ಮಂಗಳವಾರ, ಫೆಬ್ರವರಿ 18, 2020
26 °C

ಪ್ರಕೃತಿಯ ಆಹ್ವಾನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸಮವಿಲ್ಲ ಸೃಷ್ಟಿಯಲಿ, ನರನಂತೆ ನರನಿಲ್ಲ |
ಕ್ಷಮೆಯುಮವಳೊಳಗಿಲ್ಲ, ಕರ್ಮದಂತೆ ಫಲ ||
ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ |
ನಮಗವಳ್ ಪ್ರಸ್ಪರ್ಧಿ – ಮಂಕುತಿಮ್ಮ || 239 ||

ಪದ-ಅರ್ಥ: ಕ್ಷಮೆಯುಮವಳೊಳಗಿಲ್ಲ=ಕ್ಷಮೆಯುಂ+ಅವಳೊಳಗಿಲ್ಲ, ನೀಮಾಗಿಸಿರಿ=ನೀವುಂ(ನೀವು)+ಆಗಿಸಿರಿ (ಮಾಡಿ ತೋರಿಸಿ), ನೋಳ್ಪೆನಾನೆನುತೆ=ನೋಳ್ಪೆ(ನೋಡುತ್ತೇನೆ), ನಾನು+ಎನುತೆ, ಪ್ರಸ್ಪರ್ಧಿ=ಪ್ರತಿಸ್ಪರ್ಧಿ.
ವಾಚ್ಯಾರ್ಥ: ಸೃಷ್ಟಿಯಲ್ಲಿ ಯಾವುದೂ ಸಮನಾಗಿಲ್ಲ. ಒಬ್ಬ ಮನುಷ್ಯನಂತೆ ಮತ್ತೊಬ್ಬನಿಲ್ಲ, ಪ್ರಕೃತಿಯಲ್ಲಿ ಕ್ಷಮೆ ಇಲ್ಲ. ಅವರವರ ಕರ್ಮದಂತೆ ಫಲ. ಸಾಧ್ಯವಾದರೆ ಕ್ರಮವೊಂದನ್ನು ನೀವು ಆಗಿಸಿರಿ, ನಾನು ನೋಡುತ್ತೇನೆ ಎನ್ನುವ ಪ್ರಕೃತಿ ನಮಗೆ ಪ್ರತಿಸ್ಪರ್ಧಿ.

ವಿವರಣೆ: ಅಸಮಾನತೆ ಪ್ರಕೃತಿಯ ಸಾಮಾನ್ಯ ನಿಯಮ. ಒಂದು ಬೆಟ್ಟ ಮತ್ತೊಂದು ಬೆಟ್ಟದ ಹಾಗಿಲ್ಲ, ಒಂದು ಮರ ಮತ್ತೊಂದರಿಂದ ಭಿನ್ನ. ಒಂದು ಹಣ್ಣಿನ ರುಚಿ, ಗುಣ ಮತ್ತಾವುದೇ ಹಣ್ಣಿಗಿಲ್ಲ. ಅದೇ ರೀತಿ ಒಬ್ಬ ಮನುಷ್ಯನಂತೆ ಮತ್ತೊಬ್ಬ ಮನುಷ್ಯನಿಲ್ಲ. ಈ ಪ್ರಕೃತಿಯಲ್ಲಿ ಕ್ಷಮೆ ಎಂಬುದೇ ಇಲ್ಲ. ಅಲ್ಲಿ ತಾಳ್ಮೆ ಇದೆ ಆದರೆ ಕ್ಷಮೆ ಇಲ್ಲ. ಮನುಷ್ಯ ನಿರ್ದಯವಾಗಿ ಮರಗಿಡಗಳನ್ನು ಕತ್ತರಿಸಿ ಕಾಡನ್ನು ಸವರಿಬಿಡುತ್ತಾನೆ, ಹರಿಯುವ ನೀರಿನ ದಿಕ್ಕನ್ನು ಬದಲಿಸುತ್ತಾನೆ, ನೆಲದ ಹೊಟ್ಟೆಯನ್ನು ಬಗಿದು ಬರಿದು ಮಾಡುತ್ತಾನೆ. ಒಂದು ಹಂತದವರೆಗೆ ಪ್ರಕೃತಿ ಅದನ್ನು ತಾಳುತ್ತದೆ. ಮನುಷ್ಯನ ನಿರ್ದಯತೆಯನ್ನು ಸರಿಯಾಗಿ ಲೆಕ್ಕವಿಟ್ಟು, ಸಮಯ ಬಂದಾಗ ತನ್ನ ಬಲವನ್ನು ತೋರಿ ಮನುಷ್ಯನ ಬದುಕನ್ನು ದುರ್ಭರಗೊಳಿಸುತ್ತದೆ.

ಈ ಪ್ರಪಂಚದಲ್ಲಿ ಪ್ರತಿಯೊಂದು ಕರ್ಮಕ್ಕೆ ತಕ್ಕುದಾದ ಫಲವಿದೆ. ಮನುಷ್ಯ ಒಳ್ಳೆಯ ಕರ್ಮಗಳನ್ನು ಮಾಡಿದರೆ ಅದಕ್ಕೆ ಸರಿಯಾದ ಶುಭಪಲ ದೊರೆಯುತ್ತದೆ. ಒಳ್ಳೆಯ ಬೀಜಗಳನ್ನು ಹಾಕಿದರೆ, ಪರಿಸರವನ್ನು ಕಾಪಾಡಿಕೊಂಡರೆ ಪ್ರಕೃತಿ ಸುಂದರ ವಾತಾವರಣದ ಫಲವನ್ನು ನೀಡುತ್ತದೆ. ಅದೇ ರೀತಿ ಕೆಟ್ಟಕರ್ಮಗಳಿಗೆ ಪ್ರತಿಫಲವಾಗಿ ಸುನಾಮಿ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಕಾಡಿನ ಬೆಂಕಿಗಳು ಮನುಷ್ಯನಿಗೆ ಶಿಕ್ಷೆ ನೀಡುತ್ತವೆ.

ಇದನ್ನು ಗಮನಿಸಿದರೆ ಪ್ರಕೃತಿ ನಮ್ಮ ಪ್ರತಿಸ್ಪರ್ಧಿಯೇನೋ ಎನ್ನಿಸುವಂತಿದೆ. ನನ್ನಲ್ಲಿಯ ಅಸಮಾನತೆಯ ಬಗ್ಗೆ ಚಿಂತಿಸುತ್ತೀರಲ್ಲ, ನೀವು ಮನುಷ್ಯರಲ್ಲಿ ಎಲ್ಲವೂ ಸಮಾನವಾಗಿದೆಯೇ, ನಿಮ್ಮ ನಡೆ, ನುಡಿಗಳೆಲ್ಲ ಸರಿಯಾಗಿವೆಯೇ? ಅವೆಲ್ಲವುಗಳನ್ನು ಸರಿಮಾಡಿ ಒಂದು ಕ್ರಮವನ್ನು ವ್ಯವಸ್ಥೆಗೊಳಿಸಿ. ಅದನ್ನು ಹೇಗೆ ಮಾಡುತ್ತೀರೋ ನಾನೂ ನೋಡುತ್ತೇನೆ ಎಂದು ಪ್ರಕೃತಿ ಹೇಳುವಂತೆ ತೋರುತ್ತದೆ.

ಇದರ ಅರ್ಥ ಬಹಳ ಸುಂದರ. ಪ್ರಕೃತಿಯಲ್ಲಿಯ ಅಸಮಾನತೆ ಪ್ರಪಂಚದಲ್ಲಿ ಯಾವ ತೊಂದರೆಯನ್ನೂ ಉಂಟು ಮಾಡುವುದಿಲ್ಲ. ಆದರೆ ಮಾನವ ತನ್ನ ಕುತ್ಸಿತ ಮನೋಭಾವದಿಂದ ಸೃಷ್ಟಿಸಿಕೊಂಡ ಅಸಮಾನತೆ ಪ್ರಪಂಚವನ್ನು ಅಪಾಯದ ಅಂಚಿಗೆ ತಳ್ಳುತ್ತದೆ. ಅದಕ್ಕೇ ಪ್ರಕೃತಿ ನಮಗೆ ಆಹ್ವಾನ ನೀಡುತ್ತಿರುವಂತೆ ತೋರುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)