ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನೆಮ್ಮದಿಯ ದಾರಿ

Last Updated 26 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು |
ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ||
ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು |
ನೆಮ್ಮದಿಗೆ ದಾರಿಯದು – ಮಂಕುತಿಮ್ಮ || 849 ||

ಪದ-ಅರ್ಥ: ಒಮ್ಮನಸಿನಿಂದ=ಏಕಮನಸ್ಸಿನಿಂದ, ನೀನೀ=ನೀನು+ಈ, ಗ್ರಹಿಸು=ತಿಳಿದುಕೊ.

ವಾಚ್ಯಾರ್ಥ: ಒಂದೇ ಮನಸ್ಸಿನಿಂದ ಈ ತತ್ವವನ್ನು ತಿಳಿದುಕೊ. ಬ್ರಹ್ಮಲೀಲೆಗೆ ಯಾವುದೇ ಗೊತ್ತು ಗುರಿ ಇಲ್ಲ. ಅದು ತನ್ನ ಆನಂದಕ್ಕೆ ಆಡುವ ಲೀಲೆ. ಆದ್ದರಿಂದ, ಅದು ಯಾಕೆ ಹೀಗೆ ಎಂದು ಕೇಳದೆ ಬಂದ ಪಾಡನ್ನು ಆನಂದಿಸು. ಹೆಚ್ಚು ಮಾತನಾಡದೆ ತುಟಿ ಬಿಗಿದು ಅನುಭವಿಸು. ಅದೇ ನೆಮ್ಮದಿಯ ದಾರಿ.

ವಿವರಣೆ: ಇದೊಂದು ತುಂಬ ಎಚ್ಚರದಿಂದ ತಿಳಿದು ಮನನಮಾಡಬೇಕಾದ ವಿಷಯ ಎಂದು ಕಗ್ಗ ಮೊದಲೇ ಎಚ್ಚರಿಸುತ್ತದೆ. ಬ್ರಹ್ಮ ಎಂಬುದು ಅಕ್ಷರ. ಕ್ಷರವೆಂದರೆ ನಾಶವಾಗತಕ್ಕದ್ದು. ಅಕ್ಷರವೆಂದರೆ ನಾಶವಿಲ್ಲದ್ದು. ನಾಶವಾಗುವ ಕ್ಷರದೇಹದಲ್ಲಿ ಅಕ್ಷರವಾದ ಬ್ರಹ್ಮಸತ್ವ ನೆಲೆಸಿದೆ. ಅದೇಕೆ ಹೀಗೆ ಅನೇಕ ಜೀವಿಗಳನ್ನು ಸೃಷ್ಟಿಸಿತು? ಬ್ರಹದಾರಣ್ಯಕ ಉಪನಿಷತ್ತು ಹೇಳುತ್ತದೆ.

“ಬ್ರಹ್ಮವಸ್ತು ಮೊದಲು ಒಂದೇ ಇತ್ತು. ಒಬ್ಬಂಟಿಯಾದರೆ ಸಂತೋಷವಿಲ್ಲವೆಂದುಕೊಂಡು, ತಾನೇ ಬಹುಪ್ರಕಾರವಾಗಿ ಹರಡಿಕೊಂಡು ಜಗತ್ತಾಗಿಸಿತು”. ಆ ಬ್ರಹ್ಮ ಯಾಕೆ ಸುಮ್ಮನಿರದೆ ಹೀಗೆ ಪ್ರಾಣಿಗಳನ್ನು ಸೃಷ್ಟಿಸಿ, ವಸ್ತುಗಳನ್ನು ಮಾಡಿ ನಾಟಕವನ್ನು ಮಾಡುತ್ತದೆ? ಇದಕ್ಕೆ ಬ್ರಹ್ಮಸೂತ್ರ ಹೇಳುತ್ತದೆ. “ಲೋಕವತ್ ತು ಲೀಲಾಕೈವಲ್ಯಮ್”. ಲೋಕದ ಜನರು ಲೀಲಾ ವಿನೋದಕ್ಕೆ ಚಟುವಟಿಕೆಗಳನ್ನು ಮಾಡುವಂತೆ ಬ್ರಹ್ಮವಸ್ತು ತನ್ನ ಲೀಲೆಗಾಗಿ ಈ ಎಲ್ಲ ಸೃಷ್ಟಿಗಳನ್ನು ಮಾಡಿ ವಿನೋದಿಸುತ್ತದೆ.

ತೊಟ್ಟಿಲಲ್ಲಿ ಮಲಗಿರುವ ಮಗು ಅತ್ತಿತ್ತ ನೋಡುತ್ತ, ಕೈಕಾಲುಗಳನ್ನು ಆಡಿಸುತ್ತ, ನಗುತ್ತ ಸಂತೋಷಪಡುವುದು ಲೀಲೆ. ಅದು ಕೇವಲ ತನ್ನ ಆತ್ಮಸಂತೋಷಕ್ಕಾಗಿ ಮಾಡುವ ಕ್ರಿಯೆ. ಸುಂದರಿಯೊಬ್ಬಳು ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಳ್ಳುತ್ತ, ಮುಂಗುರುಳು ತೀಡಿಕೊಳ್ಳುತ್ತ, ತನ್ನ ದೇಹವನ್ನು ನೂರಾರು ದಿಶೆಗಳಿಂದ ನೋಡಿ ಸಂತೋಷ ಪಡುವುದೂ ಆಕೆಯ ಲೀಲೆ. ಹಾಗೆಯೇ ಬ್ರಹ್ಮವಸ್ತು ನಡೆಸುವ ಪ್ರತಿಯೊಂದು ಕ್ರಿಯೆ, ಲೀಲೆ. ಅದನ್ನು ಮೊದಲೇ ತಿಳಿದುಕೊಳ್ಳುವುದು, ಅನುಸರಿಸುವುದು ಅಸಾಧ್ಯ. ಯಾಕೆಂದರೆ ಅದು ಬುದ್ಧಿಗೆ ನಿಲುಕಲಾರದ್ದು. ಹಾಗಾದರೆ ನಾವು ಮಾಡಬೇಕಾದುದು ಏನು? ಅದನ್ನೇ ಕಗ್ಗ ಹೇಳುತ್ತದೆ.

ನೀನು ತುಟಿ ಬಿಗಿದು ಸುಮ್ಮನಿರು, ವಿಪರೀತ ಗೊಣಗಬೇಡ. ನಿನಗೆ ಯಾವ ಪಾಡು ಬಂದಿದೆಯೋ ಅದು ನಿನ್ನ ಕರ್ಮದ ಫಲ. ಅದನ್ನು ಅನುಭವಿಸು. ತೊಂದರೆಯಾದೀತೆಂದು ಕರ್ಮವನ್ನು ಬಿಡಬೇಡ. ಸತತವಾಗಿ ದುಡಿ. ಪರಮೋತ್ತಮ ಸ್ಥಾನದಲ್ಲಿ ಬ್ರಹ್ಮವಸ್ತುವಿದೆ ಎಂಬುದನ್ನು ನೆನಪಿಟ್ಟುಕೊಂಡು, ಸತತ ಪ್ರಯತ್ನದಿಂದ, ಜಗತ್ತನ್ನು ಮೀರಬೇಕು. ಯಾವ ಮೂಲದಿಂದ ಜಗತ್ತು ಬಂದಿದೆಯೋ ಆ ಮೂಲವನ್ನು ಸೇರಲು ಪ್ರಯತ್ನಿಸಬೇಕು. ಇದೇ ನಮಗಿರುವ ನೆಮ್ಮದಿಯ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT