ಗುರುವಾರ , ಮೇ 19, 2022
24 °C

ಬೆರಗಿನ ಬೆಳಕು | ಸಾರ್ಥಕ ಕ್ಷಣಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು |
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ||
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು |
ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ
|| 478 ||

ಪದ-ಅರ್ಥ: ತೋಟಿಗ=ತೋಟಗಾರ, ಮಾಲಿ, ಜಗಿವ=ಚುಚ್ಚುವ, ಮುಳ್ಳಿರಿತ=ಮುಳ್ಳು+ಇರಿತ, ಸೈರಿಸೆ=ತಾಳಿಕೊಂಡಾಗ, ನಗುವುದೊಂದರೆನಿಮಿಷ=ನಗುವುದು+ಒಂದು+ಅರೆ(ಅರ್ಧ)+ನಿಮಿಷ, ಮುಗುಳು=ಮೊಗ್ಗು, ಮುಗುಳ್ನಗೆ, ತಣಿಸು=ತೃಪ್ತಿ.

ವಾಚ್ಯಾರ್ಥ: ನೆಲವನ್ನು ಅಗಿದು, ಗೊಬ್ಬರ ಹಾಕಿ, ನೀರೆರೆದು, ಮುಳ್ಳುಗಳ ಚುಚ್ಚುವಿಕೆಯನ್ನು ತೋಟಗಾರ ಸಹಿಸಿಕೊಂಡಾಗ ಗುಲಾಬಿ ಹೂವು ಕೆಲಕಾಲ ಅರಳಿ ನಗುತ್ತದೆ. ಮುಂದೆ ಕೆಲವೇ ಕ್ಷಣಗಳಲ್ಲಿ ಅದರ ಬಾಳು ಮುಗಿಯುತ್ತದೆ. ಆ ಕ್ಷಣದ ಅರಳುವಿಕೆಯೆ ದುಡಿತದ ತೃಪ್ತಿ.

ವಿವರಣೆ: ಈಶಾನ್ಯ ನೇಪಾಳದಲ್ಲಿ ಖುಂಬು ಎಂಬ ಪ್ರದೇಶದಲ್ಲಿ ತೆಂಗ್ಯೋಚೆ ಎಂಬ ಹಳ್ಳಿ. ಅಲ್ಲಿ ಒಂದು ಶೆರ್ಪಾ ಕುಟುಂಬ. ಅವರಿಗೆ ಬಡತನದ ಜೊತೆಗೆ ಮಕ್ಕಳ ಭಾಗ್ಯ. ಹುಟ್ಟಿದ ಹದಿಮೂರು ಮಕ್ಕಳಲ್ಲಿ ಬಹುತೇಕರು ಬಾಲ್ಯದಲೇ ತೀರಿಹೋದರು. ಹನ್ನೊಂದನೆಯ ಮಗು ತೇನ್ಸಿಂಗ್. ಪರ್ವತದ ಬುಡದಲ್ಲೆ ಹುಟ್ಟಿ ಬೆಳೆದ ಹುಡುಗನಿಗೆ ಕಷ್ಟದ ಬದುಕು ಅಭ್ಯಾಸ. ದೇಹ ತುಂಬ ಗಟ್ಟಿ. ಮುಖದ ತುಂಬ ಹರಡುತ್ತಿದ್ದ ಅವನ ಮಂದಹಾಸ ಎಲ್ಲರಿಗೆ ಪ್ರಿಯ. ಅವನು ಬೆಳೆದದ್ದು ಪರ್ವತದ ಶೃಂಗ ಚೋಮೋಲುಂಗ್ಮಾವನ್ನು ನೋಡುತ್ತಲೇ. ಅದು ಮೌಂಟ್ ಎವರೆಸ್ಟ್‌ಗೆ ಟೆಬೆಟಿಯನ್ನರು ಕರೆದ ಹೆಸರು. ಹಾಗೆಂದರೆ ‘ಭೂಮಿಯ ಮೇಲಿನ ದೇವತೆ’ ಎಂದರ್ಥ. ನೇಪಾಳಿಗಳು ಅದನ್ನು ಸಾಗರಮಾತಾ ಎನ್ನುತ್ತಾರೆ. ಶೆರ್ಪಾ ಆದ ತೇನ್ಸಿಂಗ್‌ನಿಗೆ ಪರ್ವತವನ್ನು ಹತ್ತುವುದು ಅನಿವಾರ್ಯ ಕರ್ಮ. ಪರ್ವತಾರೋಹಿಗಳಿಗೆ ಮಾರ್ಗದರ್ಶನ ಮಾಡುವ ಇವರು ದೇವತೆಗಳೇ. ಪರ್ವತಾರೋಹಿಗಳ ಸಾಮಗ್ರಿಗಳನ್ನು ಹೊತ್ತು, ಹಗ್ಗವನ್ನು ಹಾಕಿ, ಹಿಮದ ಹಾದಿಯನ್ನು ಪಿಕಾಸಿಯಿಂದ ಅಗೆದು, ದಾರಿ ತೋರುವವರು ಇವರೇ. ತೇನ್ಸಿಂಗ್ ಸುಮಾರು ಎಂಭತ್ತು ಕಿಲೋಗ್ರಾಮಿನಷ್ಟು ಭಾರವನ್ನು ಹೊತ್ತು ಸಲೀಸಾಗಿ ಮೇಲೇರುತ್ತಿದ್ದನಂತೆ ಆತನಿಗೆ ಕನಸು ಒಂದೇ. ಎವರೆಸ್ಟ್ ಪರ್ವತ ಏರುವುದು.

ಅದೆಷ್ಟು ಬಾರಿ ವಿಫಲ ಯತ್ನಗಳು! ಆತ ತೀರ್ಮಾನ ಮಾಡುವವನಲ್ಲ, ಪರ್ವತಾರೋಹಿಗಳು ಹೇಳಿದಂತೆ ನಡೆಯಬೇಕು; ಆದರೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಅದೆಷ್ಟು ಜನ ಸಹಚರರಾದ ಶೆರ್ಪಾಗಳು ಹಿಮದಲ್ಲಿ ಮುಚ್ಚಿ ಮರೆಯಾಗಿ ಹೋದದ್ದನ್ನ ಕಂಡಿದ್ದನೋ? ಮೂವತ್ತು ವರ್ಷಗಳ ಸತತವಾದ ಪರಿಶ್ರಮ. ಸೋಲು, ಗಾಯ, ನೋವುಗಳ ಸರಮಾಲೆ. ಆದರೆ ವಿಧಿಯ ಪರೀಕ್ಷೆಗೂ ಮಿತಿ ಇದೆ. ಎವರೆಸ್ಟ್ ಶಿಖರಕ್ಕೆ ಹತ್ತಿರ ಬಂದಾಗ ಬೇರೆಯವರು ಏರುವುದು ತೀರ್ಮಾನವಾಗಿತ್ತು. ಆಮ್ಲಜನಕದ ಕೊರತೆಯಿಂದ, ಕೊನೆಯ ಕ್ಷಣದಲ್ಲಿ ಹಿಲರಿ ಮತ್ತು ತೇನ್ಸಿಂಗ್‌ಗೆ ಪ್ರಯತ್ನಿಸಲು ಅವಕಾಶ. ಮೇ 29, 1953 ರಂದು ಬೆಳಿಗ್ಗೆ 11.40 ನಿಮಿಷಕ್ಕೆ ಎವರೆಸ್ಟ್ ಮೇಲೇರಿ ನಿಂತಿದ್ದಾಯಿತು. ಅದೆಷ್ಟು ನಿಮಿಷ? ಕೇವಲ ಹದಿನೈದು ನಿಮಿಷಗಳು! ಮೂವತ್ತು ವರ್ಷಗಳ ಕಠಿಣ ಪರಿಶ್ರಮದ ಫಲ, ಎವರೆಸ್ಟಿನ ಮೇಲಿನ ಹದಿನೈದು ನಿಮಿಷ. ಬದುಕು ಸಾರ್ಥಕವಾಯಿತು, ಶಾಶ್ವತವಾಯಿತು.

ಇದನ್ನೇ ಕಾವ್ಯಮಯವಾಗಿ ಕಗ್ಗ ಹೇಳುತ್ತದೆ. ತೋಟದ ಮಾಲಿ ಕಷ್ಟಪಟ್ಟು, ನೆಲಸಿದ್ಧಗೊಳಿಸಿ, ಗೊಬ್ಬರ, ನೀರು ಹಾಕಿ ಗುಲಾಬಿ ಸಸಿಯನ್ನು ಬೆಳೆಸುತ್ತಾನೆ, ಮುಳ್ಳುಗಳಿಂದ ಚುಚ್ಚಿಸಿಕೊಳ್ಳುತ್ತಾನೆ. ತಿಂಗಳುಗಳ ಪ್ರಯತ್ನದ ಫಲವಾಗಿ ಗುಲಾಬಿ ಮೊಗ್ಗು ಕಾಣುತ್ತದೆ. ಅದು ಅರಳಿ ಬದುಕುವುದು ಕೆಲಕ್ಷಣಗಳು ಮಾತ್ರ. ಅದರೆ ಆ ಕ್ಷಣಗಳ ಸಂತೋಷ, ತೃಪ್ತಿ, ತಿಂಗಳುಗಳ ಪರಿಶ್ರಮವನ್ನು ಸಾರ್ಥಕಗೊಳಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.