ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಕೃತಜ್ಞತೆ

Last Updated 5 ಮಾರ್ಚ್ 2020, 20:07 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿರುವಾಗ ಬೋಧಿಸತ್ವ ರಾಜ ಅಮಾತ್ಯನ ಮಗನಾಗಿ ಹುಟ್ಟಿದ್ದ. ತಂದೆ ಕಾಲವಾದ ನಂತರ ಅವನೇ ಅಮಾತ್ಯನಾದ. ರಾಜನಿಗೆ ಸರಿಯಾದ ಬೋಧೆ ಮಾಡುತ್ತ ಧರ್ಮ ನೆಲೆಸುವಂತೆ ಮಾಡಿದ್ದ.

ರಾಜನ ಬಳಿ ಒಂದು ಮಹಾಬಲಶಾಲಿಯಾದ ಆನೆ ಇತ್ತು. ಅದು ಯುದ್ಧಕಾಲದಲ್ಲಿ ಅತ್ಯಂತ ಶ್ರೇಷ್ಠಮಟ್ಟದಲ್ಲಿ ಹೋರಾಡಿದ ಆನೆ, ದಿನಕ್ಕೆ ನೂರು ಯೋಜನ ದೂರ ನಡೆದು ಹೋಗಿ ಸಂದೇಶವನ್ನು ನೀಡಿ ದೇಶವನ್ನು ಉಳಿಸಿದ ಆನೆ, ಒಂದು ಯುದ್ಧದಲ್ಲಿ ಸೈನಿಕರು ಹೆದರಿ ಓಡಿ ಹೋಗುತ್ತಿದ್ದಾಗ ತಾನು ಜೀವಭಯ ಬಿಟ್ಟು ವೈರಿ ಸೈನ್ಯದ ಮೇಲೆ ನುಗ್ಗಿ ಅದನ್ನು ಧೂಳಿಪಟ ಮಾಡಿ ಜಯವನ್ನು ತಂದಿಟ್ಟ ಆನೆ. ತನಗೆ ಅಷ್ಟು ಉಪಕಾರವನ್ನು ಮಾಡಿದ ಆನೆಗೆ ರಾಜ ಸರಿಯಾದ ಉಪಚಾರ ಮಾಡಿ, ಮರ್ಯಾದೆ ನೀಡುತ್ತಿದ್ದ. ಬರಬರುತ್ತ ಆನೆಗೆ ವಯಸ್ಸಾದಾಗ ಅದರ ಮೇಲಿನ ಪ್ರೀತಿ ಕಡಿಮೆಯಾಯಿತು. ಮುದಿ ಆನೆಗೆ ಯಾಕಿಷ್ಟು ಖರ್ಚು ಎಂದು ಅದನ್ನು ಕಾಡಿಗೆ ಅಟ್ಟಿಬಿಟ್ಟ. ಪಾಪ! ಅದು ಅಲ್ಲಿ ಇಲ್ಲಿ ಎಲೆ, ಕಡ್ಡಿಗಳನ್ನು ತಿಂದು ಕೃಶವಾಗಿತ್ತು. ಒಂದು ಬಾರಿ ಮಡಕೆ ಮಾಡುವ ಕುಂಬಾರ ರಾಜನ ಬಳಿಗೆ ಬಂದು, ತನ್ನ ಸೆಗಣಿ ಬಂಡಿಯನ್ನು ಎಳೆಯುವ ಎತ್ತು ಸತ್ತು ಹೋದದ್ದರಿಂದ ಕೆಲಸಕ್ಕೆ ಬಹಳ ತೊಂದರೆಯಾಗಿದೆ ಎಂದು ದೂರಿದ. ಆಗ ರಾಜ, ‘ಹಾಗಾದರೆ ಆ ವಯಸ್ಸಾದ ಆನೆ ಇದೆಯಲ್ಲ, ಅದನ್ನೇ ಸೆಗಣಿ ಬಂಡಿಗೆ ಕಟ್ಟಿ ಬಳಸಿಕೋ’ ಎಂದ. ಆನೆಗೆ ತುಂಬ ದುಃಖವಾಯಿತು.

ಒಂದು ದಿನ ಬೋಧಿಸತ್ವ ನಗರ ಪ್ರವೇಶ ಮಾಡುತ್ತಿರುವುದನ್ನು ಕಂಡು ಆನೆ ಓಡಿ ಬಂದು ಅವನ ಕಾಲ ಬಳಿ ಕುಳಿತುಕೊಂಡಿತು. ಅದರ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ‘ಸ್ವಾಮಿ, ನಾನು ತರುಣನಾಗಿದ್ದಾಗ ನನ್ನ ಶೌರ್ಯದ ಕಾರ್ಯಗಳನ್ನು ಮೆಚ್ಚಿಕೊಂಡು ರಾಜ ನನಗೆ ಎಲ್ಲ ಸೌಕರ್ಯಗಳನ್ನು ನೀಡಿ ಆರೈಕೆ ಮಾಡಿಸುತ್ತಿದ್ದ. ಈಗ ನಾನು ವೃದ್ಧನಾಗಿದ್ದೇನೆ. ಆದ್ದರಿಂದ ನನ್ನನ್ನು ತುಂಬ ತಿರಸ್ಕಾರದಿಂದ ನೋಡುತ್ತಾನೆ. ನಾನು ಅನಾಥನಾಗಿ ಕಾಡಿನಲ್ಲಿ ತಿರುಗಾಡುತ್ತಿದ್ದೇನೆ. ಈಗ ನನ್ನನ್ನು ಕುಂಬಾರನ ಸೆಗಣಿ ಬಂಡಿಯನ್ನು ಎಳೆಯಲು ಕೊಟ್ಟಿದ್ದಾರೆ. ನನಗೆ ಏನಾದರೂ ಸಹಾಯ ಮಾಡಿ’ ಎಂದು ಬೇಡಿತು.

ಮರುದಿನ ಬೋಧಿಸತ್ವ ಮಹಾರಾಜನ ಕಡೆಗೆ ಹೋದ. ‘ಮಹಾರಾಜ, ಹಿಂದೆ ನಮ್ಮ ಬಳಿ ಒಂದು ಭಾರೀ ಶಕ್ತಿಶಾಲಿಯಾದ ಆನೆ ಇತ್ತಲ್ಲವೆ? ಅದು ಏಕಾಂಗಿಯಾಗಿ ಯುದ್ಧವನ್ನು ಗೆದ್ದಿರಲಿಲ್ಲವೆ? ನೂರು ಯೋಜನ ದೂರ ನಡೆದುಹೋಗಿ ಸಂದೇಶ ತಲುಪಿಸಿತ್ತಲ್ಲ, ಅದು ನೆನಪಿದೆಯೆ?’ ಎಂದು ಕೇಳಿದ. ‘ನೆನಪಿಲ್ಲದೆ ಏನು? ಅಷ್ಟು ಬಲಶಾಲಿಯಾದ, ಪ್ರಯೋಜನಕಾರಿಯಾದ ಮತ್ತೊಂದು ಆನೆಯನ್ನು ನಾನು ಇದುವರೆಗೂ ಕಂಡಿಲ್ಲ’ ಎಂದ ರಾಜ.

‘ಹೌದು, ಆಗ ಅದಕ್ಕೆ ಬಹಳ ಗೌರವ, ಮರ್ಯಾದೆ ನೀಡಿರಲಿಲ್ಲವೆ?’

‘ನಿಜ, ಅದು ಬಹಳ ಗೌರವಕ್ಕೆ ಪಾತ್ರವಾಗಿತ್ತು’.

‘ಈಗ ಅದರ ಸ್ಥಿತಿ ಏನು? ಎಲ್ಲಿದೆ ಆ ಆನೆ?’ ಕೇಳಿದ ಬೋಧಿಸತ್ವ.

‘ಅದೇ, ಈಗ ಅದಕ್ಕೆ ವಯಸ್ಸಾಗಿದೆ, ಅದರಿಂದ ಯಾವ ಪ್ರಯೋಜನವೂ ಇಲ್ಲ. ಅದಕ್ಕೇ ಅದನ್ನು ಕುಂಬಾರನ ಸೆಗಣಿ ಬಂಡಿಯನ್ನು ಎಳೆಯಲು ಕೊಟ್ಟಿದ್ದೇನೆ’ ಎಂದ ರಾಜ.

‘ರಾಜ, ಜನರನ್ನು, ಪ್ರಾಣಿಗಳನ್ನು ಪ್ರಯೋಜನ ಇರುವವರೆಗೆ ಬಳಸಿಕೊಂಡು ಉಪಯೋಗ ಕಡಿಮೆಯಾದ ಮೇಲೆ ಅವನ್ನು ತಿರಸ್ಕಾರ ಮಾಡುವುದು ಮೂರ್ಖತನ. ಹಿಂದೆ ಮಾಡಿದ ಉಪಕಾರವನ್ನು ನೆನೆಸದೆ ನಿರ್ಲಕ್ಷ ಮಾಡುವವರ ಮನೋಕಾಮನೆಗಳು ನಷ್ಟವಾಗುತ್ತವೆ. ಕೃತಜ್ಞತೆಯನ್ನು ತೋರದ ಮನುಷ್ಯನಿಗೆ ಅದೇ ಗತಿ ಮುಂದೆ ಖಂಡಿತವಾಗಿಯೂ ಬರುತ್ತದೆ’, ರಾಜನಿಗೆ ತನ್ನ ತಪ್ಪು ತಿಳಿಯಿತು. ಮತ್ತೆ ವೃದ್ದ ಆನೆಗೆ ಮರ್ಯಾದೆ, ಸೌಕರ್ಯಗಳು ದೊರಕಿದವು. ಅದು ಸಂತೋಷವಾಗಿ ಬದುಕಿತು.

ಮನುಷ್ಯರಿಗೆ ಅವಶ್ಯವಾಗಿ ಇರಲೇಬೇಕಾದ ಗುಣ ಕೃತಜ್ಞತೆ. ಅದು ಮನುಷ್ಯತ್ವದ ಗುರುತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT