ಶನಿವಾರ, ಆಗಸ್ಟ್ 13, 2022
26 °C

ಬೆರಗಿನ ಬೆಳಕು: ಗರ್ವಭಂಗ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗರುವಭಂಗವನಾಗಿಸಿದನು ಗರುಡಂಗೆ ಹರಿ|
ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು||
ಕರುಬುವಂ ವಿಧಿ ಸೈಸನಾರೊಳಂ ದರ್ಪವನು|
ಶಿರವ ಬಾಗಿಹುದೆ ಸರಿ – ಮಂಕುತಿಮ್ಮ ||660||

ಪದ-ಅರ್ಥ: ಗರುವ= ಗರ್ವ, ಕರುಬು= ಹೊಟ್ಟೆಕಿಚ್ಚು, ಸೈಸನಾರೊಳಂ= ಸೈಸನು (ಸಹಿಸನು)+ ಆರೊಳಂ (ಯಾರಲ್ಲಿಯೂ)

ವಾಚ್ಯಾರ್ಥ: ಹರಿ ಗರುಡನ ಗರ್ವಭಂಗ ಮಾಡಿದ ಮತ್ತು ಅರ್ಜುನನ ಹೆಮ್ಮೆಯನ್ನು ಮುರಿಸಿದ ವಿಧಿಗೆ ಅಸೂಯೆ. ಅವನು ಯಾರಲ್ಲಿಯೂ ದರ್ಪವನ್ನು ಸಹಿಸುವುದಿಲ್ಲ. ತಲೆಬಾಗಿ ವಿನಯದಿಂದಿರುವುದೇ ಸರಿಯಾದದ್ದು.

ವಿವರಣೆ: ಗರ್ವಬಂದರೆ ಅದಕ್ಕೆ ತಕ್ಕ ಶಾಸ್ತಿಯಾಗಿಯೇ ತೀರುತ್ತದೆ. ಎನ್ನುವುದಕ್ಕೆ ಎರಡು ನಿದರ್ಶನಗಳನ್ನು ಕಗ್ಗ ನೀಡುತ್ತದೆ. ಮೊದಲನೆಯದು ಗರುಡ ಗರ್ವಭಂಗ. ಇದಕ್ಕೆ ಎರಡು ಕಥೆಗಳಿವೆ. ತಾಯಿ ವಿನುತೆಯ ದಾಸ್ಯವನ್ನು ಪರಿಹರಿಸಲು ಗರುಡ ದೇವಲೋಕಕ್ಕೆ ಅಮೃತವನ್ನು ತರಲು ಹಾರಿದ. ಅಮೃತರಕ್ಷಕರನ್ನೆಲ್ಲ ಕೊಂದು ಎದುರಿಗೆ ಬಂದ ಇಂದ್ರನಿಗೂ ಮರ್ಯಾದೆ ಕೊಡದೆ ಅವನ ವಜ್ರಾಯುಧಕ್ಕೆ ಪ್ರತಿಯಾಗಿ ತನ್ನ ಗರಿಯೊಂದನ್ನು ಎಸೆದು ಗರ್ವವನ್ನು ಮೆರೆದ. ಆಗ ಇಂದ್ರನ ಕರೆಗೆ ಓಗೊಟ್ಟ ವಿಷ್ಣು ಅಲ್ಲಿಗೆ ಬಂದ. ವಿಷ್ಣುವಿನ ರೂಪ ಎಷ್ಟು ದೊಡ್ಡದಾಗಿತ್ತೆಂದರೆ, ಗರುಡ ಅವನ ಪಾದದ ಕಿರುಬೆರಳಿನಡಿ ಸಿಕ್ಕು ಒದ್ದಾಡಿ ಹೋದ. ಆಗ ಅವನಿಗೆ ವಿಷ್ಣುವಿನ ನಿಜವಾದ ಶಕ್ತಿಯ ಅರಿವಾಗುವುದರೊಂದಿಗೆ, ತನ್ನ ಅಶಕ್ತಿಯ ಅರಿವೂ ಆಗಿ ಗರ್ವಭಂಗವಾಯಿತು. ಮತ್ತೊಂದು ಕಥೆಯಲ್ಲಿ ಗರುಡ ಆದಿಶೇಷನ ಮಗ ಮಣಿನಾಗನನ್ನು ಕಚ್ಚಿಕೊಂಡು ಗೌತಮೀ ನದಿಯ ಮೇಲೆ ಹಾರುತ್ತಿದ್ದ. ಮಣಿನಾಗ ಶಿವನನ್ನು ಪ್ರಾರ್ಥಿಸಿ ಪ್ರಾಣಭಿಕ್ಷೆ ಬೇಡಿದ. ಶಿವ ಮಣಿನಾಗನನ್ನು ಬಿಡಲು ಗರುಡನಿಗೆ ಅಪ್ಪಣೆ ಮಾಡಿದ. ಗರ್ವಿತನಾದ ಗರುಡ ಅಪ್ಪಣೆಯನ್ನು ಲೆಕ್ಕಿಸದೇ ಹಾರಿದಾಗ ಶಿವ ಅವನ ಶಕ್ತಿಯನ್ನೆಲ್ಲ ಹೀರಿ ಅವನು ಮತ್ತೆ ಹಾರಲಾರದಂತೆ ಮಾಡಿದ. ಗರುಡ ವಿಷ್ಣುವಿನ ಮೊರೆಹೊಕ್ಕ. ಆದರೆ ವಿಷ್ಣು ಶಿವನಿಗೇ ಶರಣಾಗುವಂತೆ ಆಜ್ಞೆ ಮಾಡಿದ. ಗರುಡ ಶಿವನಿಗೆ ಶರಣಾದಾಗ, ಅವನಿಗೆ ಗೌತಮೀ ನದಿಯಲ್ಲಿ ಸ್ನಾನ ಮಾಡಲು ಹೇಳಿದ. ನಂತರ ಅವನ ಶಕ್ತಿಯನ್ನು ಮರಳಿ ಕೊಟ್ಟ. ಗೌತಮೀ ನದಿಯ ಆ ಭಾಗಕ್ಕೆ ಈಗಲೂ ಗರುಡ ತೀರ್ಥ ಎನ್ನುತ್ತಾರೆ.

ಅರ್ಜುನನಿಗೆ ಆಗಾಗ ಗರ್ವ ಬಂದೇ ಬರುತ್ತಿತ್ತು ಮತ್ತು ಕೃಷ್ಣ ಅದನ್ನು ಕರಗಿಸುತ್ತಿದ್ದ. ತನ್ನ ಬಿಲ್ಲುವಿದ್ಯೆಯ ಬಗ್ಗೆ ಅಪಾರ ಗರ್ವವಿದ್ದ ಅರ್ಜುನ ಕೃಷ್ಣನನ್ನು ಕೇಳಿದ, ‘ಸಮುದ್ರ ದಾಟಲು ರಾಮ ಸೇತುವೆಗಾಗಿ ಯಾಕೆ ಕಷ್ಟಪಟ್ಟ? ನಾನಾಗಿದ್ದರೆ ಒಂದು ಕ್ಷಣದಲ್ಲಿ ಬಾಣದ ಸೇತುವೆ ಕಟ್ಟಿಬಿಡುತ್ತಿದ್ದೆ’. ಕೃಷ್ಣ ಕೇಳಿದ, ‘ಹೌದಪ್ಪ, ಆದರೆ ಆ ಸೇತುವೆ ವಾನರರ ಭಾರವನ್ನು ತಾಳಬೇಕಲ್ಲ?’ ಅರ್ಜುನ ಗಹಗಹಿಸಿ ನಕ್ಕ, ‘ನಾನು ಕಟ್ಟಿದ ಸೇತುವೆಯ ಮೇಲೆ ಐರಾವತ ನಡೆದರೂ ಅಲುಗಾಡದು, ಇನ್ನು ವಾನರರದೇನು ತೂಕ?’. ಕೃಷ್ಣ ಆಂಜನೇಯನನ್ನು ಸ್ಮರಿಸಿದ. ಆತ ತಕ್ಷಣ ಬಂದ. ಅರ್ಜುನ ಕಟ್ಟಿದ ಬಾಣದ ಸೇತುವೆಯ ಮೇಲೆ ಪಾದದ ತುದಿಯನ್ನಿಟ್ಟ. ಅದು ಮುರಿದು ಪುಡಿಪುಡಿಯಾಯಿತು. ಅದರೊಂದಿಗೆ ಅರ್ಜುನನ ಗರ್ವವೂ ಮುರಿಯಿತು.

ಈ ಕಥೆಗಳನ್ನು ನೆನಪಿಸುವ ಕಗ್ಗದ ಆಶಯ ಒಂದೇ. ಗರ್ವ ಎಂದಿಗೂ ಒಳ್ಳೆಯದನ್ನು ಮಾಡದು. ಗರುಡ ಮತ್ತು ಅರ್ಜುನನಂಥ ಮಹಾಶಕ್ತಿಶಾಲಿಗಳಿಗೇ ಹೀಗೆ ಗರ್ವಭಂಗವಾಗಿರುವುದಾದರೆ, ನಮ್ಮಂಥ ಸಾಮಾನ್ಯರ ಪಾಡೇನು? ವಿಧಿಗೆ ಅಹಂಕಾರಿಗಳನ್ನು ಕಂಡರೆ ಬಲು ಅಸೂಯೆ. ಅವನು ಯಾರ ದರ್ಪವನ್ನೂ ಸಹಿಸಲಾರ. ಗರ್ವವನ್ನು ಪಡುವುದೇಕೆ? ಗರ್ವಕ್ಕೆ ಶಿಕ್ಷೆ ಪಡೆದು ಮುಖಭಂಗ ಮಾಡಿಸಿಕೊಳ್ಳುವುದೇಕೆ? ಆದ್ದರಿಂದ ವಿನಯದಿಂದ ತಲೆತಗ್ಗಿಸಿ ಬದುಕುವುದೇ ಸರಿಯಾದ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.