ಶನಿವಾರ, ಜುಲೈ 2, 2022
27 °C

ಬೆರಗಿನ ಬೆಳಕು: ಪರೀಕ್ಷೆ - ಸಫಲತೆಯ ದಾರಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪರಿಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು |
ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ||
ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ |
ಬಿರಿದ ನನೆ ಫಲಕೆ ಮನೆ – ಮಂಕುತಿಮ್ಮ || 589 ||

ಪದ-ಅರ್ಥ: ಪರಿಭವದ=ಪರಾಭವದ, ಸೋಲಿನ, ಪೆಟ್ಟುಗಳಿನಾದ=ಪೆಟ್ಟುಗಳಿಂದಾದ, ಗಂತಿ=ಗಂಟು, ಬಿರುಸಾದದ್ದು, ನನೆ=ಮೊಗ್ಗು.

ವಾಚ್ಯಾರ್ಥ: ಜೀವನದಲ್ಲಿ ಬರುವ ಅನೇಕ ಪರೀಕ್ಷೆಗಳು, ಸೋಲುಗಳು, ಶಿಕ್ಷೆಗಳು ಮನಸ್ಸು - ಬುದ್ಧಿಗಳಿಗೆ ಗರಡಿಯ ವ್ಯಾಯಾಮವಿದ್ದಂತೆ. ಈ ಪೆಟ್ಟುಗಳಿಂದ ಪೌರುಷಕ್ಕಾದ ಗಂಟುಗಳು, ಬಿರುಸುಗಳೇ ವಿಜಯದ ಲಕ್ಷಣಗಳು. ಮೊಗ್ಗು ಬಿರಿದಾಗಲೇ ಮುಂದೆ ಹಣ್ಣಿಗೆ ಮನೆ.

ವಿವರಣೆ: ಇತ್ತೀಚಿಗೆ ಯಾರೋ ಕಳುಹಿಸಿದ ಹಾಡೊಂದನ್ನು ಕೇಳುತ್ತಿದ್ದೆ. ಗಾಯಕಿ ತುಂಬ ಸೊಗಸಾಗಿ ಆರ್ತವಾಗಿ ಹಾಡುತ್ತಿದ್ದರು. ಆ ಹಾಡಿನ ಪ್ರಾರಂಭ ಹೀಗಿದೆ.

‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ’, ಹಾಡಿನ ನಡುವಿನ ಒಂದೆರಡು ಸಾಲುಗಳು ಮನದಲ್ಲಿ ಸ್ಥಿರವಾಗಿ ನಿಂತು ಕಾಡಿವೆ.

‘ಕಷ್ಟಗಳ ಕೊಡಬೇಡ ಎನಲಾರೆ ರಾಮ,
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ.
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ, ನಿನ್ನಷ್ಟು ರಾಮ’

ಮನಸ್ಸಿಗೆ ನೆಮ್ಮದಿಯನ್ನು ಕೊಡು ಎಂದು ಕೇಳುವ ಕವಿ ಕಷ್ಟಗಳನ್ನು ಬೇಡೆನ್ನುವುದಿಲ್ಲ. ಕಷ್ಟಗಳನ್ನು ಸಹಿಸುವ ಸಹನೆಯನ್ನು ನೀಡು ಎನ್ನುತ್ತಾನೆ. ಅಷ್ಟೇ ಅಲ್ಲ ಆ ಸಹನೆಯನ್ನು ಇನ್ನಷ್ಟು ನೀಡುವುದರೊಂದಿಗೆ ನಿನ್ನಷ್ಟು ಸಹನೆಯನ್ನು ಕೊಡು ಎಂದು ಬೇಡುತ್ತಾನೆ. ನಾವು ನೆಮ್ಮದಿಯನ್ನು ಕೊಡು ಎಂದು ಕೇಳುವ ರಾಮ ತೋರಿದ ಸಹನೆ ಕಲ್ಪನಾತೀತವಾದದ್ದು. ಅಷ್ಟು ಪರೀಕ್ಷೆಗಳಿಗೆ, ಶಿಕ್ಷೆಗಳಿಗೆ ತನ್ನನ್ನು ಒಡ್ಡಿಕೊಂಡ ರಾಮ. ಅವನು ಪಟ್ಟ ಕಷ್ಟಗಳು, ಪರೀಕ್ಷೆಗಳು ಕಡಿಮೆಯೇ? ಯಾವ ತಪ್ಪೂ ಮಾಡದೆ ಹದಿನಾಲ್ಕು ವರ್ಷ ಕಾಡಿಗೆ ಹೋದ. ತಾನು ಆತ್ಯಾಂತಿಕವಾಗಿ ಪ್ರೀತಿಸುವ ಸೀತೆ ಕಾಡಿನಲ್ಲಿ ನಡೆಯುವಾಗ ಬೆಂದು ಹೋದ. ಸತತವಾಗಿ ರಾಕ್ಷಸರೊಡನೆ ಹೋರಾಟ, ಪತ್ನಿಯ ಅಪಹರಣ, ವಾನರರ ಜೊತೆಗೆ ಸಂಧಾನ, ಸೀತೆಗೆ ಹುಡುಕಾಟ, ವಿರಹ ತಾಪ, ಸಮುದ್ರ ದಾಟುವ ಪರಿಪಾಟಲು, ರಾವಣನೊಡನೆ ಯುದ್ಧ, ತನ್ನ ಪ್ರೀತಿಯ ಮಡದಿಯ ಚಾರಿತ್ರ್ಯ ಸ್ಥಾಪನೆಗೆ ಅಗ್ನಿಪರೀಕ್ಷೆ. ಒಂದಾದ ಮೇಲೊಂದು ಪರೀಕ್ಷೆಗಳು ರಾಮನಿಗೆ. ಕೊನೆಗಾದರೂ ಸುಖ ದೊರಕಿತೇ? ಪತ್ನಿ, ಮಕ್ಕಳು ದೊರಕಿ ಸಂತೋಷದ ಜೀವನದ ಬೆಳಕು ಮೂಡುವಷ್ಟರಲ್ಲಿ ಸೀತೆಯೇ ಭೂಮಾತೆಯ ಮಡಿಲು ಸೇರುತ್ತಾಳೆ. ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಿದವನು ರಾಮ. ಆದರೆ ಆ ಪರೀಕ್ಷೆಗಳು ಅವನ ವ್ಯಕ್ತಿತ್ವವನ್ನು ಕುಗ್ಗಿಸಿದವೆ? ಬದಲಾಗಿ ಪ್ರತಿಯೊಂದು ಪರೀಕ್ಷೆಯ ನಂತರ ರಾಮ ಪುಟಕಿಟ್ಟ ಚೆನ್ನದಂತೆ ಪರಿಶುದ್ಧನಾಗಿ ಬಂದ.

ಕಗ್ಗ ಈ ಮಾತನ್ನು ಚೆನ್ನಾಗಿ ತಿಳಿಸುತ್ತದೆ. ನಾವು ಎದುರಿಸುವ ಪರೀಕ್ಷೆಗಳು, ಸೋಲುಗಳು ಮತ್ತು ಶಿಕ್ಷೆಗಳು ನಮ್ಮನ್ನು ಕುಗ್ಗಿಸಿ, ಆತ್ಮವಿಶ್ವಾಸ ಕಳೆದುಕೊಳ್ಳುವಂತೆ ಮಾಡಬಾರದು. ಬದಲಾಗಿ ಗರಡಿಯ ವ್ಯಾಯಾಮ ಹೇಗೆ ದೇಹವನ್ನು ಗಟ್ಟಿ ಮಾಡುತ್ತದೋ, ಹಾಗೆ ಈ ಪರೀಕ್ಷೆಗಳು ನಮ್ಮ ಮನಸ್ಸು, ಬುದ್ಧಿಗಳನ್ನು ಹುರಿಗೊಳಿಸಿ ಬಲಗೊಳಿಸುತ್ತವೆ. ಈ ಸಂದರ್ಭದಲ್ಲಿ ಬಿದ್ದ ಪೆಟ್ಟುಗಳು ಮುಂಬರುವ ವಿಜಯದ ಕುರುಹುಗಳು. ಇಂದು ಮೊಗ್ಗು ಬಿರಿದಾಗಲೇ ಮುಂದೆ ಅಲ್ಲಿ ಹಣ್ಣು ಬರುವುದು. ಅಂತೆಯೇ ಇಂದಿನ ಪರೀಕ್ಷೆ, ಸೋಲುಗಳು ಬರಲಿರುವ ವಿಜಯಗಳ ಹೆಬ್ಬಾಗಿಲುಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು