ಸುರಪಸಭೆಯಲಿ ಗಾಧಿಸುತ ವಶಿಷ್ಠ ಸ್ಪರ್ಧೆ |
ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||
ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ |
ಕರುಮಗತಿ ಕೃತ್ರಿಮವೊ – ಮಂಕುತಿಮ್ಮ || 307 ||

ಪದ-ಅರ್ಥ: ಸುರಪಸಭೆ=ಇಂದ್ರನ ಸಭೆ, ಗಾಧಿಸುತ=ಗಾಧಿಯ ಮಗನಾದ ವಿಶ್ವಾಮಿತ್ರ, ಧರೆಯೊಳದರಿಂ=ಧರೆಯೊಳ್+ಅದರಿಂ, ತಪನೆ=ಕಷ್ಟ, ತಾಪತ್ರಯ, ಬರುವುದಿಂತೆತ್ತಣಿನೊ=ಬರುವುದು+ಇಂತು+ಎತ್ತಣಿನೊ(ಎತ್ತಲಿಂದಲೊ), ಕರುಮಗತಿ=ಕರ್ಮದ ಗತಿ, ಕೃತ್ರಿಮ=ಅಸಹಜ, ಕಪಟ.

ವಾಚ್ಯಾರ್ಥ: ಇಂದ್ರನ ಸಭೆಯಲ್ಲಿ ವಿಶ್ವಾಮಿತ್ರ ಮತ್ತು ವಶಿಷ್ಠರ ನಡುವೆ ಚರ್ಚೆಯಿಂದಾಗಿ ಭೂಮಿಯ ಮೇಲೆ ಹರಿಶ್ಚಂದ್ರನಿಗೆ ಕಷ್ಟವುಂಟಾಯಿತು. ಬೇಡವಾದ ಪ್ರಾರಬ್ಧ ಎತ್ತಣಿಂದ ಬಂದೀತೊ? ಕರ್ಮದ ವಿಧಾನ ಅಸಹಜವಾದದ್ದು.

ವಿವರಣೆ: ದೇವೇಂದ್ರನ ಸಭೆಯಲ್ಲಿ ಒಮ್ಮೆ ಚರ್ಚೆ ನಡೆಯಿತು. ಈ ಕಾಲದಲ್ಲಿ ಯಾವಾಗಲೂ ಸತ್ಯವನ್ನೇ ನುಡಿಯುವಂಥ ವ್ಯಕ್ತಿ ಇರುವುದು ಸಾಧ್ಯವಿಲ್ಲವೆಂದು ವಿಶ್ವಾಮಿತ್ರ ಹೇಳಿದಾಗ, ಹರಿಶ್ಚಂದ್ರ ಎಂದೆಂದಿಗೂ ಸುಳ್ಳಾಡುವವನಲ್ಲ ಎಂದು ಮಹರ್ಷಿ ವಶಿಷ್ಠರು ಹೇಳಿದರು. ಅವರಲ್ಲಿ ವಾಗ್ವಾದ ನಡೆಯಿತು. ಹಾಗಾದರೆ ಅವನ ಸತ್ಯಸಂಧತೆಯನ್ನು ಪರೀಕ್ಷಿಸಿಯೇ ಬಿಡುತ್ತೇನೆಂದು ವಿಶ್ವಾಮಿತ್ರ ಭೂಮಿಗೆ ಬಂದ. ಅವನ ಪರೀಕ್ಷೆಗೆ ಒಳಗಾದ ಹರಿಶ್ಚಂದ್ರ ಪಡಬಾರದ ಕಷ್ಟಪಟ್ಟ. ಇದರಲ್ಲಿ ಅವನದೇನು ತಪ್ಪು? ಅವನು ಪಟ್ಟ ತೊಂದರೆಗಳಿಗೆ ಯಾರು ಹೊಣೆ? ಇಬ್ಬರು ಮಹರ್ಷಿಗಳ ನಡುವಿನ ವಾಗ್ವಾದಕ್ಕೆ ಹರಿಶ್ಚಂದ್ರ ಒದ್ದಾಡಿ ಹೋದ.

ಜನರೆಲ್ಲ ಒಂದು ದೇಶದಲ್ಲಿ ಸುಖವಾಗಿದ್ದರು. ಯಾರದೋ ಆಸೆಗೋ, ದುರಾಸೆಗೋ ದೇಶ ಒಡೆದು ಎರಡು ಭಾಗವಾಯಿತು. ಯಾವುದೋ ಆಧಾರದ ಮೇಲೆ ಜನ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಸ್ಥಳಾಂತರಗೊಳ್ಳಬೇಕಾಯಿತು. ಆಗ ಆದದ್ದು ಅನಾಹುತ. ತಾವು ಶತಮಾನಗಳಿಂದ ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ತಮಗೆ ಪರಿಚಯವೇ ಇಲ್ಲದ ನಾಡಿಗೆ ಮಕ್ಕಳು-ಮರಿ, ತಮ್ಮ ಅಳಿದುಳಿದ ಸಾಮಾನುಗಳನ್ನು ಕಟ್ಟಿಕೊಂಡು ಹೊರಟರು. ಭಯದ ವಾತಾವರಣ ಬೇರೆ. ಲಕ್ಷಾಂತರ ಜನ ತಾವು ಉದ್ದೇಶಿಸಿದ್ದ ಸ್ಥಳವನ್ನು ತಲುಪಲೇ ಇಲ್ಲ, ದಾರಿಯಲ್ಲಿಯೇ ಪ್ರಾಣ ಕಳೆದುಕೊಂಡರು. ಆ ಅಮಾಯಕ ಮಂದಿ ತಮ್ಮ ಯಾವ ತಪ್ಪಿಗೆ ಈ ಶಿಕ್ಷೆ ಪಡೆದರು? ಅವರು ವಿಭಜನೆಯನ್ನು ಅಪೇಕ್ಷಿಸಿದ್ದರೇ? ಬಹಳಷ್ಟು ಜನಕ್ಕೆ ಅದರ ವಿಚಾರವೇ ತಿಳಿದಿರಲಿಲ್ಲ.

ಇತ್ತೀಚೆಗೆ ಕಾರಿನಲ್ಲಿ ದಂಪತಿಗಳು ಪ್ರವಾಸಕ್ಕೆ ಹೊರಟಿದ್ದರು. ತಮ್ಮ ದಾರಿಯಲ್ಲಿ ಸರಿಯಾಗಿಯೇ, ಕಡಿಮೆ ವೇಗದಲ್ಲೇ ಸಂತೋಷವಾಗಿ ನಡೆದಿದ್ದರು. ಆಗ ಆ ಬದಿಯ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಡಿವೈಡರ್ಗೆ ಹೊಡೆದು ಹಾರಿ ಈ ಬದಿಗೆ ಬಂದು ಇವರ ಕಾರಿಗೆ ಹೊಡೆದು ಅವರಿಬ್ಬರೂ ಪ್ರಾಣ ಕಳೆದುಕೊಂಡರು. ಇವರು ಸರಿಯಾಗಿ ಹೋದದ್ದೇ ತಪ್ಪೇ? ಯಾಕೆ ಅವರಿಗೆ ಈ ತೊಂದರೆಯಾಯಿತು? ಇಂತಹ ಹಲವಾರು ಸನ್ನಿವೇಶಗಳು ನಮ್ಮ ಮುಂದೆ ನಿಂತು ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳುತ್ತವೆ. ಅದಕ್ಕೇ ಈ ಕಗ್ಗ - ಪ್ರಾರಬ್ಧ ಎಲ್ಲಿಂದ, ಹೇಗೆ ಬರುತ್ತದೆಂಬುದು ತಿಳಿಯದು. ಅದನ್ನು ಕೇವಲ ಕರ್ಮ ಎನ್ನಬೇಕೇ? ಈ ಕರ್ಮ ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. ಅದು ತುಂಬ ಅಸಹಜವಾದದ್ದು, ಕೃತ್ರಿಮವಾದದ್ದು ಮತ್ತು ವಿವರಣೆಯನ್ನು, ತರ್ಕವನ್ನು ಮೀರಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.