ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ - ಹೊಸ ಜಗ

Last Updated 8 ಮೇ 2019, 20:00 IST
ಅಕ್ಷರ ಗಾತ್ರ

ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ |
ನರನ ಪ್ರಾಕ್ತನಕೆ ನೂತನ ಸತ್ತ್ವ ಬೆರೆತು ||
ಪರಿವುದೀ ವಿಶ್ವಜೀವನಲಹರಿಯನವರತ |
ಚಿರಪ್ರತ್ನನೂತ್ನಜಗ – ಮಂಕುತಿಮ್ಮ || 129 ||

ಶಬ್ದಾರ್ಥ: ನೀರ್ಗಾಗಸದ=ನೀರಿಗೆ+ಆಗಸದ, ಪ್ರಾಕ್ತನ=ಹಳೆಯದು, ವಿಶ್ವಜೀವನಲಹರಿಯನವರತ = ವಿಶ್ವಜೀವನ + ಲಹರಿ + ಅನವರತ(ಸದಾಕಾಲ), ಚಿರಪ್ರತ್ನನೂತ್ನಜಗ = ಚಿರ (ಶಾಶ್ವತ) + ಪ್ರತ್ನ (ಹಳೆಯದು) + ನೂತ್ನ (ನೂತನ) + ಜಗ (ಜಗತ್ತು)

ವಾಚ್ಯಾರ್ಥ: ಧರೆಯ ನೀರಿಗೆ ಆಗಸದ ನೀರು (ಮಳೆ) ಸೇರಿಕೊಳ್ಳುವಂತೆ, ಮನುಷ್ಯನ ಹಳೆತನಕ್ಕೆ ಹೊಸ ಸತ್ವ ಸೇರಿ ಹರಿಯುವುದು ಈ ವಿಶ್ವಜೀವನದ ಲಹರಿ ಸದಾಕಾಲ. ಈ ಜಗತ್ತು ಎಂದೆಂದಿಗೂ ಹಳೆ-ಹೊಸದು.

ವಿವರಣೆ: ಈ ಪ್ರಪಂಚ ಬರೀ ಹಳೆಯದೂ ಅಲ್ಲ, ಪೂರ್ತಿ ಹೊಸದೂ ಅಲ್ಲ. ಅದು ಇವೆರಡರ ಮಿಶ್ರಣ. ಇತಿಹಾಸವಿಲ್ಲದಿದ್ದರೆ ವರ್ತಮಾನವೂ ಇಲ್ಲ. ನಮ್ಮ ಪ್ರಾಚೀನ ಗ್ರಂಥಗಳು, ಇತಿಹಾಸವಿಲ್ಲದಿದ್ದರೆ ನಮಗೆ ಇಂದು ಎಷ್ಟು ಬೇಕೋ, ಅಷ್ಟೇ ಆಧುನಿಕ ವಿಜ್ಞಾನದ ಟೆಲಿವಿಷನ್, ಟೆಲಿಫೋನ್ ಕೂಡ ಬೇಕಲ್ಲವೇ?

ಪೂಜೆ, ಮಂಗಳಾರತಿ, ದೇವದರ್ಶನ ಇವೆಲ್ಲ ಮನಸ್ಸಿಗೆ ಹಿತ ನೀಡುವ, ನಮ್ಮವೇ ಆದ ಪರಂಪರೆಯ ತುಂಡುಗಳು. ಹಾಗೆಂದು ಇಂಟರ್‍ನೆಟ್ ಬೇಡವೆನ್ನಲಾದೀತೇ? ದೇವಸ್ಥಾನದಲ್ಲಿ ಹಬ್ಬದ ದಿನ ದೇವರ ದರ್ಶನಕ್ಕೆ ತುಂಬ ನೂಕುನುಗ್ಗಲು, ನಲವತ್ತು ತಾಸು ಕಾಯಬೇಕಂತೆ ಎಂಬ ಪ್ರಸಂಗ ಬಂದಾಗ ಮೊಬೈಲ್‍ನಲ್ಲಿ ಲೈವ್‍ದರ್ಶನವನ್ನು ಮನೆಯಲ್ಲೇ ಮಾಡಿಕೊಂಡು, ನಮಸ್ಕಾರ ಮಾಡಿ ಸಂತೋಷಪಟ್ಟಿಲ್ಲವೇ? ಅದಕ್ಕೇ ಈ ಕಗ್ಗ ತುಂಬ ಮನಸ್ಸಿಗೆ ಮುಟ್ಟುವಂತೆ ಹೇಳುತ್ತದೆ- ಈ ಜಗತ್ತು ‘ಚಿರಪ್ರತ್ನನೂತ್ನ’ ಎಂದು. ಅದು ಎಂದೆಂದಿಗೂ ಹಳೆಯ ಹೊಸತುಗಳ ಸಂಗಮ.

ಇದನ್ನು ಸುಂದರವಾಗಿ ಈ ಕಗ್ಗ ವಿಸ್ತರಿಸುತ್ತ ಹೋಗುತ್ತದೆ. ಧರೆಯಲ್ಲಿಯೂ ನೀರಿದೆ. ಈ ನೀರು ಕೂಡ ಒಂದು ದಿನ ಆಗಸದಿಂದ ಮಳೆಯಾಗಿ ಸುರಿದದ್ದೇ. ಅದು ಸ್ವಲ್ಪ ಕಾಲ ಇಲ್ಲಿದ್ದುದರಿಂದ ಧರೆಯ ನೀರಾಯಿತು. ಮತ್ತೆ ಅದೇ ನೀರು ಆವಿಯಾಗಿ ನೆಲಕ್ಕೆ ಮಳೆಯಾಗಿ ಸುರಿಯುತ್ತದೆ. ಹಳೆಯ ನೀರಿನೊಂದಿಗೆ ಬೆರೆತು ಹೋಗುತ್ತದೆ. ಅಂದರೆ ಧರೆಯ ನೀರೇ ಮೇಲಿಂದ ಮೇಲೆ ಮೇಲೆ ಕೆಳಗೆ ಸುತ್ತಾಡಿ ಬೆರಕೆಯನ್ನು ಸೃಷ್ಟಿ ಮಾಡುತ್ತದೆ.

ಅದರಂತೆಯೇ ಮನುಷ್ಯನ ಹಿಂದಿನ ಚರಿತ್ರೆಯ ಜೊತೆಗೆ ಅವನ ನೂತನವಾದ ಸತ್ವ ಸೇರಿಕೊಳ್ಳುತ್ತದೆ. ಖ್ಯಾತ ವಿಜ್ಞಾನಿ ಅಲ್ಬರ್ಟ ಐನಸ್ಟೈನ್ ಹೇಳುತ್ತಾರೆ, “ನಾವು ಹಿಂದಿನವರ ಭುಜದ ಮೇಲೆ ನಿಂತಿರುವುದರಿಂದ ಮುಂದಿನ ದೂರದ ದರ್ಶನವಾಗುತ್ತದೆ”. ಹಿಂದಿನವರು ಕಂಡುಹಿಡಿದ ವಸ್ತುವಿಶೇಷಗಳ, ಚಿಂತನೆಗಳ ಮೇಲೆಯೇ ಹೊಸ ಅವಿಷ್ಕಾರಗಳು ತಲೆ ಎತ್ತಿ ನಿಂತಿವೆ. ಹಳೆಯ ತಳಹದಿಯ ಮೇಲೆ ಹೊಸತರ ಗಗನಚುಂಬಿ ಮನ ಸೆಳೆಯುತ್ತಿದೆ. ಹಿಂದಿನ ಸಿದ್ಧಾಂತಗಳು ಹೊಸ ಮೆರಗು ಪಡೆದಿವೆ. ಹೀಗೆ ಇವೆರಡೂ ಅವಿಚ್ಛನ್ನವಾಗಿ ಸೇರಿರುವುದರಿಂದಲೇ ಮನುಷ್ಯನ ವಿಶ್ವಜೀವನ ತರಂಗ ತರಂಗವಾಗಿ, ಸದಾಕಾಲ ಹರಿಯುತ್ತಲೇ ಬಂದಿದೆ.ಆದ್ದರಿಂದ ಪ್ರಪಂಚದ ಮೂಲಸತ್ವವೇ ಈ ಹಳೆಯ-ಹೊಸತುಗಳ ಮೇಳೈಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT