ಶನಿವಾರ, ಜುಲೈ 2, 2022
20 °C

ಬೆರಗಿನ ಬೆಳಕು | ವಿಶ್ವವೃಕ್ಷದೊಳು ಒಂದು ಸ್ಥಾನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಎಲೆಗಳನು ಕಡ್ಡಿ, ಕಡ್ಡಿಯ ರೆಂಬೆಕೊಂಬೆಗಳು |
ತಳೆದು ಪೆರ್ಚಿಸುತಿಹವು ಮರದ ಬಾಳ್ಸಿರಿಯ ||
ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು |
ಹಳಿಯದಿರು ನಿನ್ನಿರವ – ಮಂಕುತಿಮ್ಮ || 562 ||

ಪದ-ಅರ್ಥ: ಪೆರ್ಚಿಸುತಿಹವು=ಹೆಚ್ಚಿಸುತ್ತಿರುವವು, ಬಾಳ್ಸಿರಿಯ=ಬಾಳ ಸಿರಿಯ, ವಿಶ್ವವೃಕ್ಷದೊಳಂತು=ವಿಶ್ವವೃಕ್ಷದೊಳು+ಅಂತು, ನಿನ್ನಿರವ=
ನಿನ್ನ+ಇರವ(ಬದುಕನ್ನು)

ವಾಚ್ಯಾರ್ಥ: ಎಲೆಗಳನ್ನು ಕಡ್ಡಿಗಳು, ಕಡ್ಡಿಯನ್ನು ರೆಂಬೆಕೊಂಬೆಗಳು ಹೀಗೆ ತುಂಬಿಕೊಂಡು ಮರದ ಸಿರಿಯನ್ನು ಹೆಚ್ಚಿಸುತ್ತವೆ. ಈ ವಿಶ್ವವೃಕ್ಷದೊಳು ನಿನಗೊಂದು ಸ್ಥಳವಿದೆ. ಆದ್ದರಿಂದ ನಿನ್ನ ಬದುಕನ್ನು ಹಳಿಯಬೇಡ.

ವಿವರಣೆ: ಆ ಹುಡುಗ ಹುಟ್ಟಿ ಬೆಳೆದದ್ದು ಮುಂಬೈನಲ್ಲಿರುವ, ಏಷ್ಯಾದ ಅತಿದೊಡ್ಡ ಕೊಳಗೇರಿಯಾದ ಧಾರಾವಿಯಲ್ಲಿ. ಅದೊಂದು ಅತಿಕ್ರೂರವಾದ, ಮನುಷ್ಯತ್ವವನ್ನು ಅತ್ಯಂತ ಕೆಳಮಟ್ಟಕ್ಕೆ ಒಯ್ಯುವ ಕೊಳಕಿನ ಕೂಪ. ಮಾನವೀಯತೆಗಿಂತ ಶಕ್ತಿಗೆ ಬೆಲೆ ಅಲ್ಲಿ. ಹುಡುಗನ ತಂದೆ ನಿತ್ಯದಂತೆ ಕುಡಿದು ಬಂದರು. ಮನೆ ಎಂದರೆ ಐದು ಅಡಿ ಉದ್ದ, ಐದು ಅಡಿ ಅಗಲದ ಗುಡಿಸಲು. ಅದರಲ್ಲಿ ಐದು ಜನ ಬದುಕಬೇಕು. ಮನೆಗೆ ಬಂದವರೇ ತಾಯಿಯನ್ನು ಹೊಲಸು ಭಾಷೆಯಲ್ಲಿ ಬೈಯುತ್ತ ಹೊಡೆಯತೊಡಗಿದರು. ತಾಯಿಯ ಸಂಕಟ, ಅಸಹಾಯಕತೆಯನ್ನು ಕಂಡ ಹುಡುಗ ಮನೆಬಿಟ್ಟು ಹೊರಗೋಡಿದ. ತನ್ನ ಬದುಕಿಗೆ ಯಾವ ಅರ್ಥವೂ ಇಲ್ಲವೆನಿಸಿತು. ಸಾಕುಜನ್ಮ ಎಂದು ಪಕ್ಕದಲ್ಲೇ ಇದ್ದ ರೇಲ್ವೆ ಹಳಿಗಳ ಮೇಲೆ ನಡೆದ. ಎದುರಿಗೆ ರೈಲು ಬರುವುದು ಕಂಡಿತು. ಆಯ್ತು ಮುಗಿದು ಹೋಗಲಿ ಈ ವ್ಯರ್ಥ ಜೀವನ ಎಂದು ನಾಲ್ಕು ಹೆಜ್ಜೆ ನಡೆದ. ಕಣ್ಣ ಮುಂದೆ ತಾಯಿಯ, ತಂಗಿಯ ಮುಖ ಮೂಡಿತು. ನಾನು ಸತ್ತರೆ ಅವರಿಗೇನು ಗತಿ ಎಂದು ಬದಿಗೆ ಹಾರಿ ಬದುಕಿದ. ಮನೆಯ ಹತ್ತಿರ ಬಂದಾಗ ಯಾವುದೋ ಗುಡಿಸಲಿನಿಂದ ಲತಾ ಮಂಗೇಶ್‌ಕರ ಅವರ ಮಧುರವಾದ ಹಾಡು ಬರುತ್ತಿತ್ತು. ಹೌದು. ಕೊಳೆಗೇರಿಯಲ್ಲಿ ಕೊಳಕೂ ಇದೆ, ಸಂಗೀತವೂ ಇದೆ. ನಾನೇಕೆ ಬರಿ ಕೊಳಕನ್ನೇ ನೋಡಲಿ ಎಂದು ತನಗಿದ್ದ ನಟನೆಯ ಕಲೆಯಲ್ಲೇ ಬಂಡವಾಳ ಮಾಡಿಕೊಂಡು ದುಡಿದ. ನಾಲ್ಕು ವರ್ಷಗಳಲ್ಲಿ ಜಾನಿ ಲೆವರ್ ಎಂಬ ಹಾಸ್ಯನಟನಾಗಿ ನಿಂತಿದ್ದ. ಈಗ ಆತ ಜನಪ್ರಿಯ ಶ್ರೀಮಂತ ನಟ. ಯಶಸ್ಸು ಕಾಲಡಿ ಕುಳಿತಿದೆ.

ಎಷ್ಟೋ ಬಾರಿ ತುಂಬ ಜನ ಹೇಳಿಕೊಳ್ಳುತ್ತಾರೆ, ನಮ್ಮ ಬದುಕಿಗೆ ಏನು ಅರ್ಥ? ಇಂಥ ಮಹಾನ್ ವಿಶ್ವದಲ್ಲಿ ನಾನೊಂದು ಧೂಳಿಕಣವೂ ಅಲ್ಲ. ಈ ತರಹದ ಕೀಳಿರಿಮೆ ಸರಿಯಲ್ಲ ಎನ್ನುತ್ತದೆ ಕಗ್ಗ. ಯಾಕೆಂದರೆ ವಿಶ್ವವೃಕ್ಷವೇನೋ ಅತ್ಯದ್ಭುತವಾದದ್ದು, ಸರ್ವವ್ಯಾಪಿಯಾಗಿರುವುದು. ಆದರೆ ಅದರಲ್ಲಿ ನನ್ನ ಸ್ಥಾನ ತುಂಬ ಅಲ್ಪವಾದದ್ದು ಎಂದು ಚಿಂತೆ ಮಾಡುವುದು ಬೇಡ.

ಈ ಮಹಾನ್ ವೃಕ್ಷದಲ್ಲಿ ಕೋಟ್ಯಾಂತರ ಎಲೆಗಳಿವೆ, ಎಲೆಗಳಿಗೆ ಕಡ್ಡಿಗಳು, ಕಡ್ಡಿಗಳಿಗೆ ರೆಂಬೆಕೊಂಬೆಗಳು, ಹೀಗೆ ಒಂದಕ್ಕೊಂದು ಜೋಡಿಕೊಂಡು ಮರವನ್ನು ಶ್ರೀಮಂತವನ್ನಾಗಿಸಿವೆ. ಅಂಥ ಬೃಹತ್ ವೃಕ್ಷದಲ್ಲಿ ನನಗೂ ಒಂದು ಸ್ಥಾನವಿದೆಯೆಂದು ಸಂತೋಷಪಡುವುದು ಮುಖ್ಯವಲ್ಲವೆ? ನಾನು ಈ ಮರಕ್ಕೆ ಹೊರಗಿನವನಲ್ಲ. ನಾನೂ ಅದರ ಒಂದು ಮುಖ್ಯ ಭಾಗ ಎನ್ನುವುದೇ ಹೆಮ್ಮೆಯ ವಿಷಯ. ನನ್ನಿಂದೇನಾಗುತ್ತದೆ ಎಂದುಕೊಂಡ ಜಾನಿ ಲೆವರ್ ಇಂದು ಮಹತ್ವದವರಾಗಿಲ್ಲವೆ? ಒಬ್ಬ ತತ್ವಜ್ಞಾನಿ ಹೇಳುತ್ತಾನೆ, ‘ನಾನೊಂದು ಕೇವಲ ಹುಲ್ಲುಕಡ್ಡಿ ಇರಬಹುದು. ಆದರೆ ನಾನಿರದಿದ್ದರೆ ಈ ಪ್ರಪಂಚ ಒಂದು ಹುಲ್ಲುಕಡ್ಡಿಯಷ್ಟು ಬಡವಾಗುತ್ತಿತ್ತು’. ಈ ವಿಶ್ವಜೀವಾಶ್ವತ್ಥದಲ್ಲಿ ಯಾವುದೂ ಚಿಕ್ಕದು ಮತ್ತು ವ್ಯರ್ಥವಲ್ಲ. ಪ್ರತಿಯೊಂದಕ್ಕೂ ಅದರದೇ ಅದ ಸ್ಥಳವಿದೆ, ಪ್ರಾಮುಖ್ಯತೆ ಇದೆ. ಅದು ನಮ್ಮಲ್ಲಿ ಅಭಿಮಾನವನ್ನು, ಗೌರವವನ್ನುಂಟುಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು