ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಾಲ್ಕು ತಪಗಳು

Last Updated 14 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕ್ಷಮೆ ದೋಷಿಗಳಲಿ, ಕೆಚ್ಚಿದೆ ವಿಧಿಯ ಬಿರುಬಿನಲಿ |
ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||
ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |
ಭ್ರಮೆಯೊ ಮಿಕ್ಕೆಲ್ಲ ತಪ – ಮಂಕುತಿಮ್ಮ || 715 ||

ಪದ-ಅರ್ಥ: ಬಿರುಬು=ತೀವ್ರವಾದ ಹೊಡೆತ, ಸಮತೆ=ಸಮಾನತೆ, ನಿರ್ಮತ್ಸರತೆ=ಅಸೂಯೆಯಿಲ್ಲದ್ದು, ಸೋಲ್ಗೆಲವುಗಳಲಿ=ಸೋಲು+ಗೆಲವುಗಳಲಿ, ಶಮ=ಅಂತರಂಗದ ಶಾಂತಿ.

ವಾಚ್ಯಾರ್ಥ: ಬದುಕಿನಲ್ಲಿ ಸದಾಕಾಲದ ಶಾಂತಿಯನ್ನು ಪಡೆಯಲು ನಾಲ್ಕು ತಪಸ್ಸುಗಳು ಸಾಕು. ಅವು, ದೋಷಿಗಳಲ್ಲಿ ಕ್ಷಮೆ, ವಿಧಿಯ ಪರೀಕ್ಷಾ ಕಾಲದಲ್ಲಿ ಧೈರ್ಯ, ಸೋಲು ಗೆಲುವುಗಳಲ್ಲಿ ಸಮಾನತೆ ಮತ್ತು ಅನಸೂಯಗುಣ. ಉಳಿದ ತಪಸ್ಸುಗಳೆಲ್ಲ ಭ್ರಮೆಗಳು.

ವಿವರಣೆ: ಜಗತ್ತಿನಲ್ಲಿ ಎಲ್ಲ ಜನ ಒದ್ದಾಡುವುದು ಕೇವಲ ಒಂದು ಅಪೇಕ್ಷೆಗೆ. ಅದು ಅಂತರಂಗದ ಶಾಂತಿ. ಹಣ ನಿಮಗೆ ವಸ್ತುಗಳನ್ನು ಕೊಟ್ಟೀತು. ಆದರೆ ಶಾಂತಿಯನ್ನು ಕಿತ್ತುಕೊಂಡೀತು. ಅಧಿಕಾರ, ದೇಹಬಲ, ಖ್ಯಾತಿ ಇವೆಲ್ಲ ಬೇರೆ ಬೇರೆ ಸಾಧನೆಗಳನ್ನು ಮಾಡಲು ನೆರವಾಗಬಹುದು. ಆದರೆ ಶಾಂತಿಯನ್ನು ನೀಡಲಾರವು. ಯಯಾತಿಯಂತಹ ಭೋಗಿ ಕೂಡ ಶಾಂತಿಗಾಗಿ ಒದ್ದಾಡಿದ. ಬುದ್ಧ, ಮಹಾವೀರ, ಶಂಕರಾಚಾರ್ಯರು, ಮತ್ತೆಲ್ಲ ಮಹನೀಯರು ತಮ್ಮ ಬದುಕಿನುದ್ದಕ್ಕೂ ಪ್ರಯತ್ನಿಸಿದ್ದು ಈ ಅಂತರಂಗದ ಶಾಂತಿಗಾಗಿ. ಅದು ಬರುವುದೆಲ್ಲಿಂದ? ಅಕ್ಕ ಮಹಾದೇವಿ ಕೇಳುತ್ತಾಳೆ,
“ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ?” ಉಸುರಿಗೆ ಪರಿಮಳ ಬಂದದ್ದು ಅಂತರಂಗದ ಶುದ್ಧಿಯಿಂದ, ಶಾಂತಿಯಿಂದ. ಅದೇ ಶಮ. ಅದನ್ನು ಗಳಿಸಲು ನಾಲ್ಕು ತಪಸ್ಸನ್ನು ಮಾಡಲು ಕಗ್ಗ ಸೂಚಿಸುತ್ತದೆ. ಉಳಿದ ಯಾವ ತಪಗಳೂ ಬೇಕಿಲ್ಲ ಎಂದು ಖಚಿತವಾಗಿ ಹೇಳುತ್ತದೆ. ಮೊದಲನೆಯ ತಪ, ದೋಷಿಗಳಲ್ಲಿ ಕ್ಷಮೆ. ಕ್ಷಮೆಯನ್ನು ನೀಡುವುದು ಹೇಡಿಗಳಿಂದ ಅಸಾಧ್ಯ. ಅದಕ್ಕೆ ಧೈರ್ಯಬೇಕು, ಮನದ ವಿಸ್ತಾರಬೇಕು. ದೋಷಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಪಟ್ಟಿದ್ದರೆ ಅದನ್ನು ಕ್ಷಮಿಸುವ ದೊಡ್ಡತನವನ್ನು ತೋರಬೇಕು. ಕ್ಷಮೆ ಒಂದು ದೇವತ್ವದ ಗುಣ. ತನ್ನ ಐದು ಮಕ್ಕಳನ್ನು ಹೇಯವಾದ ರೀತಿಯಿಂದ ಕೊಂದ ಅಶ್ವತ್ಥಾಮನನ್ನು ಕ್ಷಮಿಸಿದ ದ್ರೌಪದಿ ಒಂದು ಅದ್ಭುತ ಮಾದರಿ. ಎರಡನೆಯದು, ವಿಧಿ ಮುನಿದಾಗ, ನಮ್ಮನ್ನು ತನ್ನ ಹರಿತವಾದ ಅಲಗಿಗೆ ಹಾಕಿ ಉಜ್ಜಿದಾಗ, ಧೈರ್ಯ ಕಳೆದುಕೊಳ್ಳದೆ ಹೋರಾಡುವುದು. ಹರಿಶ್ಚಂದ್ರ, ಪಾಂಡವರು, ನಳ ಮಹಾರಾಜ, ಶ್ರೀರಾಮ, ಸೀತೆ, ಸಾವಿತ್ರಿ ಫುಲೆ ಇವರೆಲ್ಲ ಆದರ್ಶ ವ್ಯಕ್ತಿಗಳಾದದ್ದು ವಿಧಿಯ ಬಿರುಮಳೆಯಲ್ಲಿ ಶಕ್ತಿಮೀರಿ ಹೋರಾಡಿದ್ದಕ್ಕೆ. ಮೂರನೆಯದು, ಸೋಲು-ಗೆಲುವುಗಳಲ್ಲಿ ಸಮತೆ. ಜೀವನದಲ್ಲಿಯಾವಾಗಲೂ ಸೋಲಾಗಲಿ, ಗೆಲುವಾಗಲೀ ಇರುವುದು ಅಸಾಧ್ಯ. ಸೋಲು ಬಂದಾಗ ಕುಗ್ಗಿ ಹೋಗದೆ, ಗೆಲುವು ದೊರೆತಾಗ ಮೈಮರೆತು ಹಾರಾಡದೆ, ಎಲ್ಲವನ್ನೂ ಒಂದೇ ರೀತಿಯಲ್ಲಿ ಭಗವಂತನ ಪ್ರಸಾದವೆಂದು ಭಾವಿಸುವುದು ಬಹುದೊಡ್ಡ ತಪಸ್ಸು. ನಾಲ್ಕನೆಯದು, ನಿರ್ಮತ್ಸರತೆ. ಅದೊಂದು ಬಹುಶ್ರೇಷ್ಠವಾದ ಅನಸೂಯಗುಣ. ಪಕ್ಕದ ಮನೆಯವರು ಉದ್ದವಾದ ಕಾರು ತರುವವರೆಗೂ ನಮ್ಮ ಕಾರಿನ ಬಗ್ಗೆ ತಕರಾರು ಇರುವುದಿಲ್ಲ. ನಮ್ಮ ಕಾರು ಒಂದು ಗೇಣು ಗಿಡ್ಡವಾಗಿದ್ದು ಹೊಟ್ಟೆ ಉರಿಸುತ್ತದೆ. ಮತ್ತೊಬ್ಬರ ಸೋಲಿಗೆ ಸಂತೋಷಪಡದೆ, ಅವರ ಗೆಲುವಿಗೆ ಹೊಟ್ಟೆಕಿಚ್ಚು ಪಡದೆ ಇರುವುದು ಬಹಳ ಶ್ರೇಷ್ಠ ತಪಸ್ಸು. ಅದಕ್ಕೇ ಕಗ್ಗ, ಈ ನಾಲ್ಕು ತಪಸ್ಸುಗಳು ಬದುಕಿನ ನೆಮ್ಮದಿಗೆ, ಶಾಂತಿಗೆ ಸಾಕು, ಉಳಿದ ತಪಸ್ಸುಗಳು ಕೇವಲ ಭ್ರಮೆ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT