ||

ಪದ-ಅರ್ಥ: ನೀರ್ಗಲ್ಲು=ಹಿಮಬಂಡೆ, ತೇಲುವುದಮೇಯಸತ್ಪದಲಿ=ತೇಲುವುದು+ಅಮೇಯ(ಅಳೆಯಲಾರದ)+ಸತ್ಪದಲಿ, ಮೇಯ = ಅಳೆಯಬಹುದಾದ, ಮೂಲದಶೆಯೊಳಗೊಂದು=ಮೂಲದಶೆಯೊಳಗೆ(ಮೂಲದಲ್ಲಿ)+ಒಂದು, ಮಾಪನ=ಅಳತೆ

ವಾಚ್ಯಾರ್ಥ: ಹಾಲಿನಲ್ಲಿ ಬೆಣ್ಣೆ, ಸಮುದ್ರದಲ್ಲಿ ಮಂಜುಗಡ್ಡೆಯಂತೆ ನಮ್ಮ ಅಳತೆಗೆ ಸಿಕ್ಕುವ ಜಗತ್ತು ಅಳೆಯಲಾಗದ ಅಪಾರ ಸತ್ಪದಲ್ಲಿ ತೇಲುತ್ತಿದೆ. ಅವು ಮೂಲದಲ್ಲಿ ಒಂದೇ ಆದರೂ ಅಳತೆಗೆ ಮಾತ್ರ ಎರಡು ಬಗೆಗಳು - ಗಾಳಿ, ಉಸಿರುಗಳಂತೆ

ವಿವರಣೆ: ಹಾಲಿನಲ್ಲೇ ಬೆಣ್ಣೆ ಇದೆ. ಮಧಿಸಿದಾಗ ಹೊರಬರುತ್ತದೆ. ಹಾಲಿನ ಒಂದು ಭಾಗವೇ ಆಗಿದ್ದ ಬೆಣ್ಣೆ ಹೊರಬಂದೊಡನೆ ಹಾಲಿನಲ್ಲಿ ತೇಲತೊಡಗುತ್ತದೆ. ಅದುವರೆಗೂ ಹಾಲಿನಲ್ಲಿ ಸೇರಿಹೋಗಿದ್ದ ಬೆಣ್ಣೆ ಈಗ ಬೇರೆಯಾಗಿ ಹಾಲಿನಲ್ಲಿ ತೇಲುತ್ತದೆ. ಹಾಲು ದ್ರವಪದಾರ್ಥವಾದರೆ ಬೆಣ್ಣೆ ಘನವಸ್ತು. ಹಾಲನ್ನು ಲೀಟರ್ ದಲ್ಲಿ ಅಳೆದರೆ, ಬೆಣ್ಣೆಯನ್ನು ಕಿಲೋ ರೀತಿಯಲ್ಲಿ ಅಳೆಯುತ್ತೇವೆ. ಇದರಂತೆಯೇ ಸಮುದ್ರದ ನೀರು ಧ್ರುವದ ಹತ್ತಿರ ಹೋದಂತೆ ಮರಗಟ್ಟಿ ಮಂಜುಗಡ್ಡೆಯಾಗುತ್ತದೆ, ತಾನು ಹುಟ್ಟಿಬಂದ ನೀರಿನಿಂದಲೇ ಬೇರೆಯಾಗಿ ತೇಲತೊಡಗುತ್ತದೆ. ಎರಡೂ ಮೂಲದಲ್ಲಿ ನೀರೇ ಆದರೂ ನೋಟದಲ್ಲಿ ಬೇರೆಯಾಗಿವೆ, ಅವುಗಳ ಅಳತೆಯ ವಿಧಾನಗಳೂ ಬೇರೆ.

ನಾವಿರುವ ವಿಶ್ವದ ಸ್ಥಿತಿಯೂ ಹೀಗೆಯೇ. ಅದು ಕಣ್ಣಿಗೆ ಕಾಣುತ್ತದೆ, ಅದನ್ನು ಅಳೆಯಬಹುದು. ಅದು ಅಪಾರವಾದ, ಅಳೆಯಸಾಧ್ಯವಾದ ಬ್ರಹ್ಮಸತ್ವದಲ್ಲಿ ತೇಲುತ್ತಿದೆ. ಈ ಸತ್‍ವಸ್ತು ಬಹಳ ದೊಡ್ಡದು, ಅನಂತವಾದದ್ದು. ಅದಕ್ಕಾಗಿಯೇ ಅದು ಸರ್ವವ್ಯಾಪಿ ಎನ್ನುತ್ತೇವೆ. ಅದನ್ನೇ ಬ್ರಹ್ಮ ಎನ್ನುತ್ತೇವೆ. ಬೃಹಿ ಎಂದರೆ ದೊಡ್ಡದು ಎಂದರ್ಥ. ನಮ್ಮ ಅನುಭವಕ್ಕೆ ಬರುವುದು ಪ್ರಕೃತಿ. ನಮ್ಮ ಮನಸ್ಸು, ಬುದ್ಧಿ, ಪ್ರತಿಭೆಗಳನ್ನೆಲ್ಲ ತೋರುವ ಸ್ಥಳ ಜಗತ್ತು. ಆದರೆ ಈ ಜಗದ್‍ರೂಪವಾದ ಪ್ರಪಂಚವನ್ನು ಆವರಿಸಿಕೊಂಡು ಅದರ ಒಳಗೂ, ಹೊರಗೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುವುದು ಈ ಅವ್ಯಕ್ತ ಸತ್ವ.

ಹೀಗೆ ಅವ್ಯಕ್ತವಾದ, ಅಮೇಯ ಸತ್ವದ ಮಹಾಸಾಗರದಲ್ಲಿ ಕಣ್ಣಿಗೆ ಕಾಣುವ ಪ್ರಪಂಚವೆಂಬ ನೀರ್ಗಲ್ಲು ತೇಲುತ್ತಿದೆ. ಅದೊಂದು ರೀತಿಯ ಬಲೂನ್ ಇದ್ದ ಹಾಗೆ. ಅದರ ಒಳಗೂ ಗಾಳಿ ಇದೆ, ಹೊರಗೂ ಗಾಳಿಯಿದೆ. ಪ್ರಪಂಚ ಮತ್ತು ಬ್ರಹ್ಮಸತ್ವ ಮೂಲದಲ್ಲಿ ಎರಡೂ ಒಂದೇ. ಪ್ರಪಂಚ ಸೃಷ್ಟಿಯಾದದ್ದೇ ಬ್ರಹ್ಮಸತ್ವದಿಂದ. ಆದರೆ ತೋರಿಕೆಗೆ ಎರಡು ಬಗೆಯಾಗಿವೆ. ಕಗ್ಗ ಮತ್ತೊಂದು ಅತ್ಯದ್ಭುತವಾದ ಉಪಮೆಯನ್ನು ಕೊಡುತ್ತದೆ. ವ್ಯಕ್ತ ಮತ್ತು ಅವ್ಯಕ್ತಗಳೆರಡೂ ಗಾಳಿ ಮತ್ತು ಉಸಿರುಗಳಿದ್ದ ಹಾಗೆ ಎನ್ನುತ್ತದೆ. ನಮ್ಮ ದೇಹದ ಹೊರಗಿರುವುದು ಗಾಳಿ. ಅದು ಎಲ್ಲೆಲ್ಲಿಯೂ ಇದೆ. ಅದರದೊಂದು ಪುಟ್ಟ ಭಾಗ ನಮ್ಮ ಪುಪ್ಪುಸದಲ್ಲಿ ಸೇರಿಕೊಂಡಾಗ ನಾವು ಅದನ್ನು ನನ್ನ ಉಸಿರು ಎನ್ನುತ್ತೇವೆ. ಅದನ್ನು ಹೊರಗೆ ಬಿಟ್ಟಾಗ ಮತ್ತದು ಗಾಳಿಯೇ. ಅದು ಮೂಲತ: ಗಾಳಿಯೇ, ನನ್ನಲ್ಲಿ ಸೇರಿದಾಗ ಅದನ್ನು ಉಸಿರು ಎನ್ನುತ್ತೇವೆ, ಅದೇ ಹೊರಗೆ ಬಂದಾಗ ಗಾಳಿ ಎನ್ನುತ್ತೇವೆ.

ಬ್ರಹ್ಮಸತ್ವದ ಎರಡು ದಶೆಗಳೆಂಬ, ಸುಂದರ ಆಧ್ಯಾತ್ಮಿಕ ಸತ್ಯವನ್ನು ಅತ್ಯಂತ ಸುಲಭವಾಗಿ, ಕಣ್ಣಿಗೆ ಕಟ್ಟುವ ಪ್ರತಿಮೆಗಳೊಂದಿಗೆ ವಿವರಿಸುತ್ತದೆ ಈ ಕಗ್ಗ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.