ಭಾನುವಾರ, ಮೇ 16, 2021
28 °C

ಬೆರಗಿನ ಬೆಳಕು: ಮತ್ತೊಂದು ಪ್ರಯತ್ನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

PV File

ಮಹೋಷಧಕುಮಾರನಿಂದ ಅಪಮಾನಿತನಾದ ಕೇವಟ್ಟ ಅದನ್ನು ಮರೆತಿರಲಿಲ್ಲ. ಹಣೆಯ ಮತ್ತು ಮೂಗಿನ ಮೇಲೆ ಆದ ಗಾಯಗಳು ಅಪಮಾನವನ್ನು ಮೇಲಿಂದ ಮೇಲೆ ನೆನಪಿಸುತ್ತಿದ್ದವು. ಆತ ಸೇಡು ತೀರಿಸಿಕೊಳ್ಳಲು ಯೋಜಿಸಿ ರಾಜ ಬ್ರಹ್ಮದತ್ತನ ಬಳಿಗೆ ಬಂದ. ಅವನಿಗೆ ಈಗಾಗಲೇ ಸೋಲಿನಿಂದ ಮುಖಭಂಗವಾಗಿದೆ.

ಕೇವಟ್ಟ ಹೊಸ ಉಪಾಯ ಹೇಳಿದ, ‘ಸ್ವಾಮಿ, ವಿದೇಹ ರಾಜನ ಮೇಲೆ ಹಾಗೂ ಮಹೋಷಧಕುಮಾರನ ಮೇಲೆ ಸೇಡು ತೀರಿಸಿಕೊಳ್ಳುವ ಉಪಾಯವೊಂದಿದೆ. ತಾವು ಅಪ್ಪಣೆ ನೀಡಿದರೆ ಹೇಳುತ್ತೇನೆ’. ಅದೇನು ಎಂದು ರಾಜ ಕೇಳಿದಾಗ, ‘ಪ್ರಭೂ, ತಮ್ಮ ಮಗಳು ಪಂಚಾಲಚಂಡಿ ಅಪ್ಸರೆಯಂಥ ಸುಂದರಿ. ಆಕೆಯ ಸೌಂದರ್ಯವನ್ನು ವರ್ಣಿಸಿ, ಪ್ರಚಾರಗೊಳಿಸೋಣ. ಅದರಿಂದ ವಿದೇಹರಾಜನ ಮನದಲ್ಲಿ ಕಾಮಭೋಗದ ಲಾಲಸೆಯನ್ನು ಹುಟ್ಟಿಸಿ, ಮುಳ್ಳಿಗೆ ಚುಚ್ಚಿಕೊಂಡ ಮೀನಿನಂತೆ, ಮಹೋಷಧಕುಮಾರರನ್ನು ಇಲ್ಲಿಗೆ ಕರೆತಂದು ಕೊಲ್ಲಿಸಿಬಿಡೋಣ’ ಎಂದ. ಈ ಗುಪ್ತ ಮಾತುಕತೆ ನಡೆದದ್ದು ಅರಮನೆಯ ಮೇಲಂತಸ್ತಿನಲ್ಲಿ, ಯಾರೂ ಇಲ್ಲದಾಗ. ಅಲ್ಲಿ ಇದ್ದದ್ದು ರಾಜನಿಗೆ ಅತ್ಯಂತ ಪ್ರಿಯವಾದ ಮೈನಾ ಹಕ್ಕಿ ಮಾತ್ರ. ಅದು ಈ ಯೋಜನೆಯನ್ನು ಕೇಳಿಸಿಕೊಂಡಿತು.

ರಾಜ ಕೇವಟ್ಟನ ಮಾತನ್ನು ಒಪ್ಪಿದ. ಅರಮನೆಯ ದರ್ಬಾರಿನ ಕವಿಗಳಿಗೆ ಹೇಳಿ ಮಗಳು ಪಂಚಾಲಚಂಡಿಯ ರೂಪವರ್ಣನೆಯ ಕಾವ್ಯಗಳನ್ನು, ಕಥೆ, ಕಾದಂಬರಿಗಳನ್ನು ಬರೆಯಿಸಿದ. ಅರಮನೆಯ ಚಿತ್ರಕಾರರು ಆಕೆಯ ಅತ್ಯದ್ಭುತ ಚಿತ್ರಗಳನ್ನು ಬರೆದರು. ಹಾಡುಗಾರರು ಸೌಂದರ್ಯದ ವರ್ಣನೆಯ ಹಾಡುಗಳನ್ನು ಮಾಡಿ ಊರು ಊರುಗಳಲ್ಲಿ ಪ್ರಚಾರ ಮಾಡಿದರು. ಕುಶಲಕರ್ಮಿಗಳು ಕವನಗಳನ್ನು ತಾಮ್ರದ ಎಲೆಗಳ ಮೇಲೆ ಬರೆದು ಹಾರುವ ಪಕ್ಷಿಗಳ ಕುತ್ತಿಗೆಗಳಿಗೆ ಕಟ್ಟಿದರು. ಅವು ಹಾರಿಹೋದಲ್ಲಿ ಅವುಗಳನ್ನು ಬೀಳಿಸಿ ಪ್ರಚಾರ ಮಾಡಿದವು. ನಂತರ ಇನ್ನೊಂದು ತರಹದ ಪ್ರಚಾರ ಪ್ರಾರಂಭವಾಯಿತು. ಅದೆಂದರೆ, ಇಂಥ ಅಸಾಮಾನ್ಯ ರೂಪಸಿಗೆ ತಕ್ಕುದಾದವನು ಕೇವಲ ವಿದೇಹರಾಜ. ಅವನ ಸಮಾನರು ಯಾರೂ ಇಲ್ಲ. ಪಂಚಾಲಚಂಡಿಯ ಮನಸ್ಸು ಕೂಡ ಆ ರಾಜನಲ್ಲೇ ಇದೆ, ಇತ್ಯಾದಿ, ಇತ್ಯಾದಿ. ಈ ವಿಷಯ ವಿದೇಹರಾಜನನ್ನು ತಲುಪಿತು. ಅವನಿಗೆ ವಿಪರೀತ ಸಂತೋಷ. ಅಂಥ ಸುಂದರಿ ತನ್ನನ್ನು ಮೆಚ್ಚು ಮದುವೆಯಾಗುತ್ತಾಳೆಂದು ತಿಳಿದು ಉಬ್ಬಿ ಹೋದ.

ಅದನ್ನು ತಿಳಿದು ಕೇವಟ್ಟ, ಬೆಲೆಬಾಳುವ ಕಾಣಿಕೆಗಳನ್ನು ತೆಗೆದುಕೊಂಡು ಮಿಥಿಲೆಗೆ ಬಂದು ರಾಜನನ್ನು ಕಂಡು, ಹಿಂದೆ ದಾಳಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ. ನಂತರ, ಪಂಚಾಲಚಂಡಿಯ ಮದುವೆಯ ಪ್ರಸ್ತಾಪವನ್ನು ಮಾಡಿದ. ಅವನಿಗೆ ಮಹೋಷಧಕುಮಾರನ ಬುದ್ಧಿವಂತಿಕೆಯ ಮೇಲೆ ಭಯ. ಅವನ ಬಗ್ಗೆಯೂ ಅಪಸ್ವರದ ಮಾತು ಎತ್ತಿದ. ‘ಸ್ವಾಮಿ, ತಮ್ಮಂತಹ ಪ್ರಚಂಡರಾದ ರಾಜರಿಗೆ ಮಹೋಷಧ ತಕ್ಕ ಮಂತ್ರಿ ಅಲ್ಲ. ಅವನು ಸಮರ್ಥನಾಗಿದ್ದರೆ ಈ ಹೊತ್ತಿಗೆ ತಾವು ಜಂಬೂದ್ವೀಪದ ಚಕ್ರವರ್ತಿಗಳಾಗಿರಬೇಕಿತ್ತು’ ಎಂದು ಕೊಂಕು ಮಾತನಾಡಿದ. ಕೇವಟ್ಟ ತೆರಳಿದ ಮೇಲೆ ರಾಜ ಕುಮಾರನೊಂದಿಗೆ ವಿಷಯ ತಿಳಿಸಿ, ತನಗೆ ಮದುವೆಯಲ್ಲಿ ಆಸಕ್ತಿ ಇದೆ ಎಂದು ಒತ್ತಿ ಹೇಳಿದ. ಮಹೋಷಧಕುಮಾರನಿಗೆ ಈ ಯೋಜನೆಯಲ್ಲಿ ಅಪಾಯವಿದೆ ಎನ್ನಿಸಿತು. ‘ಪ್ರಭೂ, ನನಗೆ ಒಂದು ವಾರದ ಅವಕಾಶ ಕೊಡಿ. ಎಲ್ಲವನ್ನು ಪರೀಕ್ಷಿಸಿ ಹೇಳುತ್ತೇನೆ, ಅವಸರಬೇಡ’ ಎಂದು ಹೇಳಿ ತನ್ನ ಮನೆಗೆ ಬಂದು ಎಲ್ಲವನ್ನೂ ಚಿಂತಿಸಿದ. ಅವನಿಗೆ ಹೊಸದೊಂದು ದಾರಿ ಹೊಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು