ಸೋಮವಾರ, ಡಿಸೆಂಬರ್ 6, 2021
23 °C

ಬೆರಗಿನ ಬೆಳಕು | ದೈವಕೃಪೆಗೆ ಅರ್ಹತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ|
ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು||
ಬಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ
ಮುಗಿಲವೊಲು ದೈವಕೃಪೆ – ಮಂಕುತಿಮ್ಮ||504||

ಪದ-ಅರ್ಥ: ಬಿಸಿಗವಸಾಗಿ= ಬಿಸಿ+ ಗವಸಾಗಿ (ಹೊದಿಕೆಯಾಗಿ), ಕೆರೆಗಳಾವಿಗೆಯಾಗಿ= ಕೆರೆಗಳು+ ಆವಿಗೆಯಾಗಿ (ಮಡಕೆ ಬೇಯಿಸುವ ಒಲೆಯಾಗಿ), ಜಗದುಸಿರೆ= ಜಗದ+ ಉಸಿರೆ, ಬಗೆದೆತ್ತಣಿನೊ= ಬಗೆದು (ಹುಟ್ಟಿ)+ ಎತ್ತಣಿನೊ (ಎಲ್ಲಿಂದಲೊ)

ವಾಚ್ಯಾರ್ಥ: ಆಕಾಶವೇ ಒಂದು ಬಿಸಿಯಾದ ಹೊದಿಕೆಯಾಗಿ, ಕೆರೆಗಳು ಒಣಗಿ ಬೆಂಕಿಯ ಒಲೆಗಳಾಗಿ, ಜಗತ್ತಿನ ಉಸಿರೇ ಹೊಗೆಯಾಗಿ, ಧಗಧಗನೆ ಉರಿಯುವಾಗ, ಎಲ್ಲಿಯೋ ಹುಟ್ಟಿ, ಈ ಕಡೆಗೆ ಬಂದು ರಾತ್ರಿಯಲ್ಲಿ ಮಳೆಸುರಿಸಿ, ಭೂಮಿಯನ್ನು ತಂಪುಗೊಳಿಸುವ ಮುಗಿಲಿನಂತೆ ದೈವಕೃಪೆ ಇದೆ.

ವಿವರಣೆ: ಯಾವುದೇ ಸಾಧನೆಗೆ ಪೂರಕವಾದ ಪ್ರಯತ್ನ, ಅರ್ಹತೆ ಬೇಕಾಗುತ್ತದೆ. ವೈದ್ಯರಾಗಬೇಕೆಂದಿದ್ದರೆ ಹತ್ತು ವರ್ಷಗಳ ಸತತ ಪರಿಶ್ರಮ ಅಗತ್ಯ. ಒಂದು ಆಟದಲ್ಲಿ ರಾಜ್ಯವನ್ನು, ರಾಷ್ಟ್ರವನ್ನು ಪ್ರತಿನಿಧಿಸಬೇಕಾದರೆ ಹತ್ತಾರು ವರ್ಷಗಳ ಅವಿರತ ದುಡಿಮೆ, ಗುರಿಯೆಡೆಗಿನ ದೃಷ್ಟಿ, ಅಲುಗದ ನಿಷ್ಠೆ ಬೇಕು. ಮೂವತ್ತು, ನಲವತ್ತು ವರ್ಷಗಳ ಕಾಲ ನಡುವೆ ಬರುವ ವೈಫಲ್ಯಗಳನ್ನು ಮರೆತು, ಸಿದ್ಧಿಯತ್ತ ದುಡಿಯತ್ತಲೇ ಹೋದಾಗ ಅಂತರರಾಷ್ಟ್ರೀಯ ಮನ್ನಣೆ, ಪ್ರಶಸ್ತಿ ಬಂದೀತು.

ಸಾಧನೆಯಾಗುವವರೆಗಿನ ಕಷ್ಟವೇನು ಸುಲಭವೇ ಅರಗಿಸಿಕೊಳ್ಳಲು? ಮನಸ್ಸು ಕುದಿದು ಹೋದೀತು, ಕೆಲವೊಮ್ಮೆ ಜೀವನೋತ್ಸಾಹ ಕುಂದೀತು, ಬದುಕು ಭಾರವೆನ್ನಿಸಿ, ಕೆಲಸ ಸಾಕು ಎನ್ನಿಸೀತು. ಇವೆಲ್ಲ ಹಂತಗಳನ್ನು ದಾಟಿದ ಮೇಲೆಯೇ ಸಾಧನೆಯ ಶಿಖರ ಗೋಚರವಾಗುವುದು. ಆದರೆ ಕೊನೆಗೆ ಗುರಿ ತಲುಪಿದಾಗ, ಸಾಧನೆಯ ಸಿದ್ಧಿಯಾದಾಗ, ಕಾದನೆಲ ತಂಪಾದಂತೆ, ಸಂತೃಪ್ತಿ ಆವರಿಸುತ್ತದೆ. ಒಂದು ಸಾಧನೆಯ ಕೈಗೂಡುವಿಕೆಗೇ ಇಷ್ಟೊಂದು ಶ್ರಮ, ಏಕಾಗ್ರತೆಯ ಅವಶ್ಯಕತೆ ಇದ್ದರೆ, ದೇಹವಿಲ್ಲದ, ಆಕಾರವಿಲ್ಲದ, ಎಲ್ಲೆಲ್ಲಿಯೂ ಇರುವ ಆದರೆ ಆಗೋಚರ ಶಕ್ತಿಯಾದ ಭಗವಂತನನ್ನು ಪಡೆಯುವ, ಅವನ ಕೃಪೆಗೆ ಪಾತ್ರರಾಗುವ ಕ್ರಿಯೆ ಅದೆಷ್ಟು ಕಠಿಣವಾಗಿರಬೇಕು?

ದೇವಕೃಪೆ ದೊರೆಯುವುದು ಅರ್ಹನಾದವನಿಗೆ ಮಾತ್ರ. ಅರ್ಹತೆಯಿಲ್ಲದೆ ಅಪೇಕ್ಷಿಸಿದರೆ ಅದು ಸಿಗುವುದಲ್ಲ. ಅದಕ್ಕೇ ಮೊದಲು ಭಗವಂತ ಪರೀಕ್ಷೆ ಮಾಡುತ್ತಾನಂತೆ. ಹರಿಶ್ಚಂದ್ರನಿಗೆ ಆದ ಪರೀಕ್ಷೆಗಳು ಕಡಿಮೆಯೆ? ವಿಶ್ವಾಮಿತ್ರ ಬ್ರಹ್ಮರ್ಷಿಯಾಗುವವರೆಗೆ ಪಟ್ಟ ಕಷ್ಟಗಳೆಷ್ಟು? ಬೇಡರ ಕಣ್ಣಪ್ಪ, ತನ್ನ ಕಣ್ಣುಗಳನ್ನು ತೆಗೆಯುವವರೆಗೆ ಪರೀಕ್ಷೆ ನಡೆಯಲಿಲ್ಲವೆ? ಮನ ಬರಿದಾಗಿ, ಭಾವ ನಿರ್ಭಾವವಾಗಿ, ಧ್ಯಾನ ತಾನೇ ತಾನಾದಾಗ ಭಗವಂತನ ಕೃಪೆಯಾಗುತ್ತದೆ ಎಂದು ಹೇಳುತ್ತಾನೆ ಡೋಹರ ಕಕ್ಕಯ್ಯ.

ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ ಅಭಿನಯ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ ಕಗ್ಗ ಹೇಳುತ್ತದೆ, ಆಕಾಶವೇ ಕಾದ ಹೊದ್ದಿಕೆಯಂತೆ, ಕೆರೆಗಳು ಕುಂಬಾರ ಮಡಕೆಯ ಒಲೆಯಂತೆ, ಜನರ ಉಸಿರೇ ಕುದಿದು ಧಗಧಗಿಸುತ್ತಿರುವಾಗ, ಎಲ್ಲಿಂದಲೋ ಬಂದ ಮಳೆ ತಂಪೆರೆಯುವಂತೆ ದೈವಕೃಪೆಯ ಅವತರಣವಾಗುತ್ತದೆ. ಅದಕ್ಕೆ ಅರ್ಹತೆ ಬೇಕು, ಪ್ರಯತ್ನ ಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.