ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ತಪ್ಪದು ಕರ್ಮಫಲ

Last Updated 23 ಮೇ 2022, 19:30 IST
ಅಕ್ಷರ ಗಾತ್ರ

ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ - |
ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ||
ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ - |
ಯಿದ್ದೆಯಿರುವುದು ನಮಗೆ – ಮಂಕುತಿಮ್ಮ|| 634 ||

ಪದ-ಅರ್ಥ: ರಾಜ್ಯವಿದ್ಯೆ=ರಾಜಕೀಯ ಜ್ಞಾನ, ಹಣೆಯಿನಳಿಯಿಸದಾ=ಹಣೆಯಿನ್ (ಹಣೆಯಿಂದ)+ಅಳಿಸದ+ಆ ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆಯಿದ್ದೆಯಿರುವುದು =ಕ್ಷುದ್ರ+ಕಾರ್ಪಣ್ಯದ+ಅನ್ಯಾಯದ+ಅನಿತಿನಿತು(ಅಷ್ಟು-ಇಷ್ಟು)+ಉಳಿಕೆ(ಬಾಕಿ)+ಇದ್ದೆ+ಇರುವುದು.

ವಾಚ್ಯಾರ್ಥ: ಯುದ್ಧಮಾಡಿ, ರಾಜಕೀಯ ತಂತ್ರಗಳನ್ನು ಬಳಸಿ, ಶಾಸ್ತ್ರಗಳ ಬಳಕೆಯಿಂದ ಮನುಷ್ಯನ ಹಣೆಬರಹವನ್ನು ಅಳಿಸುವುದು ಅಸಾಧ್ಯ. ಯಾಕೆಂದರೆ ನಮ್ಮ ಸಣ್ಣತನದ, ಜಿಪುಣತನದ, ಅನ್ಯಾಯದ ಅಲ್ಪ ಸ್ವಲ್ಪ ಉಳಿಕೆ ನಮ್ಮಲ್ಲಿ ಇದ್ದೇ ಇರುತ್ತದೆ.

ವಿವರಣೆ: ನಮ್ಮ ಹಿಂದೂ ಧರ್ಮದ ಅನೇಕ ನಂಬಿಕೆಗಳಲ್ಲಿ ಕರ್ಮದ ಕಲ್ಪನೆಯೂ ಒಂದು. ನಾವು ಮಾಡಿದ ಕರ್ಮ ನಮ್ಮ ಬೆನ್ನು ಬಿಡುವುದಿಲ್ಲ. ಕರ್ಮಕ್ಷಯವಾಗುವವರೆಗೆ ಕಷ್ಟ ತಪ್ಪಿದ್ದಲ್ಲ. ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾದದ್ದಲ್ಲ. ಪ್ರಾಚೀನ ಗ್ರೀಸ್‌ದಲ್ಲಿ ಕೂಡ, ಮನುಷ್ಯನ ಹಣೆಬರಹವನ್ನು ಜೀಯಸ್‌ನಂಥ ದೇವರುಗಳು ನಿಯಂತ್ರಿಸುತ್ತಾರೆ, ಅವರೇ ಪ್ರತಿಯೊಬ್ಬ ಮನುಷ್ಯನ ಭವಿಷ್ಯವನ್ನು ನಿಯಂತ್ರಿಸುತ್ತಾರೆ ಎಂದು ನಂಬುತ್ತಿದ್ದರು.

ನಮ್ಮ ಸರ್ವಜ್ಞ ಹೇಳುತ್ತಾನೆ, ನೀನು ಮಾಡಿದ ಪಾಪಕೃತ್ಯವನ್ನು ಮರೆತರೆ ಆ ಪಾಪ ಹೋಗುವುದೆ? ಅದು ನಿನ್ನನ್ನು ಎಂದಿಗೂ ಬೆನ್ನು ಬಿಡದು.

ಅರಿತು ಮಾಡಿದ ಪಾಪ, ಮರೆತರದು ಪೋಪುದೆ?
ಮರೆತರಾಮರವ ಬಿಡಿಸುವುದು, ಕೊರತೆಯದು,
ಅರಿತು ನೋಡೆಂದ ಸರ್ವಜ್ಞ ||

ಪುರಂದರದಾಸರು ಕರ್ಮದ ಅನುಲ್ಲಂಘನೀಯತೆಯನ್ನು ತಮ್ಮ ಕೀರ್ತನೆಯಲ್ಲಿ ಹೇಳುತ್ತಾರೆ. ಅದು ಬ್ರಹ್ಮಬರೆದ ಲಿಖಿತ. ಅದನ್ನು ತಿದ್ದುವುದು ಸಾಧ್ಯವಿಲ್ಲ. ಬಹುಶ: ಅದನ್ನು ದೇವರೂ ತಿದ್ದಲಾರ. ಅದಕ್ಕೇ ನೀ ಮಾಡುವುದೇನು ಎಂದು ದೇವರನ್ನೇ ಕೇಳುತ್ತಾರೆ.

‘ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವಾ ?
ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ.....’

ಕಗ್ಗ ಅದೇ ಮಾತನ್ನು ಹೇಳುತ್ತದೆ. ಯುದ್ಧದಿಂದ, ರಾಜಕೀಯ ತಂತ್ರಗಳಿಂದ ಅಸಾಮಾನ್ಯ ಶಾಸ್ತ್ರಜ್ಞಾನದಿಂದ ಮನುಷ್ಯನ ಹಣೆಬರಹವನ್ನು ಅಳಿಸುವುದು ಅಸಾಧ್ಯ. ಯಾಕೆಂದರೆ ನಾವು ಮಾಡಿದ ಕರ್ಮಗಳ ಉಳಿಕೆ ನಮ್ಮಲ್ಲಿ ಇದ್ದೇ ಇದೆ. ಅದು ನಮ್ಮ ಸಣ್ಣತನ, ಜಿಪುಣತನ, ಅನ್ಯಾಯಗಳ ಫಲಶೃತಿ. ಅದನ್ನು ನಾವು ಅನುಭವಿಸಲೇ ಬೇಕು. ಎಲ್ಲಿಯವರೆಗೆ ಉಳಿಕೆ ಇದೆಯೋ ಅಲ್ಲಿಯವರೆಗೆ ಸತ್ಕರ್ಮಗಳಿಂದ ಅದನ್ನು ಸವೆಸಬೇಕು. ಕರ್ಮಸಿದ್ಧಾಂತವೇ ಪುರೋಹಿತ ತಂತ್ರ ಎನ್ನುವವರೂ ಇದ್ದಾರೆ, ಸಿದ್ದಾಂತವನ್ನು ನಂಬುವವರೂ ಬೇಕಾದಷ್ಟು ಜನ ಇದ್ದಾರೆ. ಅವರವರ ನಂಬಿಕೆ ಅವರಿಗೆ. ಆದರೆ ಈ ಸಿದ್ಧಾಂತದ ಮೂಲ ನೆಲೆ ಯಾವುದು ಎಂಬುದನ್ನು ನೋಡಿದರೆ, ಉದ್ದೇಶ ಸರಿಯಾಗಿದೆ ಎನ್ನಿಸುತ್ತದೆ. ನಾನು ಯಾವುದೇ ತಪ್ಪು ಮಾಡಿದರೆ ಶಿಕ್ಷೆ ಖಚಿತ, ಅದು ತಪ್ಪುವುದು ಸಾಧ್ಯವಿಲ್ಲವೆನ್ನಿಸಿದಾಗ ಮನಸ್ಸು ತಪ್ಪಿನ ಕಡೆಗೆ ಹೋಗದು. ಹೇಗೆ ಪೊಲೀಸರು, ಶಿಕ್ಷೆ, ಜೈಲು, ಜೀವಾವಧಿ, ಗಲ್ಲಿನ ಶಿಕ್ಷೆಗಳು ಮನುಷ್ಯನ ಮನಸ್ಸು ದಾರಿ ತಪ್ಪದಂತೆ ಎಚ್ಚರಿಕೆಯನ್ನು ನೀಡುತ್ತವೋ, ಹಾಗೆಯೇ ಕರ್ಮಸಿದ್ಧಾಂತ ಕೂಡ ಮನುಷ್ಯನನ್ನು ಧರ್ಮಪಥದಲ್ಲಿಯೇ ಮುನ್ನಡೆಯುವಂತೆ ಪ್ರೇರೇಪಿಸಬಹುದು, ಪ್ರೇರೇಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT