ಬುಧವಾರ, ಆಗಸ್ಟ್ 10, 2022
25 °C

ಬೆರಗಿನ ಬೆಳಕು: ಸದ್ದಿಲ್ಲದ ಸಾಧನೆಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ || 661 ||

ಪದ-ಅರ್ಥ: ಇಳೆ=ಭೂಮಿ, ಮೊಳಕೆಯೊಗೆವಂದು=ಮೊಳಕೆ+ಒಗೆವಂದು (ಬರುವಾಗ), ಮಾಗುವಂದು=ಮಾಗುವ (ಹಣ್ಣಾಗುವ)+ಅಂದು, ಬೆಳಕೀವ=ಬೆಳಕ+ಈವ(ಕೊಡುವ).

ವಾಚ್ಯಾರ್ಥ: ಭೂಮಿಯಿಂದ ಮೊಳಕೆ ಬರುವಾಗ ತಮಟೆಯ ಸದ್ದಿಲ್ಲ, ಹಣ್ಣು ಪಕ್ವವಾಗುವಾಗ ಯಾರೂ ತುತ್ತೂರಿಯನ್ನು ಊದಲಿಲ್ಲ, ಬೆಳಕನ್ನು ನೀಡುವ ಸೂರ್ಯಚಂದ್ರರದು ಯಾವ ಸದ್ದೂ ಇಲ್ಲ. ಆದ್ದರಿಂದ ನಿನ್ನ ತುಟಿಗಳನ್ನು ಹೊಲಿದುಕೊಂಡು ಮೌನವಾಗಿರು.

ವಿವರಣೆ: ಒಂದಿಷ್ಟು ಕೆಲಸವಾದರೆ ಅಷ್ಟಾಯಿತು ಎಂದು ಬಡಾಯಿ ಕೊಚ್ಚಿಕೊಳ್ಳುತ್ತೇವೆ, ಎಲ್ಲರ ಮುಂದೆ ಸದಾಕಾಲ ಹೇಳಿಕೊಳ್ಳುತ್ತೇವೆ. ಈ ಬಂಡ್ವಾಳಿಲ್ಲದ ಬಡಾಯಿಗೆ ಯಾವ ಅರ್ಥವೂ ಇಲ್ಲ. ಪ್ರಪಂಚದಲ್ಲಿ ಎಂತೆಂತಹ ಪವಾಡಸದೃಶ ಕೆಲಸಗಳಾಗುತ್ತವೆ. ಅವುಗಳಿಂದ ಜಗತ್ತು ನಡೆಯುತ್ತಿದೆ. ಆದರೆ ಅವುಗಳ ಬಗ್ಗೆ ಒಂದು ಮಾತೂ ಇಲ್ಲ, ಈಗ ನಾಲ್ಕು ವರ್ಷಗಳ ಹಿಂದೆ ನನಗೊಂದು ಅನುಭವವಾಗಿತ್ತು. ಅಮೇರಿಕೆಯ ಅತ್ಯಂತ ಪ್ರಸಿದ್ಧವಾದ ವಿಶ್ವವಿದ್ಯಾಲಯದಲ್ಲಿ ನನ್ನದೊಂದು ಉಪನ್ಯಾಸ. ಎರಡು ತಾಸಿನ ಉಪನ್ಯಾಸ ಮುಗಿಯಿತು. ಹಿಂದಿನ ಸಾಲಿನಲ್ಲಿ ಕುಳಿತಿದ್ದ ಹಿರಿಯರೊಬ್ಬರು ಎದ್ದು ಮುಂದೆ ಬಂದರು. ಉದ್ದ ಬಿಳೀ ಕೂದಲು ಹಿಂದೆ ಹಾರಾಡುತ್ತಿದ್ದವು. ಬಂದವರೇ ಕೈಚಾಚಿ, ‘ಓಹ್, ನಿಮ್ಮ ಉಪನ್ಯಾಸ ತುಂಬ ಚೆನ್ನಾಗಿತ್ತು. ನನ್ನನ್ನು ಬಾಲ್ಯಕ್ಕೆ ಕರೆದುಕೊಂಡು ಹೋದಿರಿ’ ಎಂದರು. ನಾನೂ ಕೈಚಾಚಿ ಅವರ ಕೈ ಕುಲುಕಿದೆ.

ನನ್ನ ಜೊತೆಗಿದ್ದವರು ಅವರ ಹೆಸರನ್ನು ಹೇಳಿದರು. ನಾನು ‘ಬಹಳ ಸಂತೋಷ’ ಎಂದೆ. ನಂತರ ಅವರು, ‘ಇವರು ಅರ್ಥಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕ ಪಡೆದವರು’ ಎಂದು ಸೇರಿಸಿದಾಗ, ನನಗೆ ಒಂದು ಕ್ಷಣ ಏನು ಹೇಳಬೇಕೆಂದು ತೋಚಲಿಲ್ಲ. ಅಷ್ಟು ದೊಡ್ಡ ಸಾಧನೆಯನ್ನು ಮಾಡಿದ ವ್ಯಕ್ತಿ, ಎರಡು ತಾಸು ತರಗತಿಯಲ್ಲಿ ಕುಳಿತು, ಈಗ ಮೆಚ್ಚಿಗೆಯ ಮಾತುಗಳನ್ನು ಹೇಳುತ್ತಾರಲ್ಲ ಎಂದು ಆಶ್ಚರ್ಯವಾಯಿತು. ನಾನು ‘ಸರ್, ತಾವು ನೋಬೆಲ್ ಪುರಸ್ಕೃತರು ಎಂಬುದು ನನಗೆ ಗೊತ್ತಿರಲಿಲ್ಲ’ ಎಂದೆ. ಅದಕ್ಕೆ ಅವರು ಹೇಳಿದ ಮಾತು, ನನಗೊಂದು ಬದುಕಿನ ಪಾಠವಾಯಿತು. ಅವರು ನನ್ನ ಕೈಯನ್ನು ಮತ್ತಷ್ಟು ಬಲವಾಗಿ ಒತ್ತಿ, ‘oh, forget it, ಓಹ್, ಅದನ್ನು ಮರೆತುಬಿಡಿ. ನೋಬೆಲ್ ಬಂದದ್ದು ಅರ್ಥಶಾಸ್ತ್ರಕ್ಕೆ, ನನಗಲ್ಲ’ ಎಂದು ಜೋರಾಗಿ ನಕ್ಕರು. ನಾನು ಬೆರಗಾದೆ. ಅಂಥ ಶ್ರೇಷ್ಠ ಪುರಸ್ಕಾರ ಬಂದದ್ದು ತನಗಲ್ಲ, ಅದು ಶಾಸ್ತ್ರಕ್ಕೆ ಎಂದ ಮನುಷ್ಯನ ಬಗ್ಗೆ ನನ್ನ ಗೌರವ ಆಕಾಶಕ್ಕೇರಿತು. ನಮ್ಮಲ್ಲಿ ಬಹಳ ಜನ ತಮ್ಮ ಪದವಿ ಸರ್ಟಿಫಿಕೇಟನ್ನೇ ಗೋಡೆಗೆ ಅಲಂಕಾರವಾಗಿ ಹಾಕಿ, ಪಾಸಾದದ್ದು ನಾನೇ ಎಂದು ದಿನವೂ ಖಚಿತಪಡಿಸಿಕೊಳ್ಳಲು ಒದ್ದಾಡುವಾಗ ಇಂಥ ಸಾಧಕರ ಸರಳತೆ ಅಚ್ಚರಿ ತಂದಿತ್ತು.

ಆಗ ಈ ಕಗ್ಗದ ಮಾತು ತುಂಬ ಸತ್ಯ ಎನ್ನಿಸಿತು. ನಮಗೆ ಆಹಾರ ಕೊಡುವ ಕಾಳು ಮೊಳಕೆಯಾಗುವಾಗ ಯಾವ ಅಬ್ಬರವಿಲ್ಲ. ಬದುಕಿಗೆ ಪೋಷಕವಾಗುವ ಹಣ್ಣು ಮಾಗುವಾಗ ಯಾವ ಘೋಷಣೆಗಳಿಲ್ಲ, ಪ್ರಪಂಚದ ಎಲ್ಲ ಚಟುವಟಿಕೆಗಳಿಗೆ ಮೂಲಕಾರಣವಾದ ಸೂರ್ಯೋದಯ-ಚಂದ್ರೋದಯಗಳಾಗುವಾಗ ಯಾವ ವಿಶೇಷ ಪ್ರಕಟಣೆಗಳಿಲ್ಲ, ಆದರೆ ನಮ್ಮ ಸಣ್ಣ ಸಣ್ಣ ಸಾಧನೆಗಳ ಬಗ್ಗೆ ಇಷ್ಟೊಂದು ಹೇಳಿಕೊಳ್ಳುತ್ತೇವಲ್ಲ? ಇದು ನಾಚಿಕೆಗೇಡಲ್ಲವೇ? ಅದಕ್ಕೇ ಕಗ್ಗ ನಮ್ಮ ಬಾಯಿಬಡುಕ ತುಟಿಗಳನ್ನು ‘ಹೊಲಿದುಕೋ’ ಎಂದು ಎಚ್ಚರಿಕೆ ಕೊಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.