ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಭರತನ ದಾರಿ

Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- |
ಳೊರೆಯದೊಡಮೇನನಂ,
ತಾಂ ವರದಿಯೊರೆದು ||
ದೊರೆತನದ ಭಾರವನು ಹೊತ್ತು ದೊರೆಯಾಗದಾ |
ಭರತನವೊಲಿರು ನೀನು– ಮಂಕುತಿಮ್ಮ || 706 ||

ಪದ-ಅರ್ಥ: ಅರಸಡವಿಗೈದಿದೊಡಮ್=|
ಅರಸ+ಅಡವಿಗೆ+ಐದಿದೊಡಮ್
(ಹೊರಟು ಹೋದರೂ), ಪಾದುಕೆಗಳೊರೆ
ಯದೊಡಮೇನನಂ=ಪಾದುಕೆಗಳು+
ಒರೆಯದೊಡಂ(ಹೇಳದಿದ್ದರೂ)+ಏನನಂ (ಏನನ್ನೂ), ತಾಂ=ತಾನು, ವರದಿಯೊರೆದು= ವರದಿ+ಒರೆದು(ಒಪ್ಪಿಸಿ), ಭರತನವೊಲಿರು = ಭರತ ನವೊಲು(ಭರತನಂತೆ)+ಇರು.

ವಾಚ್ಯಾರ್ಥ: ಅರಸ ಅಡವಿಗೆ ಹೋದರೂ ಅವನ ಪಾದುಕೆಗಳು ಏನನ್ನೂ ಹೇಳದಿದ್ದರೂ ತಾನೇ ಅವುಗಳಿಗೆ ವರದಿ ಒಪ್ಪಿಸಿ, ದೊರೆತನದ
ಭಾರವನ್ನು ಹೊತ್ತು ತಾನು ದೊರೆಯಾಗದ ಭರತನಂತೆ ನೀನು ಇರು.

ವಿವರಣೆ: ಭರತನ ಪಾತ್ರ ರಾಮಾಯಣದ ಕಿರೀಟ. ತ್ಯಾಗಕ್ಕೆ, ಧೀಮಂತಿಕೆಗೆ, ಅಂತಃಕರಣಕ್ಕೆ ಮತ್ತೊಂದು ಹೆಸರು ಭರತ. ಡಿ.ವಿ.ಜಿ.ಯವರಿಗೆ ಆ ಪಾತ್ರ ತುಂಬ ಇಷ್ಟದ್ದು. ಅದಕ್ಕೇ ಕಗ್ಗದಲ್ಲಿ ಭರತನ ಬಗ್ಗೆ ಬರೆದಷ್ಟು ಚೌಪದಿಗಳನ್ನು ಮತ್ತಾರ ಬಗ್ಗೆಯೂ ಬರೆಯಲಿಲ್ಲ. ಈ ಕಗ್ಗದಿಂದ ಹಿಡಿದು ಮುಂದಿನ ಮತ್ತೈದು ಕಗ್ಗಗಳಲ್ಲಿ ಭರತನ ಗುಣವರ್ಣನೆಗಳು ಬಂದಿವೆ.

ಅರಸನಾಗಬೇಕಿದ್ದ ರಾಮ ಕಾಡಿಗೆ ಹೋದ. ತಮ್ಮ, ತನಗೆ ಅನಾಯಾಸವಾಗಿ ಬಂದಿದ್ದ ಸಿಂಹಾಸನವನ್ನು ಏರದೆ, ಅಣ್ಣನನ್ನು ಬೆಂಬತ್ತಿ ಹೋಗಿ ಮರಳಿ ಬಾ ಎಂದು ಬೇಡುತ್ತಾನೆ. ಆ ಸಂದರ್ಭ ಇಡೀ ರಾಮಾಯಣದಲ್ಲಿ ಅದ್ಭುತ ಪ್ರಸಂಗ.

ಅಲ್ಲಿ ಅಣ್ಣ-ತಮ್ಮಂದಿರ ನಡುವೆ ದಿವ್ಯಾದರ್ಶಗಳ ಸ್ಪರ್ಧೆ! ಮೌಲ್ಯಗಳ, ಆದರ್ಶಗಳ ಶಿಖರಗಳ ಸಂದರ್ಶನ. ಕೊನೆಗೆ ತಮ್ಮ ಭರತ ಅಣ್ಣನ ಪಾದುಕೆಗಳೊಂದಿಗೆ ಮರಳಿ ಬಂದು, ಅವುಗಳನ್ನೇ ಸಿಂಹಾಸನದ ಮೇಲಿಟ್ಟು, ತಾನು ಅವುಗಳ ಪ್ರತಿನಿಧಿ ಎಂದು ರಾಜ್ಯಭಾರ ಮಾಡುತ್ತಾನೆ.

ಹೇಗೆ ರಾಜ್ಯಭಾರ ಮಾಡಬೇಕು ಎಂಬುದನ್ನು ರಾಮ ಹೇಳಲಿಲ್ಲ. ಆದರೂ ತಾನು ಕೇವಲ ಪಾದುಕೆಗಳ ಸೇವಕ ಎಂಬುದನ್ನು ಮರೆಯದೆ, ತನ್ನ ಕಾರ್ಯಸೂಚಿಯನ್ನು, ಮಾಡಿದ ಕೆಲಸವನ್ನು ಅತ್ಯಂತ ಪಾರದರ್ಶಕವಾಗಿ, ನಿಷ್ಠೆಯಿಂದ ಪಾದುಕೆ ಗಳಿಗೆ ಒಪ್ಪಿಸಿದ. ತಾನು ದೊರೆಯಾಗಲಿಲ್ಲ ವೆಂಬುದು ಸರಿ. ಆದರೆ ದೊರೆತನದ ಭಾರವನ್ನು ಅತ್ಯಂತ ಪ್ರೀತಿಯಿಂದ ಹೊತ್ತ.

ಈ ರಾಜ್ಯ ತನ್ನದಲ್ಲ. ಆದರೆ ರಾಜ್ಯಭಾರ ತನ್ನ ಜವಾಬ್ದಾರಿ ಎಂದು ಕರ್ತವ್ಯ ಪ್ರಜ್ಞೆಯನ್ನು ಮೆರೆದ ಭರತ ಎಲ್ಲ ಸೇವಕರಿಗೆ ಮಾದರಿಯಾದ.

ಕಗ್ಗ, ನಮಗೆ ಭರತನನ್ನು ಮಾದರಿಯಾಗಿಸಿಕೊಂಡು ಅವನಂತೆ ಬಾಳಲು ಕರೆ ಕೊಡುತ್ತದೆ. ಈ ಜಗತ್ತು ನಮ್ಮದಲ್ಲ, ಭಗವಂತನದು. ನಾನು, ನನ್ನ ಸಮಸ್ತ ವಸ್ತುಗಳು ಅವನಿಗೆ ಸೇರಿದ್ದು. ಅದರೂ ಸಂಸಾರದ ಭಾರವನ್ನು ಅವನ ಪರವಾಗಿ, ಅವನ ಕೃಪೆಯಿಂದ ಹೊರುತ್ತೇನೆ ಎಂದು ದುಡಿಯುವುದು ಭರತ ನಡೆದ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT