ಸೋಮವಾರ, ಜನವರಿ 17, 2022
21 °C

ಬೆರಗಿನ ಬೆಳಕು: ಅಪ್ರಯತ್ನದ ಸ್ವಾತಂತ್ರ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಎಸಳಿನಡಿ ಗಿಡದ ಬಿಗಿ; ಮೇಲೆ ಗಾಳಿಯ ಸರಸ |
ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ ||
ಕುಶಲ ಸೌರಭವ ನಿರ್ಯತ್ನ ಸ್ವತಂತ್ರದಿಂ |
ಪಸರಿಪಾ ನಯ ಸುಖವೊ – ಮಂಕುತಿಮ್ಮ || 536 ||

ಪದ-ಅರ್ಥ: ಎಸಳಿನಡಿ=ಎಸಳಿನ+ಅಡಿ, ಕ್ಷೇಮವಾ=ಕ್ಷೇಮ+ಅ, ಬಿಡುತೆಗಳಿಂ=ಬಿಡುತೆಗಳಿಂ(ಬಿಡುಗಡೆಗಳಿಂದ), ನಿರ್ಯತ್ನ=ಅಪ್ರಯತ್ನ, ಪಸರಿಪಾ=ಪಸರಿಪ(ಪಸರಿಸುವ)+ಆ.

ವಾಚ್ಯಾರ್ಥ: ಸಸಿಯ ಬುಡದಲ್ಲಿ ಬಿಗಿ ಇದೆ, ಮೇಲೆ ಗಾಳಿಯಿಂದ ಸರಸತೆ. ಈ ಬಿಗಿ ಮತ್ತು ಸಡಿಲತೆಗಳಿಂದಲೇ ಹೂವು ಕ್ಷೇಮ. ಹೂವು ಅಪ್ರಯತ್ನವಾಗಿ, ಸ್ವತಂತ್ರವಾಗಿ ಪರಿಮಳವನ್ನು ಹರಡಿಸುವ ನಯವೇ ಸುಖ.

ವಿವರಣೆ: ಇದೊಂದು ಸುಂದರವಾದ ಹೂವಿನ ಸಸಿಯ ಚಿತ್ರಣ. ಅದರ ಬೇರಿನ ಬಳಿ ಮಣ್ಣಿನ ಬಿಗಿ ಇದೆ. ಆದರೆ ಮೇಲೆ ಹೂವಿಗೆ ಹೊಯ್ದಾಡುವ ಸ್ವತಂತ್ರತೆ ಇದೆ. ಯಾವ ಪ್ರಯತ್ನವೂ ಇಲ್ಲದೆ, ಸ್ವತಂತ್ರವಾಗಿ ತನ್ನ ಪರಿಮಳವನ್ನು ಕುಶಲತೆಯಿಂದ, ಹರಡುವ ನಯ ಅದ್ಭುತವಾದದ್ದು. ಕೆಳಗೆ ಬಿಗಿ, ಮೇಲೆ ಬಿಡುವಿಕೆಯಿಂದಲೇ ಸಸಿ ಭದ್ರ. ತಿರುಗು ಮುರುಗಾಗಿದ್ದರೆ ಸಸಿ ಇರಬಹುದಾಗಿತ್ತೇ? ಬೇರು ಸಡಿಲವಾದರೆ ಸಸಿ ಬದುಕಲಾರದು. ಮೇಲೆ ಬಿಗಿಯಾದರೆ ಹೂವು ಮುದುರಿ ಹೋಗುತ್ತದೆ. ಬದುಕೂ ಹಾಗೆಯೇ, ಬೇರಿನಂತೆ ನಮ್ಮ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿರಬೇಕು ಮತ್ತು ಚಿಂತನೆಯಲ್ಲಿ ಸ್ವತಂತ್ರವಾದ, ಸ್ವಚ್ಛಂದತೆ ಇರಬೇಕು. ಆಗ ಸೃಜನಶೀಲತೆ ಹರಡುತ್ತದೆ.

ಇದು ಒಂದು ಕುಟುಂಬದ ಅಥವಾ ವ್ಯವಸ್ಥೆಯ ಚಿತ್ರಣವನ್ನು ಕೊಡುತ್ತದೆ. ವ್ಯವಸ್ಥೆಯಲ್ಲಿ ನಂಬಿಕೆ ಎನ್ನುವುದು ಬೇರಿದ್ದಂತೆ. ಅದು ಬಿಗಿಯಾಗಿದಷ್ಟೂ, ಬಲವಾಗಿದ್ದಷ್ಟೂ ವ್ಯವಸ್ಥೆ ಭದ್ರ. ಅಲ್ಲಿ ಒಬ್ಬರಲ್ಲಿ ಮತ್ತೊಬ್ಬರಿಗೆ ಬಲವಾದ ನಂಬಿಕೆ ಇರಬೇಕು. ಒಮ್ಮೆ ಸಂಶಯದ ಗಾಳಿ ಸುಳಿಯಿತೋ, ಕುಟುಂಬ ಅಥವಾ ಯಾವುದೇ ವ್ಯವಸ್ಥೆ ಎಂಬ ಸಸಿ ಕೆಳಗೆ ಬಿದ್ದು ಒಣಗಿ ಹೋಗುತ್ತದೆ. ಅಪನಂಬಿಕೆಯಿಂದ ಹಾಳಾದ ವ್ಯವಸ್ಥೆಗಳ ಉದಾಹರಣೆಗಳು ಕಣ್ಣ ಮುಂದಿವೆ.

ಪುಟ್ಟ ಎಸಳಿಗೆ ಮೇಲೆ ಗಾಳಿಯ ಸರಸವಿದೆ. ಅದೇ ಎಸಳಿ ಸೊಬಗು. ಇದರಂತೆ, ನಂಬಿಕೆಯ ಬೇರಿನ ಬಿಗಿ ಎಷ್ಟು ಮುಖ್ಯವೋ, ವ್ಯವಸ್ಥೆಯ ಸದಸ್ಯರ ಸ್ವತಂತ್ರತೆಯೂ ಅಷ್ಟೇ ಮುಖ್ಯ. ಅವರ ಸ್ವಾತಂತ್ರ್ಯದಲ್ಲಿ ಬಿಗಿ ಮಾಡುತ್ತ ಹೋದರೆ ವ್ಯವಸ್ಥೆಯ ಸೃಜನಶೀಲತೆ ಬತ್ತಿಹೋಗುತ್ತದೆ, ಏಕತಾನತೆ ಬಂದುಬಿಡುತ್ತದೆ. ಸ್ವಾತಂತ್ರ್ಯದ ಸೃಜನಶೀಲತೆ ಸರಸತೆಗೆ ಕಾರಣವಾಗುತ್ತದೆ. ಕಗ್ಗದ ಮಾತು, ‘ನಿರ್ಯತ್ನ ಸ್ವತಂತ್ರದಿಂ’ ಎನ್ನುವುದು ತುಂಬ ವಿಶೇಷವಾದದ್ದು. ಹೂವು ತನ್ನ ಸುವಾಸನೆಯನ್ನು ಪಸರಿಸಲು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಅದು ಅನಾಯಾಸವಾಗಿ ಆಗುವಂಥದ್ದು. ಒಬ್ಬ ವ್ಯಕ್ತಿಯೂ ಹಾಗೆ ಅನಾಯಾಸವಾಗಿ ತನ್ನ ಪ್ರತಿಭೆಯನ್ನು ಹರಡುವುದು ಅತ್ಯಂತ ಎತ್ತರದ ಸ್ಥಿತಿ. ಅದು ನಾಲ್ಕನೆಯ ಹಂತ. ಮನುಷ್ಯ ಮೊದಲು ಅರಿವಿಲ್ಲದೆ ಅಸಮರ್ಥನಾಗಿರುತ್ತಾನೆ. (unconsciously incompetent) ನಂತರ ಅವನಿಗೆ ತನಗೆ ಅಸಮರ್ಥತೆ ಇದೆಯೆಂಬ ಅರಿವಾಗುತ್ತದೆ. (consciously incompetent) ಮೂರನೆಯ ಹಂತದಲ್ಲಿ ಆತನಿಗೆ ಸಾಮರ್ಥ್ಯ ಬಂದು, ಸಾಮರ್ಥ್ಯತೆ ಇದೆಯೆಂಬ ಅರಿವೂ ಮೂಡುತ್ತದೆ. (consciously competent) ನಾಲ್ಕನೆಯ ಮತ್ತು ಕೊನೆಯ ಹಂತದಲ್ಲಿ ಮನುಷ್ಯ ತನಗೆ ಅರಿವಿಲ್ಲದೆ ಸಮರ್ಥಶಾಲಿಯಾಗುತ್ತಾನೆ (unconsciously competent). ಆ ಹಂತ ತಲುಪಿದಾಗ, ಯಾವ ಪ್ರಯತ್ನವಿಲ್ಲದೆ ವ್ಯಕ್ತಿತ್ವದ ಪ್ರಭಾವ ಹರಡುತ್ತದೆ. ಈ ಮಾತು ವ್ಯಕ್ತಿಗೆ, ವ್ಯವಸ್ಥೆಗೆ ಅನ್ವಯಿಸುವಂಥದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು