ಬುಧವಾರ, ನವೆಂಬರ್ 30, 2022
17 °C

ಬೆರಗಿನ ಬೆಳಕು: ಗಾಣದಲ್ಲಿ ಅರೆದು ಬಂದ ಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮತೆ ಸಂಯಮಶಮಗಳಿಂ ಭವವನೋಲಗಿಸೆ |
ಸಮನಿಪುದು ಮತಿಯ ಹದವಾತ್ಮಾನುಭವಕೆ ||
ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ |
ಶ್ರಮಿಸಿಳೆಯ ಗಾಣದಲಿ - ಮಂಕುತಿಮ್ಮ || 704 ||

ಪದ-ಅರ್ಥ: ಸಮತೆ ಸಂಯಮಶಮಗಳಿಂ=ಸಮತೆ+ಸಂಯಮ+ಶಮಗಳಿಂದ, ಭವವನೋಲಗಿಸೆ=ಭವವನು(ಬದುಕನ್ನು)+ಓಲಗಿಸೆ(ಸೇವಿಸೆ), ಸಮನಿಪುದು=ಸಮನಾಗಿಸುವುದು, ಹದವಾತ್ಮಾನು ಭವಕೆ=ಹದವು+ಆತ್ಮಾನುಭವಕೆ, ಮಮತೆಯಳಿವಿಂ=ಮಮತೆಯ+ಅಳಿವಿಂ(ಅಳಿವಿನಿಂದ), ಶ್ರಮಿಸಿಳೆಯ=ಶ್ರಮಿಸು=ಇಳೆಯ
ವಾಚ್ಯಾರ್ಥ: ಸಮತೆ, ಸಂಯಮ ಮತ್ತು ಶಾಂತಿ ಬದುಕನ್ನು ನಡೆಸಿದರೆ ಬುದ್ಧಿ ಸಮದರ್ಶಿಯಾಗುತ್ತದೆ. ಅದು ಆತ್ಮಾನುಭವಕ್ಕೆ ಸಹಕಾರಿಯಾಗುತ್ತದೆ. ಮಮತೆಯ ನಾಶದಿಂದ ಜ್ಞಾನವೇ ಹೊರತು ಪಾಂಡಿತ್ಯದಿಂದಲ್ಲ. ಈ ಮಮತಾನಾಶಕ್ಕೆ ಪ್ರಪಂಚವೆಂಬ ಗಾಣದಲ್ಲಿ ಶ್ರಮಿಸು.

ವಿವರಣೆ: ಮಹಾಭಾರತದ ಅರಣ್ಯಪರ್ವದಲ್ಲಿ ಬರುವ ಒಂದು ಮುಖ್ಯ ಪ್ರಸಂಗ ಯಕ್ಷಪ್ರಶ್ನೆ. ಧರ್ಮರಾಜನನ್ನು ಅನೇಕ ಪ್ರಶ್ನೆಗಳಿಂದ ಪರೀಕ್ಷಿಸುತ್ತಾನೆ ಯಮಧರ್ಮ. ಸುಮಾರು ನೂರಿಪ್ಪತ್ತು ಪ್ರಶ್ನೆಗಳನ್ನೊಡ್ಡಿ, ಬದುಕಿನ ನೆಲೆಗಳನ್ನು, ಧರ್ಮಸೂಕ್ಷ್ಮಗಳನ್ನು  ಕುರಿತಾದ ವಿಷಯಗಳ ಬಗ್ಗೆ ಅವನ ವಿಚಾರಗಳನ್ನು ಹೊರತೆಗೆಯುತ್ತಾನೆ. ಆತ್ಮದ ಅನುಭವಕ್ಕೆ ಕಾರಣವಾದ ಸ್ವಭಾವಗಳನ್ನು ಕೇಳಿದಾಗ, ಧರ್ಮರಾಜ ಹೇಳುವುದು ಕಗ್ಗ ತಿಳಿಸಿದ ಗುಣಗಳನ್ನೇ-ಸಮತೆ, ಸಂಯಮ ಮತ್ತು ಶಾಂತಿಗಳು. ಇವೆಲ್ಲ ನಮಗೆ ಸಿದ್ಧಿಸುವುದು ಸಮತ್ವವನ್ನು ಹೊಂದಿದ ಬುದ್ಧಿಯಿಂದ. ಇಲ್ಲಿ ‘ಬುದ್ಧಿ’ ಎಂಬ ಮಾತು ವಿಶೇಷ ಅರ್ಥದಲ್ಲಿ ಬಂದದ್ದು. ಬುದ್ಧಿ ಅಂತರಂಗದ ಉಪಕರಣಗಳಲ್ಲಿ ಒಂದಲ್ಲ. ಮನಸ್ಸು, ಚಿತ್ತ, ಅಹಂಕಾರ, ಸ್ಮೃತಿ, ಧೃತಿ, ಆಕೂತಿ ಇಂಥ ಅಂತಃಕರಣ ವೃತ್ತಿಯಲ್ಲ. ಇಲ್ಲಿ ಬುದ್ಧಿ ಎಂದರೆ ಬುದ್ಧಿಕ್ರಿಯೆ. ಅದೇ ತತ್ವವಿವೇಕ. ಇದಕ್ಕೆ ಬೇಕಾದದ್ದು ಶಮಾದಿಷಟ್ಕಸಂಪತ್ತು ಎಂದು ಭಗವದ್ಗೀತೆ ಹೇಳುತ್ತದೆ. ಆ ಆರು ಸಂಪತ್ತುಗಳು ಶಮ, ದಮ, ಉಪರತಿ, ತಿತಿಕ್ಷಾ, ಶ್ರದ್ಧಾ ಮತ್ತು ಸಮಾಧಾನ. ಶಮವೆಂದರೆ ಬೇರೆ ಚಿಂತೆಗಳನ್ನಿಟ್ಟುಕೊಳ್ಳದೆ ಅಂತರಿಂದ್ರಿಯಗಳನ್ನು ಹದ್ದಿನಲ್ಲಿಡುವುದು; ಮನಸ್ಸನ್ನು ಸ್ವಸ್ಥವಾಗಿರಿಸಿಕೊಳ್ಳವುದು. ದಮವೆಂದರೆ ಬಾಹ್ಯ ಇಂದ್ರಿಯಗಳನ್ನು ನಿಗ್ರಹಿಸುವುದು.

ಶಮ, ದಮಗಳೊಂದಿಗೆ ತಿತಿಕ್ಷೆಯೂ ಮುಖ್ಯ. ತಿತಿಕ್ಷೆಯೆಂದರೆ ಲಾಭ-ನಷ್ಟ, ಸುಖ-ದುಃಖ, ರಾಗ-ದ್ವೇಷ ಮುಂತಾದ ದ್ವಂದ್ವಗಳಿಂದ ಮನಸ್ಸನ್ನು ಗಾಸಿಗೊಳಿಸಿಗೊಳ್ಳದೆ, ಸಮಸ್ಥಿತಿಯಲ್ಲಿಟ್ಟುಕೊಳ್ಳುವುದು. ಈ ಗುಣಗಳು ಬದುಕಿನಲ್ಲಿ ಇಳಿದಾಗ ಮಮತೆಯ ಹಾವಳಿ ಕಡಿಮೆಯಾಗುತ್ತದೆ. ಮಮತಾ ನಾಶದಿಂದ ಜ್ಞಾನ. ಜ್ಞಾನ ದೊರಕುವುದು ಪುಸ್ತಕದ ಓದಿನಿಂದಲ್ಲ. ಅದು ಬರುವುದು ಅನುಭವದಿಂದ. ಆ ಅನುಭವ ದೊರಕುವುದು ಪ್ರಪಂಚದ ಕಷ್ಟಗಳ, ಇಕ್ಕಟ್ಟು, ಬಿಕ್ಕಟ್ಟುಗಳ ಗಾಣದಲ್ಲಿ ಸಿಕ್ಕು ಶುದ್ಧನಾಗಿ ಹೊರಬಂದಾಗ. ಲೋಕದ ಗಾಣದಲ್ಲಿ ಅರೆಯಲ್ಪಟ್ಟಾಗ, ಅನವಶ್ಯವಾದ ಹೊಟ್ಟು, ಸಿಪ್ಪೆ ಕಳೆದುಹೋಗಿ ಜೀವಪೋಷಕವಾದ ಎಣ್ಣೆ ದೊರೆವಂತೆ, ಮನುಷ್ಯನ ಬದುಕಿನಲ್ಲಿ ಬುದ್ಧಿಯ ಸಮತೆ ಬರುತ್ತದೆ. ಅದರಿಂದ ಆತ್ಮಾನುಭವಕೆ ದಾರಿ ನೇರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು