ಗುರುವಾರ , ಫೆಬ್ರವರಿ 20, 2020
23 °C

ನಾಯಕರ ಲಕ್ಷಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಿಂದೆ ಬೋಧಿಸತ್ವ ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬ್ರಹ್ಮದತ್ತ ತರುಣ ರಾಜನಾಗಿದ್ದ. ತೀರ ಯೌವನದಲ್ಲಿಯೇ ಅಧಿಕಾರ, ಗೌರವ, ಶ್ರೀಮಂತಿಕೆ ಬಂದಿದ್ದರಿಂದ ತುಂಬ ಅಹಂಕಾರಿಯಾಗಿದ್ದ. ಪ್ರಜೆಗಳನ್ನು ದರ್ಪದಿಂದ ನೋಡುತ್ತ ಅವರಿಂದ ಆದಷ್ಟು ಹಣ ಸುಲಿಯಲು ನೋಡುತ್ತಿದ್ದ. ನಿಧಾನವಾಗಿ ಧರ್ಮಮಾರ್ಗದಿಂದ ದೂರ ಹೋಗುತ್ತಿದ್ದ. ಅವನನ್ನು ತಿದ್ದುವುದು ಹೇಗೆ ಎಂದು ಬೋಧಿಸತ್ವ ಚಿಂತಿಸುತ್ತಿದ್ದ.

ಒಂದು ದಿನ ರಾಜನೊಡನೆ ಬೋಧಿಸತ್ವ ರಾಜೋದ್ಯಾನಕ್ಕೆ ಹೋದ. ಅಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ರಾಜಭವನ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿರಲಿಲ್ಲ. ಅನೇಕ ತೊಲೆಗಳನ್ನು ನಿಲ್ಲಿಸಲಾಗಿತ್ತು. ಅವುಗಳ ಮೇಲೆ ಜಂತಿಗಳನ್ನು ಅಡ್ಡಡ್ಡವಾಗಿಟ್ಟು ಅವುಗಳ ಮೇಲೆ ಚಾವಣಿ ಹಾಕುವ ಕಾರ್ಯ ನಡೆದಿತ್ತು. ರಾಜ ಜಂತಿಗಳ ಕೆಳಗೆ ಬರುವಾಗ ಅವುಗಳನ್ನೇ ನೋಡುತ್ತ ಅವು ಎಲ್ಲಿ ತನ್ನ ತಲೆಯ ಮೇಲೆ ಬಿದ್ದುಬಿಡುತ್ತವೊ ಎಂದು ಭಯದಿಂದ ಹೊರಗೆ ಓಡಿ ಬಂದ. ನಂತರ ಮಂತ್ರಿಗೆ ಕೇಳಿದ, ‘ಮೇಲೆ ಹಾಸಿದ ಜಂತಿಗಳು ಅಷ್ಟು ದಪ್ಪವಾಗಿವೆ ಮತ್ತು ಅತ್ಯಂತ ಗಟ್ಟಿಯಾದ ಸಿರೀಷ ಮರದಿಂದ ಬಂದವುಗಳು. ಅವು ಕೆಳಗೆ ಬೀಳದ ಹಾಗೆ ನಿಂತದ್ದು ಹೇಗೆ?’ ಮಂತ್ರಿ ಹೇಳಿದ, ‘ರಾಜಾ, ಆ ಬಲಿಷ್ಠವಾದ ಜಂತಿಗಳು ನಿಂತಿರುವುದು ಈ ಮೂವತ್ತು ತೊಲೆಗಳ ಮೇಲೆ. ತೊಲೆಗಳು ಭದ್ರವಿರುವವರೆಗೆ ಜಂತಿ ಭದ್ರ. ಇದೇ ರೀತಿ ರಾಜನಾದವನು ಪ್ರಾಮಾಣಿಕರಾದ, ಮಿತ್ರರಾದ, ಶುಚಿಪರಾಯಣರಾದ ಮಂತ್ರಿಗಳನ್ನು ಅವಲಂಬಿಸಿ, ಅವರ ಉಪದೇಶದಂತೆ ನಡೆದರೆ ಅವನೂ ಭದ್ರವಾಗಿರುತ್ತಾನೆ’.

ಮುಂದೆ ಕೆಲವು ರೈತರು ತಮ್ಮ ತೋಟಗಳಲ್ಲಿ ಬೆಳೆದಿದ್ದ ಗಜನಿಂಬೆಗಳನ್ನು ತಂದು ರಾಜನಿಗೆ ಕೊಟ್ಟರು. ರಾಜನ ಅಂಗರಕ್ಷಕ ಹರಿತವಾದ ಚಾಕುವಿನಿಂದ ಅದನ್ನು ಅರ್ಧಕ್ಕೆ ತುಂಡರಿಸಿ ರಾಜನಿಗೆ ನೀಡಿದ. ಅದರ ರಸವನ್ನು ಬಾಯಿಗೆ ಹಿಂಡಿಕೊಂಡ ರಾಜ ಮುಖ ಹಿಂಡಿದ. ‘ಅಯ್ಯೋ, ಬಹಳ ಕಹಿಯಾಗಿದೆ. ಇದನ್ನು ಬಿಸಾಕಿ ಬಿಡು’ ಎಂದ. ಆಗ ಮಂತ್ರಿ, ‘ಕ್ರೂರಿಗಳಾದವರು ಒಳ್ಳೆಯ ಹಣ್ಣನ್ನು ಕತ್ತರಿಸಿ ಹಾಳು ಮಾಡುತ್ತಾರೆ. ಬುದ್ಧಿವಂತರು ನಿಧಾನವಾಗಿ ದಪ್ಪಸಿಪ್ಪೆಯನ್ನು ಸುಲಿದು ನಂತರ ರುಚಿಯಾದ ಹುಳಿರಸವನ್ನು ಬಳಸಿಕೊಳ್ಳುತ್ತಾರೆ. ಬುದ್ಧಿವಂತರಾದ ರಾಜರೂ ಹಾಗೆಯೇ ಪ್ರಜೆಗಳನ್ನು ನಿರ್ದಯವಾಗಿ ಶೋಷಿಸದೆ, ಕ್ರಮೇಣ ಧರ್ಮಕ್ಕನುಸಾರವಾಗಿ ತೆರಿಗೆಗಳನ್ನು ಸಂಗ್ರಹಣೆ ಮಾಡುತ್ತಾರೆ, ಜನಪ್ರಿಯರಾಗುತ್ತಾರೆ’ ಎಂದ.

ಮುಂದೆ ನಡೆದು ಬರುವಾಗ ಪುಷ್ಕರಣಿಯಲ್ಲಿ ಅರಳಿ ನಿಂತಿದ್ದ ಕಮಲದ ಹೂವುಗಳನ್ನು ಕಂಡ ಮಂತ್ರಿ ರಾಜನಿಗೆ ಹೇಳಿದ, ‘ರಾಜಾ, ನಾಯಕನಾದವನು ಹೀಗೆ ಇರಬೇಕು. ನೀರಿನಲ್ಲಿ, ಕೆಸರಿನಲ್ಲಿ ಹುಟ್ಟಿದ ಕಮಲ, ಸೂರ್ಯನ ಬೆಳಕನ್ನು ಅವಲಂಬಿಸುತ್ತದೆ. ಆದರೆ ಅದು ಕೆಸರಿಗಾಗಲಿ, ದೂಳಿಗಾಗಲಿ, ನೀರಿಗಾಗಲಿ ಅಂಟಿಕೊಂಡಿಲ್ಲ. ಅವುಗಳ ಮಧ್ಯೆಯೇ ಬದುಕಿದ್ದರೂ ಅವುಗಳ ಸಂಪರ್ಕವನ್ನು ತಪ್ಪಿಸಿಕೊಂಡು ಶುದ್ಧವಾಗಿ ಬದುಕುತ್ತದೆ. ಅಂತೆಯೇ ರಾಜರಾದವರು, ರಾಜಕೀಯದ ಅನಿವಾರ್ಯತೆಯಾದ ಕಪಟ ರಾಜಕೀಯದ ಕೆಸರಿನಿಂದ, ಭ್ರಷ್ಟಾಚಾರದ ದೂಳಿನಿಂದ ದೂರವಿದ್ದು, ಅಧಿಕಾರದ ಅಹಂಕಾರ, ಪೊಳ್ಳು ಜನಪ್ರಿಯತೆಗೆ ಅಂಟಿಕೊಳ್ಳದೆ ಇದು ಕೇವಲ ತಾತ್ಪೂರ್ತಿಕ ಎಂದು ಪರಿಶುದ್ಧರಾಗಿ ಬದುಕಿದರೆ ಶಾಶ್ವತ ಕೀರ್ತಿಗೆ ಅರ್ಹರಾಗುತ್ತಾರೆ’.

ಈ ಮಾತುಗಳು ರಾಜನನ್ನು ಸರಿದಾರಿಗೆ ತಂದವು. ಅವು ನಮ್ಮ ನಾಯಕರಿಗೂ ಪ್ರಯೋಜನಕಾರಿಯಾದಾವೆಯೆ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)