ಬುಧವಾರ, ಆಗಸ್ಟ್ 17, 2022
28 °C

ಬೆರಗಿನ ಬೆಳಕು: ಪ್ರೇಮದ ಬಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ದೇವದತ್ತ ಯಾವಾಗಲೂ ಬುದ್ಧನ ದ್ವೇಷಿಯೇ ಆಗಿದ್ದ. ಸದಾಕಾಲ ಬುದ್ಧನಿಗೆ ಅನ್ಯಾಯ ಮಾಡುವುದರಲ್ಲಿಯೇ ಅವನ ಬುದ್ಧಿ ವ್ಯಯವಾಗುತ್ತಿತ್ತು. ಮೊದಲು ಆತ ಬುದ್ಧನನ್ನು ಕೊಂದು ಬಿಡಲು ಒಬ್ಬ ಧನುರ್ಧಾರಿಯನ್ನು ಕಳುಹಿಸಿದ. ಆತ ಮರಳಿ ಬಂದು, ‘ನಾನು ಆ ಮಹಾತ್ಮನ ಪ್ರಾಣ ತೆಗೆಯಲಾರೆ. ಆತ ಭಗವಂತ’ ಎಂದು ಹೇಳಿ ಹೋದ. ಇನ್ನು ತಾನೇ ಅವನ ಪ್ರಾಣ ತೆಗೆಯುವುದಾಗಿ ಚಿಂತಿಸಿ, ಬುದ್ಧ ಗೃಧ್ರಕೂಟ ಪರ್ವತದ ತಪ್ಪಲಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ದೇವದತ್ತ ಬೆಟ್ಟದ ಮೇಲಿನ ಒಂದು ದೊಡ್ಡ ಬಂಡೆಯನ್ನು ಉರುಳಿಸಿದ. ಆದರೆ ಪರ್ವತ ಶಿಖರಗಳೆರಡು ಅಡ್ಡ ಬಂದು ಶಿಲೆಯನ್ನು ತಡೆದವು. ಆದರೆ ಕಲ್ಲಿನ ಒಂದು ತುಂಡು ಹಾರಿ ಬಂದು ಬುದ್ಧನ ಕಾಲಿಗೆ ಬಡಿಯಿತು. ರಕ್ತ ಸುರಿಯಿತು. ತುಂಬ ನೋವಾಯಿತು. ವೈದ್ಯ ಜೀವಕ ಔಷಧಿ ಹಾಕಿ ಕಟ್ಟಿ ಚಿಕಿತ್ಸೆ ಮಾಡಿದ. ಕೆಲದಿನಗಳ ನಂತರ ಬುದ್ಧ ಮೊದಲಿನಂತಾದ.

ದೇವದತ್ತನಿಗೆ ಚಿಂತೆಯಾಯಿತು. ಯಾವ ಮನುಷ್ಯನೂ ಬುದ್ಧನಿಗೆ ಹಾನಿ ಮಾಡಲಾರ. ಅದ್ದರಿಂದ ಪ್ರಾಣಿಗಳನ್ನು ಬಳಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ. ಆ ದೇಶದ ರಾಜನ ಬಳಿಗೆ ಹೋಗಿ ಬುದ್ಧನ ವಿರುದ್ಧ ವಿಷಯಗಳನ್ನು ಹೇಳಿ ಅವನನ್ನು ನಂಬಿಸಿದ. ರಾಜನ ಬಳಿ ಒಂದು ಬೃಹತ್ ಆನೆಯಿತ್ತು. ಅದರ ಹೆಸರು ನಾಳಾಗಿರಿ. ಆ ಆನೆಗೆ ಮದ ಬರುವಂತೆ ಮಾಡಿ ಬುದ್ಧ ಬರುವ ದಾರಿಯಲ್ಲಿ ಬಿಟ್ಟರೆ ಅದು ಅವನನ್ನು ತುಳಿದು ಕೊಂದುಬಿಡುತ್ತದೆ. ಇದು ಯೋಜನೆ. ರಾಜ ಮಾವಟಿಗನನ್ನು ಕರೆದು ಕೇಳಿದ, ‘ನಾಳಾಗಿರಿಗೆ ಮದ ಉಕ್ಕಬೇಕಾದರೆ ಎಷ್ಟು ಗಡಿಗೆ ಸುರೆ ಕುಡಿಸುತ್ತೀರಿ?’ ‘ಎಂಟು ಗಡಿಗೆ’ ಎಂದ ಮಾವಟಿಗ. ‘ನಾಳೆ ನಾಳಾಗಿರಿಗೆ ಹದಿನಾರು ಗಡಿಗೆ ಸುರೆ ಕುಡಿಸು, ಶ್ರಮಣ ಗೌತಮ ಬರುವ ದಾರಿಯಲ್ಲಿ ಬಿಟ್ಟು ಬಿಡು’ ಎಂದು ದೇವದತ್ತ ಹೇಳಿದ. ಮಾವಟಿಗ ಒಪ್ಪಿದ.

ಮರುದಿನ ಡಂಗೂರ ಸಾರಲಾಯಿತು. ‘ನಾಳೆ ಬೆಳಿಗ್ಗೆ ನಾಳಾಗಿರಿಯನ್ನು ಮದೋನ್ಮತ್ತಗೊಳಿಸಿ ನಗರದ ರಸ್ತೆಗಳಲ್ಲಿ ಬಿಡಲಾಗುವುದು. ಜನರೆಲ್ಲ ಪ್ರಾತಃಕಾಲದಲ್ಲೇ ಕೆಲಸಗಳನ್ನು ಮುಗಿಸಿ ಬೀದಿಯಲ್ಲಿ ಯಾರೂ ಬರಕೂಡದು’. ಈ ಸುದ್ದಿಯನ್ನು ಉಪಾಸಕರು ಬುದ್ಧನ ಬಳಿಗೆ ತಂದರು. ‘ಭಂತೇ, ನಾಳೆ ನೀವು ಭಿಕ್ಷೆಗೆ ಹೊರಡುವ ದಾರಿಯಲ್ಲಿ ನಾಳಾಗಿರಿ ಬರುವಂತಿದೆ. ಅದ್ದರಿಂದ ದಯವಿಟ್ಟು ಹೊರಗೆ ಹೋಗಬೇಡಿ’ ಎಂದು ಭಿನ್ನವಿಸಿಕೊಂಡರು. ಬುದ್ಧ ನಕ್ಕು ಸುಮ್ಮನಾದ. ಮರುದಿನ ಆತ ಭಿಕ್ಷೆಗೆ ಹೊರಟಾಗ ನಾಳಾಗಿರಿ ಎದುರು ಬಂದಿತು. ಇದನ್ನು ಕಂಡು ಜನ ಮಾಳಿಗೆಗಳ ಮೇಲೆ ನೆರೆದರು. ಮದೋನ್ಮತ್ತವಾದ ನಾಳಾಗಿರಿ, ಹೂಂಕರಿಸುತ್ತಾ, ದಾರಿಯಲ್ಲಿದ್ದ ವಸ್ತುಗಳನ್ನು ತುಳಿಯುತ್ತ, ಪುಡಿ ಮಾಡುತ್ತ ನುಗ್ಗಿತು. ಆಗ ರಸ್ತೆಗೆ ಬಂದ ಮಗುವನ್ನೆತ್ತಿಕೊಂಡ ಒಬ್ಬ ಮಹಿಳೆ ಗಾಬರಿಯಾಗಿ ಮಗುವನ್ನು ರಸ್ತೆಯ ಮಧ್ಯದಲ್ಲಿ ಬುದ್ಧನ ಮುಂದೆ ಕೂರಿಸಿ ಓಡಿಹೋದಳು, ಆನೆ ಮಗುವಿನತ್ತ ನುಗ್ಗಿ ಬಂದಿತು. ಬುದ್ಧ ತನ್ನ ಮೋಹಗೊಳಿಸುವ ಧ್ವನಿಯಲ್ಲಿ, ‘ಬಾ ಗಜರಾಜ, ನಿನ್ನ ಉನ್ಮತ್ತತೆಗೆ ಮದಿರೆ ಕಾರಣ. ನಿನ್ನ ಸ್ವಭಾವ ಅದಲ್ಲ. ಕಠಿಣನಾಗಬೇಡ, ಮನುಷ್ಯಘಾತಕನಾಗಬೇಡ’ ಎಂದು ಕರೆದ. ಪವಾಡ! ಆನೆ ಮಗುವಿನಂತೆ ಬಂದು ಬುದ್ಧನ ಪಾದಕ್ಕೆ ನಮಸ್ಕರಿಸಿ ಮಲಗಿ ಬಿಟ್ಟಿತು. ಮತ್ತೆ ದೇವದತ್ತ ಸೋತು ಹೋದ.

ಮತ್ತು ಬರಿಸಲು ಮದಿರೆ ಬೇಕು ಮತ್ತು ಇಳಿಸಲು ಪ್ರೇಮ ಸಾಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.