ಬುಧವಾರ, ಆಗಸ್ಟ್ 4, 2021
24 °C

ಬೆರಗಿನ ಬೆಳಕು | ಹಿರಿದಾದ ಬದುಕು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ !
ಇಬ್ಬರಾಗುವೆನೆಂದನಂತೆ ಪರಬೊಮ್ಮಂ ||
ಹೆಬ್ಬದುಕನೊಂಟಿತನದೊಳದೇನು ಬದುಕುವೆಯೋ? |
ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ || 430 ||

ಪದ-ಅರ್ಥ: ಒಬ್ಬನುಣುವೂಟದಲಿ=ಒಬ್ಬನು+ಉಣುವ(ಉಣ್ಣುವ)+ಊಟದಲಿ, ಇಬ್ಬರಾಗುವೆನೆಂದನಂತೆ=ಇಬ್ಬರಾಗುವೆನು+ಎಂದನಂತೆ, ಹೆಬ್ಬದುಕನೊಂಟಿತನದೊಳದೇನು=ಹೆಬ್ಬದುಕನು(ಹಿರಿದಾದ ಬದುಕನ್ನು)+ಒಂಟಿತನದೊಳು+ಅದೇನು,

ವಾಚ್ಯಾರ್ಥ: ಒಬ್ಬನೇ ಕುಳಿತು ಮಾಡುವ ಊಟದಲ್ಲಿ ರುಚಿಯಿಲ್ಲ, ಸಂತೋಷವಿಲ್ಲ. ಆದ್ದರಿಂದ ಇಬ್ಬರಾಗುತ್ತೇನೆ ಎಂದನಂತೆ ಪರಬ್ರಹ್ಮ. ಹಿರಿದಾದ ಬದುಕನ್ನು ಒಂಟಿತನದೊಳು ಏಕೆ ಬದುಕುತ್ತೀಯೋ? ವಿಶ್ವವನ್ನು ತಬ್ಬಿಕೊ.

ವಿವರಣೆ: ನಮ್ಮ ಪರಂಪರೆಯಲ್ಲಿ ಬಂದ ದರ್ಶನ ಶಾಸ್ತ್ರಗಳಂತೆ ಎಲ್ಲದಕ್ಕೂ ಪ್ರಧಾನವಾದದ್ದು, ಮೂಲವಾದದ್ದು ಬ್ರಹ್ಮಸತ್ವ. ಅದು ಒಂದೇ ಆಗಿತ್ತು. ಅದನ್ನು ಕಥೆಯ ರೂಪದಲ್ಲಿ ಕಗ್ಗ ಹೇಳುತ್ತದೆ. ಬ್ರಹ್ಮ ಒಬ್ಬನೇ ಇದ್ದ. ಎಷ್ಟು ದಿನ, ಎಷ್ಟು ವರ್ಷ ಒಬ್ಬನೇ ಇರಲಾದೀತು? ಅವನಿಗೂ ಬೇಜಾರಾಗಿರಬೇಕು. ಆಗ ಬೇಜಾರು ಕಳೆಯಲೆಂದು ಇನ್ನೊಂದನ್ನು ಸೃಷ್ಟಿ ಮಾಡಿದ. ಅದು ಮಾಯೆ. ಆ ಮಾಯೆಯಿಂದ ಪ್ರಪಂಚವನ್ನು ನಿರ್ಮಿಸಿದ. ಅಲ್ಲಿ ಸೃಷ್ಟಿಯಾದ ಎಲ್ಲ ವಸ್ತುಗಳಲ್ಲಿ, ಜೀವಿಗಳಲ್ಲಿ ತಾನೇ ನೆಲೆಸಿ, ಬಹುವಾಗಿ ಲೀಲೆಯನ್ನು ನಡೆಸಿದ.

ಅಂದರೆ ಬ್ರಹ್ಮನಿಗೂ ಒಬ್ಬನೇ ಇರುವುದು ಕಷ್ಟ ಎಂದಾಯ್ತು. ಅವನಿಗೇ ಹಾಗೆನ್ನಿಸಿರಬೇಕಾದರೆ ಮನುಷ್ಯರ ಸ್ಥಿತಿ ಹೇಗೆ? ಮನುಷ್ಯರಂತೂ ಸಮಾಜದಲ್ಲೇ ಬದುಕುವವರು. ಮಾನವರಿಗೆ ಅತ್ಯಂತ ಕ್ರೂರವಾದ ಶಿಕ್ಷೆಯೆಂದರೆ ಅವರನ್ನು ಯಾರ ಸಂಪರ್ಕಕ್ಕೂ ಬರದಂತೆ ಏಕಾಂತದಲ್ಲಿಡುವುದು. ಯಾರನ್ನೂ ಕಾಣದೆ, ಯಾರೊಂದಿಗೂ ಮಾತನಾಡದೆ ಕೆಲದಿನಗಳವರೆಗೆ ಇದ್ದುಬಿಟ್ಟರೆ ಬುದ್ಧಿ ಕೆಲಸಮಾಡುವುದಿಲ್ಲ, ಮಾನಸಿಕ ಸ್ಥಿಮಿತ ತಪ್ಪುತ್ತದೆ.

ನಮ್ಮ ಮನುಷ್ಯ ಬದುಕು ತುಂಬ ಅಪೂರ್ವವಾದದ್ದು, ಅತ್ಯಂತ ಉಚ್ಚತಮವಾದದ್ದು. ಈ ಬದುಕಿನ ಮೂಲಕವೇ ಬಹುದೊಡ್ಡ ಸಾಧನೆಗಳಾಗುವುದು. ಇದು ಹಿರಿದಾದ ಬದುಕು. ಇಂಥ ಜೀವನದಲ್ಲಿ ಏಕಾಂಗಿಯಾಗಿ ಏನನ್ನೂ ಮಾಡಲಾಗುವುದಿಲ್ಲ. ಆದರೆ ಜನಸಂಪರ್ಕದಲ್ಲಿ, ಸಹಕಾರದೊಂದಿಗೆ ಯಾವ ಅದ್ಭುತವನ್ನಾದರೂ ಮಾಡಬಹುದು. ಒಬ್ಬ ಮನುಷ್ಯ ನೂರು ಕಿಲೋ ಭಾರದ ಕಲ್ಲು ಹೊತ್ತುಕೊಂಡು ಬೆಟ್ಟವನ್ನೇರಲಾರ. ಆದರೆ ಒಂದು ಹಿರಿದಾದ ಗುರಿಯನ್ನಿಟ್ಟುಕೊಂಡ ಜನರ ತಂಡ ಮರುಭೂಮಿಯಲ್ಲಿ ಬೃಹತ್ ಪಿರಾಮಿಡ್‌ಗಳನ್ನು, ಗುಡ್ಡಗಾಡು ಪ್ರದೇಶದಲ್ಲಿ ಜಗತ್ತಿನಲ್ಲೇ ಅತ್ಯಂತ ಉದ್ದವಾದ ಗೋಡೆಯನ್ನು ಕಟ್ಟುವುದರಲ್ಲಿ ಸಫಲವಾಗುತ್ತದೆ. ಈ ಪ್ರಪಂಚದ ಜನರ ಜೊತೆಗೆ ಹೊಂದಿಕೊಳ್ಳುತ್ತ, ನಗುತ್ತ, ಸಾಂತ್ವನ ಹೇಳುತ್ತ ಮಿಳಿತವಾದರೆ ಬದುಕು ಸುಂದರ, ಸಫಲ.

ಕಗ್ಗ ಈ ಮಾತನ್ನು ಆತ್ಮೀಯವಾಗಿ ಹೇಳುತ್ತದೆ. ಇದೊಂದು ಹಿರಿದಾದ ಬದುಕು. ಭಗವಂತ ನಮಗೆ ನೀಡಿದ ಸುಂದರ ಅವಕಾಶ. ಅದನ್ನು ಒಂಟಿಯಾಗಿ ಕಳೆಯದೆ, ಇಡೀ ವಿಶ್ವವನ್ನು ಕೈ ಚಾಚಿ, ಮನತೆರೆದು ಅಪ್ಪಿಕೊಳ್ಳಬೇಕು. ಆಗ ನಾವು ವಿಶ್ವಜೀವನದ ಜೀವಾಂತರಂಗದಲ್ಲಿ ಇಳಿದು ಸಂಭ್ರಮಿಸುತ್ತೇವೆ, ಏಕಾಂತದಲ್ಲಿ ಕಳೆದು, ಕೊಳೆತು ಹೋಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು