ಶನಿವಾರ, ಜನವರಿ 16, 2021
17 °C

ಬೆರಗಿನ ಬೆಳಕು: ಮನಸ್ಸು – ಮೊಂಡಾಟದ ಮಗು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮನವನಾಳ್ಪುದು ಹಟದ ಮಗುವನಾಳುವ ನಯದೆ|
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು |
ಇನಿತಿತ್ತು ಮರಸಿನಿತ – ಮಂಕುತಿಮ್ಮ || 375 ||

ಪದ-ಅರ್ಥ: ಮನವನಾಳ್ಪುದು=ಮನವನು+
ಆಳ್ಪುದು(ಆಳುವುದು), ನಯ=ನಾಜೂಕು ಇನಿತನಿತು=ಇನಿತು (ಕೊಂಚ, ಸ್ವಲ್ಪ)+ಅನಿತು (ಅಷ್ಟು), ಇನಿತಿತ್ತು=ಇನಿತು+ಇತ್ತು,
ಮರಸಿನಿತ=ಮರಸು(ಮರೆಸು)+ಇನಿತ.

ವಾಚ್ಯಾರ್ಥ: ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಹಟದ ಮಗುವನ್ನು ಸಂತೈಸುವಂತೆ. ಅಷ್ಟೋ, ಇಷ್ಟೋ ಸವಿಯಾದ ತಿನಿಸು, ಸುಂದರವಾದ ಕಥೆಗಳಿಂದ ಒಲಿಸಿಕೊಳ್ಳಬೇಕು. ಅದು ಕೇವಲ ಕೂಗಾಟ, ಬಡಿತಗಳಿಂದ ಸಮಾಧಾನ ಮಾಡಲಾಗದು. ಒಂದಷ್ಟನ್ನು ಕೊಟ್ಟು ಮತ್ತಷ್ಟನ್ನು ಮರೆಸಬೇಕು.

ವಿವರಣೆ: ನಮ್ಮ ಮನಸ್ಸು ನಿರಂತರವಾಗಿ ಬಂದು ಹೋಗುವ ಸಮುದ್ರದ ಅಲೆಗಳಂತೆ. ಅವುಗಳನ್ನು ತಡೆಯುವುದು ಕಷ್ಟ. ಪುರಂದರದಾಸರು, ‘ಮನವ ನಿಲಿಸುವುದು ಬಹುಕಷ್ಟ, ಹರಿದಾಡುವಂಥ’. ಎಂದರೆ ವಿಜಯದಾಸರು, ‘ಮನಸು ನಿಲಿಸುವುದು ಬಹಳ ಕಷ್ಟ, ಗುಣಿಸುವುದು ನಿಮ್ಮೊಳಗೆ ನೀವೆ ನೆಲೆ ಬಲ್ಲವರು’ ಎಂದರು. ಏನನ್ನಾದರೂ ಮಾಡಬಹುದು ಆದರೆ ಮನಸ್ಸನ್ನು ಒಂದೆಡೆಗೆ ಏಕಾಗ್ರತೆಯಿಂದ ಕೆಲಕಾಲ ನಿಲ್ಲಿಸುವುದು ಬಹಳ ಕಷ್ಟ. ಪುಟ್ಟ ಮಗುವಿನಂತೆ ನಮ್ಮ ಮನಸ್ಸು, ಮೊದಮೊದಲಿಗೆ ಶಿಸ್ತಿನ ಬಿಗಿಗೆ ಹೊಂದಿಕೊಳ್ಳದೆ ರಚ್ಚೆ ಹಿಡಿಯುತ್ತದೆ. ಅದನ್ನು ತಡೆಯಲು ಹೋದಷ್ಟೂ ಪುಟದೆದ್ದು ಪ್ರತಿಭಟಿಸುತ್ತದೆ. ಆದ್ದರಿಂದ ಅದನ್ನು ನಿಗ್ರಹಿಸುವ ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದುದೇನೆಂಬುದನ್ನು ತಿಳಿಯಬೇಕು.

ಪುಟ್ಟ ಮಗುವನ್ನು ಸಂತೈಸುವ ತಾಯಿಗೆ ಮಗುವಿನ ಮನಸ್ಸು ಚೆನ್ನಾಗಿ ಗೊತ್ತು. ಊಟ ಮಾಡಲು ಹಟಮಾಡುವ ಮಗುವಿಗೆ, ಅದಕ್ಕೆ ಇಷ್ಟವಾದ ತಿಂಡಿಯನ್ನೋ, ಪ್ರೀತಿಯ ಕಥೆಗಳನ್ನೋ ನೀಡುತ್ತ ತಿನ್ನಿಸುವ ತನ್ನ ಕೆಲಸವನ್ನು ಪೂರೈಸಿಕೊಳ್ಳುತ್ತಾಳೆ. ‘ಅಗೋ ನೋಡು ಬಸ್ಸು...’ ‘ಅಲ್ಲಿ ನೋಡು ಚಂದ್ರ...’ ಎಂದು ಮಗುವಿನ ಮನಸ್ಸನ್ನು ಬೇರೆಡೆಗೆ ತಿರುಗಿಸಿ ಊಟ ಮಾಡಿಸುವಂತೆ ಮನಸ್ಸಿಗೂ ಅದಕ್ಕೆ ಒಪ್ಪಿತವಾದ, ಇಷ್ಟವಾದ ಆದರೆ ಪ್ರಯೋಜನಕಾರಿಯಾದ ವಿಷಯಗಳನ್ನು ನೀಡಿ ಮೆಚ್ಚಿಸಬೇಕು, ಮನಸ್ಸನ್ನು ತೃಪ್ತಿಪಡಿಸಬೇಕು. ಮನಸ್ಸಿಗೆ ದುಃಖವಾಗಿದ್ದರೆ, ನಿರಾಸೆ ಕವಿದಿದ್ದರೆ ನಿಸರ್ಗದರ್ಶನ, ಧನಾತ್ಮಕತೆಯನ್ನು ಪ್ರಚೋದಿಸುವ ಪುಸ್ತಕಗಳ ವಾಚನ, ಸಹೃದಯರೊಂದಿಗೆ ಸಂವಾದ, ಹಿತ ನೀಡುತ್ತವೆ. ಮಗುವಿಗೆ ಕೇವಲ ಶಿಸ್ತನ್ನು ಬೋಧಿಸುವುದರಿಂದ, ಶಿಕ್ಷೆ ಕೊಟ್ಟು ದಂಡಿಸುವುದರಿಂದ ಹೇಗೆ ನಿಗ್ರಹ ಸಾಧ್ಯವಿಲ್ಲವೋ ಹಾಗೆಯೇ ಮನಸ್ಸೂ ಕೇವಲ ಹಟಯೋಗಕ್ಕೆ ಒಗ್ಗಲಾರದ್ದು. ಈ ಕಗ್ಗದ ಸಾಲು ಮನವನ್ನು ಆಳುವ ಸುಂದರ ವಿಧಾನವನ್ನು ಕೊಡುತ್ತದೆ. ‘ಇನಿತಿತ್ತು ಮರಸಿನಿತ’ ಎಂದರೆ ‘ಸ್ವಲ್ಪವನ್ನು ಕೊಟ್ಟು ಅಷ್ಟನ್ನು ಮರೆಸು’. ಮೊಂಡ ಮಗು ಮೇಜಿನ ಮೇಲಿದ್ದ ಅತ್ಯಂತ ಬೆಲೆಬಾಳುವ ಗಡಿಯಾರವನ್ನು ಹಿಡಿದು ಓಡುತ್ತದೆ. ಅದು ಬಿಸಾಕಿದರೆ ಸಾವಿರಾರು ರೂಪಾಯಿಗಳ ನಷ್ಟ. ಅದಕ್ಕೆ ಹೊಡೆಯ ಹೋದಿರೋ, ಹಿಡಿಯಲು ಓಡಿದಿರೋ ಅದು ಬೀಳಿಸುವುದು ನಿಶ್ಚಿತ. ಆಗ ತಾಯಿ, ‘ಮಗೂ ನಿನಗೆ ಚಾಕಲೇಟ್ ಇಷ್ಟ ಅಲ್ವಾ? ನಿನಗೆ ಎರಡು ಚಾಕಲೇಟ್ ಇದೆ ತೆಗೆದುಕೋ’ ಎಂದು ಚಾಕಲೇಟ್ ಮುಂದೆ ಚಾಚಿ ಹತ್ತಿರ ಬಂದ ಮಗುವಿನಿಂದ ಗಡಿಯಾರ ತೆಗೆದುಕೊಳ್ಳುವುದು ಬುದ್ಧಿವಂತಿಕೆ. ಇದೇ ಇಷ್ಟನ್ನು ಕೊಟ್ಟು ಅಷ್ಟನ್ನು ಮರೆಸುವುದು. ಮನಸ್ಸಿಗೂ ಹಾಗೆಯೇ. ಅದಕ್ಕೆ ಇಷ್ಟವಾದದ್ದು ಸ್ವಲ್ಪವನ್ನು ಕೊಟ್ಟು ಹೆಚ್ಚಾದ ದುಃಖವನ್ನು, ಋಣಾತ್ಮಕತೆಯನ್ನು ಮರೆಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.