ಶನಿವಾರ, ಫೆಬ್ರವರಿ 22, 2020
19 °C

ಅಗತ್ಯವಾದ ಯೋಗ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು|
ಅಸಮಂಜಸದಿ ಸಮನ್ವಯ ಸೂತ್ರ ನಯವ ||
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ |
ರಸಿಕತೆಯ ಯೋಗವೆಲೊ – ಮಂಕುತಿಮ್ಮ || 241 ||

ಪದ-ಅರ್ಥ: ಅಸಮಂಜಸ=ಸರಿಯಾಗಿ ಇಲ್ಲದಿರುವುದು, ವೆಸನಮಯ=ದುಃಖದಿಂದ ತುಂಬಿದ, ಕಾಣ್ಬ=ಕಾಣಬಲ್ಲ.
ವಾಚ್ಯಾರ್ಥ: ಅಸಮಾನತೆಯಲ್ಲಿ ಸಮಾನತೆಯನ್ನು, ವೈಷಮ್ಯದಲ್ಲಿ ಸ್ನೇಹವನ್ನು, ಎಲ್ಲವೂ ಸರಿಯಾಗಿ ಇಲ್ಲದಿದ್ದಲ್ಲಿ ಸಮನ್ವಯತೆಯನ್ನು, ಹೊಂದಾಣಿಕೆಯನ್ನು, ದುಃಖ ತುಂಬಿದ ಸಂಸಾರದಲ್ಲಿ ಸೊಗಸನ್ನು ಕಾಣುವ ರಸಿಕತೆಯೇ ನಿಜವಾದ ಯೋಗ.

ವಿವರಣೆ: ಇದೊಂದು ಅದ್ಭುತವಾದ ಚೌಪದಿ. ಮನುಷ್ಯ ಬದುಕಿನಲ್ಲಿ ಹೇಗೆ ಇರಬೇಕು ಎಂಬುದನ್ನು ಸೂತ್ರರೂಪವಾಗಿ ಕಣ್ಣಮುಂದೆ ಇಡುತ್ತದೆ. ಈ ಲೋಕ ಒಂದು ವ್ಯಾಯಾಮ ಶಾಲೆ ಇದ್ದಂತೆ. ನಾವು ವ್ಯಾಯಾಮಶಾಲೆಗೆ ಯಾಕೆ ಹೋಗುತ್ತೇವೆ? ಅದನ್ನು ಸರಿಮಾಡಲೆಂದೇ? ಇಲ್ಲ. ಅಲ್ಲಿಯ ಪರಿಕರಗಳನ್ನು ಬಳಸಿಕೊಂಡು ನಮ್ಮ ಶರೀರವನ್ನು ಸುಂದರವಾಗಿಸುವುದಕ್ಕೆ, ಹುರಿಗೊಳಿಸಿ ಬಲಿಷ್ಠವಾಗಿಸುವುದಕ್ಕೆ. ಅಲ್ಲಿ ಏನೇನೋ ಉಪಕರಣಗಳಿವೆ. ಕೆಲವೊಮ್ಮೆ ಅವನ್ನೆಲ್ಲ ಯಾಕೆ ಇಟ್ಟಿದ್ದಾರೋ, ಅವುಗಳಿಂದ ಏನು ಪ್ರಯೋಜನವೋ ಎನ್ನಿಸಬಹುದು. ತಲೆಕೆಡಿಸಿಕೊಳ್ಳುವುದು ಬೇಡ. ಅವುಗಳನ್ನು ಬಳಸುವವರು ಬೇರೆ ಇದ್ದಾರೆ. ನಿಮಗೆ ಯಾವುದು ಅವಶ್ಯಕವೋ ಅದನ್ನು ಬಳಸಿ ಸಂತೋಷಪಡಿ. ಬದುಕಿನಲ್ಲಿ ಬರುವ ಸುಖ-ದುಃಖಗಳು ವ್ಯಾಯಾಮಶಾಲೆಯ ಉಪಕರಣಗಳಿದ್ದಂತೆ. ಅವು ನಮ್ಮನ್ನು ಗಟ್ಟಿ ಮಾಡುತ್ತವೆ. ಆ ವ್ಯಾಯಾಮ ಶಾಲೆಯಂತೆ ಈ ಲೋಕದಲ್ಲಿ ಅನೇಕ ವಸ್ತುಗಳು, ಜನರು, ಚಿಂತನೆಗಳೆಲ್ಲ ಇವೆ. ಅವುಗಳಲ್ಲಿ ನಮಗೆ ಅಸಮಾನತೆ ಕಾಣುತ್ತದೆ.

ಮೃಗಾಲಯಕ್ಕೆ ಹೋದಾಗ ಅತ್ಯಂತ ಬಲಿಷ್ಠವಾದ ಆನೆಗೆ ತಿನ್ನಲು ಬರೀ, ಹುಲ್ಲು, ಬೆಲ್ಲ, ಹಣ್ಣುಗಳು, ಹತ್ತಿರದ ಬೋನಿನಲ್ಲೇ ಇದ್ದ ಹುಲಿಗೆ ಮಾಂಸ; ಹಕ್ಕಿಗಳಿಗೆ ಬರೀ ಕಾಳು! ಇದು ಅಸಮಾನತೆಯಲ್ಲ, ಸಮತೆ. ಸಮತೆಯೆಂದರೆ ಯಾರಿಗೆ ಯಾವುದು ಅವಶ್ಯಕವೋ, ಸರಿಯೋ ಅದನ್ನೇ ಕೊಡುವುದು. ಆದರೆ ತೋರಿಕೆಯ ಅಸಮಾನತೆಯಲ್ಲಿ ಒಂದು ಸುಂದರವಾದ ಸಮಾನತೆ ಅಡಗಿದೆ. ಅದು, ಎಲ್ಲ ಪ್ರಾಣಿ, ಪಕ್ಷಿಗಳಲ್ಲಿರುವ ಏಕವಿಧವಾದ ಪ್ರೀತಿ. ಇದು ಅಸಮತೆಯಲ್ಲಿಯ ಸಮತೆ.
ಸೃಷ್ಟಿಯಲ್ಲಿ ಎಷ್ಟೊಂದು ವಿಷಯಗಳು ಸಮಂಜಸವಾಗಿಲ್ಲವೆನ್ನಿಸುತ್ತದೆ. ಮೇಲೆ ಏಳುವುದಕ್ಕೆ ಶಕ್ತಿ ಇಲ್ಲದೆ ನೆಲದ ಮೇಲೆ ತೆವಳುವ ಕುಂಬಳಕಾಯಿ ಬಳ್ಳಿಗೆ ಫುಟಬಾಲ್‍ನಂತಹ ಭಾರೀ ಹಣ್ಣು, ನೂರಾರು ವರ್ಷ ಬಾಳುವ ಬೃಹತ್ ಆಲದ ಮರಕ್ಕೆ ಪುಟ್ಟ ಪುಟ್ಟ ಹಣ್ಣುಗಳು! ಹೀಗೆ ಅನೇಕ ವಸ್ತುಗಳು, ವಿಷಯಗಳು ಸರಿಯಾಗಿಲ್ಲ ಎಂದು ಮೇಲ್ನೋಟಕ್ಕೆ ತೋರುತ್ತದೆ. ಆದರೆ ಚಿಂತಿಸಿದಾಗ ಈ ಅಸಮಂಜಸತೆಯಲ್ಲೊಂದು ಸಮನ್ವಯತೆ ಕಾಣುತ್ತದೆ. ಆಲದ ಮರದ ಕೆಳಗೆ ಮಲಗಿಕೊಂಡವನ ಮೇಲೆ ಕುಂಬಳಕಾಯಿ ಗಾತ್ರದ ಹಣ್ಣು ಬಿದ್ದರೆ ಏನು ಗತಿಯಾದೀತು? ಅವು ಎಲ್ಲಿರಬೇಕೋ, ಹೇಗಿರಬೇಕೋ ಸರಿಯಾಗಿವೆ ಎನ್ನುವುದು ಸಮನ್ವಯ.

ಈ ಜಗತ್ತು ದುಃಖಮಯವಾದದ್ದು ಎಂಬ ಭಾವನೆ ಹಲವರದ್ದು. ಅಲ್ಲಮಪ್ರಭು ಹೇಳಿದಂತೆ, “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ” ಎಂಬುದು ಸರಿ ಎನ್ನಿಸುತ್ತದೆ. ಆದರೆ ಕೊರಗಿ ಫಲವೇನು? ಭೂಮಿಗೆ ಬಂದಿದ್ದೇವೆ, ಒಂದು ದಿನ ತೆರಳುತ್ತೇವೆ. ಈ ನಡುವಿನ ಅವಧಿಯಲ್ಲಿ ಕೊರಗಿ, ಕೊರಗಿ, ನರಳಿ, ನರಳಿ ಬದುಕಬೇಕೆ? ನರಳುವಿಕೆಯೇ ಬದುಕೆ? ಬೇಡ, ಈ ಎಲ್ಲ ಸಂಕಟಗಳ, ದುಃಖಗಳ ಮಧ್ಯೆ ಒಂದಿಷ್ಟು ಸಂತೋಷ, ಪ್ರೀತಿ, ಸಂಬಂಧ ಸುಖ ಇವೆ. ಅವುಗಳನ್ನು ಕಂಡು ಬದುಕನ್ನು ಹಗುರಗೊಳಿಸುವುದೇ ರಸಿಕತೆ. ಅದೇ ಯೋಗ.

ಹೀಗೆ ಲೋಕದಲ್ಲಿ ಸಮತೆಯನ್ನು, ಸಮನ್ವಯತೆಯನ್ನು, ಸಂತೋಷವನ್ನು ಕಾಣುವ ದೃಷ್ಟಿ ಬೆಳೆಸಿಕೊಳ್ಳುವುದೇ ನಮಗೆ ಅನಿವಾರ್ಯವಾದ, ಅಗತ್ಯವಾದ ಯೋಗ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)