ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಗ್ರಹಣದಿಂದ ಮೋಕ್ಷ

Last Updated 15 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ರದನೋದಯಜ್ಪರಕೆ ಸಿಲುಕದಿಹ ಶಿಶುವಿರದು |
ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು
ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ |
ವಿಧುಬಿಂಬವೋ ನೀನು – ಮಂಕುತಿಮ್ಮ || 387 ||

ಪದ-ಅರ್ಥ: ರದನೋದಯ=ಹೊಸ ಹಲ್ಲು ಬರುವ ಸಮಯ, ವಿಧಿಯೊದೆಗೆ=ವಿಧಿಯ+
ಒದೆಗೆ, ರಾಹುದಂಷ್ಟ್ರದೆ=ರಾಹುವಿನ ಕೋರೆಹಲ್ಲುಗಳಿಂದ, ವಿಧುಬಿಂಬ=ವಿಧು(ಚಂದ್ರ)+ಬಿಂಬ

ವಾಚ್ಯಾರ್ಥ: ಮಗುವಿಗೆ ಹಲ್ಲು ಬರುವಾಗ ಜ್ವರ ಬಂದೇ ಬರುತ್ತದೆ. ಅಂತೆಯೇ ವಿಧಿಯ ಒದೆಗಳಿಗೆ ಸಿಲುಕದಿರುವ ಮನುಷ್ಯನಿಲ್ಲ. ಆದರೆ ಈ ಒದೆಗಳ ಪೆಟ್ಟು ನಿಂತಂದು ಮನುಷ್ಯ ರಾಹುವಿನ ದಾಡೆಗಳಿಂದ ಹೊರಬಂದ ಚಂದ್ರಬಿಂಬದಂತಾಗುತ್ತಾನೆ.

ವಿವರಣೆ: ಮಗುವಿಗೆ ಹಲ್ಲು ಮೂಡುವಾಗ ತುಂಬ ಕಷ್ಟವಾಗುತ್ತದೆ, ಜ್ವರ ಬರುತ್ತದೆ, ಭೇದಿಯಾಗುತ್ತದೆ. ಮಗುವಿಗೆ ಈ ಯಾವ ತೊಂದರೆಯೂ ಆಗುವುದು ಬೇಡವೆಂದರೆ ಹಲ್ಲು ಬರಬಾರದು. ಹಲ್ಲು ಬರುವುದು ನೈಸರ್ಗಿಕ ಕ್ರಿಯೆಯಾದ್ದರಿಂದ, ಹಲ್ಲು ಬಂದೇ ತೀರಬೇಕು ಮತ್ತು ಜ್ವರ ಬರಲೇಬೇಕು.

ಅದರಂತೆಯೇ ಮನುಷ್ಯರಾಗಿ ಭೂಮಿಗೆ ಬಂದ ಮೇಲೆ ವಿಧಿಯ ನಿಯಮಗಳಿಗೆ ನಮ್ಮನ್ನು ಒಡ್ಡಿಕೊಳ್ಳಲೇಬೇಕು. ವಿಧಿ ನಮ್ಮನ್ನು ಸಂತೋಷ, ದುಃಖಗಳ ಹಾವು-ಏಣಿಯಾಟದಲ್ಲಿ ತಳ್ಳುತ್ತದೆ. ಸುಖ, ದುಃಖಗಳೆರಡೂ ಒದೆಗಳೇ. ಆ ಒದೆಗಳನ್ನು ತಿನ್ನದ ಮನುಷ್ಯನೇ ಇಲ್ಲ. ಸಾಮಾನ್ಯನಾಗಲಿ, ಮಹಾತ್ಮನಾಗಲಿ ವಿಧಿಯ ಚಕ್ರದಲ್ಲಿ ಸಿಕ್ಕು ಘಾಸಿಗೊಳ್ಳದೆ ಇಲ್ಲ. ವಿಧಿ, ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನನ್ನು ವನವಾಸಕ್ಕೆ ಕಳುಹಿಸಿತು, ಪತ್ನಿಯಿಂದ ದೂರ ಮಾಡಿತು. ಕೂಡಿ ಕೆಲಕಾಲ ಸಂತೋಷವಿದ್ದರು ಎನ್ನುವುದರಲ್ಲಿ ಮತ್ತೆ ಬೇರ್ಪಡಿಸಿ ನೋವು ನೀಡಿತು.

ಪಾರ್ಥಸಾರಥಿಯಾದ ಕೃಷ್ಣನಿಗೆ ಎಷ್ಟೊಂದು ಕಂಟಕಗಳು! ತಾಯಿ ಹೋದರೂ ಸೋದರಮಾವ ಇರಬೇಕು ಎಂಬ ಮಾತಿದೆ. ಅಂದರೆ ತಾಯಿಯಷ್ಟೇ ಅಂತಃಕರಣಿ ಸೋದರಮಾವ ಎಂದರ್ಥ. ಆದರೆ ಶ್ರೀಕೃಷ್ಣನನ್ನು ಕೊಲ್ಲಲು ಸೋದರಮಾವನೇ ಹೊಂಚು ಹಾಕಿದ್ದ. ಕೃಷ್ಣನಿಗೆ ಕಳ್ಳತನದ ಅಪವಾದ ಬರಲಿಲ್ಲವೆ? ಮಥುರೆಯಿಂದ ಬಿಡುಗಡೆ ಹೊಂದಿ ದ್ವಾರಕೆಗೆ ಹೋದರೂ ತೊಂದರೆಗಳು ತಪ್ಪಿದವೆ? ಅತ್ಯಂತ ಶೃದ್ಧೆಯ ಭಕ್ತನಾದ ಅಂಬರೀಷನಿಗೆ ಎಂಥ ಕಂಟಕ ಬಂದಿತಲ್ಲ!

ಸತ್ಯಸಂಧತೆಗೆ ಮತ್ತೊಂದು ಹೆಸರೇ ಎಂಬಂತಿದ್ದ ಹರಿಶ್ಚಂದ್ರನನ್ನು ವಿಧಿ ಕಾಡಿದ್ದು ಪರಿಪರಿಯಿಂದ. ಹೆಂಡತಿ ಮಕ್ಕಳನ್ನು ಮಾರಿಕೊಂಡು, ತಾನು ಸುಡುಗಾಡು ಕಾಯ್ದು, ಹಾವು ಕಚ್ಚಿ ಸತ್ತ ಮಗನ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದ ಹೆಂಡತಿಯನ್ನು ಕೊನೆಗೆ ಕೊಲ್ಲಬೇಕಾದ ಪ್ರಮೇಯ ಬಂದದ್ದನ್ನು ಹರಿಶ್ಚಂದ್ರ ತಡೆದುಕೊಂಡದ್ದು ಅದ್ಭುತ.

ಆದರೆ ಈ ಕಗ್ಗ ಒಂದು ಬಹುದೊಡ್ಡ, ನಿರೀಕ್ಷೆಯನ್ನು, ಆಶಾವಾದವನ್ನು ನೀಡುತ್ತದೆ. ವಿಧಿ ನೀಡುವ ಕಷ್ಟಗಳು ನಮ್ಮನ್ನು ಹಣ್ಣು ಮಾಡುತ್ತವೆ, ನಿಜ. ಆದರೆ ಉಸಿರು ಬಿಗಿಹಿಡಿದು ಕಷ್ಟಗಳ ಕಣಿವೆಗಳನ್ನು, ಧರ್ಮಮಾರ್ಗದಿಂದ ದಾಟಿ ಹೊರಬಂದರೆ ವ್ಯಕ್ತಿತ್ವ ಮೊದಲಿಗಿಂತ ಉಜ್ವಲವಾಗುತ್ತದೆ. ರಾಹುವಿನ ದವಡೆಯಿಂದ ಪಾರಾಗಿ, ಗ್ರಹಣದ ನಂತರ, ಹೊರಬಂದ ಚಂದ್ರನಂತೆ ಪ್ರಕಾಶಮಾನವಾಗುತ್ತದೆ. ಮೇಲೆ ಹೇಳಿದ ರಾಮ, ಕೃಷ್ಣ, ಅಂಬರೀಷ, ಹರಿಶ್ಚಂದ್ರ ಇವರೆಲ್ಲ ಇಂದು ನಮ್ಮ ಮನುಷ್ಯ ಜೀವನದ ಧೃವತಾರೆಗಳಾಗಿ ನಿಂತದ್ದು, ವಿಧಿಯ ಪೆಟ್ಟುಗಳನ್ನು ಧೈರ್ಯದಿಂದ, ನೀತಿಯಿಂದ ಎದುರಿಸಿ ನಿಂತು ದಾಟಿ ಬಂದದ್ದಕ್ಕೆ. ವಿಧಿ ನಮ್ಮನ್ನು ಕಷ್ಟದ ಆಳಕ್ಕೆ ಸೆಳೆದೊಯ್ಯುವುದು ಕೊಲ್ಲಲಿಕ್ಕಲ್ಲ, ನಮ್ಮನ್ನು ಮತ್ತಷ್ಟು ಶುದ್ಧಗೊಳಿಸಲಿಕ್ಕೆ ಎಂಬ ನಂಬಿಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT