ಬುಧವಾರ, ಅಕ್ಟೋಬರ್ 28, 2020
20 °C

ಬೆರಗಿನ ಬೆಳಕು: ಸಹವಾಸ ದೋಷ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಉತ್ತರ ಪಾಂಚಾಲನಗರದಲ್ಲಿ ಪಾಂಚಾಲರಾಜ ಆಡಳಿತ ಮಾಡುತ್ತಿದ್ದ. ಆಗ ಬೋಧಿಸತ್ವ ಹಿಮಾಲಯದ ಪರ್ವತದಲ್ಲಿ ಬೂರುಗ ಮರದ ಮೇಲೆ ಗಿಳಿಗಳ ರಾಜನ ಮಗನಾಗಿ ಹುಟ್ಟಿದ್ದ. ಇವನೊಂದಿಗೆ ಇವನ ತಮ್ಮನೊಬ್ಬನಿದ್ದ. ಪರ್ವತದ ಮೇಲೆ ಇದ್ದ ಹಳ್ಳಿಯಲ್ಲಿ ಐದುನೂರು ಜನ ಕಳ್ಳರಿದ್ದರು. ಪರ್ವತದ ಕೆಳಗಿನ ಹಳ್ಳಿಯಲ್ಲಿ ಐದುನೂರು ಜನ ಋಷಿಗಳಿದ್ದರು. ಇವೆರಡೂ ಮರಿಗಳ ರೆಕ್ಕೆಗಳು ಬಲಿಯುವ ಸಮಯದಲ್ಲಿ ಒಮ್ಮೆ ಭಯಂಕರ ಬಿರುಗಾಳಿ ಬೀಸಿತು. ಬಿರುಗಾಳಿಯ ಸೆಳೆತಕ್ಕೆ ಸಿಕ್ಕ ಕಿರಿಯ ಮರಿ ಮೇಲೆ ಹಾರಿ ಕಳ್ಳರ ಶಸ್ತ್ರಾಗಾರದ ಪಕ್ಕ ಬಿದ್ದಿತು. ಕಳ್ಳರೆಲ್ಲ ಸೇರಿ ಅದನ್ನು ಕಾಪಾಡಿದರು. ಅದಕ್ಕೆ ಶಕ್ತಿಗುಂಬ ಎಂದು ಹೆಸರಿಟ್ಟರು.

ಬೋಧಿಸತ್ವ ಗಿಳಿಮರಿ ಗಾಳಿಗೆ ಸಿಕ್ಕು ಕೆಳಗೆ ಬಂದು ಋಷಿಗಳು ಇದ್ದ ಹಳ್ಳಿಯಲ್ಲಿ ಬಿತ್ತು. ಅದನ್ನು ಋಷಿಗಳು ಕಾಪಾಡಿ ಬೆಳೆಸಿದರು. ಅದನ್ನು ಪುಷ್ಟಕ ಎಂದು ಕರೆದರು.

ಒಂದು ದಿನ ರಾಜ ಬೇಟೆಯಾಡಲೆಂದು ತನ್ನ ಅನುಚರರೊಂದಿಗೆ ಕಾಡಿಗೆ ಹೊರಟ. ಒಂದೆಡೆಗೆ ಜಿಂಕೆಗಳ ಗುಂಪು ಕಂಡಿತು. ಅವುಗಳಿಗೆ ಬಾಣ ಹೊಡೆಯಬೇಕೆನ್ನುವಷ್ಟರಲ್ಲಿ ಜಿಂಕೆಗಳು ಥಟ್ಟನೆ ಕಣ್ಣಿಗೆ ಕಾಣದಂತೆ ಓಡಿಹೋದವು. ಒಂದು ಜಿಂಕೆ ಮಾತ್ರ ರಾಜನ ಪಕ್ಕದಲ್ಲಿಯೇ ಹಾಯ್ದು ಹೋಯಿತು. ಅದನ್ನು ಕಂಡ ರಾಜ ತನ್ನ ಸಾರಥಿಗೆ ಹೇಳಿ ಆ ಜಿಂಕೆಯನ್ನು ಬೆನ್ನಟ್ಟುವಂತೆ ಅಜ್ಞೆ ಮಾಡಿದ. ರಥ ಜಿಂಕೆಯ ಹಿಂದೆ ಓಡಿತು. ವೇಗವಾಗಿ ಓಡುತ್ತಿದ್ದ ರಥದ ಹಿಂದೆ ಉಳಿದವರು ಯಾರು ಹೋಗಲಾರದೆ ರಾಜ ಏಕಾಂಗಿಯಾಗಿ ಹೋದ. ಮಧ್ಯಾಹ್ನದವರೆಗೂ ಅದನ್ನು ಹಿಂಬಾಲಿಸಿದ ರಾಜ ಕುದುರೆಗಳು ಸುಸ್ತಾದುದನ್ನು ಕಂಡು ರಥವನ್ನು ನಿಲ್ಲಿಸಿದ. ಬೆಟ್ಟದ ಮೇಲೆ ಒಂದು ಸುಂದರವಾದ ಗುಹೆಯ ಮುಂದೆ ಹರಿಯುತ್ತಿರುವ ನದಿಯನ್ನು ಕಂಡ. ಕೆಳಗಿಳಿದು ಸ್ನಾನ ಮಾಡಿ ಮರದ ಕೆಳಗೆ ಮಲಗಿದ. ಸಾರಥಿ ಕುದುರೆಯನ್ನು ತೊಳೆದು, ಹುಲ್ಲು ಹಾಕಿ ವಿಶ್ರಮಿಸಿಕೊಳ್ಳುತ್ತಿದ್ದ. ರಾಜ ಮಲಗಿದಲ್ಲಿಂದ ಮೇಲೆ ನೋಡಿದ. ಅಲ್ಲೊಂದು ಗಿಳಿ ಕುಳಿತಿತ್ತು. ರಾಜನನ್ನು ನೋಡಿ ಅದು ಮನುಷ್ಯ ಭಾಷೆಯಲ್ಲಿ ಮಾತನಾಡತೊಡಗಿತು, ‘ಲೋ ಬನ್ರೋ, ಇವನು ಯಾವನೋ ರಾಜನಂತೆ ತೋರುತ್ತಾನೆ. ಇವನ ಸಾರಥಿಯೂ ಮಲಗಿದ್ದಾನೆ. ಬೇಗನೆ ಇವನನ್ನು ಕೊಂದು ಹಾಕಿ ಅವನ ಆಭರಣಗಳನ್ನು ಕಿತ್ತುಕೊಳ್ಳೋಣ. ಇವನ ಹೆಣವನ್ನು ಪರ್ವತದ ತುದಿಯಿಂದ ತಳ್ಳಿಬಿಡೋಣ’, ಅದು ಹಾಗೆಯೇ ಒಂದೇ ಸಮನೆ ಮಾತನಾಡುತ್ತಿತ್ತು. ಇದೇನು ಈ ಗಿಳಿ ಇಷ್ಟು ಕೆಟ್ಟದಾಗಿ ಮಾತನಾಡುತ್ತದಲ್ಲ ಎಂದುಕೊಂಡು ಬೇಗನೆ ಸಾರಥಿಯನ್ನು ಎಬ್ಬಿಸಿ ಅಲ್ಲಿಂದ ಹೊರಟ. ರಾಜನ ರಥ ಬೆಟ್ಟದ ಕೆಳಗಿದ್ದ ಋಷಿಗಳ ಹಳ್ಳಿಗೆ ಬಂದಿತು. ಆಗ ಋಷಿಗಳೆಲ್ಲ ಹಣ್ಣು ಹಂಪಲಗಳನ್ನು ತರಲು ಕಾಡಿಗೆ ಹೋಗಿದ್ದರು. ಆದರೆ ರಾಜ ಬರುತ್ತಿದ್ದಂತೆ ಗಿಳಿಯೊಂದು ಎದುರು ಬಂದಿತು.

‘ದಯವಿಟ್ಟು ಬನ್ನಿ, ತಾವು ಬಂದದ್ದು ತುಂಬ ಸಂತೋಷ. ಕೈಕಾಲು ತೊಳೆದುಕೊಂಡು ಬನ್ನಿ, ಇಲ್ಲಿ ತಾಜಾ ಹಣ್ಣುಗಳಿವೆ, ಅಲ್ಲಿ ಕಾಯಿಸಿ ಇಟ್ಟ ಹಾಲಿದೆ. ಆ ಹೂಜಿಯಲ್ಲಿ ಪರ್ವತದ ಗುಹೆಯಿಂದ ತಂದ ತಣ್ಣನೆಯ ನೀರಿದೆ. ದಯವಿಟ್ಟು ಸ್ವೀಕರಿಸಿ. ಸನ್ಯಾಸಿಗಳು ಬರುವವರೆಗೂ ವಿಶ್ರಮಿಸಿಕೊಳ್ಳಿ’ ಎಂದಿತು. ರಾಜ ಆಶ್ಚರ್ಯವಾಗಿ ಬೆಟ್ಟದ ಮೇಲಿನ ಗಿಳಿ ಒರಟಾಗಿ ಮಾತನಾಡಿದ್ದನ್ನು ಹೇಳಿದ. ಆಗ ಪುಷ್ಟಕ ಗಿಳಿ ಹೇಳಿತು, ‘ಅವನು ನನ್ನ ತಮ್ಮ. ಅವನು ಕಳ್ಳರ ನಾಡಿಗೆ ಹೋದದ್ದರಿಂದ ಆ ಮಾತುಗಳನ್ನು ಕಲಿತಿದ್ದಾನೆ. ನನ್ನ ದೈವ ಚೆನ್ನಾಗಿತ್ತು, ಋಷಿಗಳ ಕಡೆಗೆ ಬಂದೆ’.

ಸಹವಾಸ ಸ್ವಭಾವವನ್ನು ಬದಲಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.