ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸೂರ್ಯ-ಕಮಲ

Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ |
ಬಗಿದು ನರನೆದೆಯ, ಜೀವನ ಪಿಡಿದು ಕುಲುಕೆ ||
ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ |
ಜಗ ಸೂರ್ಯ ನೀಂ ಕಮಲ - ಮಂಕುತಿಮ್ಮ
⇒|| 618 ||

ಪದ-ಅರ್ಥ: ಸಂಭ್ರಮಂಗಳುಲಿ=ಸಂಭ್ರಮಂ
ಗಳ+ಉಲಿ(ಧ್ವನಿ), ಬಗಿದು=ಸೀಳಿ, ನರನೆದೆಯ=ನರನ+ಎದೆಯ, ಕುಲುಕೆ=ಕುಲುಕಾಡಿ
ಸಿದರೆ, ಸೊಗಯಿಪುದು=ಸೊಗಸೆನಿಸುವುದು.

ವಾಚ್ಯಾರ್ಥ: ಜಗತ್ತಿನ ಸಂತಾಪ, ಸಂತೋಷ, ಸಂಭ್ರಮಗಳ ಧ್ವನಿ, ಮನುಷ್ಯನ ಎದೆಯನ್ನು ಸೀಳಿ, ಜೀವವನ್ನು ಹಿಡಿದು ಕುಲುಕುತ್ತವೆ. ಅವು ಕವಿಗಳಿಗೆ, ಕಲಾವಿದರಿಗೆ, ರಸಿಕರಿಗೆ ಸೊಗಸೆನಿಸುತ್ತವೆ. ಜಗತ್ತು ಸೂರ್ಯನಾದರೆ, ನೀನು ಕಮಲ.

ವಿವರಣೆ: ವಾಲ್ಮೀಕಿ ಮಹರ್ಷಿಗಳು ತಮಸಾ ನದೀ ತೀರದಲ್ಲಿ ಕುಳಿತಾಗ, ಸಂತೋಷದಿಂದ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಯ ಜೋಡಿಯನ್ನು ನೋಡುತ್ತಿದ್ದರು. ಆಗ ಬೇಡನೊಬ್ಬ ಬಾಣಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಅದರ ಸಂಗಾತಿ ಹೆಣ್ಣು ಪಕ್ಷಿ ಸಂಕಟದಿಂದ ಗೋಳಿಡುತ್ತದೆ. ಈ ಹೃದಯವಿದ್ರಾವಕ ಘಟನೆಯನ್ನು ನೋಡಿ, ಕರುಣೆ, ದುಃಖ, ಕೋಪದಿಂದ ವಾಲ್ಮೀಕಿಗಳು ಬೇಡನನ್ನು ಶಪಿಸುತ್ತಾರೆ. ಅವರಿಗರಿವಿಲ್ಲದಂತೆ ಶ್ಲೋಕವೊಂದು ಹೊರಟಿತು.
ಮಾ ನಿಷಾದ ಪ್ರತಿಷ್ಠಾಂ ತ್ವಂ ಆಗಮಃ ಶಾಶ್ವತೀ ಸಮಾಃ |
ಯತ್ ಕ್ರೌಂಚಮಿಥುನಾದೇಕಂ ಅವಧೀಃ ಕಾಮಮೋಹಿತಮ್ ||

ಆ ಸಮಯಕ್ಕೆ ಬ್ರಹ್ಮದೇವ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾನೆ. ಮಹರ್ಷಿ ವಾಲ್ಮೀಕಿ 24,000 ಶ್ಲೋಕಗಳನ್ನೊಳಗೊಂಡ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಪ್ರಪಂಚಕ್ಕೆ ಮೊದಲ ಮಹಾಕಾವ್ಯ ದೊರಕಿತು. ಇದು ಒಂದು ಘಟನೆಗೆ, ಸಿದ್ಧವಾದ ಮನಸ್ಸು ನೀಡಿದ ಫಲ.

ನಳ ದಮಯಂತಿಯರ ಕಥೆಯನ್ನು ಕೇಳಿ, ಅದರಿಂದ ಪ್ರಭಾವಿತರಾದ ರಾಜಾ ರವಿವರ್ಮರ ಚಿತ್ರ ಅಮರವಾದದ್ದು. ದಮಯಂತಿ, ತನ್ನ ಮುಂದೆ ಶಿಲಾಸ್ತಂಭದ ಮೇಲೆ ಕುಳಿತು ನಳನ ಸಮಾಚಾರವನ್ನು ತಿಳಿಸುತ್ತಿರುವ ಹಂಸೆಯನ್ನು ಏಕಾಗ್ರತೆಯಿಂದ ಕೇಳುವ ಚಿತ್ರ ಅದ್ಭುತ. ಅದರಂತೆ ಮಹಾಭಾರತದ ಕಥೆಯಿಂದ ಪ್ರೇರಿತರಾಗಿ ಎಸ್.ಎಂ.ಪಂಡಿತರು ರಚಿಸಿರುವ ಸಾಲು ಸಾಲು ವರ್ಣಚಿತ್ರಗಳು ಇಡೀ ಮಹಾಭಾರತವನ್ನು ನಮ್ಮ ಕಣ್ಣ ಮುಂದೆ ಕಟ್ಟುತ್ತವೆ. ತಮ್ಮ ಬದುಕಿನಲ್ಲಾದ ಪ್ರಸಂಗವೊಂದು ಕನಕದಾಸರ ಅತ್ಯಂತ ಮನಮೋಹಕವಾದ, ಆರ್ತವಾದ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎಂಬ ಹಾಡಾಗಿ ಹರಿಯಿತು. ಮೇನಕೆ ಮತ್ತು ವಿಶ್ವಾಮಿತ್ರರ ಮಗಳು ಶಕುಂತಲೆ ದುಷ್ಯಂತನನ್ನು ಮದುವೆಯಾಗಿ ಭರತನನ್ನು ಪಡೆಯುವ ಕಥೆ ಕಾಳಿದಾಸನ ಮಹಾಪ್ರತಿಭೆಯನ್ನು ಕೆಣಕಿ ‘ಅಭಿಜ್ಞಾನ ಶಾಕುಂತಲ’ ನಾಟಕ ರಚನೆಗೆ ಕಾರಣವಾಯಿತು. ಆ ಶಾಕುಂತಲ ನಾಟಕದ ಒಂದು ಸಾಲು ‘ಯಯಾತಿಗೆ ಶರ್ಮಿಷ್ಠೆ ಹೇಗೆ ಪ್ರಿಯಳಾಗಿದ್ದಳೋ, ನೀನೂ ಹಾಗೆಯೇ ನಿನ್ನ ಗಂಡನಿಗೆ ಪ್ರಿಯಳಾಗಿರು’ ವಿ.ಎಸ್. ಬಾಂಡೇಕರ್ ಅವರಿಂದ ‘ಯಯಾತಿ’ಯಂತಹ ಮಹೋನ್ನತ ಕೃತಿಯನ್ನು ರಚಿಸಲು ನೆಪವಾಯಿತು.

ಕಗ್ಗ ಆ ಮಾತನ್ನೇ ಹೇಳುತ್ತದೆ. ಜಗದ ಸಂತೋಷ, ತಾಪ, ಸಂಭ್ರಮಗಳು ಮನುಷ್ಯನ ಮನಸ್ಸನ್ನು ಕುಲುಕುವುದು ಮಾತ್ರವಲ್ಲ. ಸಾಹಿತ್ಯಕ್ಕೆ, ಸಂಗೀತಕ್ಕೆ, ಕಲೆಗೆ ಕಾರಣವಾಗಿ ಹೃದಯವನ್ನು ಅರಳಿಸುತ್ತವೆ. ಜಗತ್ತು ಸೂರ್ಯನಾದರೆ ಮನುಷ್ಯ ಕಮಲವಿದ್ದಂತೆ. ಕಮಲದ ಅರಳುವಿಕೆ, ಮುದುಡುವಿಕೆ ಸೂರ್ಯನ ಮೇಲೆ ಅವಲಂಬಿತವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT