ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರತಿಭಾ ವಿಕಾಸನ

Last Updated 21 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |
ಮತಿಮನಗಳ ಕೃಷಿತಪ:ಫಲವುಮಂತು ||
ಸತತ ಕೃಷಿ, ಬೀಜಗುಣ, ಕಾಲವರ್ಷಗಳೊಡನೆ |
ಪ್ರತಿಭೆ ವಿಕಸಿತವಹುದೊ – ಮಂಕುತಿಮ್ಮ || 569 ||

ಪದ-ಅರ್ಥ: ಕ್ಷಿತಿರುಹಕೆ=ಮರಕ್ಕೆ, ಸುಮಫಲಮುಹೂರ್ತ=ಸುಮ(ಹೂವು)+ಫಲ(ಹಣ್ಣು)+ಮುಹೂರ್ತ, ಕೃಷಿತಪ:ಫಲವುಮಂತು=ಕೃಷಿ+ತಪ:ಫಲವು(ತಪಸ್ಸಿನಫಲ)+ಅಂತು, ಕಾಲವರ್ಷಗಳೊಡನೆ=ಕಾಲ=ವರ್ಷಗಳು+ಒಡನೆ(ಒದಗಿದರೆ), ವಿಕಸಿತವಹುದೊ=ವಿಕಸಿತ(ಅರಳುವಿಕೆ)+ಅಹುದೊ.

ವಾಚ್ಯಾರ್ಥ: ಮರಕ್ಕೆ ಯಾವಾಗ ಹೂವು ಹಣ್ಣುಗಳಾಗುತ್ತವೆಂಬ ಮುಹೂರ್ತ ಗೊತ್ತಾಗಿದೆಯೆ? ಮನಸ್ಸು ಮತ್ತು ಬುದ್ಧಿಗಳ ಬೆಳವಣಿಗೆ ಮತ್ತು ತಪಸ್ಸಿನ ಫಲವೂ ಹಾಗೆಯೇ. ಸತತವಾದ ಪರಿಶ್ರಮ, ಒಳ್ಳೆಯ ಚಿಂತನೆಯ ಬೀಜಗಳೊಡನೆ, ಸಕಾಲದಲ್ಲಿ ಸಹಕಾರದ ಮಳೆ ಒದಗಿದರೆ ಪ್ರತಿಭೆಯ ವಿಕಾಸವಾಗುತ್ತದೆ.

ವಿವರಣೆ: ಎನ್ರಿಕೋ ಕಾರುಜೋ ಅತ್ಯಂತ ಬಡಕುಟುಂಬದಲ್ಲಿ ನೇಪಲ್ಸ್‌ನಲ್ಲಿ ಜನಿಸಿದವನು. ಅವನ ತಂದೆ-ತಾಯಿಯರಿಗೆ 21 ಜನ ಮಕ್ಕಳಂತೆ. ಅವರಲ್ಲಿ ಮೂವರು ಮಾತ್ರ ಬದುಕಿ ಉಳಿದರು. ಎನ್ರಿಕೋನ ತಾಯಿ ಮಗನನ್ನು ಶಾಲೆಗೆ ಕಳುಹಿಸಿ ಓದಲು ಪ್ರೋತ್ಸಾಹಿಸಿದಳು. ಹುಡುಗ ಚರ್ಚ್‌ನಲ್ಲಿ ಹಾಡುತ್ತಿದ್ದನ್ನು ಗಮನಿಸಿ ಕೆಲವರು ಅವನಿಗೆ ನಾಟಕಗಳಲ್ಲಿ ಹಾಡುವ ಅವಕಾಶ ನೀಡಿದರು. ಎನ್ರಿಕೋ ತುಂಬ ಪರಿಶ್ರಮಿ. ಅವನ ಮೊದಲ ಹಾಡಿನ ರೆಕಾರ್ಡಿಂಗ್‌ಗೆ ಹೋದಾಗ ಅಲ್ಲಿದ್ದವರು, ಈತನ ಧ್ವನಿ ಕೀಚಲು, ಹಾಡುವುದಕ್ಕೆ ಲಾಯಕ್ಕಲ್ಲ ಎಂದುಬಿಟ್ಟರು. ಹುಡುಗ ಮತ್ತೆ ನಾಲ್ಕಾರು ವರ್ಷ ಪರಿಶ್ರಮ ಮಾಡಿ ನಾಟಕಗಳಲ್ಲಿ ಪಾತ್ರ ಮಾಡುತ್ತ ಹಾಡತೊಡಗಿದ. ಅವನ ಹಾಡುಗಳು ತುಂಬ ಪ್ರಸಿದ್ಧವಾಗತೊಡಗಿದವು. ಮುಂದೆ ಸಲಗದಂತೆ ಅವನು ನಡೆದದ್ದೇ ದಾರಿ. ಬದುಕಿದಾಗಲೇ ದಂತಕಥೆಯಾದ, ಅತ್ಯಂತ ಶ್ರೀಮಂತನಾದ.

ಮುದ್ದೇನಹಳ್ಳಿಯಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹುಡುಗ ವಿಶ್ವೇಶ್ವರಯ್ಯ. ಅವರ ಬೆಳವಣಿಗೆ ಸುಲಭವಾದದ್ದಲ್ಲ. ತುಂಬ ಪರಿಶ್ರಮದ ಬದುಕು. ಶಿಸ್ತುಬದ್ಧ ಜೀವನದ ಮಾರ್ಗ ಹಿಡಿದು ಅವರು ಬೆಳೆದ ದಾರಿ ಯಾರಿಗಾದರೂ ಬೆರಗು ಹುಟ್ಟಿಸುವಂಥದ್ದು. ಪುಣೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ಮುಂಬೈನಲ್ಲಿ ಕೆಲಸ ಮಾಡಿ, ನಂತರ ಕನ್ನಂಬಾಡಿಯಲ್ಲಿ ಕಟ್ಟೆಯನ್ನು ಕಟ್ಟಿಸಿ, ಮೈಸೂರಿನ ದಿವಾನರಾಗಿ ಮಾಡಿದ ಕೆಲಸ ಅವರನ್ನು ಭಾರತರತ್ನರನ್ನಾಗಿಸಿತು. ಇಂದಿಗೂ ಡಾ.ಎಂ.ವಿಶ್ವೇಶ್ವರಯ್ಯ ಎಂದರೆ ಸಮಯ ಪರಿಪಾಲನೆಗೆ, ಕರ್ತವ್ಯನಿಷ್ಠೆಗೆ ಮತ್ತೊಂದು ಹೆಸರು.

ಇವರಿಬ್ಬರ ಜೀವನ ಚರಿತ್ರೆಯನ್ನು ಮೆಲಕು ಹಾಕಿದರೆ, ಬಾಲ್ಯದಲ್ಲಿ ಅವರು ಅಷ್ಟು ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದು ಯಾರೂ ಹೇಳಲು ಸಾಧ್ಯವಿರಲಿಲ್ಲ. ಹಾಗಾದರೆ ಅವರ ಸಾಧನೆಗೆ ಕಾರಣವೇನು? ಮೂಲತ: ಅವರಿಗೆ ದೈವದತ್ತವಾಗಿ ಬಂದ ಬುದ್ಧಿಶಕ್ತಿ ಮತ್ತು ಕಲೆ. ಅದರೊಂದಿಗೆ ಮುಖ್ಯವಾದದ್ದು ಅವರ ಪರಿಶ್ರಮ. ಆ ಪರಿಯ ಪರಿಶ್ರಮವಿರದಿದ್ದರೆ ಅವರು ಬೆಳೆಯುವುದು ಸಾಧ್ಯವಿರಲಿಲ್ಲ. ಇದರೊಂದಿಗೆ ಕಾಲಕಾಲಕ್ಕೆ ದೊರೆತ ಸಹೃದಯರ, ಪರಿಸರದ ಸಹಾಯ. ಕಗ್ಗ ಈ ಮಾತನ್ನು ಹೇಳುತ್ತದೆ. ಪ್ರತಿಯೊಂದು ಮರಕ್ಕೆ ಹೂವು, ಹಣ್ಣು ಯಾವಾಗ ಆಗುತ್ತವೆ ಎಂದು ಖಚಿತವಾಗಿ ಹೇಳಲು ಸಾಧ್ಯವೇ? ಅವು ಆಗುವುದು ಬೀಜಗುಣದಿಂದ, ಸತತವಾದ ಕೃಷಿಯಿಂದ ಮತ್ತು ಕಾಲಕಾಲಕ್ಕೆ ದೊರಕುವ ನೀರು, ಪೋಷಣೆ ದ್ರವ್ಯಗಳಿಂದ. ಅಂತೆಯೇ ಮನುಷ್ಯನ ಬುದ್ಧಿ ಮತ್ತು ಮನಸ್ಸುಗಳು ಹದವಾಗಿ ಕೃಷಿಯಾದರೆ ಅದ್ಭುತವಾದ ಫಲಗಳು ದೊರಕಿ ಸಾಧನೆಯಾಗುತ್ತದೆ. ಅದರೊಂದಿಗೆ ಸರಿಯಾದ ಪ್ರಯತ್ನ, ಸಹಕಾರಗಳು ದೊರೆತಾಗ ಪ್ರತಿಭೆ ವಿಕಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT