ಸೋಮವಾರ, ನವೆಂಬರ್ 30, 2020
19 °C

ಬೆರಗಿನ ಬೆಳಕು: ಬದುಕಿನ ಭಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೇರಾಳು ಮೂಟೆಗೂಲಿಯ ಬೇಡಿ ಹೆಗಲೊಡ್ಡಿ |
ಭಾರವನು ನಾಲ್ಕು ಮಾರೊಯ್ದಷ್ಟರೊಳಗೇ ||
ದೂರವಿನ್ನೆಷ್ಟೆನುತಲಾತುರಿಪನ್ ಅದನಿಳಿಸೆ |
ಕಾರುಬಾರುಗಳಷ್ಟೆ – ಮಂಕುತಿಮ್ಮ || 346 ||

ಪದ-ಅರ್ಥ: ಹೇರಾಳು=ಹಿರಿದಾದ+ಆಳು, ಮೂಟೆಗೂಲಿ=ಮೂಟೆ+ಕೂಲಿ, ಮಾರೊಯ್ದಷ್ಟರೊಳಗೇ=ಮೂರು+ಒಯ್ದು+ಅಷ್ಟರೊಳಗೇ, ದೂರವಿನ್ನೆಷ್ಟೆನುತಲಾತುರಿಪನ್=ದೂರ=ಇನ್ನೆಷ್ಟು+ಎನುತಲಿ+ಆತುರಿಪನ್(ಅವಸರಿಸುವನು), ಅದನಿಳಿಸೆ=ಅದನು+ಇಳಿಸೆ.

ವಾಚ್ಯಾರ್ಥ: ಒಬ್ಬ ಭಾರಿಯ ಆಳು ಮೂಟೆ ಹೊರುತ್ತೇನೆ, ಕೂಲಿಕೊಡಿ ಎಂದು ಬೇಡಿ, ಹೆಗಲಿಗೇರಿಸಿ ಭಾರವನು, ನಾಲ್ಕು ಮಾರು ಹೋಗುವುದರೊಳಗೆ, ಇನ್ನೆಷ್ಟು ದೂರ ಎಂದು ಅದನ್ನು ಕೆಳಗಿಳಿಸಲು ಆತುರ ಮಾಡುತ್ತಾನೆ. ಸಂಸಾರದ ಕಾರುಬಾರುಗಳೂ ಅಷ್ಟೇ.

ವಿವರಣೆ: ಬದುಕಿನ ಕೊನೆಯ ಕ್ಷಣದವರೆಗೆ ಕರ್ಮ ತಪ್ಪಿದ್ದಲ್ಲ. ಅದನ್ನು ಮಾಡುತ್ತಲೇ ಇರಬೇಕು. ಆದರೆ ಮಾಡುವ ಕರ್ಮವನ್ನೇ ಸೊಗಸಾಗಿ ಮಾಡುವುದು ಹೇಗೆ? ಕರ್ಮಮಾಡುವವರಲ್ಲಿ ಮೂರು ರೀತಿಗಳು. ಮೊದನೆಯವರು ಕರ್ಮನಿರತರು. ಅವರು ಸದಾಕಾಲ ಕರ್ಮದಲ್ಲೇ ತೊಡಗಿದವರು. ಅವರಿಗೆ ಅದೊಂದು ಯಾಂತ್ರಿಕಕ್ರಿಯೆ. ಕೊಟ್ಟ ಕೆಲಸವನ್ನು, ಹೇಳಿದ ರೀತಿಯಲ್ಲೇ ಮಾಡುವವರು. ಹೆಚ್ಚು ತಲೆ ಕೆಡಿಸಿಕೊಂಡು ಅದನ್ನು ಉತ್ತಮಪಡಿಸುವ, ಬದಲಾಯಿಸುವ ಗೋಜಿಗೆ ಹೋಗುವವರಲ್ಲ. ಅವರ ಪ್ರಾಮಾಣಿಕತನದ ಬಗ್ಗೆ ಯಾವ ಸಂಶಯವೂ ಇಲ್ಲ. ಆ ವಸ್ತುವನ್ನು ಅಲ್ಲಿಟ್ಟು ಬಾ ಎಂದರೆ ಅಲ್ಲಿಯೇ ಇಟ್ಟು ಬರುತ್ತಾರೆ. ಅಲ್ಲಿ ಯಾಕೆ ಇಡಬೇಕು, ಅದಕ್ಕಿಂತ ಒಳ್ಳೆಯ ಜಾಗ ಇದೆಯೋ ಎಂಬೆಲ್ಲ ಪ್ರಶ್ನೆಗಳು ಅವರಿಗೆ ಅಪ್ರಸ್ತುತ. ಕೊಟ್ಟ ಕೆಲಸವನ್ನು ನಿಭಾಯಿಸಿದರೆ ಆಯಿತು.

ಎರಡನೆಯವರು ಕರ್ಮಠರು. ಇವರು ಕಠೋರ ಶ್ರದ್ದಾಳುಗಳು. ಆಚಾರಗಳನ್ನೇ ಧರ್ಮವೆಂದು ಬಗೆಯುತ್ತ ಕರ್ಮಮಾಡುವವರು. ಇವರು ಕೊಬ್ಬರಿಯನ್ನು ಹೊರಗೆ ಚೆಲ್ಲಿ ಕರಟವನ್ನೇ ಮುಖ್ಯವೆಂದು ತಿಳಿಯುವವರು. ಇವರು ‘ಹಾವ’ಕ್ಕೆ ನೀಡುವ ಪ್ರಾಮುಖ್ಯತೆಯನ್ನು ‘ಭಾವ’ಕ್ಕೆ ನೀಡಲಾರದವರು. ಆಚಾರದ ಕಠೋರ ಸಿದ್ಧಿಯಲ್ಲೇ ಕರ್ಮದ ಸಾರ್ಥಕ್ಯವಿದೆಯೆಂದು ಬಾಳನ್ನು ಶುಷ್ಕಗೊ ಳಿಸಿಕೊಳ್ಳುವವರು. ಇದೊಂದು ಅಧ್ಯಾತ್ಮಿಕ ಕರ್ಮವಲ್ಲ ಕೇವಲ ವ್ಯರ್ಥ ದಣಿವಿನ ಲೌಕಿಕ ಕರ್ಮ.

ಮೂರನೆಯವರು ಕರ್ಮಣ್ಯರು. ಇವರದು ಪೂರ್ಣ ಎಚ್ಚರದ ಕರ್ಮವಿಧಾನ. ಇವರಲ್ಲಿ ಕರ್ಮನಿರತರ ಪ್ರಾಮಾಣಿಕತೆ ಇದೆ. ಕರ್ಮಠರ ನಿಷ್ಠೆ ಇದೆ. ಇದೆಲ್ಲಕ್ಕೆ ಮಿಗಿಲಾಗಿ ತಾವು ಮಾಡುವ ಕರ್ಮದಲ್ಲಿ ಹೊಸತನವನ್ನು, ಸೃಜನಶೀಲತೆಯನ್ನು ತುಂಬುತ್ತ, ಮಾಡುವ ಕರ್ಮವನ್ನು ಸಂತೋಷದ ಸಾಧನವನ್ನಾಗಿ ಮಾಡಿಕೊಳ್ಳುತ್ತಾರೆ. ಯಾವ ಕರ್ಮವನ್ನೇ ಆಗಲಿ ಸಂತೋಷದಿಂದ ಅನುಭವಿಸುತ್ತ ಮಾಡಿದರೆ ಕ್ರಿಯಾಸಿದ್ಧಿಯೊಂದಿಗೆ ಆತ್ಮತೃಪ್ತಿಯೂ ದೊರೆಯುತ್ತದೆ.

ಆದರೆ, ಸಾಮಾನ್ಯರ ಕರ್ಮದ ಬದುಕು ಹೇಗಿದೆ ಎನ್ನುವುದನ್ನು ಈ ಕಗ್ಗ ಚಿತ್ರಿಸುತ್ತದೆ. ಒಬ್ಬ ಬ್ರಹದ್ದೇ ಹಿಯಾದ ಆಳು ಮನುಷ್ಯ ಹೆಚ್ಚು ಕೂಲಿಯ ಆಸೆಗಾಗಿ ಹೊರಲಾಗದ ಮೂಟೆಯನ್ನು ಹೆಗಲಿಗೇರಿಸಿ ನಡೆಯುತ್ತಾನೆ. ನಾಲ್ಕು ಮಾರು ಹೋಗುವುದರಲ್ಲಿಯೇ ಭಾರ ತಡೆಯದೆ, ಇನ್ನೂ ಎಷ್ಟು ದೂರ ಎಂದು ಅವಸರ ಮಾಡುತ್ತಾನೆ. ಈಗ ಅವನಲ್ಲಿ ಕೆಲಸವನ್ನು ಸರಿಯಾಗಿ ಮಾಡಬೇಕೆಂಬ ಶ್ರದ್ಧೆ, ಶಕ್ತಿ ಎರಡೂ ಇಲ್ಲ. ಅದನ್ನು ಆದಷ್ಟು ಬೇಗ ಇಳಿಸಿಬಿಟ್ಟರೆ ಸಾಕು ಎಂದು ಹಾತೊರೆಯುತ್ತಾನೆ. ನಮ್ಮ ಬದುಕೂ ಹಾಗೆಯೇ. ಮುಗಿಯಲಾರದ ಅಪೇಕ್ಷೆಗಳನ್ನು ಆಸೆಯಿಂದ ಹೊತ್ತು ನಡೆಯುತ್ತೇವೆ. ಅಸಾಧ್ಯವೆಂದಾಗ ನರಳುತ್ತೇವೆ. ಸಾಕಪ್ಪಾ, ಯಾವಾಗ ಮುಗಿದೀತು ಈ ಕರ್ಮ ಎಂದು ಕೊರಗುತ್ತೇವೆ.

ಬದುಕು ನರಳಾಟವಾಗದಿರಬೇಕಾದರೆ ನಾವು ಕರ್ಮಠರಾಗದೆ ಕರ್ಮಣ್ಯರಾಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.