ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪಿತಾಮಹನ ಸಂಕಟ

Last Updated 2 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕ್ಷಣಕಾಲದ ಮೇಲೆ ಸಾವರಿಸಿಕೊಂಡು ಮಹಾರಾಜ ಮತ್ತೆ ಮುದುಕನನ್ನು ನೋಡಿ ಹೇಳಿದ, ‘ಅಯ್ಯಾ, ನೀನು ಹೇಳುವುದರಲ್ಲಿ ನನಗೆ ನಂಬಿಕೆ ಬರುತ್ತಿಲ್ಲ. ಅರಮನೆಯಲ್ಲಿದ್ದಾಗಲೂ ವೆಸ್ಸಂತರನಿಗೆ ದಾನದ ಹುಚ್ಚು ಇತ್ತು. ಆದರೆ ಈಗ ಆತ ಎಲ್ಲವನ್ನೂ ಕಳೆದುಕೊಂಡು, ನಿರ್ವಾಸಿತನಾಗಿ ಕಾಡಿನಲ್ಲಿದ್ದಾನೆ. ಅವನು ಮಕ್ಕಳನ್ನು ಹೇಗೆ ದಾನವಾಗಿ ಕೊಡುತ್ತಾನೆ? ಯಾರಾದರೂ, ಆನೆ, ಕುದುರೆ, ರಥಗಳು, ಹಣವನ್ನು ದಾನಮಾಡಬಹುದು. ಮಕ್ಕಳನ್ನು ಯಾರಾದರೂ ತಂದೆ-ತಾಯಿಯರು ದಾನವಾಗಿ ಕೊಡುವುದನ್ನು ನೀವು ಕೇಳಿದ್ದಿರಾ? ಇದು ಅಸಂಭವ’.

ಈ ಮಾತನ್ನು ಕೇಳುತ್ತಿದ್ದ ಹುಡುಗ ಜಾಲಿಕುಮಾರನಿಗೆ ತಡೆದುಕೊಳ್ಳಲಾಗಲಿಲ್ಲ. ತಂದೆಯ ಬಗ್ಗೆ ಹೀಗೆ ಮಾತನಾಡಿದ್ದು ಆತನಿಗೆ ಇಷ್ಟವಾಗಲಿಲ್ಲ. ತಂದೆಯ ದಾನಶಕ್ತಿಯನ್ನೇ ಸಂದೇಹಿಸುತ್ತಿದ್ದಾನೆ ಈ ರಾಜ! ತಕ್ಷಣ ಹುಡುಗ ಜೋರಾಗಿ ಕೂಗಿದ, ‘ಹೇ ಪಿತಾಮಹ, ನನ್ನ ತಂದೆ ಕಾಡಿನಲ್ಲಿರುವುದು ಸತ್ಯ. ಅವರ ಬಳಿ ಏನೇನೂ ಇಲ್ಲದ್ದೂ ಸತ್ಯ. ಹಾಗಾದರೆ ಯಾರ ಬಳಿ ದಾನ ಮಾಡಲು ಆನೆ, ಕುದುರೆ, ಹೇಸರಗತ್ತೆ, ರಥಗಳು, ದಾಸರು ಇಲ್ಲವೋ, ಅವನು ಏನು ದಾನ ಮಾಡಬೇಕು? ಅವನ ಬಳಿ ಅವನದ್ದಾಗಿ ಉಳಿದವರು ನಾವೇ, ಅವನ ಮಕ್ಕಳು. ಆದ್ದರಿಂದ ತನ್ನದಾದ ಎಲ್ಲವನ್ನೂ ದಾನ ಮಾಡಿ ಆತ ಮಹಾತ್ಮನಾಗಿದ್ದಾನೆ’.

ಮಹಾರಾಜ ಹೇಳಿದ, ‘ಮಗೂ, ನಾನು ನಿನ್ನ ತಂದೆ ನೀಡಿದ ದಾನವನ್ನು ಹೃದಯ ತುಂಬಿ ಅಭಿನಂದಿಸುತ್ತೇನೆ, ಮೆಚ್ಚುತ್ತೇನೆ. ಈ ದಾನವನ್ನು ನಾನು ನಿಂದಿಸುತ್ತಿಲ್ಲ. ಆದರೆ ಇಂಥ ಹೃದಯವನ್ನು ಕಲುಕುವಂತಹ ದಾನವನ್ನು ಆತ ಹೇಗೆ ಮಾಡಿದ? ನಿಮ್ಮನ್ನು ಈ ಬ್ರಾಹ್ಮಣನಿಗೆ ಕೊಟ್ಟ ಮೇಲೆ ಅವನ ಹೃದಯಕ್ಕೇನು ಆಗಿದ್ದೀತು?’. ಜಾಲಿಕುಮಾರ ನುಡಿದ, ‘ಪಿತಾಮಹ, ಇದು ಅವರಿಗೆ ಎಷ್ಟು ಕಷ್ಟವಾಗಿತ್ತೋ ತಿಳಿಯದು. ಅವರು ಅದನ್ನು ಹೊರಗೆ ತೋರಗೊಡಲಿಲ್ಲ. ಆದರೆ ನನಗೆ ತಿಳಿದಂತೆ ಅವರ ಹೃದಯ ದುಃಖಪೂರ್ಣವಾಗಿತ್ತು. ಹೃದಯ ಬಿಸಿಯಾಗಿತ್ತು. ಮುಖ ಕಾದ ತಾಮ್ರದಂತೆ ತೋರುತ್ತಿತ್ತು. ತಂದೆಯ ಕಣ್ಣುಗಳಿಂದ ನೀರಿನ ಹನಿಗಳು ಚಿಮ್ಮಿದವು’. ಪುಟ್ಟ ಹುಡುಗಿ ಕೃಷ್ಣಾಜಿನ ದುಃಖದಿಂದ, ‘ಅಜ್ಜಾ, ಈ ಬ್ರಾಹ್ಮಣ ನನ್ನನ್ನು ಮನೆಯ ದಾಸಿಯಂತೆ ದೊಣ್ಣೆಯಿಂದ ಹೊಡೆಯುತ್ತಾನೆ. ಈತ ಬ್ರಾಹ್ಮಣನಲ್ಲ. ಸಾಮಾನ್ಯವಾಗಿ ಬ್ರಾಹ್ಮಣರು ಸಾತ್ವಿಕರೂ, ಧಾರ್ಮಿಕರೂ ಆಗಿರುತ್ತಾರೆ. ಈತ ಬ್ರಾಹ್ಮಣ ವೇಷದಲ್ಲಿರುವ ಯಕ್ಷ. ನಮ್ಮನ್ನು ಹೊಡೆದು ತಿಂದು ಬಿಡಲು ಕರೆದುಕೊಂಡು ಹೋಗುತ್ತಿದ್ದಾನೆ. ಅಜ್ಜ, ಈತನೊಬ್ಬ ಪಿಶಾಚಿ. ಅವನನ್ನು ನೋಡುತ್ತ ನೀವು ಸುಮ್ಮನೆ ಇದ್ದೀರಲ್ಲ?’ ಎಂದು ಕಣ್ಣೀರು ಸುರಿಸಿದಳು. ಅಜ್ಜನ ಕಣ್ಣಲ್ಲೂ ನೀರಿನ ಒರತೆ. ‘ಮಕ್ಕಳೇ, ನಿಮ್ಮ ತಾಯಿ ರಾಜಪುತ್ರಿ, ನಿಮ್ಮ ತಂದೆ, ನನ್ನ ಮಗ, ಅವನೂ ರಾಜಪುತ್ರ. ನೀವು ದೂರ ನಿಲ್ಲಬೇಡಿ. ಬೇಗನೆ ಬಂದು ನನ್ನ ಮಡಿಲಲ್ಲಿ ಕುಳಿತುಕೊಳ್ಳಿ’ ಎಂದ. ಆದರೆ ಹುಡುಗ ಜಾಲಿಕುಮಾರ ಗಂಭೀರವಾಗಿ ಹೇಳಿದ, ‘ಹೌದು ಪಿತಾಮಹ, ನಮ್ಮ ತಾಯಿ ರಾಜಪುತ್ರಿ, ನಮ್ಮ ತಂದೆ ರಾಜಪುತ್ರ. ಆದರೆ ನಮ್ಮ ತಂದೆ ನಮ್ಮನ್ನು ದಾನವಾಗಿ ನೀಡಿದ್ದರಿಂದ ನಾವು ಬ್ರಾಹ್ಮಣನ ದಾಸರು. ಅದಕ್ಕಾಗಿಯೇ ದಾಸರಂತೆ ದೂರ ಸರಿದು ನಿಂತಿದ್ದೇವೆ. ನಾವೀಗ ರಾಜಮನೆತನದವರಲ್ಲ’.

ಈ ಮಾತು ವಯಸ್ಸಾದ ರಾಜ ಸಂಜಯನನ್ನು ತುಂಬ ಗಾಸಿಮಾಡಿತು. ಆತ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT